ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಶೌಚಾಲಯ, ಮನೆ, ಆಹಾರ, ವಿದ್ಯುತ್, ಕಸ್ಟಮ್ಸ್ ಸುಂಕ

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಎರಡು ಕೋಟಿ ಶೌಚಾಲಯ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ‘ಸ್ವಚ್ಛ ಭಾರತ’ಕ್ಕಾಗಿ ₹ 2,500 ಕೋಟಿ ಮೀಸಲಿಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ₹ 200 ಕೋಟಿ ಹೆಚ್ಚುವರಿ ನೀಡಲಾಗಿದೆ. ಸ್ವಚ್ಛ ಭಾರತ್‌ ಯೋಜನೆಯಡಿ ಸರ್ಕಾರ ಈಗಾಗಲೇ ಆರು ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದೆ. ಮಹಿಳೆಯರ ಘನತೆ, ಬಾಲಕಿಯರ ಶಿಕ್ಷಣ ಮತ್ತು ಇಡೀ ಕುಟುಂಬದ ಆರೋಗ್ಯದಲ್ಲಾಗಿರುವ ಬದಲಾವಣೆಗಳು ಈ ಯೋಜನೆಯಿಂದ ಆಗಿರುವ ಸಕಾರಾತ್ಮಕ ಪರಿಣಾಮಗಳು. ಈ ಯೋಜನೆಯಡಿ ಇನ್ನೂ ಎರಡು ಕೋಟಿ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಸ್ವಂತ ಮನೆ ಕಲ್ಪಿಸುವ ಗುರಿ

ಭ್ರಷ್ಟಾಚಾರದಿಂದ ಗಳಿಸಿದ ಬೇನಾಮಿ ಆಸ್ತಿ ಒಂದೆಡೆಯಾದರೆ, ಸ್ವಂತ ದುಡಿಮೆಯಿಂದ ಸಣ್ಣದೊಂದು ಸೂರು ಕಟ್ಟಿಕೊಳ್ಳುವ ಆಕಾಂಕ್ಷೆ ಹೊಂದಿದ ಬಡವರದು ಇನ್ನೊಂದು ವರ್ಗ. ಬಡವರ ಈ ಕನಸನ್ನು ನನಸು ಮಾಡಲು ಸರ್ಕಾರ ನೆರವಾಗಲಿದೆ. ಅದರಂತೆ, ದೇಶದ ಎಲ್ಲ ಬಡವರಿಗೂ 2022ರ ವೇಳೆಗೆ ಸ್ವಂತ ಮನೆ ಕಲ್ಪಿಸುವ ಗುರಿಯನ್ನು ನಿಗದಿಪಡಿಸಿಕೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ‘ಪ್ರಧಾನಮಂತ್ರಿ ಆವಾಸ್‌’ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮೀಣ ಭಾಗದಲ್ಲಿ 2017–18ನೇ ಸಾಲಿನಲ್ಲಿ 51 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮತ್ತೆ 51 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ನಗರ ಪ್ರದೇಶದಲ್ಲಿ 37 ಲಕ್ಷ ಮನೆಗಳನ್ನು ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗುವುದು.

ಆಹಾರ ಸಂಸ್ಕರಣೆಗೆ ಉತ್ತೇಜನ

ಆಹಾರ ಸಂಸ್ಕರಣೆ ವಲಯವು ‍ಪ್ರತಿವರ್ಷ ಶೇಕಡ 8ರ ಸರಾಸರಿ ದರದಲ್ಲಿ ಪ್ರಗತಿ ಸಾಧಿಸುತ್ತಿದೆ. ಈ ವಲಯದಲ್ಲಿ ಹೂಡಿಕೆ ಹೆಚ್ಚಿಸಲು ‘ಪ್ರಧಾನಮಂತ್ರಿ ಕಿಸಾನ್ ಸಂಪದ’ ಯೋಜನೆಯು ಪ್ರಮುಖ ಕಾರ್ಯಕ್ರಮವಾಗಿದೆ.ಆಹಾರ ಸಂಸ್ಕರಣಾ ಸಚಿವಾಲಯಕ್ಕೆ ಮೀಸಲಿರಿಸಿದ ಅನುದಾನವನ್ನು ದುಪ್ಪಟ್ಟು ಮಾಡಲಾಗಿದೆ. (2017-18ರಲ್ಲಿ ₹715 ಕೋಟಿ ಇದ್ದ ಅನುದಾನ ಪ್ರಸಕ್ತ ಸಾಲಿನಲ್ಲಿ ₹1400 ಕೋಟಿಗೆ ಏರಲಿದೆ). ಈ ವಲಯಕ್ಕೆ ಸಂಬಂಧಿಸಿದಂತೆ ‘ವಿಶೇಷ ಕೃಷಿ ಸಂಸ್ಕರಣಾ ಹಣಕಾಸು ಸಂಸ್ಥೆ’ಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತದೆ. ಬೃಹತ್ ಆಹಾರ ಪಾರ್ಕ್, ಕೃಷಿ–ಸಂಸ್ಕರಣಾ ವಲಯದ ಮೂಲಸೌಕರ್ಯ, ಮೌಲ್ಯವರ್ಧಿತ ಮೂಲಸೌಕರ್ಯ ಮುಂತಾದವುಗಳ ಅಭಿವೃದ್ಧಿಗೆ ಅನುದಾನವನ್ನು ಬಳಕೆ ಮಾಡಲಾಗುತ್ತದೆ.

ವಿದ್ಯುತ್ ಸೌಲಭ್ಯ
ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಕೇಂದ್ರ ಈಗಾಗಲೇ ’ಪ್ರಧಾನಮಂತ್ರಿ ಸೌಭಾಗ್ಯ ಯೋಜನೆ‘ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ 4 ಕೋಟಿ ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡಲಾಗುತ್ತಿದೆ. ‘ವಿದ್ಯುತ್‌ ಕೇವಲ ಒಂದು ಗಂಟೆ ಕೈಕೊಟ್ಟರೂ ನಮಗಾಗುವ ಆತಂಕ ಮತ್ತು ಚಡಪಡಿಕೆ ಹೇಗಿರುತ್ತದೆ ಅಲ್ಲವೇ? ಹೀಗಿರುವಾಗ ವಿದ್ಯುತ್‌ ಸಂಪರ್ಕವನ್ನೇ ಹೊಂದಿರದ ಮನೆಗಳಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಸ್ಥಿತಿಯನ್ನು ಊಹಿಸಿ’ ಎಂದಿರುವ ಸಚಿವರು, ಈ ಯೊಜನೆಯಿಂದ ಅವರ ಜೀವನಶೈಲಿ ಬದಲಾಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ. ಕೃಷಿ– ಸಂಸ್ಕರಣೆ ಯೋಜನೆಗಳಿಗೆ ಹಣಕಾಸು ನೆರವು ನೀಡಿಕೆಗಾಗಿ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ನಿರ್ಧರಿಸಲಾಗಿದೆ.

ಕಸ್ಟಮ್ಸ್ ಸುಂಕ

ದೇಶಿ ಉದ್ಯಮಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಆಮದು ಮಾಡಿಕೊಳ್ಳುವ ಹಣ್ಣಿನ ಜ್ಯೂಸ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಏರಿಸಲು ನಿರ್ಧರಿಸಲಾಗಿದೆ. ಕಚ್ಚಾ ಗೋಡಂಬಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 5ರಿಂದ ಶೇ 2.5ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT