ಶನಿವಾರ, ಜೂನ್ 6, 2020
27 °C

ಸಚಿವರು, ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವರು, ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಅವಶ್ಯ

ಮಂಡ್ಯ: ‘ಶಿಕ್ಷಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳಿಗೆ ಶೈಕ್ಷಣಿಕ ವ್ಯವಸ್ಥೆಯ ಸಾಮಾನ್ಯ ಜ್ಞಾನ ಇಲ್ಲವಾಗಿದೆ. ಇದರಿಂದಾಗಿ ಹಲವು ಸರ್ಕಾರಗಳು ಅಧಿಕಾರಕ್ಕೆ ಬಂದರೂ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಾಧ್ಯವಾಗಿಲ್ಲ’ ಎಂದು ವಿಧಾನ ಪರಿಷತ್‌ ಉಪ ಸಭಾಪತಿ ಮರಿತಿಬ್ಬೇಗೌಡ ಹೇಳಿದರು. ನಗರದ ಎಸ್‌.ಬಿ.ಸಮುದಾಯ ಭವನದಲ್ಲಿ ಶುಕ್ರವಾರ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಕೆಲವು ಶಿಕ್ಷಣ ಸಚಿವರಿಗೆ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಯ ಪ್ರಾಥಮಿಕ ಜ್ಞಾನವೂ ಇರುವುದಿಲ್ಲ. ಅಧಿಕಾರಿಗಳಿಳು ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರಿಯುವುದಿಲ್ಲ. ಅರ್ಥವಿಲ್ಲದ ಸುತ್ತೋಲೆ ಹೊರಡಿಸುತ್ತಾರೆ. ಅದರಿಂದ ಶಿಕ್ಷಣ ಕ್ಷೇತ್ರದ ಸುಧಾರಣೆಯಾಗುತ್ತಿಲ್ಲ. ಶೈಕ್ಷಣಿಕ ಕ್ಷೇತ್ರದಿಂದ ಆಯ್ಕೆಯಾದ ಶಾಸಕರ ಸಲಹೆಗಳನ್ನು ಸಚಿವರು, ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಐದು ನಿಮಿಷದಲ್ಲಿ ಮಾತುಕತೆ ಮುಗಿಸುತ್ತಾರೆ. ಶಿಕ್ಷಕರಾಗಿ ಕೆಲಸ ಮಾಡಿದವರು ಇಲಾಖೆಯ ನಿರ್ದೇಶಕರಾಗಿ ಬಡ್ತಿ ಪಡೆದಾಗ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಬೇಕು. ಆದರೆ ಇವರು ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲುತ್ತಾರೆ’ ಎಂದು ದೂರಿದರು.

‘ಶಿಕ್ಷಕರಿಗೆ ನವೆಂಬರ್‌ಗೂ ಮೊದಲೇ ತರಬೇತಿ ನೀಡಬೇಕು. ಆದರೆ ಮಕ್ಕಳ ಪರೀಕ್ಷೆ ಸಮೀಪಿಸುವ ಸಂದರ್ಭದಲ್ಲಿ ತರಬೇತಿಗೆ ಆಹ್ವಾನಿಸುತ್ತಾರೆ. ಯಾವ ಸಮಯದಲ್ಲಿ ತರಬೇತಿ ನೀಡಬೇಕು ಎಂಬ ಅರಿವು ಅಧಿಕಾರಿಗಳಿಗೆ ಇಲ್ಲವಾಗಿದೆ. ಇದರಿಂದ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಾಲೆಯಲ್ಲಿ ನಡೆಯುವ ಚಟುವಟಿಕೆಗಳ ಮಾಹಿತಿ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಇರಬೇಕು’ ಎಂದು ಹೇಳಿದರು.

‘ಒಂದು ಶಾಲೆ ಅಭಿವೃದ್ಧಿ ಹೊಂದಲು ಮುಖ್ಯಶಿಕ್ಷಕನ ಪಾತ್ರ ಬಲು ಮುಖ್ಯವಾದುದು. ಏನೇ ಒತ್ತಡ ಇದ್ದರೂ ಸಹಶಿಕ್ಷಕರು ಹಾಗೂ ಸ್ಥಳೀಯರ ಸಹಕಾರದಿಂದ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯ ಬೆಳೆಸಿ ಗುಣಮಟ್ಟದ ಶಿಕ್ಷಣ ನೀಡುವುದು ಅವರ ಜವಾಬ್ದಾರಿ. ಮುಖ್ಯ ಶಿಕ್ಷಕ ತನ್ನ ಜವಾಬ್ದಾರಿ ಮರೆತರೆ ಇಡೀ ಶಾಲೆಯ ವಾತಾವರಣ ಹದಗೆಡುತ್ತದೆ. ಕೆಲ ಮಕ್ಕಳು ಪೋಷಕರ ಮಾತು ಕೇಳುವುದಿಲ್ಲ, ಆದರೆ ಶಿಕ್ಷಕರ ಮಾತು ಕೇಳುತ್ತಾರೆ. ಹೀಗಾಗಿ ಶಿಕ್ಷಕರು ಮಕ್ಕಳಲ್ಲಿ ಮೌಲ್ಯ ಬೆಳೆಸಬೇಕು’ ಎಂದು ಹೇಳಿದರು.

‘ಪ್ರಾಥಮಿಕ ಶಿಕ್ಷಕರು ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದುವಾಗ ಹಾಗೂ ಪ್ರೌಢಶಾಲೆ ಶಿಕ್ಷಕರು ಪಿಯು ಕಾಲೇಜು ಉಪನ್ಯಾಸಕರಾಗಿ ಬಡ್ತಿ ಹೊಂದುವಾಗ ಪರೀಕ್ಷೆ ನಡೆಸುವುದು ಅಸಂಬದ್ಧ. 35 ವರ್ಷಗಳ ಅನುಭವ ಇರುವವರಿಗೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಪ್ರೌಢಶಾಲೆ ಶಿಕ್ಷಕರ ಬಡ್ತಿ ಪ್ರಕ್ರಿಯೆ 6 ವರ್ಷಗಳಿಂದ ಸ್ಥಗಿತಗೊಂಡಿದೆ. ಬಿಜೆಪಿ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಡ್ತಿಗೆ ಪರೀಕ್ಷೆ ಹೇರಿದರು. ಪರೀಕ್ಷೆ ಬೇಡ ಎಂದು ಎಷ್ಟೇ ಮನವಿ ಮಾಡಿದರೂ ಅವರು ಮನಸ್ಸು ಬದಲಾಯಿಸಲಿಲ್ಲ’ ಎಂದರು.

‘ಮಂಡ್ಯ ಜಿಲ್ಲೆಯಲ್ಲಿ ಕೃಷಿ ಪ್ರಮುಖ ವೃತ್ತಿಯಾಗಿದೆ. ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆ ತರಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ರೈತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿ ಮಕ್ಕಳ ಭವಿಷ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಶಿಕ್ಷಕರ ಹೊಸ ಪಿಂಚಣಿ ಯೋಜನೆ ಬದಲಾವಣೆಗೆ ಕುರಿತು ವೇತನ ಆಯೋಗ ಮೂರು ತಿಂಗಳು ಕಾಲಾವಕಾಶ ಕೋರಿದೆ. ಅಷ್ಟರಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಅದು ಕಾರ್ಯಗತವಾಗುವುದು ಅನುಮಾನ’ ಎಂದರು.

ಜಿಲ್ಲಾ ಪಂಚಾಯಿಸಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಎನ್‌.ಯೋಗೇಶ್‌ ಮಾತನಾಡಿ ‘ಶೇ 100ರಷ್ಟು ಫಲಿತಾಂಶ ಪಡೆಯುವುದೇ ಶಿಕ್ಷಕರ ಗುರಿಯಾಗಬಾರದು. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಮೌಲ್ಯ ಕಲಿಸುವುದೇ ಗುರಿಯಾಗಬೇಕು. ಶೇ 45 ಅಂಕ ಪಡೆದವರೂ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳು ನಾಳಿನ ಪ್ರಜೆಗಳಾಗಿ ದೇಶದ ಭವಿಷ್ಯ ರೂಪಿಸುತ್ತಾರೆ. ಹೀಗಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ನಿವೃತ್ತ ಪ್ರಾಚಾರ್ಯ ಎಚ್‌.ಎಸ್‌.ಉಮೇಶ್‌, ನಿವೃತ್ತ ಶಿಕ್ಷಕರ ಸಂಘದ ಮಾಜಿ ಕಾರ್ಯದರ್ಶಿ ಜಿ.ಎನ್‌.ಶಿವರುದ್ರಪ್ಪ, ಎಸ್‌.ಪಿ.ಶಂಕರೇಗೌಡ, ದಕ್ಷಿಣ ವಲಯ ಬಿಇಒ ವೆಂಕಟೇಶಯ್ಯ, ಉತ್ತರ ವಲಯ ಬಿಇಒ ಕೃಷ್ಣೇಗೌಡ, ಮದ್ದೂರು ಬಿಇಒ ರೇಣುಕಮ್ಮ, ಎ.ಎಸ್‌.ದೇವರಾಜು, ಶಿವರಾಮು, ನಾಗೇಶ್‌ ಹಾಜರಿದ್ದರು.

ಬಡ್ತಿ ಪಡೆಯುವುದು ತಪಸ್ಸು

‘ಶೇ 40ರಷ್ಟು ಶಿಕ್ಷಕರು ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದದೇ ನಿವೃತ್ತಿ ಹೊಂದುತ್ತಿದ್ದಾರೆ. ಈ ಕುರಿತು ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ. ಶಿಕ್ಷಕರು ಬಡ್ತಿ ಪಡೆಯುವುದು ಒಂದು ತಪಸ್ಸಾಗಿದೆ. ಬಸವರಾಜ ಹೊರಟ್ಟಿ ಶಿಕ್ಷಣ ಸಚಿವರಾಗಿದ್ದಾಗ ಶೇ 75ರಷ್ಟು ಮಂದಿಗೆ ಸೇವಾ ಮುಂಬಡ್ತಿ, ಶೇ 25 ರಷ್ಟು ಮಂದಿಗೆ ಪರೀಕ್ಷೆ ಮೂಲಕ ನೇಮಕಾತಿ ಮಾಡುವಂತೆ ಆದೇಶ ನೀಡಿದ್ದರು. ಆದರೆ ಅದು ಇನ್ನೂ ಜಾರಿಗೆ ಬಂದಿಲ್ಲ’ ಎಂದು ಮರಿತಿಬ್ಬೇಗೌಡ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.