ಶುಕ್ರವಾರ, ಜೂನ್ 25, 2021
21 °C
ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯ ಸುತ್ತಮುತ್ತ

ಹವಳ ದ್ವೀಪದಲ್ಲಿ ಕೋಲಾಹಲ

ಹಮೀದ್ ಕೆ. Updated:

ಅಕ್ಷರ ಗಾತ್ರ : | |

ಹವಳ ದ್ವೀಪದಲ್ಲಿ ಕೋಲಾಹಲ

ಕನ್ನಡಿಯಂತೆ ಹೊಳೆಯುವ ಕಡಲ ನೀರಿನ ನಡುವೆ ಇರುವ ಸಾವಿರಕ್ಕೂ ಹೆಚ್ಚು ಹವಳ ದ್ವೀಪಗಳ ಪುಟ್ಟ ರಾಷ್ಟ್ರ ಮಾಲ್ಡೀವ್ಸ್‌ ಮತ್ತೆ ರಾಜಕೀಯ ಬಿಕ್ಕಟ್ಟಿಗೆ ತುತ್ತಾಗಿದೆ. ಅಧ್ಯಕ್ಷ ಅಬ್ದುಲ್ಲಾ ಯಮೀನ್‍ ಸೋಮವಾರ (ಫೆ. 5) 15 ದಿನಗಳ ತುರ್ತು ಪರಿಸ್ಥಿತಿ ಹೇರುವುದರೊಂದಿಗೆ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದೆ. ‘ಯಮೀನ್‍ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಅವರ ವಿರೋಧಿಗಳು ವಾದಿಸಿದರೆ, ‘ವಿರೋಧ ಪಕ್ಷಗಳ ಜತೆ ಸೇರಿಕೊಂಡು ಸರ್ಕಾರ ಉರುಳಿಸಲು ದೇಶದ ಸುಪ್ರೀಂ ಕೋರ್ಟ್‌ ಪ್ರಯತ್ನಿಸಿತು’ ಎಂದು ಯಮೀನ್‍ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ.

ಮಾಲ್ಡೀವ್ಸ್‌ನ ಪ್ರಜಾಪ್ರಭುತ್ವದ ಸ್ಥಿತಿ ಹೇಗಿದೆ?

2013ರಲ್ಲಿ ಯಮೀನ್‍ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಈ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆಗಿನಿಂದಲೇ ವಿರೋಧ ಪಕ್ಷಗಳು ಹೇಳುತ್ತಾ ಬಂದಿವೆ. ಯಮೀನ್‍ ಅವರು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪವೂ ಇದೆ. ಇದನ್ನು ಪುಷ್ಟೀಕರಿಸುವಂತೆ ವಿರೋಧ ಪಕ್ಷಗಳ ಮುಖಂಡರನ್ನು ಬೇರೆ ಬೇರೆ ಕಾರಣ ನೀಡಿ ಜೈಲಿಗೆ ತಳ್ಳುತ್ತಾ ಬಂದಿದ್ದಾರೆ.

ಮೊಹಮ್ಮದ್‌ ನಶೀದ್‌ 2009ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಅಲ್ಲಿ ಪ್ರಜಾಪ್ರಭುತ್ವ ಜನ್ಮತಳೆಯಿತು. ಪ್ರಗತಿಪರ ಧೋರಣೆಯ ಮಾನವ ಹಕ್ಕುಗಳ ಹೋರಾಟಗಾರ ನಶೀದ್‌ ಬಗ್ಗೆ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಅಧ್ಯಕ್ಷರಾಗಿದ್ದಾಗ ಸಮುದ್ರದ ನೀರಿನೊಳಗೆ ಸಂಪುಟ ಸಭೆ ನಡೆಸಿ ಹವಾಮಾನ ಬದಲಾವಣೆಯತ್ತ ಮಾತ್ರವಲ್ಲದೆ ತಮ್ಮತ್ತವೂ ಅವರು ಜಗತ್ತಿನ ಗಮನ ಸೆಳೆದಿದ್ದರು. ಆದರೆ, 2015ರಲ್ಲಿ ಅವರನ್ನು ಬಂಧಿಸಿ ಭಯೋತ್ಪಾದಕ ಚಟುವಟಿಕೆ ನಡೆಸಿದ್ದಾರೆಂದು ಆರೋಪಿಸಿ 13 ವರ್ಷ ಶಿಕ್ಷೆ ವಿಧಿಸಲಾಯಿತು. ಒಂದು ವರ್ಷದ ಬಳಿಕ, ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಅವರಿಗೆ ಅವಕಾಶ ಕೊಡಲಾಯಿತು. ಈಗ ಅವರು ಬ್ರಿಟನ್‍ನಲ್ಲಿ ಆಶ್ರಯ ಪಡೆದಿದ್ದಾರೆ.

ಜನತಂತ್ರ ಸ್ಥಾಪನೆಯಾಗುವುದಕ್ಕಿಂತ ಹಿಂದಿನ 30 ವರ್ಷ ಮೌಮೂನ್‍ ಅಬ್ದುಲ್‍ ಗಯೂಮ್‍ ಈ ದೇಶವನ್ನು ಆಳಿದ್ದರು. ಈ ವ್ಯಕ್ತಿ ಯಮೀನ್‍ ಅವರ ಮಲಸಹೋದರ. ಈ ವರ್ಷ ಮಾಲ್ಡೀವ್ಸ್‌ನಲ್ಲಿ ಚುನಾವಣೆ ನಡೆಯಬೇಕು. ಈ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಶೀದ್‍ ಘೋಷಿಸಿದ್ದರು.

ಕಾಮನ್‍ವೆಲ್ತ್ ಕೂಟದಿಂದ ಮಾಲ್ಡೀವ್ಸ್‌ 2016ರಲ್ಲಿ ಹಿಂದಕ್ಕೆ ಹೋಯಿತು. ಪ್ರಜಾಸತ್ತೆಯಿಂದ ದೇಶ ಹಿಂದಕ್ಕೆ ಸಾಗುತ್ತಿದೆ ಎಂಬ ಕಾರಣಕ್ಕೆ ಕೂಟದಿಂದ ಅಮಾನತು ಮಾಡುವ ಪ್ರಸ್ತಾಪ ಕಾಮನ್‍ವೆಲ್ತ್ ಮುಂದೆ ಇತ್ತು. ಹಾಗಾಗಿ ಕೂಟದಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಮಾಲ್ಡೀವ್ಸ್ ಕೈಗೊಂಡಿತು. ಅದಾದ ಬಳಿಕ, ಚೀನಾ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ಯಮೀನ್‍ ಹೆಚ್ಚು ಹತ್ತಿರವಾದರು. ಸದ್ಯದ ಮಟ್ಟಿಗೆ ಮಾಲ್ಡೀವ್ಸ್‌ನ ಸೇನೆ ಮತ್ತು ಪೊಲೀಸ್‍ ಇಲಾಖೆ ಯಮೀನ್‍ ಅವರ ನಿಯಂತ್ರಣದಲ್ಲಿಯೇ ಇವೆ.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ರಕ್ಷಿಸಲು ತಾವು ಬದ್ಧ ಎಂದು ಸೇನೆಯ ಹಲವು ಹಿರಿಯ ಅಧಿಕಾರಿಗಳು ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಕೆಗೆ ತಕ್ಷಣದ ಕಾರಣವೇನು?

ವಿರೋಧ ಪಕ್ಷಗಳ ಒಂಬತ್ತು ಮುಖಂಡರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಮತ್ತು 12 ಸಂಸದರ ಅಮಾನತನ್ನು ಹಿಂದಕ್ಕೆ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ಆದೇಶ ನೀಡಿತು. ಆಡಳಿತ ಪಕ್ಷವನ್ನು ತೊರೆದರು ಎಂಬ ಕಾರಣಕ್ಕೆ ಈ 12 ಸಂಸದರನ್ನು ಅಮಾನತು ಮಾಡಲಾಗಿತ್ತು. ವಿರೋಧ ಪಕ್ಷಗಳ ಮುಖಂಡರ ವಿರುದ್ಧ ನಡೆದ ವಿಚಾರಣೆಗಳು ಮತ್ತು ಸಂಸದರ ಅಮಾನತು ರಾಜಕೀಯ ಪ್ರೇರಿತ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಹೇಳಿತ್ತು.

ಸುಪ್ರೀಂ ಕೋರ್ಟ್‌ನ ಆದೇಶ ಜಾರಿಗೆ ಬಂದಿದ್ದರೆ 85 ಸದಸ್ಯ ಬಲದ ಸಂಸತ್ತಿನಲ್ಲಿ ಆಡಳಿತ ಪಕ್ಷವು ಬಹುಮತ ಕಳೆದುಕೊಳ್ಳುತ್ತಿತ್ತು.

ನ್ಯಾಯಾಲಯದ ಆದೇಶವನ್ನು ಪಾಲಿಸಲು ಯಮೀನ್‍ ನಿರಾಕರಿಸಿದರು. ಸೇನೆಯನ್ನು ಕಳುಹಿಸಿ ಸುಪ್ರೀಂ ಕೋರ್ಟ್‍ಗೆ ಹೊರಗಿನಿಂದ ಬೀಗ ಜಡಿಸಿದರು. ಮಾಜಿ ಅಧ್ಯಕ್ಷ ಗಯೂಮ್‍, ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್‍ ಮತ್ತು ನ್ಯಾಯಮೂರ್ತಿ ಅಲಿ ಹಮೀದ್‍ ಅವರನ್ನು ಬಂಧಿಸಲಾಯಿತು. ಬಳಿಕ, ಇತರ ಮೂವರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ಹಳೆಯ ಆದೇಶವನ್ನು ರದ್ದುಪಡಿಸಿದರು.

ಅಂತರರಾಷ್ಟ್ರೀಯ ಸಮುದಾಯದ ನಿಲುವೇನು?

ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದು ಭಾರತ ಮತ್ತು ಅಮೆರಿಕ ಹೇಳಿವೆ. ನ್ಯಾಯಮೂರ್ತಿಗಳು ಮತ್ತು ರಾಜಕೀಯ ಕೈದಿಗಳ ಬಿಡುಗಡೆಗೆ ಭಾರತ ಮಧ್ಯಪ್ರವೇಶಿಸಬೇಕು ಎಂದು ನಶೀದ್‍ ಮತ್ತು ಗಯೂಮ್‍ ವಿನಂತಿಸಿಕೊಂಡಿದ್ದಾರೆ. ಸೇನೆಯನ್ನೇ ಕಳುಹಿಸಬೇಕು ಎಂದು ನಶೀದ್‍ ಒತ್ತಾಯಿಸಿದ್ದಾರೆ. ಬಿಕ್ಕಟ್ಟು ಆಂತರಿಕವಾಗಿಯೇ ಪರಿಹಾರವಾಗಬೇಕು ಎಂಬುದು ಚೀನಾದ ನಿಲುವು.

ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಭಾರತ ಮತ್ತು ಚೀನಾ ಪ್ರಯತ್ನಿಸುತ್ತಿವೆ. ನಶೀದ್‍ ಅಧ್ಯಕ್ಷರಾಗಿದ್ದಾಗ ಅವರಿಗೆ ಭಾರತದ ಬಗ್ಗೆ ಒಲವಿತ್ತು. ಯಮೀನ್‍ ಅವರು ಚೀನಾದತ್ತ ವಾಲಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಭಾರತದ ಹಿತಾಸಕ್ತಿ ಏನು?

ಈ ದ್ವೀಪ ಸಮೂಹದ ಸಮೀಪದಲ್ಲಿ ಹಾದು ಹೋಗುವ ಮಲಕ್ಕಾ ಖಾರಿ ಅತ್ಯಂತ ಮುಖ್ಯವಾದ ಜಲಮಾರ್ಗ. ಜಗತ್ತಿನ ಮೂರನೇ ಎರಡಷ್ಟು ತೈಲ ಸಾಗಾಟ, ಅರ್ಧದಷ್ಟು ಸರಕು ಸಾಗಾಟ ಹಡಗುಗಳು ಈ ಖಾರಿಯನ್ನು ಹಾದು ಹೋಗುತ್ತವೆ. ಲಕ್ಷದ್ವೀಪದಿಂದ 700 ಕಿ.ಮೀ. ಮತ್ತು ಭಾರತ ಉಪಖಂಡದಿಂದ 1200 ಕಿ.ಮೀ. ದೂರದಲ್ಲಿ ಮಾಲ್ಡೀವ್ಸ್ ಇದೆ.

1965ರಲ್ಲಿ ಬ್ರಿಟಿಷ್‍ ಆಡಳಿತ ಕೊನೆಯಾದಾಗಿನಿಂದಲೂ ಮಾಲ್ಡೀವ್ಸ್‌ ಜತೆಗೆ ಭಾರತ ನಿಕಟವಾದ ಸಂಬಂಧ ಹೊಂದಿದೆ. ಸ್ವತಂತ್ರ ಮಾಲ್ಡೀವ್ಸ್‌ ದೇಶಕ್ಕೆ ಮಾನ್ಯತೆ ನೀಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದು.

1988ರಲ್ಲಿ ಗಯೂಮ್‍ ನೇತೃತ್ವದ ಸರ್ಕಾರದ ವಿರುದ್ಧ ಅಬ್ದುಲ್ಲಾ ಲುಥುಫಿ ಮುಂದಾಳತ್ವದಲ್ಲಿ ಕ್ರಾಂತಿ ನಡೆದಾಗ ಅದನ್ನು ಭಾರತದ ಸೇನೆ ಹಿಮ್ಮೆಟ್ಟಿಸಿತ್ತು. ಈ ಯಶಸ್ವೀ ಕಾರ್ಯಾಚರಣೆಯನ್ನು ಆಪರೇಷನ್‍ ಕ್ಯಾಕ್ಟಸ್‍ ಎಂದು ಕರೆಯಲಾಗಿದೆ. ಹಾಗೆಯೇ, ವಿಶ್ವಸಂಸ್ಥೆ, ಕಾಮನ್‍ವೆಲ್ತ್ ಕೂಟ ಅಥವಾ ಸಾರ್ಕ್‌ ಯಾವುದೇ ಇರಲಿ, ಭಾರತದ ನಿಲುವನ್ನು ಮಾಲ್ಡೀವ್ಸ್‌ ಸದಾ ಬೆಂಬಲಿಸುತ್ತಲೇ ಬಂದಿದೆ. ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆ ಅಲ್ಲಿನ ದೊಡ್ಡ ಆಸ್ಪತ್ರೆಗಳಲ್ಲಿ ಒಂದು. ಇದರ ಸಂಪೂರ್ಣ ವೆಚ್ಚವನ್ನು ಭಾರತವೇ ಭರಿಸಿದೆ. ಅಲ್ಲಿ ಆರಂಭವಾದ ಮೊದಲ ತಾಂತ್ರಿಕ ಶಿಕ್ಷಣ ಸಂಸ‍್ಥೆಗೂ ಭಾರತ ಅನುದಾನ ನೀಡಿದೆ.

ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಜಲಮಾರ್ಗವನ್ನು ಬಳಸುತ್ತಾರೆ ಎಂಬುದು ಮುಂಬೈ ದಾಳಿಯ ಬಳಿಕ ನಿಚ್ಚಳವಾಯಿತು. ಭಾರತಕ್ಕೆ ಸಮೀಪದಲ್ಲಿರುವ ಮಾಲ್ಡೀವ್ಸ್‌ ಅನ್ನು ಉಗ್ರರು ಬಳಸಿಕೊಳ್ಳುವ ಅಪಾಯ ಬಹಳ ಹೆಚ್ಚು. ಅದರಿಂದಾಗಿ ಮಾಲ್ಡೀವ್ಸ್‌ ಜತೆಗಿನ ಸಂಬಂಧ ಈಗ ಇನ್ನೂ ಹೆಚ್ಚು ಮಹತ್ವ ಪಡೆದುಕೊಂಡಿದೆ.

2011ರ ವರೆಗೆ ಮಾಲ್ಡೀವ್ಸ್‌ನಲ್ಲಿ ಚೀನಾದ ರಾಯಭಾರ ಕಚೇರಿಯೂ ಇರಲಿಲ್ಲ. ನಂತರದ ದಿನಗಳಲ್ಲಿ ಚಿತ್ರಣ ಬದಲಾಗಿದೆ. ಮಾಲೆ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಭಾರತದ ಜಿಎಂಆರ್‍ ಸಮೂಹ ಮತ್ತು ಅಲ್ಲಿನ ಸರ್ಕಾರದ ಜತೆಗೆ ಆಗಿದ್ದ ಒಪ್ಪಂದವನ್ನು 2012ರಲ್ಲಿ ದಿಢೀರ್‍ ರದ್ದು ಮಾಡಲಾಯಿತು. ಈ ಯೋಜನೆ ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಪಾಲಾಯಿತು. ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ 2014ರಲ್ಲಿ ಮಾಲೆಗೆ ಭೇಟಿ ನೀಡಿದರು. ಎರಡೂ ದೇಶಗಳ ನಡುವೆ ವಿವಿಧ ವಿಚಾರಗಳಲ್ಲಿ ಹತ್ತಾರು ಒಪ್ಪಂದಗಳು ಆಗಿವೆ.

ನೂರು ಕೋಟಿ ಡಾಲರ್‌ (ಸುಮಾರು ₹6500 ಕೋಟಿ) ಹೂಡಿಕೆ ಮಾಡುವ ವಿದೇಶಿಯರು ಅಲ್ಲಿ ಜಮೀನು ಖರೀದಿಸಬಹುದು ಎಂಬ ಕಾನೂನನ್ನು 2015ರಲ್ಲಿ ಜಾರಿಗೆ ತರಲಾಗಿದೆ. ಇದು ಮಾಲ್ಡೀವ್ಸ್‌ನ ಯಾವುದಾದರೂ ದ್ವೀಪದಲ್ಲಿ ಚೀನಾ ನೆಲೆಯೊಂದನ್ನು ಸ್ಥಾಪಿಸಲು ಕಾರಣವಾಗಬಹುದು. ಚೀನಾದ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿದ ದಕ್ಷಿಣ ಏಷ್ಯಾದ ಎರಡನೇ ದೇಶ ಮಾಲ್ಡೀವ್ಸ್‌ ಎಂಬುದೂ ಭಾರತಕ್ಕೆ ಆತಂಕಕಾರಿ ಸಂಗತಿಯೇ ಆಗಿದೆ. ಒಪ್ಪಂದಕ್ಕೆ ಸಹಿ ಮಾಡಿದ ದಕ್ಷಿಣ ಏಷ್ಯಾದ ಮೊದಲ ದೇಶ ಪಾಕಿಸ್ತಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.