ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಿ

Last Updated 2 ಫೆಬ್ರುವರಿ 2018, 6:54 IST
ಅಕ್ಷರ ಗಾತ್ರ

ರಾಯಚೂರು: ’ನಗರದಲ್ಲಿ 24X7 ನೀರು ಪೂರೈಸುವ ಯೋಜನೆ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣವಾಗಬೇಕು. ಗುತ್ತಿಗೆದಾರರಿಗೆ ಮತ್ತೆ ಅವಧಿ ವಿಸ್ತರಿಸಬಾರದು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

‘ಕಾಮಗಾರಿ ಮುಗಿಸುವ ಗಡುವಿನಿಂದ ಈಗಾಗಲೇ ಮೂರು ತಿಂಗಳು ವಿಸ್ತರಿಸಲಾಗಿದೆ. ಆದರೂ ಕೆಲಸ ಪೂರ್ಣವಾಗಿಲ್ಲ. ಗುತ್ತಿಗೆ ಪಡೆದ ಕಂಪೆನಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಿತ್ತು. ಕೆಲಸದ ವಿಳಂಬಕ್ಕಾಗಿ ಕಂಪನಿಗೆ ನೋಟಿಸ್‌ ಕೊಡಿ. ಒಳಚರಂಡಿ ಕಾಮಗಾರಿಗೆ ಅಗೆದುಹಾಕಿದ ರಸ್ತೆಗಳನ್ನು ಸಮರ್ಪಕವಾಗಿ ಮರುನಿರ್ಮಾಣ ಮಾಡಬೇಕು. ಅಧಿಕಾರಿಗಳು ನಿಗಾವಹಿಸಿ ಗುತ್ತಿಗೆದಾರರಿಂದ ಕೆಲಸ ಮಾಡಿಸಬೇಕು’ ಎಂದರು.

’ನಗರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಕೆಲಸ ಅಚ್ಚುಕಟ್ಟಾಗಿ ನಡೆಯಬೇಕು. ವಾಹನಗಳು ಅಂಕುಡೊಂಕಾಗಿ ಸಂಚರಿಸುವುದನ್ನು ತಪ್ಪಿಸಲು ಲೇನ್‌ಗಳನ್ನು ಹಾಕಿ. ರಸ್ತೆಯು ಒಂದು ಕಡೆ ಕಿರಿದಾಗಿ, ಇನ್ನೊಂದು ಕಡೆ ಹಿರಿದಾಗಿ ಕಾಣಿಸಬಾರದು. ಮೇಲ್ವಿಚಾರಣೆ ಸರಿಯಾಗಿರಬೇಕು’ ಎಂದು ತಿಳಿಸಿದರು.

ನಗರಾಭಿವೃದ್ಧಿ ಜಿಲ್ಲಾಕೋಶದ ಅಧಿಕಾರಿ ಈರಣ್ಣ ಮಾತನಾಡಿ, ‘ರಾಜಸ್ತಾನದ ಎಸ್‌ಪಿಎಂ ಕಂಪನಿಯು 24X7 ನೀರಿನ ಕಾಮಗಾರಿ ಗುತ್ತಿಗೆ ಪಡೆದಿದೆ. ಯೋಜನೆ ಅನುಷ್ಠಾನವನ್ನು ಪ್ರತಿ ವಾರ ಪರಿಶೀಲನೆ ಮಾಡಿದ್ದರ ಪರಿಣಾಮ ಶೇ 75 ರಷ್ಟು ಕೆಲಸವಾಗಿದೆ. ಇನ್ನು ಶೇ 25 ಮಾತ್ರ ಬಾಕಿ ಉಳಿದಿದ್ದು, ಗುತ್ತಿಗೆದಾರರಿಗೆ ಸಾಕಷ್ಟು ಒತ್ತಾಯಿಸಿದರೂ ಕೆಲಸ ಪ್ರಗತಿಯಾಗುತ್ತಿಲ್ಲ. ಮತ್ತೆ ಅವಧಿ ವಿಸ್ತರಣೆ ಕೋರಿದ್ದಾರೆ’ ಎಂದರು.

‘ಕೆಲಸ ವಿಳಂಬ ಮಾಡಿದ್ದಕ್ಕೆ ಒಂದು ಸಲ ₹34 ಲಕ್ಷ ದಂಡ ವಿಧಿಸಲಾಗಿದೆ. ಈಗ ಮತ್ತೆ ₹34 ಲಕ್ಷ ದಂಡಕ್ಕೆ ಶಿಫಾರಸು ಕಳುಹಿಸಲಾಗಿದೆ. ಇಲ್ಲಿಯವರೆಗೂ 26,600 ಮನೆಗಳಿಗೆ ಹೊಸ ನಲ್ಲಿ ಸಂಪರ್ಕ ಮಾಡಿದ್ದು, 10,800 ಮನೆಗಳಿಗೆ ಸಂಪರ್ಕ ಒದಗಿಸುವುದು ಬಾಕಿ ಇದೆ. ಯೋಜನೆಯಲ್ಲಿ ಶೇ 60 ರಷ್ಟು ಆರ್ಥಿಕ ಪ್ರಗತಿಯಾಗಿದೆ’ ಎಂದು ತಿಳಿಸಿದರು.

‘ಒಳಚರಂಡಿ (ಯುಜಿಡಿ) ನಿರ್ಮಾಣದ ಕಾಮಗಾರಿಯನ್ನು ಮುಂಬೈನ ಸ್ವಸ್ತಿಕ ಕಂಪನಿಯು ಪಡೆದಿದ್ದು, ನಿಗದಿತ ಅವಧಿಯಲ್ಲಿ ಕೆಲಸ ಮುಗಿಸುತ್ತಿದೆ. ಎರಡು ವಲಯಗಳ ಪೈಕಿ ಒಂದು ವಲಯದಲ್ಲಿ ಶೇ 99 ರಷ್ಟು ಕೆಲಸ ಮುಗಿದಿದ್ದು, ಇಡೀ ದೇಶದಲ್ಲಿ ಯುಜಿಡಿ ಕೆಲಸ ರಾಯಚೂರಿನಲ್ಲಿ ವೇಗವಾಗಿ ಜಾರಿಯಾಗುತ್ತಿದೆ’ ಎಂದು ಹೇಳಿದರು.

‘ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒಟ್ಟು ₹42 ಕೋಟಿ ವೆಚ್ಚದ ಯೋಜನೆ ಮಾಡಲಾಗಿತ್ತು. ಅದರಲ್ಲಿ ₹27 ಕೋಟಿ ರಸ್ತೆಗೆ ಮಾತ್ರ ಅನುಮೋದನೆ ಸಿಕ್ಕಿದೆ. ಐಬಿ ಕಾಲೊನಿಯಿಂದ ಆರ್‌ಟಿಒ ಕ್ರಾಸ್‌ವರೆಗೂ 2.5 ಕಿಲೋ ಮೀಟರ್‌ ರಸ್ತೆ ಕಾಮಗಾರಿಗೆ ಇನ್ನೂ ಅನುಮೋದನೆ ಬಂದಿಲ್ಲ. ಫೆಬ್ರುವರಿ 18 ರೊಳಗಾಗಿ ಐಬಿ ಕ್ರಾಸ್‌ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಪಾದಚಾರಿ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ. ಸ್ಟೇಷನ್‌ ವೃತ್ತ ಹಾಗೂ ಅಂಬೇಡ್ಕರ್‌ ವೃತ್ತದ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಸ್ವಲ್ಪ ತೊಂದರೆಯಾಗಿತ್ತು. ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ’ ಎಂದು ತಿಳಿಸಿದರು.

ಎಸ್‌ಪಿಎಂ ಕಂಪನಿ ಪರ ಎಂಜಿನಿಯರ್‌ ಪಂಕಜ ಜೈನ್‌ ಸಭೆಗೆ ಮಾಹಿತಿ ನೀಡಿ, ‘ನೀರು ಪೂರೈಕೆಗೆ ಇನ್ನು 10 ದಿನಗಳಲ್ಲಿ ಮುಖ್ಯ ಪೈಪ್‌ಲೈನ್‌ ಕೆಲಸ ಮುಗಿಸುತ್ತೇವೆ. ಒಟ್ಟು 527 ಕಿಲೋ ಮೀಟರ್ ಪೈಪ್‌ಲೈನ್‌ ಅಳವಡಿಸಬೇಕಿತ್ತು. ಅದರಲ್ಲಿ 20 ವಲಯಗಳಲ್ಲಿ ಸುಮಾರು 400 ಕಿಲೋ ಮೀಟರ್ ಪೈಪ್‌ಲೈನ್‌ ಕೆಲಸ ಮುಗಿದಿದೆ. ಬಾಕಿ 30 ಕಿ.ಮೀ. ಕಾಮಗಾರಿಯನ್ನು ಶೀಘ್ರ ಪೂರ್ಣ ಮಾಡುತ್ತೇವೆ. 10 ದಿನಗಳ ಬಳಿಕ ನಗರದ 28 ವಲಯಗಳ ಪೈಕಿ 20 ವಲಯಗಳಿಗೆ ನಿರಂತರ ನೀರು ಕೊಡಬಹುದು’ ಎಂದು ತಿಳಿಸಿದರು.

ಕಟ್ಟಡ ತೆರವಿಗೆ ಸೂಚನೆ

ರಾಯಚೂರು: ಸರ್ಕಾರಿ ಜಾಗದಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಿಸಿಕೊಂಡಿದ್ದನ್ನು ಕೂಡಲೇ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ್‌ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಕೋಟೆ ಕಂದಕ ಪಕ್ಕದಲ್ಲಿ ಹಾಗೂ ಮಾವಿನಕೆರೆ ಸುತ್ತಲೂ ಅನಧಿಕೃತ ಕಟ್ಟಡಗಳಿದ್ದರೆ ಕ್ರಮ ಜರುಗಿಸಬೇಕು ಎಂದು ಸಭೆಯ ಬಳಿಕ ಈ ಬಗ್ಗೆ ದೂರು ಆಲಿಸಿ ಸೂಚನೆ ನೀಡಿದರು.

* *

ಅಮೃತ ಯೋಜನೆಯಡಿ ಕೆಲಸಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಸಂಪರ್ಕ ಕೊರತೆಯಿಂದ ಕೆಲಸ ವಿಳಂಬವಾಗಲು ಅಧಿಕಾರಿಗಳು ಕಾರಣರಾಗಬಾರದು
ಜಿ.ಕುಮಾರನಾಯಕ್‌ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT