ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಶಗೊಂಡವು ಮೈಮನ, ರೋಮಾಂಚನಗೊಂಡ ಜನ

Last Updated 5 ಫೆಬ್ರುವರಿ 2018, 9:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆ ಮೈದಾನದೊಳಗೆ ತಂಗಾಳಿಯ ಆಹ್ಲಾದಕರ ವಾತಾವರಣವಿತ್ತು. ಅದ್ಧೂರಿ ವೇದಿಕೆಯ ಮೇಲೆ ಬೆಳಕಿನ ಕೋಲ್ಮಿಂಚು ಕಿನ್ನರ ಲೋಕ ಸೃಷ್ಟಿಸಿತ್ತು. ಅಲ್ಲಿ ನೆರೆದವರನ್ನು ಹುರಿದುಂಬಿಸುತ್ತ ಗಾಯಕ ರಘು ದೀಕ್ಷಿತ್‌ ಅವರು ಕಿವಿಗಡಚ್ಚಿಕ್ಕುವ ಸದ್ದಿನೊಂದಿಗೆ ಸೃಷ್ಟಿಸಿದ ‘ಇಂಡಿಪಾಪ್’ ಗಂಧರ್ವ ಲೋಕದ ‘ಸಂಗೀತ’ದ ನಶೆ ಚಳಿ ಓಡಿಸಿ, ಕುಳಿತವರನ್ನು ಎಬ್ಬಿಸಿ ಹುಚ್ಚೆದ್ದು ಕುಣಿಸಿತ್ತು.

ನಗರದ ಸರ್‌.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಜಿಲ್ಲಾ ದಶಮಾನೋತ್ಸವ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್‌ ಅವರ ‘ಲುಂಗಿ’ ತಂಡ ತನ್ನ ‘ಚುಂಬಕ’ ಶಕ್ತಿಯಿಂದ ಸ್ವರ ಮೋಹಿಗಳನ್ನು ಕಟ್ಟಿಹಾಕಿ ಮೈಮನ ಮರೆಯಿಸಿ ಹೆಜ್ಜೆ ಹಾಕಿಸಿತ್ತು.

‘ಪರಶಿವ’ ಗೀತೆಯೊಂದಿಗೆ ದೇವರ ಭಜನೆ ಮಾಡುತ್ತ ಗೋಷ್ಠಿ ಆರಂಭಿಸಿದ ರಘು, ಬಳಿಕ ವಿಶಿಷ್ಟ ಬಗೆಯಲ್ಲಿ ಸಂಯೋಜಿಸಿರುವ ಸಂತ ಶಿಶುವಿನಹಾಳ ಶರೀಫರ ತತ್ವಪದಗಳನ್ನು ರಾಕ್ ಶೈಲಿಯಲ್ಲಿ ತಮ್ಮ ಕಂಚಿನ ಕಂಠದಲ್ಲಿ ಹರಿಬಿಟ್ಟು ಜನರನ್ನು ಮನರಂಜನೆಯ ಜತೆಗೆ ಜಿಜ್ಞಾಸೆಯ ಕಡಲಿಗೆ ನೂಕಿದರು.

‘ಕೊಡಗನ ಕೋಳಿ ನುಂಗಿತ್ತಾ ಕೇಳವ್ವಾ ತಂಗಿ...’ ಹಾಡಿನ ಮೂಲಕ ನೆರೆದವರಲ್ಲಿ ಕಿಚ್ಚು ಹತ್ತಿಸಿದ ರಘು ಅಷ್ಟಕ್ಕೆ ಸುಮ್ಮನಾಗಲಿಲ್ಲ. ‘ಲೋಕದ ಕಾಳಜಿ ಮಾಡುತಿನಂತಿ ನಿಂಗ್‌ ಯಾರ್‌ ಬೇಡಂತಾರ್‌ ಮಾಡಪ್ಪ್ ಚಿಂತಿ...’ ಹಾಡಿಗೆ ದನಿಗೆ ದನಿಗೂಡಿಸುವಂತೆ ಅನೇಕ ಬಗೆಯಲ್ಲಿ ಸಭೀಕರನ್ನು ಪ್ರಚೋದಿಸುತ್ತ, ಕೊನೆಗೆ ವೇದಿಕೆ ಮೇಲೆ ಟಪ್ಪಾಂಗುಚ್ಚಿ ಹೆಜ್ಜೆ ಹಾಕಿ ತೋರಿಸಿ ನೆರೆದವರನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡದೆ ಹುಚ್ಚೆದ್ದು ಕುಣಿಯುವಂತೆ ಮಾಡಿದ ‘ಮೋಡಿ’ ಚೇತೋಹಾರಿಯಾಗಿತ್ತು.

ಈ ವೇಳೆ ವೇದಿಕೆ ಮುಂದೆ ನೆರೆದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಯುವಜನರು ಎಲ್ಲ ಭೇದಗಳು, ಹಮ್ಮುಬಿಮ್ಮುಗಳನ್ನು ಬದಿಗಿಟ್ಟು ಮನಸಾರೆ ಕುಣಿದು, ಕುಪ್ಪಳಿಸಿದರು. ಇದೇ ವೇಳೆ ಕೆಲವರು ಶಾಸಕ ಡಾ.ಕೆ.ಸುಧಾಕರ್ ಅವರನ್ನು ಎತ್ತಿ ಹಿಡಿದು ತೂರುತ್ತ ಕೇಕೆ ಹಾಕಿದರು. ‘ಗುಡು ಗುಡಿಯಾ ಸೇದಿ ನೋಡೋ... ಒಡಲೊಳಗಿನ ರೋಗ ತೆಗೆದು...’ ಹಾಡಂತೂ ಕೆಲ ಹೊತ್ತು ಶೋತೃಗಳನ್ನು ಸಂಗೀತದ ‘ನಶೆ’ಯಲ್ಲಿ ಮೈಮರೆಸಿತ್ತು. ಬಳಿ ರಘು ಅವರ ತಂಡ ಪ್ರಸ್ತುತಪಡಿಸಿದ ‘ಈ ತನುವು ನಿನ್ನದೇ ನಿನ್ನಾಣೆ..’, ‘ಎಲ್ಲಿಂದಲೋ ನೀ ಎದುರಿಗೆ ಬಂದೆ..’ ಕುಣಿದು ದಣಿದವರಿಗೆ ತಂಪನೆರೆದವು.

‘ಎಲ್ಲರೂ ಮೊಬೈಲ್ ಟಾರ್ಚ್ ಆನ್‌ ಮಾಡಿ’ ಎನ್ನುತ್ತ ಗೀಟಾರ್ ಕೈಗೆತ್ತಿಕೊಂಡ ರಘು ಹಾಡಿದ ‘ಜಸ್ಟ್‌ ಮಾತ್‌ ಮಾತಲ್ಲಿ’ ಸಿನಿಮಾದ ‘ಕುಂತಲ್ಲು ನೀನೇ, ನಿಂತಲ್ಲು ನೀನೇ, ಎಲ್ಲೆಲ್ಲೂ ನೀನೇ ಸಖಿ, ಕಣ್ಣಲ್ಲು ನೀನೇ, ಕನಸಲ್ಲು ನೀನೇ, ಎಲ್ಲೆಲ್ಲೂ ನೀನೇ ಸಖಿ, ನನ್ನ ನಿನ್ನೆಗಳು ನೀನೇ ನಾಳೆಗಳು ನೀನೇ ಎಂದೆಂದು ನೀನೇ ಸಖಿ ಆವರಿಸು ಮೈದುಂಬಿ’ ಹಾಡಿಗೆ ಮೈದಾನದಲ್ಲಿ ಎದ್ದು ನಿಂತ ಜನ ಗಾಳಿಯಲ್ಲಿ ತೇಲಾಡಿಸುತ್ತಿದ್ದ ಮೊಬೈಲ್ ಟಾರ್ಚ್‌ಗಳು ‘ನಕ್ಷತ್ರಲೋಕ’ವನ್ನೇ ಸೃಷ್ಟಿಸಿದ್ದವು.

ಬಳಿಕ ‘ಸೋರುತಿಹುದು ಮನೆಯ ಮಾಳಿಗೆ..’, ‘ಏನೋ ಇದು ಹಾಯಾಗಿದೆ..’ ಹಾಡುಗಳು ಸಂಗೀತ ಪ್ರೇಮಿಗಳ ಮನದಲ್ಲಿ ಸಂತಸದ ಸೋನೆ ಹರಿಸಿತು. ಇದೇ ವೇಳೆ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರ ಅಪೇಕ್ಷೆಯ ಮೆರೆಗೆ ರಘು ‘ಹೇ ಭಗವಾನ್’ ಎಂಬ ಹಿಂದಿ ಗೀತೆಯನ್ನು ಹಾಡಿ ಶೋತೃಗಳ ಮನ ಮುದಗೊಳಿಸಿದರು.

‘ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ’ ಹಾಡಿಗೆ ಆರಂಭದಿಂದಲೇ ಅಹವಾಲು ಬಂದರೂ ‘ಊಟದ ಬಳಿಕ ಪಾಯಸ’ ಎನ್ನುತ್ತ ರಘು ಕೊನೆವರೆಗೆ ತಮ್ಮ ಅಭಿಮಾನಿಗಳ ಕುತೂಹಲ ಕಾಯ್ದಿಟ್ಟರು. ಪ್ರತಿ ಹಾಡಿನೊಂದಿಗೆ ಪ್ರೇಕ್ಷಕರೂ ಒಳಗೊಳ್ಳುವಂತೆ ಮಾಡುತ್ತ, ಅಂತಿಮವಾಗಿ ಅದಾಗಲೇ ರಂಗೇರಿದ್ದ ಯುವಪಡೆ ಎದುರು ಕೊನೆಗೆ ತೂರಿಬಿಟ್ಟ ‘ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ’ ಹಾಡಿಗೆ ಜೋರಾದ ಕರತಾಡನದ ಜತೆಗೆ ‘ಒನ್ಸ್‌ ಮೋರ್’, ‘ಒನ್ಸ್‌ ಮೋರ್’ ಬೇಡಿಕೆ ಕೇಳಿಬಂತು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗ್ಡೆ, ಉಪವಿಭಾಗಾಧಿಕಾರಿ ಶಿವಸ್ವಾಮಿ ಸೇರಿದಂತೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ದಶಮಾನೋತ್ಸವದ ದಿನ ಭಣಗುಟ್ಟಿದ್ದ ಮೈದಾನದ ಶನಿವಾರ ರಾತ್ರಿ ಸಾವಿರಾರು ಜನರ ಕಲರವದಿಂದ ತುಂಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT