ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದೊಂದಿಗೆ ಸಮುದಾಯ ಕೈಜೋಡಿಸಲಿ’

Last Updated 6 ಫೆಬ್ರುವರಿ 2018, 9:08 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಡತನ ನಿರ್ಮೂಲನೆಗೆ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಸಮುದಾಯವು ಕೂಡ ಕೈಜೊಡಿಸಿದಾಗ ಮಾತ್ರ ಸಾಧ್ಯವಾಗಲಿದೆ ಎಂದು ನಗರದ ಕಾರ್ಪೊರೇಷನ್‌ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಕೆ.ಎಲ್‌.ವೆಂಕಟರೆಡ್ಡಿ ಹೇಳಿದರು. ನಗರದ ಶಿವಪಾರ್ವತಿ ಕಲ್ಯಾಣ ಮಂದಿರದಲ್ಲಿ ಸೋಮವಾರ ‘ಧಾನ್‌ ಫೌಂಡೇಷನ್‌’ ವತಿಯಿಂದ ನಡೆದ ವಾಕಥಾನ್‌–2018 ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಂಸ್ಥೆಯು ಸರ್ಕಾರದ ಹಾಗೂ ಬ್ಯಾಂಕ್‌ಗಳೊಂದಿಗೆ ಸಮುದಾಯವನ್ನು ಒಟ್ಟುಗೂಡಿಸಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಹೆಚ್ಚಿನ ಶ್ರಮವಹಿಸುತ್ತಿದೆ. ಸಂಸ್ಥೆ ವತಿಯಿಂದ ರಚಿಸಲಾಗಿರುವ ಕಳಂಜಿಯಂ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ನಿಂದ ಹೆಚ್ಚಿನ ಸಾಲ ನೀಡಲಾಗುವುದು. ಇಲ್ಲಿಯವರೆಗೆ ಸಂಘಗಳಿಗೆ ನೀಡಲಾಗಿದ್ದ ಸಾಲವನ್ನು ಸಮಪರ್ಕವಾಗಿ ಬಳಸಿಕೊಂಡಿವೆ’ ಎಂದರು.

ಸಂಸ್ಥೆಯ ಕುದೂರು ವಲಯ ಸಂಯೋಜಕಿ ಬಿ.ಜಿ.ನಾಗರತ್ನಮ್ಮ ಮಾತನಾಡಿ, ಬಡತನ ನಿರ್ಮೂಲನೆಗೆ ಸಮುದಾಯದ ಆರ್ಥಿಕ ಕೊಡುಗೆ ಈ ವರ್ಷದ ಘೋಷ ವಾಕ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘವು ಕೆಲಸ ಮಾಡಲಿದೆ ಎಂದರು.

ಧಾನ್ ಸಂಸ್ಥೆಯು ಭಾರತದಲ್ಲೇ ಮುಂಚೂಣಿಯಲ್ಲಿರುವ ಸರ್ಕಾರೇತರ ಸಂಸ್ಥೆಯಾಗಿದೆ. 26 ವರ್ಷಗಳಿಂದ ಬಡವರ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಸ್ತುತ 14 ರಾಜ್ಯಗಳಲ್ಲಿ 66,012 ಕಳಂಜಿಯಂ ಸ್ವಸಹಾಯ ಸಂಘಗಳನ್ನು ರಚಿಸಿ 16,52,139 ಕುಟುಂಬಗಳೊಂದಿಗೆ ದೇಶದಾದ್ಯಂತ ಸೇವಾ ಸಹಕಾರದ ಜಾಲವನ್ನು ಹೊಂದಲಾಗಿದೆ ಎಂದರು.

ಎಲ್ಲರನ್ನು ಒಗ್ಗೂಡಿಸಿ ಒಗ್ಗಟ್ಟಿನಿಂದ ಕೆಲಸ ಮಾಡುವುದಲ್ಲದೆ, ಸಹಕಾರ, ಸಹಾಯ, ಸೇವೆಯೊಂದಿಗೆ ಬಡತನ ನಿರ್ಮೂಲನೆ ಮಾಡಿ ಜನರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಮಹದಾಸೆಯನ್ನು ಹೊಂದಿದೆ ಎಂದರು.

700 ಸ್ವಸಹಾಯ ಸಂಘಗಳ ರಚನೆ, ಮಾಗಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಟ್ರಸ್ಟ್ ಕಾಯಿದೆಯಡಿಯಲ್ಲಿ ಒಕ್ಕೂಟಗಳ ನೋಂದಣಿ, ಆದಾಯ ಉತ್ಪನ್ನ ಚಟುವಟಿಕೆಗೆ ಹೆಚ್ಚಿನ ಸಾಲ ಸೌಲಭ್ಯ, ಕುಟುಂಬದ ಎಲ್ಲ ಸದಸ್ಯರಿಗೆ ಸಾಮಾಜಿಕ ಭದ್ರತೆ, ಬಡವರರನ್ನು ಬಡತನದಿಂದ ಹೊರತರುವುದು ಸೇರಿದೆ ಎಂದರು.

ಜೊತೆಗೆ ಪ್ರತಿ ಸದಸ್ಯರು ಸುಮಾರು ಪ್ರತಿ ತಿಂಗಳಿಗೆ ₹ 500 ಉಳಿತಾಯ ಹೆಚ್ಚಳ ಹಾಗೂ ಇಲಾಖೆಗಳ ಸಹಯೋಗದೊಂದಿಗೆ ಸರ್ಕಾರಿ ಸೌಲಭ್ಯಗಳ ಮಾಹಿತಿ ತಲುಪಿಸಲಾಗುವುದು ಎಂದರು.

ಸಭೆಯಲ್ಲಿ ಎಸ್‌ಬಿಐ ಬ್ಯಾಂಕ್‌ ಮಾಗಡಿ ಶಾಖೆಯ ವ್ಯವಸ್ಥಾಪಕಿ ಜಯಂತಿ ಸಂಪತ್‌ಕುಮಾರ್‌, ಕಾರ್ಪೊರೇಷನ್‌ ಬ್ಯಾಂಕ್‌ನ ಕೃಷಿ ಅಧಿಕಾರಿ ಸತೀಶ್‌, ಸಮಾಜ ಸೇವಕ ಕಿಶನ್‌ಲಾಲ್‌ ಚಂಪಾಲಾಲ್‌ ಜೈನ್‌, ಕೆ.ಸಿ.ರುದ್ರೇಗೌಡ, ನಗರ ಪೊಲೀಸ್‌ ಠಾಣೆಯ ಎಎಸ್‌ಐ ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT