ಬುಧವಾರ, ಏಪ್ರಿಲ್ 1, 2020
19 °C
ಕಾಯ್ದೆ ವ್ಯಾಪ್ತಿಗೆ ಮಠ, ದೇವಸ್ಥಾನ: ಸಲಹೆ ಕೇಳಿದ ತಜ್ಞರ ಸಮಿತಿ

ಸರ್ಕಾರದ ವಿರುದ್ದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರದ ವಿರುದ್ದ ಆಕ್ರೋಶ

ಬೆಂಗಳೂರು: ಮಠಗಳು, ಅವುಗಳಿಗೆ ಸೇರಿದ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳು, ಜೈನ, ಬೌದ್ಧ, ಸಿಖ್‌ ಸಮುದಾಯಗಳ ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಅಡಿ ಸೇರಿಸುವ ಬಗ್ಗೆ ಸಾರ್ವಜನಿಕರ ಸಲಹೆ, ಅಭಿಪ್ರಾಯಗಳನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆಯನ್ನು ಹೈಕೋರ್ಟ್‌ ಧಾರವಾಡ ಪೀಠ 2005ರಲ್ಲಿ ರದ್ದುಪಡಿಸಿದೆ. ಹೊಸ ಕಾಯ್ದೆ ರೂಪಿಸುವ ಸಂಬಂಧ ನ್ಯಾಯಮೂರ್ತಿ ರಾಮಾ ಜೋಯಿಸ್‌ ನೇತೃತ್ವದಲ್ಲಿ ಕರಡು ಸಮಿತಿ ನೇಮಿಸಲಾಗಿತ್ತು. ಈ ಸಮಿತಿ ಜ. 29ರಂದು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ಇದಕ್ಕೆ ರಾಜ್ಯದ ವಿವಿಧ ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರಕಟಣೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ರಾಜ್ಯ ಸರ್ಕಾರ ಗುರುವಾರ ಈ ಸಂಬಂಧ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ನೂತನ ಕಾಯ್ದೆ ಕರಡು ಸಮಿತಿಯ ಸಂಚಾಲಕ ಜಯಪ್ರಕಾಶ್‌ ಹೊರಡಿಸಿರುವ ಪ್ರಕಟಣೆಯಲ್ಲಿ, ಧಾರ್ಮಿಕ ಸಂಸ್ಥೆಗಳನ್ನೂ ಕಾಯ್ದೆ ವ್ಯಾಪ್ತಿಗೆ ಒಳಪಡಿಸಬೇಕೆ, ಒಳಪಡಿಸುವುದಾದರೆ ಯಾವ ರೀತಿಯಲ್ಲಿ ಮತ್ತು ಎಷ್ಟರ ಮಟ್ಟಿಗೆ ಒಳಪಡಿಸಬೇಕು ಎಂದೂ ಸಮಿತಿ ಕೇಳಿದೆ.

ಅರ್ಚಕರು, ದೇವಸ್ಥಾನಗಳ ಆಡಳಿತ ವರ್ಗ, ಸಿಬ್ಬಂದಿ, ರಾಜ್ಯದ ಧರ್ಮ ಗುರುಗಳು, ಮಠಗಳ ಪೀಠಾಧಿಪತಿಗಳು ಅಥವಾ ಉತ್ತರಾಧಿಕಾರಿಗಳಷ್ಟೆ ಅಲ್ಲದೆ, ಸಾರ್ವಜನಿಕರೂ ಈ ಬಗ್ಗೆ ಸಲಹೆ, ಅಭಿಪ್ರಾಯಗಳನ್ನು ನೀಡಬಹುದು. 15 ದಿನಗಳ ಒಳಗೆ ಇಲಾಖೆಯ ಆಯುಕ್ತರಿಗೆ ಅಭಿಪ್ರಾಯಗಳನ್ನು ತಿಳಿಸಬಹುದು ಎಂದೂ ಈ ಪ್ರಕಟಣೆ ಹೇಳಿದೆ.

‘ಮಠ, ಮಂದಿರಗಳಿಗೆ ಕೈ ಇಟ್ಟರೆ ಭಸ್ಮ’:

‘ಮಠ, ಮಂದಿರಗಳಿಗೆ  ಕೈ ಇಟ್ಟರೆ ಸರ್ಕಾರ ಭಸ್ಮ ಆಗಲಿದೆ’ ಎಂದು ಬಿಜೆಪಿ ಶಾಸಕ ಆರ್‌. ಅಶೋಕ ಎಚ್ಚರಿಕೆ ನೀಡಿದರು.

‘ಈ ಪ್ರಕಟಣೆಯಲ್ಲಿ ಮಸೀದಿಗಳ ಪ್ರಸ್ತಾವ ಯಾಕಿಲ್ಲ. ಮಠಗಳನ್ನು ವಶಕ್ಕೆ ಪಡೆದುಕೊಂಡು ಸರ್ವನಾಶ ಮಾಡಲು ಸರ್ಕಾರ ಹೊರಟಿದೆ’ ಎಂದು ಅವರು ಟೀಕಿಸಿದರು.

‘ಮಠಮಾನ್ಯಗಳ ಮೇಲೆ ನಿಯಂತ್ರಣ ಹೇರಲು ಹೊರಟಿದೆ. ಜಾತಿಗಳನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌, ಇದೀಗ ಈ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಅದೇ ಪಕ್ಷದ ಶಾಸಕರಾದ ಸಿ.ಟಿ.ರವಿ, ಡಿ.ಎನ್‌. ಜೀವರಾಜ್‌ ಕೂಡಾ ಆಕ್ರೋಶ ವ್ಯಕ್ತಪಡಿಸಿದರು.

‘ಕೋರ್ಟ್ ನಿರ್ದೇಶನದಂತೆ ಅಭಿಪ್ರಾಯ ಸಂಗ್ರಹ’

‘ಧಾರ್ಮಿಕ ದತ್ತಿ ಕಾಯ್ದೆಯನ್ನು ಧಾರವಾಡ ಹೈಕೋರ್ಟ್ ರದ್ದುಪಡಿಸಿ ಆದೇಶ ನೀಡಿದೆ. ಕೋರ್ಟ್ ನಿರ್ದೇಶನದಂತೆ ಹೊಸ ಕಾಯ್ದೆ ರೂಪಿಸಲು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ’ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದರು.

‘ಕಾಯ್ದೆಯ ಕರಡು ರಚಿಸಲು ಸಮಿತಿ ರಚಿಸಲಾಗಿದೆ. ಸಂಬಂಧಿಸಿದವರಿಂದ ಅಹವಾಲು ಕೇಳಿದ್ದೇವೆ ಅಷ್ಟೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವರು ಬುಧವಾರ ತಿಳಿಸಿದರು.

‘ಮಠಗಳನ್ನು ನಿಯಂತ್ರಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ. ಧಾರ್ಮಿಕ ಸಂಸ್ಥೆಗಳನ್ನು  ವಶಕ್ಕೆ ತೆಗೆದುಕೊಳ್ಳುವ ಉದ್ದೇಶ ಇಲ್ಲ’ ಎಂದೂ ಸಚಿವರು ಸ್ಪಷ್ಟಪಡಿಸಿದರು.

‘ಬಿಜೆಪಿಯವರು ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಠಾಧೀಶರು ಹೆದರುವ ಅವಶ್ಯಕತೆ ಇಲ್ಲ’ ಎಂದೂ ಅವರು ಹೇಳಿದರು.

‘ಈ ಪ್ರಕಟಣೆಯಲ್ಲಿ ಮಸೀದಿಗಳ ಪ್ರಸ್ತಾವ ಯಾಕಿಲ್ಲ. ಮಠಗಳನ್ನು ವಶಕ್ಕೆ ಪಡೆದುಕೊಂಡು ಸರ್ವನಾಶ ಮಾಡಲು ಸರ್ಕಾರ ಹೊರಟಿದೆ’ ಎಂದು ಅವರು ಟೀಕಿಸಿದರು.

‘ಮಠಮಾನ್ಯಗಳ ಮೇಲೆ ನಿಯಂತ್ರಣ ಹೇರಲು ಹೊರಟಿದೆ. ಜಾತಿಗಳನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌, ಇದೀಗ ಈ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಅದೇ ಪಕ್ಷದ ಶಾಸಕರಾದ ಸಿ.ಟಿ.ರವಿ, ಡಿ.ಎನ್‌. ಜೀವರಾಜ್‌ ಕೂಡಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)