ಭಾನುವಾರ, ಜೂನ್ 7, 2020
29 °C

ಹುಲಿಯಾಪುರ: ಸೌಲಭ್ಯದಿಂದ ಬಲು ದೂರ

ಕೆ.ಶರಣಬಸವ ನವಲಹಳ್ಳಿ Updated:

ಅಕ್ಷರ ಗಾತ್ರ : | |

ಹುಲಿಯಾಪುರ: ಸೌಲಭ್ಯದಿಂದ ಬಲು ದೂರ

ತಾವರಗೇರಾ: ಗ್ರಾಮದಲ್ಲಿ ಅಭಿವೃದ್ಧಿ ಕಾಣದ ರಸ್ತೆಗಳು, ದುರ್ವಾಸನೆ ಬೀರುತ್ತಿರುವ ಚರಂಡಿಗಳು, ಹೂಳು ತುಂಬಿರುವ ನೀರಾವರಿ ಕಾಲುವೆಗಳು, ಸಿಗದ ಖಾತರಿ ಕೂಲಿ. ಕೂಲಿ ಸೌಲಭ್ಯಕ್ಕಾಗಿ ಪರದಾಡುವ ಜನರು.

ಇದು ಸಮೀಪದ ಮೆಣೇದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಯಾಪುರ ಗ್ರಾಮದ ಸ್ಥಿತಿ. ಜಾತ್ರೆ, ಉರುಸ್ ಮತ್ತು ಹಬ್ಬದ ದಿನಗಳಲ್ಲಿ ಮಾತ್ರ ಸ್ವಚ್ಛತೆಗೆ ಮುಂದಾಗುವ ಗ್ರಾಮ ಪಂಚಾಯತಿ ಆಡಳಿತ ಗ್ರಾಮೀಣ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ. ಗ್ರಾಮದ ಕೂಲಿಕಾರರಿಗೆ ದಿನನಿತ್ಯ ಕೂಲಿ ಕೆಲಸ ಸಿಗುತ್ತಿಲ್ಲ, ಶುದ್ಧ ಕುಡಿವ ನೀರು ಮರೀಚಿಕೆಯಾಗಿದೆ ಎಂಬುದು ಗ್ರಾಮಸ್ಥರ ಆರೋಪ.

‘ಗ್ರಾಮದಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ. ಜನರು ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದು, ಕೂಲಿಕಾರರಿಗೆ ಖಾತರಿ ಕೆಲಸ ಸಿಗುತ್ತಿಲ್ಲ. ಇದರಿಂದ ದೂರದ ಪಟ್ಟಣಗಳಿಗೆ ಕೆಲವು ಕುಟುಂಬಗಳು ವಲಸೆ ಹೋಗಿವೆ. ಬರಗಾಲದಲ್ಲಿ ಕೂಲಿಕಾರರಿಗೆ ಸ್ಥಳೀಯ

ವಾಗಿ ಕೂಲಿ ನೀಡುವಂತೆ ಸರ್ಕಾರ ಅನುದಾನ ನೀಡಿದ್ದರೂ ಗ್ರಾಮ ಪಂಚಾಯತಿ ಆಡಳಿತ ಮಾತ್ರ ಕೆಲಸ ಆರಂಭಿಸಿಲ್ಲ. ತುರ್ತಾಗಿ ಕೂಲಿ ಹಣ ಪಾವತಿ ಮಾಡುತ್ತಿಲ್ಲ’ ಎಂದು ಗ್ರಾಮದ ಯಮನಪ್ಪ ವಾಲ್ಮೀಕಿ ದೂರುತ್ತಾರೆ.

‘ಸಿಸಿ ರಸ್ತೆ ಇಲ್ಲ. ಚರಂಡಿಯಲ್ಲಿ ಹೂಳು ತುಂಬಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಿದೆ. ಗ್ರಾಮಸ್ಥರು ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯುತ್ತಾರೆ. ಇದನ್ನು ತಪ್ಪಿಸಲು ಗ್ರಾಮಕ್ಕೆ ಒಂದು ನೀರು ಶುದ್ಧೀಕರಣ ಘಟಕ ಅವಶ್ಯವಿದೆ. ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇಂತಹ ನೀರು ಕುಡಿದು ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಜಾನುವಾರಗಳಿಗೆ ನೀರಿನ ವ್ಯವಸ್ಥೆಗಾಗಿ ನಿರ್ಮಿಸಿರುವ ಟ್ಯಾಂಕ್‌ಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಒಡೆದು ತಿಂಗಳು ಕಳೆದರೂ ದುರಸ್ತಿ ಮಾಡಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದರೂ ಕ್ರಮಕ್ಕೆ ಮುಂದಾಗಿಲ್ಲ’ ಎನ್ನುತ್ತಾರೆ ಕೆ. ಮಲ್ಲಪ್ಪ.

‘ಗ್ರಾಮದ ಮೇಲ್ಭಾಗದಲ್ಲಿ ಇರುವ ಕೆರೆಯಲ್ಲಿ ಹೂಳು ತುಂಬಿದೆ. ಕಳೆದ ಮೂರು ವರ್ಷದ ಹಿಂದೆ ಹೂಳು ಹೊರತೆಗೆಯಲಾಗಿತ್ತು. ಈ ವರ್ಷ ಮಳೆ ಸ್ವಲ್ಪ ಪ್ರಮಾಣದಲ್ಲಿ ಉತ್ತಮವಾಗಿದ್ದು, ಕೆರೆಯಲ್ಲಿ ನೀರು ಸಂಗ್ರಹ ಹೆಚ್ಚಿದೆ. ಆದರೆ ಕೆರೆಯಿಂದ ನೀರಾವರಿ ಪ್ರದೇಶದ ರೈತರ ಜಮೀನಿಗೆ ಸರಬರಾಜು ಮಾಡುವ ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ನೀರು ಬರದೆ ರೈತರು ತೊಂದರೆ ಪಡು

ವಂತಾಗಿದೆ’ ಎಂದು ರೈತ ಮಲ್ಲೇಪ್ಪ ಗೊಲ್ಲರ ಹೇಳುತ್ತಾರೆ.

ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆ ದುರಸ್ತಿಗೆ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಘಟಕ ನಿರ್ಮಿಸಬೇಕು. ಖಾತರಿ ಕೆಲಸಕ್ಕೆ ಸಮರ್ಪಕ ಕೂಲಿ ನೀಡಬೇಕು. ಚರಂಡಿ, ಸಿಸಿ ರಸ್ತೆ ನಿರ್ಮಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ

* * 

ಗ್ರಾಮದಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ. ರಸ್ತೆಯಲ್ಲಿ ನೀರು ನಿಂತು ಸೊಳ್ಳೆಗಳ ಹಾವಳಿ ಹೆಚ್ಚಿದೆ. ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯುವ ಅನಿವಾರ್ಯತೆ ಇದೆ

ಶರಣಪ್ಪ ನಾಲತವಾಡ, ಗ್ರಾಮಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.