ಗುರುವಾರ , ಜೂನ್ 4, 2020
27 °C

ಎರಡು ತಿಂಗಳಲ್ಲಿ ಹೆಲ್ಮೆಟ್‌ ಕಡ್ಡಾಯ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಎರಡು ತಿಂಗಳಲ್ಲಿ ಹೆಲ್ಮೆಟ್‌ ಕಡ್ಡಾಯ

ಮಂಡ್ಯ: ನಗರದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಲು ಪೊಲೀಸ್‌ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಎರಡು ತಿಂಗಳಲ್ಲಿ ಹೆಲ್ಮೆಟ್‌ ಕಡ್ಡಾಯವಾಗಲಿದೆ. ಅದಕ್ಕೂ ಮೊದಲು ಪೊಲೀಸರು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

‘ಹೆಲ್ಮೆಟ್‌ ಧರಿಸಿ ವಾಹನ ಚಾಲನೆ ಮಾಡಿ’ ಎಂದು ಜನರಿಗೆ ತಿಳಿಸುವ ಮೊದಲು ಪೊಲೀಸರು ತಾವೇ ಮೊದಲು ಹೆಲ್ಮೆಟ್‌ ಧರಿಸಲು ಮುಂದಾಗಿದ್ದಾರೆ. ಮಂಡ್ಯ ವಿಭಾಗದ ಎಲ್ಲಾ ಪೊಲೀಸ್‌ ಠಾಣೆಗಳ ಪೊಲೀಸರು ಹಾಗೂ ಸಿಬ್ಬಂದಿ ಹೆಲ್ಮೆಟ್‌ ಧರಿಸಿ ದ್ವಿಚಕ್ರವಾಹನ ಚಾಲನೆ ಮಾಡಲಿದ್ದಾರೆ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಶನಿವಾರ ಸಿಬ್ಬಂದಿಗೆ ಹೆಲ್ಮೆಟ್‌ ವಿತರಣೆ ಮಾಡಿದ್ದಾರೆ.

ಸಮವಸ್ತ್ರಕ್ಕೆ ತಕ್ಕ ಬಣ್ಣ ಹಾಗೂ ಗುಣಮಟ್ಟದ ಹೆಲ್ಮೆಟ್‌ ವಿತರಣೆ ಮಾಡಲಾಗಿದೆ. ಟ್ರಾಫಿಕ್‌ ಠಾಣೆ ಪೊಲೀಸರು ಬಿಳಿ ಬಣ್ಣ ಹಾಗೂ ಇಲಾಖೆಯ ಚಿನ್ಹೆ ಇರುವ ಹೆಲ್ಮೆಟ್‌ ಧರಿಸಿದರೆ, ಇತರ ಠಾಣೆ ಪೊಲೀಸರು ಖಾಕಿ ಬಣ್ಣದ ಹೆಲ್ಮೆಟ್‌ ಧರಿಸಿ ರಸ್ತೆಗೆ ಇಳಿಯುವರು.  ಜನರಿಗೆ ಭಿತ್ತಿ ಪತ್ರ ವಿತರಣೆ ಮಾಡುವ ಮೂಲಕ ಈ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ. ಈಗಾಗಲೇ ಮಂಡ್ಯ ವಿಭಾಗದ ಕೇಂದ್ರ, ಪೂರ್ವ, ಪಶ್ಚಿಮ, ಗ್ರಾಮಾಂತರ, ಬಸರಾಳು, ಶಿವಳ್ಳಿ, ಕೆರೆಗೋಡು ಪೊಲೀಸ್‌ ಠಾಣೆಯ ಪೊಲೀಸರಿಗೆ 300 ಹೆಲ್ಮೆಟ್‌ ವಿತರಣೆ ಮಾಡಲಾಗಿದೆ.

‘ಖಾಸಗಿ ಸಹಭಾಗಿತ್ವದಲ್ಲಿ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ವಿಭಾಗಗಳ ಸಿಬ್ಬಂದಿಗೂ ವಿತರಣೆ ಮಾಡಲಾಗುವುದು. ಹೆಲ್ಮೆಟ್‌ ಧರಿಸಿ ಎಂದು ಜನರಿಗೆ ಹೇಳುವುದಕ್ಕಿಂತಲೂ ನಮ್ಮ ಸಿಬ್ಬಂದಿ ಮೊದಲು ಧರಿಸಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ತಿಂಗಳು ಅರಿವು ಮೂಡಿಸಿ ನಂತರ ಜನರಿಗೂ ಕಡ್ಡಾಯಗೊಳಿಸಲಾಗುವುದು. ಜನರು ಸ್ವಯಂಪ್ರೇರಿತವಾಗಿ ಧರಿಸಬೇಕು. ಇದರಿಂದ ಇಡೀ ಕುಟುಂಬ ಸುರಕ್ಷಿತವಾಗಿರುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.

‘ಪ್ರತಿ ಠಾಣೆಯಲ್ಲಿ ಹೆಚ್ಚುವರಿಯಾಗಿ ಹೆಲ್ಮೆಟ್‌ ಇಡಲಾಗುವುದು. ವಜ್ರ ಬೈಕ್‌ ಚಾಲನೆ ಮಾಡುವ ಸಿಬ್ಬಂದಿ ಅವುಗಳನ್ನು ಬಳಸುವರು. ಇದೊಂದೇ ಅಲ್ಲದೆ ವಾಹನಗಳ ವಿಮೆ ಪಾವತಿ ಪತ್ರ, ಚಾಲನಾ ಪರವಾನಗಿ ಮಂತಾದ ದಾಖಲೆಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಪೊಲೀಸರ ಸಾವು, ಗಾಯ: ಜ.15ರಿಂದ 25ರೊಳಗೆ ಜಿಲ್ಲೆಯ ಇಬ್ಬರು ಪೊಲೀಸರು ರಸ್ತೆ ಅಪಘಾತದಿಂದ ಜೀವ ಕಳೆದುಕೊಂಡಿದ್ದಾರೆ. ಕೆ.ಆರ್‌.ಎಸ್‌ ಠಾಣೆಯ ಮಹಿಳಾ ಕಾನ್‌ಸ್ಟೆಬಲ್‌ ಸ್ಕೂಟರ್‌ ಅಪಘಾತದಲ್ಲಿ ಹಾಗೂ ಮದ್ದೂರು ಠಾಣೆಯ ಕಾನ್‌ಸ್ಟೆಬಲ್‌ ಚನ್ನಪಟ್ಟಣದ ಬಳಿ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದಾರೆ. ಅಲ್ಲದೆ ಟ್ರಾಫಿಕ್‌ ಠಾಣೆಯ ಇಬ್ಬರು ಸಿಬ್ಬಂದಿ ಹಾಗೂ ಮಂಡ್ಯ ಗ್ರಾಮಾಂತರ ಠಾಣೆಯ ಇಬ್ಬರು ಪೊಲೀಸರು ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಮನಗಂಡು ಪೊಲೀಸರು ತಪ್ಪದೇ ಹೆಲ್ಮೆಟ್‌ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ.

‘ಹೆಲ್ಮೆಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ಜನರಿಗೆ ದಂಡ ಹಾಕುವ ಮೊದಲು ನಾವು ಧರಿಸುತ್ತೇವೆ. ಇದು ಜನರಿಗೂ ಪ್ರೇರಣೆಯಾಗುತ್ತದೆ. ಆಗಾಗ್ಗೆ ಎಲ್ಲಾ ಪೊಲೀಸ್‌ ಸಿಬ್ಬಂದಿ ಜೊತೆಗೂಡಿ ನಗರದೆಲ್ಲೆಡೆ ಬೈಕ್‌ ರ‍್ಯಾಲಿ ಮಾಡುತ್ತೇವೆ’ ಎಂದು ಟ್ರಾಫಿಕ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಕೆ.ಎಸ್‌.ನಿರಂಜನ್‌ ತಿಳಿಸಿದರು.

‘2018ರಲ್ಲಿ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವುಗಳಲ್ಲಿ ಹೆಲ್ಮೆಟ್‌ ಧರಿಸದ ಕಾರಣ ಸಾವನ್ನಪ್ಪಿದ ಘಟನೆಗಳೇ ಹೆಚ್ಚು. ಆದಷ್ಟು ಬೇಗ ಹೆಲ್ಮೆಟ್‌ ಕಡ್ಡಾಯಗೊಳಿಸಬೇಕು’ ಎಂದು ವಕೀಲ ಮಂಜುನಾಥ್‌ ಒತ್ತಾಯಿಸಿದರು.

ಗುಣಮಟ್ಟದ ಹೆಲ್ಮೆಟ್‌ ಖರೀದಿಸಿ

ಮಂಡ್ಯ: ತಲೆಯ ಭಾಗ ಪೂರ್ತಿ ಮುಚ್ಚುವ ಹಾಗೂ ಐಎಸ್‌ಐ ಸಂಕೇತ ಇರುವ ಗುಣಮಟ್ಟದ ಹೆಲ್ಮೆಟ್‌ಗಳನ್ನು ಪೊಲೀಸರಿಗೆ ವಿತರಣೆ ಮಾಡಲಾಗಿದೆ. ಅದೇ ರೀತಿ ಜನರು ಹೆಲ್ಮೆಟ್‌ ಕೊಳ್ಳುವಾಗ ಅರ್ಧ ಹೆಲ್ಮೆಟ್‌, ಟೊಪ್ಪಿಗೆಯಂತಿರುವ ಹೆಲ್ಮೆಟ್‌ಗಳನ್ನು ಕೊಳ್ಳಬಾರದು. ನೆಪಕ್ಕಾಗಿ ಬಳಸದೆ ಪ್ರಾಣವನ್ನು ಸಂರಕ್ಷಿಸುವಂತಹ ಹೆಲ್ಮೆಟ್‌ಗಳನ್ನೇ ಧರಿಸಬೇಕು ಎಂದು ಅರಿವು ಮೂಡಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.