ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ನ್ಯಾಯಾಧೀಶ ಲೋಯ ಸಾವಿನ ಬಗ್ಗೆ ಎಸ್‌ಐಟಿ ತನಿಖೆಗೆ ಮನವಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ ಪತ್ರ

Last Updated 9 ಫೆಬ್ರುವರಿ 2018, 19:32 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಬ್ರಿಜ್‌ಗೋಪಾಲ್‌ ಹರ್‌ಕಿಶನ್‌ ಲೋಯ (ಬಿ.ಎಚ್‌. ಲೋಯ) ಅವರ ಅನುಮಾನಾಸ್ಪದ ಸಾವಿನ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿವೆ.

ಈ ಕುರಿತು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಿಪಿಎಂ ಸೇರಿದಂತೆ 15 ಪ್ರತಿಪಕ್ಷಗಳ 114 ಸಂಸದರ ಸಹಿ ಒಳಗೊಂಡ ಮನವಿ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸಲಾಗಿದೆ.

ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ರಾಹುಲ್ ಗಾಂಧಿ, ‘ನಮ್ಮ ಮನವಿಗೆ ರಾಷ್ಟ್ರಪತಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಒಬ್ಬ ನ್ಯಾಯಾಧೀಶರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಕರಣದ ಬಗ್ಗೆ ತನಿಖೆಯಾಗಬೇಕು ಮತ್ತು ಅದಕ್ಕಾಗಿ ಎಸ್‌ಐಟಿ ರಚಿಸಬೇಕು ಎಂದು ಅನೇಕ ಸಂಸದರು ಬಯಸಿದ್ದಾರೆ. ಈ ಕುರಿತ ಮನವಿ ಪತ್ರಕ್ಕೆ 15 ಪಕ್ಷಗಳ 114 ಸಂಸದರು ಸಹಿ ಹಾಕಿದ್ದಾರೆ. ಅವರ (ಲೋಯ) ಸಾವು ಅನುಮಾನಾಸ್ಪದ. ಇನ್ನೂ ಎರಡು ಅಂತಹ ಶಂಕಾಸ್ಪದ ಸಾವುಗಳಾಗಿವೆ. ರಾಷ್ಟ್ರಪತಿಗಳು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಮಿತ್‌ ಶಾ ವಿರುದ್ಧದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಲೋಯ: ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣವನ್ನು ಲೋಯ ವಿಚಾರಣೆ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈಗ ಅವರು ಖುಲಾಸೆಯಾಗಿದ್ದಾರೆ. 2014ರ ಡಿಸೆಂಬರ್‌ನಲ್ಲಿ ಲೋಯ ಮೃತಪಟ್ಟಿದ್ದಾರೆ.

**

ಬಜೆಟ್‌ ಅಧಿವೇಶನ ಮುಂದೂಡಿಕೆ

ಕೇಂದ್ರ ಬಜೆಟ್‌ನಲ್ಲಿ ಆಂಧ್ರ ಪ್ರದೇಶವನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಆ ರಾಜ್ಯದ ಸಂಸದರ ಪ್ರತಿಭಟನೆಯ ನಡುವೆಯೇ ಸಂಸತ್ತಿನ ಎರಡೂ ಸದನಗಳ ಕಲಾಪವನ್ನು ಮುಂದೂಡಲಾಗಿದೆ.

ಮಾರ್ಚ್‌ 5ರಂದು ಬಜೆಟ್‌ ಅಧಿವೇಶನ ಪುನರಾರಂಭವಾಗಲಿದೆ. ಈ ನಡುವಣ ಅವಧಿಯಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಗಳು ಬಜೆಟ್‌ ಪ್ರಸ್ತಾವನೆಗಳನ್ನು ಪರಿಶೀಲಿಸಲಿವೆ. ಇದೇ 1ರಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬಜೆಟ್‌ ಮಂಡಿಸಿದ್ದರು. ಏಪ್ರಿಲ್‌ 6ರವರೆಗೆ ಅಧಿವೇಶನ ನಡೆಯಲಿದೆ.

ಬಜೆಟ್‌ ಅಧಿವೇಶನದ ಮೊದಲ ಭಾಗದಲ್ಲಿ ಲೋಕಸಭೆಯಲ್ಲಿ ಏಳು ಮತ್ತು ರಾಜ್ಯಸಭೆಯಲ್ಲಿ ಎಂಟು ದಿನದ ಕಲಾಪ ನಡೆದಿದೆ.

ಲೋಕಸಭೆಯಲ್ಲಿ ಈ ಬಾರಿ ನಿಗದಿತ ಅವಧಿಯ ಶೇ 134.61ರಷ್ಟು ಕಲಾಪ ನಡೆದಿದೆ. ರಾಜ್ಯಸಭೆ ಶೇ 96.31ರಷ್ಟು ಕಾರ್ಯನಿರ್ವಹಿಸಿದೆ. ಮೂರು ದಿನ ಹೆಚ್ಚು ಹೊತ್ತು ಕಲಾಪ ನಡೆದದ್ದರಿಂದ ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.

ಆದರೆ, ಪ‍್ರಶ್ನೋತ್ತರ ಅವಧಿಯ ಹೆಚ್ಚಿನ ಸಮಯ ವ್ಯರ್ಥವಾಗಿದೆ. ಲೋಕಸಭೆಯಲ್ಲಿ ಶೇ 48 ಮತ್ತು ರಾಜ್ಯಸಭೆಯಲ್ಲಿ ಶೇ 39ರಷ್ಟು ಮಾತ್ರ ಕೆಲಸ ಆಗಿದೆ. ಅಧಿವೇಶನದ ಮೊದಲ ಭಾಗದಲ್ಲಿ ಶಾಸನ ರೂಪಿಸುವ ಯಾವ ಕೆಲಸವನ್ನೂ ಕೈಗೆತ್ತಿಕೊಳ್ಳಲಾಗಿಲ್ಲ.

ಅಧಿವೇಶನದ ಎರಡನೇ ಅವಧಿಯಲ್ಲಿ, ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮತ್ತು ಬಜೆಟ್‌ ಮೇಲೆ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT