ಸೋಮವಾರ, ಮೇ 25, 2020
27 °C

ಶ್ರವಣಬೆಳಗೊಳಕ್ಕೆ ಹರಿದು ಬಂದ ಜನಸಾಗರ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಶ್ರವಣಬೆಳಗೊಳಕ್ಕೆ ಹರಿದು ಬಂದ ಜನಸಾಗರ

ಶ್ರವಣಬೆಳಗೊಳ: 12 ವರ್ಷಗಳ ಸುದೀರ್ಘ ಕಾಯುವಿಕೆ ಜೈನಕಾಶಿಯಲ್ಲಿ ಬುಧವಾರ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವದ ಉದ್ಘಾಟನೆಯೊಂದಿಗೆ ಪುನೀತವಾಯಿತು.

58.8 ಅಡಿ ಎತ್ತರದ ವೈರಾಗ್ಯ ಮೂರ್ತಿಗೆ ಮಹಾಮಜ್ಜನ ಸಲ್ಲಿಸುವ ಮುಹೂರ್ತಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಬುಧವಾರ ಚಾವುಂಡರಾಯ ಮಂಟಪದಲ್ಲಿ ಚಾಲನೆ ನೀಡಿದರು. 

ನೆರೆದಿದ್ದ ಲಕ್ಷಾಂತರ ಭಕ್ತರು ಭಗವಾನ್‌ ಬಹುಬಲಿಗೆ ಜೈ ಎಂಬ ಜಯಘೋಷ ಸಾರುತ್ತಾ ಭಕ್ತಿಯನ್ನು ಮೆರೆದರು. ಈ ಅಪರೂಪದ ಕ್ಷಣಕ್ಕೆ ಮುನಿಗಳು, ಮಾತಾಜಿಗಳು, ಭಕ್ತರು, ಯಾತ್ರಾರ್ಥಿಗಳು, ಪ್ರವಾಸಿಗರು ಸಾಕ್ಷಿಯಾದರು.

ಭಗವಾನ್ ಬಾಹುಬಲಿಗೆ ಜೈ ಎಂಬ ಘೋಷಣೆ ಇಡೀ ಸಭಾಂಗಣದಲ್ಲಿ ಮಾರ್ದನಿಸುತ್ತಿತ್ತು. ಬೃಹತ್ ಜನಸ್ತೋಮ ಬಾಹುಬಲಿ ಸ್ಮರಣೆ ಮೂಲಕ ಸಂಭ್ರಮಿಸಿತು. ಪಟ್ಟಣ ಪ್ರವೇಶಿಸುವ ರಸ್ತೆಯ ಎರಡೂ ಬದಿಯಲ್ಲಿ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಾರಾಜಿಸಿಸುತ್ತಿದ್ದವು, ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟಗಳು ದೀಪಾಲಂಕಾರದಿಂದ ಕಂಗೊಳಿಸು ತ್ತಿದ್ದವು. ಇಡೀ ಶ್ರವಣಬೆಳಗೊಳದಲ್ಲಿ ಹಬ್ಬದ ವಾತಾವರಣ ಕಂಡು ಬಂತು.

ಇಂದಿನಿಂದ ಫೆ. 25ರವರೆಗೆ ಧಾರ್ಮಿಕ ವಿಧಿ ವಿಧಾನಗಳು, ಪಂಚಕಲ್ಯಾಣ ಕಾರ್ಯಕ್ರಮಗಳು ನೆರವೇರಲಿದೆ. ಪ್ರತಿ ದಿನ ಸಂಜೆ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರು ಜನರಿಗೆ ಸಂಗೀತ ರಸದೌತಣ ನೀಡಲಿದ್ದಾರೆ. ತಿಂಗಳ ಪೂರ್ತಿ ನಡೆಯುವ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ನಾನಾ ಭಾಗಗಳಿಂದ ಮಾತಾಜಿಗಳು, ಮುನಿಗಳು ಕಾಲ್ನಡಿಗೆಯಲ್ಲಿ ಆಗಮಿಸಿ ದ್ದಾರೆ.

ಅಲ್ಲದೇ ದೇಶ, ವಿದೇಶಗಳಿಂದ ಭಕ್ತರು, ಯಾತ್ರಾರ್ಥಿಗಳು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಮಹೋತ್ಸವದ ಉದ್ಘಾಟನೆಯೊಂದಿಗೆ ಭಕ್ತಿಭಾವದ ಗಂಗೆ ಬೆಳಗೊಳದ ತುಂಬೆಲ್ಲಾ ಪ್ರವಹಿಸಲಿದ್ದು, ರಾಜ್ಯ, ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಸಂಭ್ರಮದ, ರಸದೌತಣದ ಅನುಭವ ಪಡೆಯಲಿದ್ದಾರೆ.

ಗೊಮ್ಮಟ ಸ್ತುತಿಗೆ ತಲೆ ದೂಗಿದರು..

ವಿಸಟ್ಟ–ಕಂದೊಟ್ಟ–ದಲಾಣುಯಾರಂ ಸುಲೋಯಣಂ, ಚಂದ–ಸಮಾಣ–ತುಂಡಂ ಘೋಣಾಜಿಯಂ ಚಂಪಯ ಪುಪ್ಪಸೋಹಂತಂ ಗೋಮಟೇಸಂ ಪಣಮಾಮಿ ಣಿಚ್ಚಂ.. ಹೀಗೆ ಚಾವುಂಡರಾಯ ವೇದಿಕೆಯಲ್ಲಿ ವರ್ಧಮಾನ ಸಾಗರ ಮಹಾರಾಜರು ಗೊಮ್ಮಟೇಶ್ವರ ಸ್ತುತಿ (ಪ್ರಾಕೃತ) ಹಾಡುತ್ತಿದ್ದಂತೆ ವೇದಿಕೆಯಲ್ಲಿದ್ದ ಗಣ್ಯರು, ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಕ್ತರು ತಲೆದೂಗಿದರು.

ಗಾಯಕ ಸರ್ವೇಶ್‌, ಸೌಮ್ಯ ಜೈನ್‌ ಅವರು ಹಾಡಿದ ‘ಬಾಹುಬಲಿ ಸ್ವಾಮಿ, ಜಗಕ್ಕೆಲ್ಲಾ ಸ್ವಾಮಿ’ ಎಂಬ ಜೀನಗೀತೆಗೆ ಭಕ್ತ ಸಾಗರದಿಂದ ಕರತಾಡನ ಕೇಳಿ ಬಂತು.

ಉದ್ಘಾಟನೆ ವೇಳೆ ಕಲಾ ತಂಡಗಳ ವಾದ್ಯ ಮೊಳಗಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಆಗಾಗ ಭಕ್ತರು ಬಾಹುಬಾಲಿ ಸ್ವಾಮಿಗೆ ಜೈಕಾರ ಹಾಕಿದರು.

ನಾಲ್ಕನೇ ಮಹೋತ್ಸವದ ಹೆಗ್ಗಳಿಕೆ

1981, 1993, 2006ರಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಶ್ರೀಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆದಿತ್ತು. 2018ರಲ್ಲಿ ನಡೆಯುತ್ತಿರುವ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವ ಸಹ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು ಹೆಗ್ಗಳಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.