ರನ್‌ವೇ ಬಂದ್: 15 ವಿಮಾನಗಳ ಹಾರಾಟ ರದ್ದು

7
117 ವಿಮಾನ ಸಂಚಾರ ವಿಳಂಬ; ಸಂಕ್ರಾಂತಿ ಸಂಭ್ರಮಕ್ಕೆ ಅಡ್ಡಿ

ರನ್‌ವೇ ಬಂದ್: 15 ವಿಮಾನಗಳ ಹಾರಾಟ ರದ್ದು

Published:
Updated:
ರನ್‌ವೇ ಬಂದ್: 15 ವಿಮಾನಗಳ ಹಾರಾಟ ರದ್ದು

ಬೆಂಗಳೂರು: ನಗರದಲ್ಲಿ ಭಾನುವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು ಮುಂಜಾಗ್ರತಾ ಕ್ರಮವಾಗಿ 3 ಗಂಟೆ 45 ನಿಮಿಷ ಬಂದ್‌ ಮಾಡಲಾಗಿತ್ತು. ಸಂಕ್ರಾಂತಿ ಹಬ್ಬಕ್ಕೆಂದು ತಮ್ಮೂರಿಗೆ ಹೊರಟಿದ್ದ ಪ್ರಯಾಣಿಕರು ಇದರಿಂದ ತೊಂದರೆ ಅನುಭವಿಸಿದರು.

ಮುಂಜಾನೆ 4.20 ಗಂಟೆಯಿಂದಲೇ ನಿಲ್ದಾಣ ಹಾಗೂ ಸುತ್ತಮುತ್ತ ದಟ್ಟ ಮಂಜು ಮುಸುಕಿದ ವಾತಾವರಣವಿತ್ತು. ಅದನ್ನು ಗಮನಿಸಿದ ವಿಮಾನ ಸಂಚಾರ ನಿಯಂತ್ರಣ (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಅಧಿಕಾರಿಗಳು, ವಿಮಾನಗಳ ಹಾರಾಟವನ್ನು ರದ್ದುಪಡಿಸುವಂತೆ ಹಾಗೂ ರನ್‌ ವೇ ಮುಚ್ಚುವಂತೆ ಸೂಚನೆ ನೀಡಿದರು. ಬೆಳಿಗ್ಗೆ 4.30 ಗಂಟೆಯಿಂದ 8.25 ಗಂಟೆವರೆಗೆ ರನ್‌ವೇನಲ್ಲಿ ವಿಮಾನಗಳ ಹಾರಾಟಕ್ಕೆ ಅವಕಾಶವಿರಲಿಲ್ಲ.‌

ಮಂಜು ಕಡಿಮೆಯಾದ ಬಳಿಕವೇ ವಿಮಾನಗಳ ಹಾರಾಟ ಪುನಃ ಆರಂಭವಾಯಿತು. ವಿಮಾನಗಳಲ್ಲಿ ಕುಳಿತಿದ್ದ ಪ್ರಯಾಣಿಕರು ಅಲ್ಲಿಯವರೆಗೂ ಕಾದರು.

‘ರನ್‌ವೇ ಬಂದ್‌ ಆಗಿದ್ದರಿಂದ ಇಂಡಿಗೊದ 15 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಯಿತು. ಅವುಗಳ ಪ್ರಯಾಣಿಕರಿಗೆ ಕಂಪನಿಯವರೇ ಪರ್ಯಾಯ ವ್ಯವಸ್ಥೆ ಮಾಡಿದರು’ ಎಂದು ವಿಮಾನ ನಿಲ್ದಾಣದ ಪ್ರತಿನಿಧಿಗಳು ತಿಳಿಸಿದರು.

‘ಚೆನ್ನೈ, ದೆಹಲಿ ಹಾಗೂ ಹಲವು ನಗರಗಳಿಗೆ ಹೋಗಬೇಕಿದ್ದ 63 ವಿಮಾನಗಳು ತಡವಾಗಿ ಹಾರಾಟ ನಡೆಸಿದವು. ಬೇರೆ ನಗರಗಳಿಂದ ನಗರಕ್ಕೆ ಬರಬೇಕಿದ್ದ 54 ವಿಮಾನಗಳು ನಿಗದಿತ ಅವಧಿಗಿಂತ ತಡವಾಗಿ ಬಂದವು.’

‘ನಿಲ್ದಾಣಕ್ಕೆ ಬರುತ್ತಿದ್ದ 8 ವಿಮಾನಗಳನ್ನು ಚೆನ್ನೈ ಹಾಗೂ ಹೈದರಾಬಾದ್‌ ನಿಲ್ದಾಣಗಳಿಗೆ ಕಳುಹಿಸಲಾಯಿತು. ಆ ವಿಮಾನಗಳು ಮಧ್ಯಾಹ್ನ ಅಲ್ಲಿಂದ ಹೊರಟು ಇಲ್ಲಿಗೆ ಬಂದವು’ ಎಂದರು. ಜನವರಿ ತಿಂಗಳಿನಲ್ಲಿ ಪದೇ ಪದೇ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಪ್ರಯಾಣಿಕರ ಆಕ್ರೋಶ:

ವಿಮಾನಗಳ ಹಾರಾಟ ರದ್ದು ಹಾಗೂ ತಡವಾಗಿದ್ದಕ್ಕೆ ಹಲವು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜೆಟ್‌ ಏರ್‌ವೇಸ್‌ನವರೇ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ನಿಲ್ಲಿಸಿ. ನಾನು 6 ಗಂಟೆಯಿಂದ ನಿಮ್ಮ ವಿಮಾನದಲ್ಲಿ ಕುಳಿತುಕೊಂಡಿದ್ದೇನೆ. ಹೊರಗೆ ಯಾವುದೇ ದಟ್ಟ ಮಂಜು ಇಲ್ಲ. ಅಷ್ಟಾದರೂ ನೀವು ದಟ್ಟ ಮಂಜು ಇದೆ ಎಂಬ ಕಾರಣಕ್ಕೆ ವಿಮಾನವನ್ನು ಹಾರಿಸುತ್ತಿಲ್ಲ’ ಎಂದು ಗೌರವ್‌ ವತ್ಸಾ ರಾಯ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

‘ಪದೇ ಪದೇ ದಟ್ಟ ಮಂಜು ಎಂದು ಹೇಳುವುದನ್ನು ಮೊದಲು ನಿಲ್ಲಿಸಿ. ನಾನು ಈ ಬರಹದೊಂದಿಗೆ ನಿಲ್ದಾಣದ ಛಾಯಾಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದೇನೆ. ಅವುಗಳನ್ನು ನೋಡಿ. ನಾಚಿಕೆಯಾಗಬೇಕು ನಿಮಗೆ’ ಎಂದು ಕಿಡಿಕಾರಿದ್ದಾರೆ.

ದೆಹಲಿಯ ರಣದೀಪ್‌, ‘ಕೆಲವೇ ನಿಮಿಷಗಳಲ್ಲಿ ವಿಮಾನ ಹಾರುತ್ತದೆ ಎಂದಷ್ಟೇ ಸಿಬ್ಬಂದಿ ಹೇಳುತ್ತಾರೆ. 5 ಗಂಟೆಯಾದರೂ ವಿಮಾನ ಸ್ವಲ್ಪವೂ ಅಲುಗಾಡಿಲ್ಲ. ಯಾಕೆ ಇಷ್ಟು ಸುಳ್ಳು ಹೇಳುತ್ತೀರಾ. ರದ್ದಾಗಿದೆ ಎಂದು ನೇರವಾಗಿ ಹೇಳಿ. ಪರ್ಯಾಯ ವ್ಯವಸ್ಥೆ ಕಲ್ಪಿಸಿ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ವಿಕಾಸ್ ಹಳ್ಳಿ, ‘ನಾನಿರುವ ವಿಮಾನ ನಿಲ್ದಾಣದಲ್ಲೇ ನಿಂತಿದೆ. 4 ಗಂಟೆಯಿಂದ ಪ್ರಯಾಣಿಕರನ್ನು ಒತ್ತಾಯದಿಂದ ಕೂರಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಲ್ಪಾ ಡಿಸೋಜಾ, ‘ಒಂದೂ ವಿಮಾನ ಹಾರಿಲ್ಲ. ನಿಲ್ದಾಣವೂ ಪ್ರಯಾಣಿಕರಿಂದ ತುಂಬಿದೆ. ಇದು ವಿಮಾನ ನಿಲ್ದಾಣವೋ ಅಥವಾ ಮೆಜೆಸ್ಟಿಕ್‌ ಬಸ್‌ ನಿಲ್ದಾಣವೋ ಗೊತ್ತಾಗುತ್ತಿಲ್ಲ’ ಎಂದಿದ್ದಾರೆ. ಪ್ರಜ್ಞಾ, ‘ದಟ್ಟ ಮಂಜಿನಿಂದಾಗಿ 4 ಗಂಟೆಯಿಂದ ವಿಮಾನದೊಳಗೆ ಸಿಲುಕಿಕೊಂಡಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry