ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿಗೂ ರೈಲು: ಹಲವರ ಕೂಗು

Last Updated 5 ಫೆಬ್ರುವರಿ 2018, 9:00 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಕೊಡಗು. ಈ ಜಿಲ್ಲೆಗೂ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎನ್ನುವ ಸರ್ಕಾರದ ಉದ್ದೇಶಕ್ಕೆ ಪರಿಸರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮತ್ತೆ ಕೆಲವು ಸಂಘಟನೆಗಳು ಕೊಡಗಿಗೆ ರೈಲ್ವೆ ಸಂಪರ್ಕದ ಅಗತ್ಯತೆಯನ್ನು ಪ್ರತಿಪಾದಿಸುತ್ತಿವೆ. ಉದ್ದೇಶಿತ ಎರಡು ರೈಲು ಮಾರ್ಗಕ್ಕೆ ಪರ ಹಾಗೂ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಸದ್ಯಕ್ಕೆ ಕೇಂದ್ರ ಸರ್ಕಾರವು ಯಾವುದೇ ನಿರ್ಧಾರವನ್ನೂ ಪ್ರಕಟಿಸಿಲ್ಲ.

ಒಂದು ಮಾರ್ಗ ಮೈಸೂರು– ಕುಶಾಲನಗರ– ಮಕ್ಕಂದೂರು (ಮಡಿಕೇರಿ) ಮೂಲಕ ಮಂಗಳೂರಿಗೆ. ಮತ್ತೊಂದು ಮಾರ್ಗ ಮೈಸೂರು– ಪಿರಿಯಾಪಟ್ಟಣ– ತಿತಿಮತಿ– ಬಾಳೆಲೆಯ ಮೂಲಕ ಕೇರಳ ರಾಜ್ಯದ ತಲಚೇರಿಗೆ.

ಕೊಡಗು ಕೃಷಿ ಅವಲಂಬಿತ ಜಿಲ್ಲೆ. ಕಾಫಿ, ಕಾಳುಮೆಣಸು, ಏಲಕ್ಕಿ, ಬಾಳೆ, ಶುಂಠಿ ಪ್ರಧಾನ ವಾಣಿಜ್ಯ ಬೆಳೆಗಳು. ಪುಷ್ಪೋದ್ಯಮಕ್ಕೂ ಸೂಕ್ತವಾದ ಸ್ಥಳ. ಬೆಟ್ಟಗುಡ್ಡಗಳ ಪ್ರದೇಶವಾದ ಕಾರಣ ರಸ್ತೆ ಸಂಪರ್ಕವೂ ಸಮರ್ಪಕವಾಗಿಲ್ಲ. ಕೃಷಿ ಉತ್ಪನ್ನ ಸಾಗಣೆಗೆ ಪರ್ಯಾಯ ವ್ಯವಸ್ಥೆಯಿಲ್ಲದೇ ಕಾಫಿ ಬೆಳೆಗಾರರು, ಹತ್ತಾರು ವರ್ಷಗಳಿಂದ ಸಂಕಷ್ಟಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಸೋಮವಾರಪೇಟೆ, ನಾಪೋಕ್ಲು, ವಿರಾಜಪೇಟೆಯಲ್ಲಿ ಸಾವಿರಾರು ರೈತರು ಆಂಥೋರಿಯಂ ಕೃಷಿಯನ್ನು ಅವಲಂಬಿ ಸಿದ್ದಾರೆ. ಪರ್ಯಾಯ ಸಾರಿಗೆ ವ್ಯವಸ್ಥೆಯಿಲ್ಲದೇ ಅದನ್ನು ವ್ಯವಸ್ಥಿತವಾಗಿ ಮಾರುಕಟ್ಟೆಗೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಹಲವು ವರ್ಷಗಳದ್ದು.

ಕೊಡಗಿನ ಕಾಫಿ ಚಿರಪರಿಚಿತ. ಹಾಗೆಯೇ ‘ಕೊಡಗಿನ ಕಿತ್ತಳೆ’ಗೂ ಎಲ್ಲೆಡೆ ಬೇಡಿಕೆಯಿದೆ. ರೈಲ್ವೆ ಸಂಪರ್ಕವಾದರೆ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುವ ಜೊತೆಗೆ ಸಾಗಣೆಯೂ ಸುಲಭವಾಗಲಿದೆ. ಖರ್ಚೂ ಕಡಿಮೆ ಎಂದು ಕೆಲವು ಉದ್ಯಮಿಗಳು ಹೇಳುತ್ತಾರೆ.

‘ಜಿಲ್ಲೆಗೆ ರೈಲು ಸಂಪರ್ಕ ಬೇಡ ಎಂಬ ಹೋರಾಟ ಖಂಡನೀಯ. ಕೊಡಗಿನ ಕೃಷಿ ಕಾರ್ಮಿಕರ, ಆದಿವಾಸಿಗಳ, ಅಲ್ಪಸಂಖ್ಯಾತರ, ದೀನದಲಿತರ ಹಾಗೂ ಬಡವರ ಬದುಕಿಗೆ ಬೆಂಕಿಯಿಡುವ ಪ್ರಯತ್ನವಾಗಿದೆ. ವಾಹನ ದಟ್ಟಣೆ ಹೆಚ್ಚಾಗಿದೆ. ರಸ್ತೆ ವಿಸ್ತರಣೆ, ಹೊಸ ರಸ್ತೆ ಮಾರ್ಗದ ನಿರ್ಮಾಣದ ಬದಲಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದೇ ಸೂಕ್ತ’ ಎನ್ನುತ್ತಾರೆ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ.

‘ರೈಲು ಬೇಕೆಂಬುದು ಕೊಡಗಿನ ಬಹುತೇಕ ಜನರ ಅಭಿಪ್ರಾಯವಾಗಿದೆ. ಆದರೆ, ಅವರ‍್ಯಾರೂ ಮಾತನಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಪ್ರಸ್ತಾಪಿಸಬೇಕು. ಅರಣ್ಯ ನಾಶದ ನೆಪಹೇಳಿ ರೈಲ್ವೆ ಯೋಜನೆಗೆ ಅಡ್ಡಿ ಪಡಿಸುವುದು ಸಲ್ಲದು. ಮಾರ್ಗಕ್ಕಾಗಿ ಮರಗಳನ್ನು ಕಡಿದರೆ ಕೋಟ್ಯಂತರ ಮರಗಳನ್ನು ಬೆಳೆಸಲೂ ಜಿಲ್ಲೆಯಲ್ಲಿ ಅವಕಾಶವಿದೆ. ರೈಲು ಮಾರ್ಗದಂತಹ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆ ಮತ್ತೊಂದಿಲ್ಲ. ಜೊತೆಗೆ ಬಡಬಗ್ಗರಿಗೆ ಕೈಗೆಟುಕುವ ದರದಲ್ಲಿ ಸುಖಕರವಾಗಿ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಿದೆ’ ಎಂದೂ ಅವರು ಹೇಳುತ್ತಾರೆ.

ಮಾರುಕಟ್ಟೆ ವಿಸ್ತರಣೆ: ಕೊಡಗಿನಲ್ಲಿ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗೆ ಸ್ಥಾಪನೆಗೆ ಅವಕಾಶವಿಲ್ಲ. ಅತಿ ಹೆಚ್ಚು ಕಾಫಿ, ಕಾಳು ಮೆಣಸು ಉತ್ಪಾದನೆಯಾಗುತ್ತಿದ್ದರೂ ಮಾರುಕಟ್ಟೆ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ನಾಪೋಕ್ಲು ಭಾಗದಲ್ಲಿ ಕಾಫಿ ಉತ್ಪನ್ನದಿಂದ ಚಾಕೋಲೆಟ್‌ ತಯಾರಿಸಲಾಗುತ್ತಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಜೇನು ಕೃಷಿಯಿದ್ದರೂ ರೈತರಿಗೆ ಮಾರುಕಟ್ಟೆಯ ಸಮಸ್ಯೆಯಿದೆ. ಹೀಗಾಗಿ, ಸ್ಥಳೀಯವಾಗಿ ಬರುವ ವ್ಯಾಪಾರಸ್ಥರಿಗೆ ಉತ್ಪನ್ನ ಮಾರಾಟ ಮಾಡುವ ಅನಿವಾರ್ಯತೆಯಿದೆ. ಒಂದು ವೇಳೆ ರೈಲ್ವೆ ಸಂಪರ್ಕವಾದರೆ ಸ್ಥಳೀಯ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಸಿಗಲಿದೆ ಎಂದು ಬೆಳೆಗಾರರು ಹೇಳುತ್ತಾರೆ.

(ಮುಂದಿನ ಭಾಗ; ಬದಲಿ ಮಾರ್ಗದಲ್ಲೂ ಅರಣ್ಯನಾಶ)

ಹೇಳಿಕೆ ಮೂಲಕ ಪರಿಸರ ಉಳಿಸಲು ಅಸಾಧ್ಯ’

‘ರೈಲು ಬೇಡ, ರಸ್ತೆ ಬೇಡ ಹಾಗೂ ವಿದ್ಯುತ್‌ ಮಾರ್ಗವೂ ಬೇಡ ಎನ್ನುವ ಹೇಳಿಕೆಗಳ ಮೂಲಕ ಪರಿಸರ ಉಳಿಸಲು ಸಾಧ್ಯವಿಲ್ಲ. ಜನರ ನಿತ್ಯದ ಜೀವನಕ್ಕೆ ಅಗತ್ಯವಾದ ಸಾರಿಗೆ ವ್ಯವಸ್ಥೆಯಿಲ್ಲದಿದ್ದರೆ ಕಷ್ಟ. ಮೊದಲು ಅರಣ್ಯ ಪ್ರದೇಶವನ್ನು ಕಾಪಾಡುವ ಕೆಲಸ ಆಗಬೇಕು. ಮೀಸಲು ಅರಣ್ಯ ಪ್ರದೇಶದಲ್ಲಿಯೇ ಮರಗಳಿಲ್ಲದ ಸ್ಥಿತಿಯಿದೆ. ಅಲ್ಲಿ ಮರಗಳನ್ನು ಬೆಳೆಸುವ ಕೆಲಸವನ್ನು ಇಲಾಖೆ ಮೊದಲು ಮಾಡಲಿ’ ಎಂಬುದು ಯೋಜನೆ ಪರವಾಗಿರುವ ಜನರ ಆಗ್ರಹ.

* * 

ರೈಲ್ವೆ ಸಂಪರ್ಕವೇ ಕೊಡಗಿಗೆ ಬೇಡ ಎನ್ನುವುದು ಜಿಲ್ಲೆಯ ಜನಾಭಿಪ್ರಾಯವಲ್ಲ. ರೈಲಿನಷ್ಟು ಪರಿಸರ ಸ್ನೇಹಿ ವ್ಯವಸ್ಥೆ ಬೇರೊಂದಿಲ್ಲ.
ಎ.ಕೆ. ಸುಬ್ಬಯ್ಯ, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT