ಭಾನುವಾರ, ಮೇ 16, 2021
22 °C
ಮೂಲ ಅರ್ಜಿದಾರರ ಮನವಿಗಳ ವಿಚಾರಣೆ ಮಾತ್ರ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಅಯೋಧ್ಯೆ ಪ್ರಕರಣ ಭೂ ವಿವಾದ ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯೆ ಪ್ರಕರಣ ಭೂ ವಿವಾದ ಮಾತ್ರ

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದವನ್ನು ‘ಭೂ ವಿವಾದ’ ಎಂದು ಮಾತ್ರ ಪರಿಗಣಿಸಲಾಗುವುದು. ಅಂತಿಮ ವಿಚಾರಣೆ ಆರಂಭವಾದ ನಂತರ ಒಂದೇ ಹಂತದಲ್ಲಿ ಪೊರ್ಣಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದೀರ್ಘ ಕಾಲದಿಂದ ವಿಚಾರಣೆಗೆ ಬಾಕಿ ಇರುವ ಈ ಪ್ರಕರಣವನ್ನು ದಿನವೂ ವಿಚಾರಣೆ ನಡೆಸಿ ಮುಗಿಸುವ ಉದ್ದೇಶ ಎಂದೂ ಇರಲಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ತಿಳಿಸಿದೆ. ಮಾರ್ಚ್‌ 14ರಂದು ಮೇಲ್ಮನವಿಗಳ ವಿಚಾರಣೆ ನಡೆಯಲಿದೆ.

ರಾಮಾಯಣ, ರಾಮಚರಿತ ಮಾನಸ, ಭಗವದ್ಗೀತೆಯಂತಹ ಕೃತಿಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಎರಡು ವಾರಗಳಲ್ಲಿ ಇಂಗ್ಲಿಷ್‌ಗೆ ಅನುವಾದ ಮಾಡಿ ಸಲ್ಲಿಸುವಂತೆ ಅರ್ಜಿದಾರರಾದ ಸುನ್ನಿ ವಕ್ಫ್‌ ಮಂಡಳಿ, ರಾಮಜನ್ಮಭೂಮಿ ನ್ಯಾಸ, ರಾಮ ಲಲ್ಲಾ ವಿರಾಜಮಾನ್‌ ಮತ್ತು ಇತರರಿಗೆ ಸೂಚಿಸಿದೆ.

ಮೂಲ ಅರ್ಜಿದಾರರಲ್ಲದವರ ಮನವಿಗಳನ್ನು ಈ ಹಂತದಲ್ಲಿ ಪರಿಗಣಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. ಶ್ಯಾಮ್‌ ಬೆನಗಲ್‌, ಅಪರ್ಣಾ ಸೇನ್‌, ತೀಸ್ತಾ ಸೆಟಲ್‌ವಾಡ್‌ ಸೇರಿ ಒಟ್ಟು 32 ಮಂದಿ ಅರ್ಜಿ ಸಲ್ಲಿಸಿದ್ದಾರೆ.

‘ಈ ಪ್ರಕರಣವನ್ನು ಭೂ ವಿವಾದವಾಗಿ ಮಾತ್ರ ಪರಿಗಣಿಸಲಾಗುವುದು. ಇಲ್ಲಿ ವಾದಿಗಳು ಮತ್ತು ಪ್ರತಿವಾದಿಗಳು ಇದ್ದಾರೆ. ಇತರರಿಗೆ ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ ಎಂಬುದನ್ನು ಹಿಂದೆಯೇ ಸ್ಪಷ್ಟಪಡಿಸಲಾಗಿದೆ’ ಎಂದು ಪೀಠ ಹೇಳಿತು. ತಮ್ಮ ಅರ್ಜಿಯನ್ನು ಪರಿಗಣಿಸ
ಬೇಕು ಎಂದು ಹಿರಿಯ ವಕೀಲ ಸಿ.ಯು. ಸಿಂಗ್‌ ಕೋರಿಕೆಗೆ ಪೀಠ ಈ ಪ್ರತಿಕ್ರಿಯೆ ನೀಡಿದೆ.

**

ಹೈಕೋರ್ಟ್‌ ತೀರ್ಪು ಏನಿತ್ತು: ಅರ್ಜಿದಾರರಾದ ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ನಡುವೆ ವಿವಾದಾತ್ಮಕ ನಿವೇಶನವನ್ನು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಹೈಕೋರ್ಟ್‌ನ ತ್ರಿಸದಸ್ಯ ಪೀಠವು 2:1 ಬಹುಮತದಲ್ಲಿ 2010ರಲ್ಲಿ ಈ ತೀರ್ಪು ನೀಡಿತ್ತು.

‌ನಿಲುವು ಬದಲು: ವಿಚಾರಣೆಯನ್ನು ದಿನವೂ ನಡೆಸಬೇಕು ಎಂದು ಮುಸ್ಲಿಂ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ರಾಜೀವ್‌ ಧವನ್‌ ವಿನಂತಿಸಿದರು. ಹಿಂದಿನ ವಿಚಾರಣೆ ಸಂದರ್ಭದಲ್ಲಿ ಮುಸ್ಲಿಂ ಅರ್ಜಿದಾರರು ಭಿನ್ನ ನಿಲುವು ಹೊಂದಿದ್ದರು. ವಿಚಾರಣೆಯನ್ನು 2019ರ ಜುಲೈಗೆ ಮುಂದೂಡಬೇಕು. ಮುಂದಿನ ಲೋಕಸಭೆ ಚುನಾವಣೆ ಬಳಿಕವೇ ವಿಚಾರಣೆ ನಡೆಸಬೇಕು ಎಂದು ಕೋರಿದ್ದರು.

ಆದರೆ ದಿನವೂ ವಿಚಾರಣೆ ನಡೆಸಬೇಕೆಂಬ ಕೋರಿಕೆಯನ್ನು ಪೀಠ ಮಾನ್ಯ ಮಾಡಲಿಲ್ಲ. ‘700ಕ್ಕೂ ಹೆಚ್ಚು ಬಡ ಅರ್ಜಿದಾರರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಅವರ ಅರ್ಜಿಗಳನ್ನೂ ವಿಚಾರಣೆ ನಡೆಸಬೇಕಾಗಿದೆ’ ಎಂದು ಬಾಕಿ ಇರುವ ಪ್ರಕರಣಗಳನ್ನು ಪೀಠ ನೆನಪಿಸಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು