ಭಾನುವಾರ, ಜೂನ್ 7, 2020
29 °C

ಕಾಂಗ್ರೆಸ್‌ ಟಿಕೆಟ್‌ಗೆ ಮಾವ– ಅಳಿಯನ ಫೈಟ್‌

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಟಿಕೆಟ್‌ಗೆ ಮಾವ– ಅಳಿಯನ ಫೈಟ್‌

ಬೆಳಗಾವಿ: ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ, ಕಾಂಗ್ರೆಸ್ಸಿನ ಡಿ.ಬಿ. ಇನಾಮದಾರ ಹಾಗೂ ಅವರ ಅಳಿಯ ಬಾಬಾಸಾಹೇಬ ಪಾಟೀಲ ಅವರ ನಡುವೆ ಟಿಕೆಟ್‌ಗಾಗಿ ತುರುಸಿನ ಸ್ಪರ್ಧೆ ನಡೆದಿದೆ.

ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಐದು ಸಲ ಈ ಕ್ಷೇತ್ರವನ್ನು ಇನಾಮದಾರ ಪ್ರತಿನಿಧಿಸಿದ್ದಾರೆ. 1983, 1985, 1994, 1999 ಹಾಗೂ 2013ರ ಚುನಾವಣೆಯಲ್ಲಿ ಜಯಗಳಿಸಿದ್ದರು. ಕೆಲವು ಚುನಾವಣೆಗಳಲ್ಲಿ ಸೋಲು ಕೂಡ ಕಂಡಿದ್ದಾರೆ. ಜಿಲ್ಲಾ ಉಸ್ತುವಾರಿಯಾಗಿ, ಮೂರು ಸಲ ವಿವಿಧ ಖಾತೆಗಳ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈ ಸಲ ಕೂಡ ಕಣಕ್ಕಿಳಿಯಲು ಮುಂದಾಗಿದ್ದಾರೆ. ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಇವರಿಗೆ ಅಳಿಯ ಬಾಬಾಸಾಹೇಬ ಸೆಡ್ಡು ಹೊಡೆಯಲು ತಯಾರಾಗಿದ್ದಾರೆ. ‘ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಳೆದ ಚುನಾವಣೆಯಲ್ಲಿ ನನಗೆ ಇನಾಮದಾರ ಅವರು ಭರವಸೆ ನೀಡಿದ್ದರು. ಅವರು ತಮ್ಮ ಮಾತಿನಂತೆ ನಡೆದುಕೊಳ್ಳಬೇಕು’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್‌ ಭರವಸೆ ಸಿಗದಿದ್ದರೆ ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆ ಇದೆ.

ಇನ್ನೊಬ್ಬ ಮುಖಂಡ ಹಬೀಬ್‌ ಶಿಲೇದಾರ್‌ ಕೂಡ ರೇಸ್‌ನಲ್ಲಿದ್ದಾರೆ. ಹಲವು ವರ್ಷಗಳಿಂದ ಅಹಿಂದ ವರ್ಗದ ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿಲ್ಲ. ಈ ಸಲವಾದರೂ ಅವಕಾಶ ನೀಡಬೇಕು ಎಂದು ಟಿಕೆಟ್‌ಗೆ ಬೇಡಿಕೆ ಮಂಡಿಸಿದ್ದಾರೆ. ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸತೀಶ ಅವರ ಪ್ರಭಾವದಿಂದಾಗಿ ತಮಗೆ ಟಿಕೆಟ್‌ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ಬಿಜೆಪಿಯಲ್ಲೂ ಪೈಪೋಟಿ: 2004 ಹಾಗೂ 2008ರಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿಯ ಸುರೇಶ ಮಾರಿಹಾಳ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದರು. ಈ ಸಲ ಪುನಃ ಕಣಕ್ಕಿಳಿಯಲು ಬಯಸಿದ್ದಾರೆ. ಕಿತ್ತೂರಿಗೆ ತಾಲ್ಲೂಕಿನ ಸ್ಥಾನಮಾನ ತಂದುಕೊಡಲು ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅಂದು ನಡೆದ ಹೋರಾಟದ ಫಲವಾಗಿ ಇಂದು ಕಿತ್ತೂರು ತಾಲ್ಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಆಧಾರದ ಮೇಲೆ ತಮಗೆ ಇನ್ನೊಂದು ಬಾರಿ ಅವಕಾಶ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಮಂಡಿಸಿದ್ದಾರೆ.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಕೂಡ ಕಣಕ್ಕಿಳಿಯಲು ಆಸಕ್ತಿ ತೋರಿದ್ದಾರೆ. ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಶಾಸಕ ಲಕ್ಷ್ಮಣ ಸವದಿ ಅವರ ಜೊತೆ ಗುರುತಿಸಿಕೊಂಡಿರುವ ಅವರು, ಆ ಮೂಲಕ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸಿ.ಆರ್‌. ಪಾಟೀಲ, ಆನಂದ ಜಕಾತಿ, ಜಗದೀಶ ಹಾರುಗೊಪ್ಪ, ಸಿದ್ದಯ್ಯ ಹಿರೇಮಠ, ಬಸನಗೌಡ ಸಿದ್ರಾಮನಿ ಕೂಡ ರೇಸ್‌ನಲ್ಲಿದ್ದಾರೆ.

ಬಾಬಾಗೌಡ ಪಾಟೀಲರ ಪುತ್ರ ಆಕಾಂಕ್ಷಿ: ರೈತ ಮುಖಂಡ ಬಾಬಾಗೌಡ ಪಾಟೀಲ ಅವರು ಇತ್ತೀಚೆಗೆ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೊದಲು 1989ರಲ್ಲಿ ರೈತ ಸಂಘದಿಂದ ಜಯಗಳಿಸಿದ್ದರು. ಅದೇ ಸಮಯದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೂ ಗೆದ್ದಿದ್ದರು. ಅಷ್ಟು ಪ್ರಭಾವ ಹೊಂದಿದ್ದರು. ನಂತರದ ದಿನಗಳಲ್ಲಿ ಸಂಸತ್‌ಗೆ ಆಯ್ಕೆಯಾಗಿ ಹೋದ ಅವರು, ಬಿಜೆಪಿ ಜೊತೆ ಕೈಜೋಡಿಸಿದ್ದರು. ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು.

ನಂತರ ಪಕ್ಷಗಳನ್ನು ಬದಲಾಯಿಸಿದರು. ಸ್ವಂತ ಪಕ್ಷ ಕಟ್ಟಿದರು. ಈಗ ಜೆಡಿಎಸ್‌ ಸೇರಿದ್ದಾರೆ. ಈ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಇನ್ನೊಂದೆಡೆ, ತಮ್ಮ ಪುತ್ರ ಪ್ರಕಾಶಗೌಡ ಪಾಟಿಲ ಅವರಿಗೆ ಟಿಕೆಟ್‌ ನೀಡುವುದಾದರೆ ಅವರಿಗೆ ದಾರಿ ಬಿಟ್ಟುಕೊಡುವ ಇಚ್ಛೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ಷೇತ್ರದ ಮತದಾರರು

ಪುರುಷರು: 92,767

ಮಹಿಳೆಯರು: 90,261

ಇತರೆ: 7

ಒಟ್ಟು ಮತದಾರರು: 1,83,035

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.