ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚೆ ಮಹಾತ್ಮೆಯೂ.. ಗೋಮೂತ್ರ ಶುದ್ಧಿಯೂ..

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ಬಾದಾಮಿ ಜಾತ್ರ್ಯಾಗ ಬೆಂಡು ಬತ್ತಾಸು ಖರೀದಿಸುತ್ತ, ಊರವ್ರು ಕಣ್ಣಿಗೆ ಬೀಳ್ತಾರೇನಂತ ಕಣ್ಣಗಲಿಸಿ ನೋಡ್ತಾ ನಿಂತ್ಕೊಂಡಿದ್ದೆ. ಛಕ್ಕನ ಚೆಡ್ಡಿ ದೋಸ್ತ್‌ ಕಣ್ಣಿಗೆ ಬಿದ್ದ. ‘ಏಯ್‌ ಪ್ರಭ್ಯಾ ಬಾರೊ ಇಲ್ಲಿ’ ಎಂದು ಖುಷಿಯಿಂದಲೇ ಕೂಗು ಹಾಕಿದೆ. ಯಾರ್ ಹತ್ರಾನೊ ಮಾತನಾಡ್ತಿದ್ದವ, ಧುಮುಗುಟ್ಟುತ್ತಲೇ ಹತ್ತಿರ ಬಂದು, ‘ಕೈಯ್ಯಾಗಿನ ರತ್ನ ಜಾರಿ ಹೋಯ್ತು ಬಿಡು’ ಎಂದು ನಿಟ್ಟುಸಿರುಬಿಟ್ಟ.

‘ಕಾಲೇಜ್‌ನ್ಯಾಗ್‌ ನಾ ಅಂದ್ರ ಸಾಯ್ತಿದ್ದ ರತ್ನಾ ಅಪರೂಪಕ್ಕ ಸಿಕ್ಕಿದ್ಲು. ನೀ ಅದಕ್ಕ ಕಲ್‌ ಹಾಕ್ದಿ ನೋಡ್‌’ ಎಂದು ಸಿಟ್‌ ಕಾರಿಕೊಂಡ.

‘ಆ ಟೈಮ್ದಾಗ್‌ ಕಾಲೇಜ್‌ಗೆ ಅಕಿ ಒಬ್ಬಾಕಿನ ಪದ್ಮಾವತಿ ಆಗಿದ್ಳು. ನೀನs ಆಕಿ ಹಿಂದ್‌ ಬಿದ್ದಿದ್ದಿ. ಈಗ ನೋಡಿದ್ರ ಉಲ್ಟಾ ಹೊಡ್ಯಾಕತ್ತಿ’ ಎಂದು ರೇಗಿಸಿದೆ.

‘ಏಯ್‌ ಪದ್ಮಾವತಿ ಅಂದ್ರ ಕರ್ಣಿ ಸೇನಾದವರು ಮೂಗ್‌ ಕತ್ತರಿಸಿಬಿಟ್ಟಾರು, ಪದ್ಮಾವತಿ ಅಲ್ಲಲೇ ಪದ್ಮಾವತ್‌ ಅನ್ನು’ ಎಂದು ತಿದ್ದಿದ.

‘ಏನ್‌ ಪದ್ಮಾವತ್‌ನೊ, ಏನ್‌ ಸೆನ್ಸಾರ್‌ ಮಂಡಳಿನೊ. ಪದ್ಮಾವತ್‌ ಅನ್ನೋದು ಹೆಣ್ಣೊ, ಗಂಡೊ ಒಂದೂ ಗೊತ್ತಾಗುದಿಲ್ಲ’ ಎಂದೆ. ನನ್ನ ಮಾತನ್ನ ಅರ್ಧದಲ್ಲಿಯೇ ಕತ್ತರಿಸಿ, ‘ಅದು ಏನರ ಇರ್ಲಿ, ನಾ ರತ್ನಾಳನ್ನ ಮಾತಾಡ್ಸಿದ್ದನ್ನ ಮನ್ಯಾಗ್‌ ಹೇಳಬ್ಯಾಡಪ’ ಅಂತ ಸೇರ್ಸಾಕ್ ಮರೀಲಿಲ್ಲ.

‘ಜಾತ್ರಿ, ರಾತ್ರಿ ತಿಂಡಿ ತೀರ್ಥದ ಖರ್ಚ್‌ ಎಲ್ಲಾ ನೋಡ್ಕೊಂಡ್ರ ಹೇಳೂದಿಲ್‌ ನೋಡ್‌’ ಎಂದು ಧಮ್ಕಿ ಹಾಕಿದೆ.

‘ಜಾತ್ರಿ ಏನ್‌, ರಾತ್ರಿ ಪೂರ್ತಿ ನಾಟ್ಕಾನೂ ತೋರುಸ್ತೀನಿ ನಡಿ’ ಎಂದ ಹುರುಪಿನಿಂದ.

‘ಏಯ್‌, ಹಳೆ ನಾಟ್ಕಾ ನೋಡಿ ನೋಡಿ ಬ್ಯಾಸ್ರಾ ಆಗೇದ ಬಿಡೊ’ ಎಂದೆ.

‘ಜಾತ್ರಾ ಸ್ಪೆಷಲ್‌ ಆಕರ್ಷಣೆಯಾಗಿ ‘ಪಂಚೆ ಮಹಾತ್ಮೆ’ ಬಂದದs. ನೋಡ್ಕೊಂಡ್‌ ಬರೋಣ ಬಾ’ ಅಂದ.

‘ಇದಾವ್‌ ಹೊಸ ನಾಟ್ಕಾಲೇ’ ಎಂದು ರಾಗ ಎಳೆದೆ.

‘ಏಯ್‌ ಇದು ಗಣಿ ಧಣಿ ಕೃಪಾಪೋಷಿತ ಕಂಪನಿಯ ಹೊಸ ನಾಟ್ಕಾ ಮಗನ’ ಎಂದು ಹೇಳುತ್ತಲೇ, ‘ಒಂದ್‌ ರೌಂಡ್‌ ಹೋಗಿ ಬರೋಣ ಬಾ’ ಎಂದು ದರ ದರ ಎಳಕೊಂಡ್‌ ಹೊಂಟ.

ದೂರದಿಂದಲೇ ಮೈಕ್‌ನ್ಯಾಗ್‌ ನಾಟಕದ ಪ್ರಚಾರ ಕಿವಿಗೆ ಬೀಳ್ತಿತ್ತು. ‌‌ ‘ಹೊಚ್ಚ ಹೊಸ ನಾಟಕ. ಹೊಸ ಪಾತ್ರಧಾರಿಗಳ ಅಮೋಘ ನಟನೆಯ ಪಂಚೆ ಮಹಾತ್ಮೆ ನೋಡಲು ಮರೆಯಬೇಡಿ. ಮರೆತು ನಿರಾಶರಾಗಬೇಡಿ. ಸೂತ್ರಧಾರನ ಪಟ್ಟ ಕೊಟ್ರ, ಬಿಜೆಪಿಗೆ ಪೂರ್ಣ ಬಹುಮತದ ಗಾಳಿ ಗೋಪುರದ ಭರವಸೆ ನೀಡಿರುವ ಕೃಷ್ಣದೇವರಾಯನ ವಿಶಿಷ್ಟ ಬಳ್ಳಾರಿ ಬೈಗುಳ ಶೈಲಿ, ನಟನಾ ಚಾತುರ್ಯ ನೋಡಲು ಮರೆಯಬೇಡಿ. ಎಡ– ಬಲ ಕಿವಿಗೂ ಕರ್ಣಾನಂದಕರವಾಗಿ ಸಿಎಂಗೆ ಏಕವಚನದಲ್ಲಿ ಬೈದಿದ್ದನ್ನು ಕೇಳಲು ತಪ್ಪಿಸಿಕೊಳ್ಳಬೇಡಿ. ಕ್ಲೈಮ್ಯಾಕ್ಸ್‌ನಲ್ಲಿ ಆಧುನಿಕ ಗಣಿ ಕರ್ಣ, ಕಡು ವೈರಿಗಳಿಗೂ ಎಡಗೈನಲ್ಲಿ ಕೋಟಿಗಟ್ಟಲೆ ದಾನ ನೀಡುವ ಪವಾಡ ನೋಡಿ ಕೃತಾರ್ಥರಾಗಿ. ಬನಶಂಕರಿ ಅಮ್ಮಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿ...’

‘ಏನೋ ಇದು ನಾಟಕಕ್ಕಿಂತ ಪ್ರಚಾರನs ಭರ್ಜರಿ ಇದ್ಹಂಗ್‌ ಕಾಣಸ್ತೈತಿ’ ಎಂದೆ.

‘ಬಳ್ಳಾರಿ ಗಣಿ ಧಣಿ ಪ್ಯಾಂಟ್‌ ಬಿಟ್ಟು ಪಂಚೆ ಉಡೋದಾಗಿ ಪ್ರತಿಜ್ಞೆ ಮಾಡಿರುವುದು ಸಣ್ಣ ಸುದ್ದಿ ಏನ್‌ ಮಗನ’ ಎಂದ.

‘ಕೆಲವರ ಚೆಡ್ಡಿಯೊಳಗೆ ಬೆಂಕಿ ಬಿದ್ದದ ಅಂತ ಕೌಶಲ್ಯಾಭಿವೃದ್ಧಿ ಮಂತ್ರಿ ಹೇಳಿದ್ದಕ್ಕೂ, ಗಣಿ ಧಣಿ ಪಂಚೆ ಉಡುವುದಾಗಿ ಪ್ರತಿಜ್ಞೆ ಮಾಡಿದ್ದಕ್ಕೂ ಏನರ ಸಂಬಂಧ ಅದ ಏನ್‌? ಸಿಬಿಐ... ಅಲ್ಲಲ್ಲ ಎಸ್‌ಐಟಿ ತನಿಖೆ ನಡೆಸಿದ್ರ ಖರೆ ಏನ್‌ ಅನ್ನೋದು ಗೊತ್ತಾಗ್ತದ ನೋಡ್‌’ ಎಂದೆ.

‘ಪಂಚೆ ಉಡೋ ಮಣ್ಣಿನ ಮಗನs ಸಿಎಮ್ಮು, ಪಿಎಮ್ಮು ಆಗಿರುವಾಗ, ಗಣಿ ಮಗನೂ ಆ ಪಟ್ಟಕ್ಕೇರುವ ಛಾನ್ಸ್‌ ಭಾಳ್‌ ಅದ ಅಂತ ಜ್ಯೋತಿಷಿ ಕೃಷ್ಣದೇವರಾಯನ ಕಿವಿ ಊದ್ಯಾನ ಅಂತ ಸುದ್ದಿ’ ಎಂದ ಪ್ರಭ್ಯಾ ಪಂಚೆ ಗುಟ್ಟು ರಟ್ಟು ಮಾಡಿದ.

‘ಅದೇ ಅಂತೀನಿ. ಇನ್‌ ಮ್ಯಾಲ್‌ ಪಂಚೆಗಳಿಗೂ ಭಾರಿ ಡಿಮ್ಯಾಂಡ್‌ ಬರಬಹುದು ಬಿಡು. ಗೌಡ್ರ, ಸಿದ್ರಾಮಣ್ಣನ ಪಂಚೆ ಮಸುಕಾಗಲೂಬಹುದು. ಅದಿರ್ಲಿ, ಗಣಿಧಣಿಗೆ ಕಾಂಗ್ರೆಸ್‌ ಮ್ಯಾಲೆ ಅದ್ಯಾಕ್‌ ಇಷ್ಟ್‌ ಸಿಟ್‌ ಐತಿ’ ಎಂದೆ.

‘ಕೃಷ್ಣದೇವರಾಯನಾಗಿ ದರ್ಬಾರ್‌ ನಡೆಸುವ ಬದಲಿಗೆ, ಕೃಷ್ಣನ ಜನ್ಮಸ್ಥಾನದಲ್ಲಿ ಕಾಲ ಕಳೆದಿದ್ದನ್ನ ಅಷ್ಟ್‌ ಬೇಗ್‌ ಮರ‍್ಯಾಕ್‌ ಆಗ್ತದೇನ್‌. ಗಣಿ ಧಣಿಗೆ ಅದs ಸಿಟ್‌ ಇದ್ಹಂಗ್‌ ಕಾಣಸ್ತೈತಿ. ಕಾಂಗ್ರೆಸ್‌ನವ್ರು ಕೇಳಿದ್ರ ಎಡಗೈ,ಎಡಗೈದಾಗ್ ಕೋಟಿಗಟ್ಟಲೆ ಭಿಕ್ಷೆ ನೀಡೋಕು ತಯ್ಯಾರ್‌ ಅಂತ ಹೇಳ್ಯಾರ್‌. ನಾಟ್ಕಾ ನೋಡೊ ನೆಪದಾಗ ಯಾರ‍್ಯಾರು ಮುಖಕ್ಕ ಶೆಲ್ಲೆ ಹಾಕ್ಕೊಂಡು ಭಿಕ್ಷೆ ಕೇಳಾಕ್‌ ಬರ್ತಾರ ನೋಡ್ಬೇಕ್‌ ನೋಡ್‌’ ಎಂದ ಪ್ರಭ್ಯಾ.

‘ಅದಿರ್ಲಿ, ಪ್ಯಾಂಟ್‌ ಹಾಕ್ಕೊಂಡಿದ್ರ ನಾಲ್ಕೈದು ಕಿಸೆದಾಗ ಕೈ ಹಾಕಿ ಭಿಕ್ಷೆ ಕೇಳಿದವ್ರಿಗೆಲ್ಲ ಎಡಗೈ, ಬಲಗೈದಿಂದಲೂ ದಾನಾ ಮಾಡಬಹುದಿತ್ತಪ್ಪ. ಪಂಚೆ ಉಟ್ಗೊಂಡು ಅದ್ಹೆಂಗ್‌ ದಾನಾ ಮಾಡ್ತಾರೊ’ ಎಂದು ಪ್ರಶ್ನಿಸಿದೆ.

‘ಪಂಚೆ ಪುರಾಣ ಏನೇ ಇರಲಿ. ಹಿಂದ್‌ ಕಸಾಪ ಅಧ್ಯಕ್ಷ ಪುನರೂರು ಅವರ ಪಂಚೆ ಎಳೆದ್ಹಾಕಿದ್ಹಾಂಗ್‌, ಭಿಕ್ಷೆ ಕೇಳಾಕ್‌ ಬಂದವ್ರು ಅವಸರದಾಗ್ ಗಣಿ ಪಂಚೆಯನ್ನೂ ಹರಿದು ಹಾಕದಿದ್ರ ಸಾಕು’ ಎಂದ ಪ್ರಭ್ಯಾ.

‘ಲೇ ಪ್ರಭ್ಯಾ, ಜಾತ್ರ್ಯಾಗ್‌ ಭಾಳ್‌ ದನಾನೂ ಬಂದಾವ್‌. ಗೋಮೂತ್ರ ಹಿಡ್ಕೊತಿ ಏನ್‌ ನೋಡ್‌’ ಎಂದು ಪಂಚೆ ಪುರಾಣದಿಂದ ಮಾತು ಬೇರೆಡೆ ತಿರುಗಿಸಿದೆ.

ನನ್ನ ಮಾತನ್ನ ‘ಗೋ–ಮೂತ್ರ’ ಎಂದು ತಪ್ಪಾಗಿ ತಿಳಿಕೊಂಡ ಪ್ರಭ್ಯಾ ಸುತ್ತಮುತ್ತ ನೋಡಾಕತ್ತ. ‘ಅಲ್ಲೆಲ್ಲಿ ನೋಡ್ಬೇಡ, ಇಲ್ಲಿ ಲಕ್ಷಗೊಟ್‌ ಕೇಳ್‌, ಗೋಮೂತ್ರಕ್ಕs ಮುಂದ್‌ ಭಾಳ ರೇಟ್‌ ಬರೂಹಂಗ್‌ ಕಾಣಸ್ತೈತಿ. ಪ್ರಕಾಶ್‌ ರೈ ಹೇಳ್ದಂಗ್‌, ಅವ್ರು ಹೋದಲ್ಲಿ ಬಂದಲ್ಲಿ ಗೋಮೂತ್ರದಿಂದ ಸ್ವಚ್ಛ ಮಾಡಾಕ್‌ ಹೊಸ ಬ್ರಿಗೇಡ್‌s ಬೇಕಾಗ್ತೈತಿ ನೋಡ್‌’ ಎಂದು ಅವ್ನ ತಲ್ಯಾಗ್‌ ಹೊಸಾ ಹುಳಾ ಬಿಟ್ಟೆ.

‘ಭಾಷ್ಣಾ ಮಾಡ್ದ ಜಾಗಾನ ಗೋಮೂತ್ರದಿಂದ ತೊಳದ್ರ ಪವಿತ್ರ ಆಗೂದಾದ್ರ, ಭಾಷ್ಣ ಕೇಳ್ದವ್ರನ್ನ, ಓದಿದವ್ರನ್ನ ಹೆಂಗ್‌ ಪವಿತ್ರ ಮಾಡ್ತಾರೊ. ಸ್ವಮೂತ್ರಪಾನ ಬದಲಿಗೆ ಗೋಮೂತ್ರಪಾನ ಅಭಿಯಾನ ಚಾಲೂ ಮಾಡ್ತಾರೇನ್‌ ಮತ್. ಜಾತ್ಯತೀತರು, ಸಂವಿಧಾನ ರಕ್ಷಕರು ಭಾಷ್ಣಾ ಮಾಡಿದಲ್ಲೆಲ್ಲ ಗೋಮೂತ್ರ ಸಿಂಪಡಿಸುತ್ತ ಹೋದ್ರ ಪತಂಜಲಿಯ ಯೋಗ ಗುರು ಕೂಡ ಸ್ವದೇಶಿ ಶುದ್ಧ ಗೋಮೂತ್ರ ತಯಾರಿಸಿ ಮಾರಾಟ ಮಾಡಾಕ್‌ ಇಳಿಬೇಕಾಗ್ತೈತಿ. ಆನ್‌ಲೈನ್‌ದಾಗೂ ಸಿಕ್ರ, ಗೋಮಾತೆ ಹಿಂದೆ ಚೊಂಬ್‌ ಹಿಡ್ಕೊಂಡು ತಿರುಗೋದು ತಪ್ಪತದ ಬಿಡು’ ಎಂದೆ.

ನನ್ನ ಮಾತಿಗೆ ಏನ್‌ ಉತ್ತರ ಕೊಡಬೇಕೊ ಗೊತ್ತಾಗ್ದ ಪ್ರಭ್ಯಾ ಮಿಕಿಮಿಕಿ ನನ್ನ ಮಕಾ ನೋಡಾಕತ್ತಿದ್ದನ್ನು ನೋಡಿ, ಎದುರಿಗಿನ ಚಾದಂಗಡಿಗೆ ಎಳಕೊಂಡು ಹೋಗಿ ಚೂಡಾ, ಭಜಿಗೆ ಆರ್ಡ್‌ರ್‌ ಮಾಡಿದೆ. ರೇಡಿಯೊದಿಂದ ಕೇಳಿಬಂದ ‘ನೀನಾರಿಗಾದೆಯೋ ಎಲೆ ಮಾನವಾ...’ ಹಾಡು ಕೇಳ್ತಾ ಚಾ ಗುಟುಕರಿಸತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT