ಗುರುವಾರ , ಜೂನ್ 4, 2020
27 °C
ಚುನಾವಣಾ ನಿವೃತ್ತಿ ಕೈಬಿಡುವಂತೆ ಆಗ್ರಹ: ಬೆಂಬಲಿಗರನ್ನು ಸಮಾಧಾನಪಡಿಸಿದ ಶಾಸಕ

ನಿಮ್ಮ ಪ್ರೀತಿಯ ಮುಂದೆ ಎಲ್ಲವೂ ಗೌಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಮ್ಮ ಪ್ರೀತಿಯ ಮುಂದೆ ಎಲ್ಲವೂ ಗೌಣ

ಯಾದಗಿರಿ: ‘ನಿರಂತರ ನನ್ನನ್ನು ಗೆಲ್ಲಿಸಿ ಅಧಿಕಾರ ಕೊಟ್ಟಿದ್ದೀರಿ. ನಿಮ್ಮ ಪ್ರೀತಿಯ ಮುಂದೆ ಎಲ್ಲವೂ ಗೌಣ. ಪಕ್ಷದ ಆಂತರಿಕ ಬೆಳವಣಿಗೆಯಿಂದ ಬೇಸತ್ತು ಚುನಾವಣಾ ನಿವೃತ್ತಿ ಘೋಷಿಸಿದ್ದೆ. ಈಗ ನಿವೃತ್ತಿ ಕೈಬಿಡುವ ಕುರಿತು ಮರು ಚಿಂತನೆ ನಡೆಸುತ್ತೇನೆ’ ಎಂದು ಶಾಸಕ ಮಾಲಕರಡ್ಡಿ ಹೇಳುತ್ತಿದ್ದಂತೆ ನೂರಾರು ಬೆಂಬಲಿಗರು ಹರ್ಷೋದ್ಘಾರ ಮಾಡಿದರು.

ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿ ಮಾಲಕರಡ್ಡಿ ಅಭಿಮಾನಿ ಬಳಗದ ಸದಸ್ಯರು, ಬೆಂಬಲಿಗರು ಶನಿವಾರ ಶಾಸಕರ ನಿವಾಸದ ಎದುರು ಜಮಾಯಿಸಿ ಶಾಸಕರು ತಮ್ಮ ನಿಲುವು ಬದಲಾಯಿಸುವಂತೆ ಒತ್ತಾಯಿಸಿ ಸತ್ಯಾಗ್ರಹಕ್ಕೆ ಮುಂದಾದರು. ಬೆಂಬಲಿಗರ ಒತ್ತಾಯದ ಮೇಲೆ ನಿವಾಸದಿಂದ ಹೊರಬಂದ ಶಾಸಕ ಮಾಲಕರಡ್ಡಿ ಸತ್ಯಾಗ್ರಹ ನಿರತ ಬೆಂಬಲಿಗರನ್ನು ಸಮಾಧಾನಪಡಿಸಿದರು.

ನಂತರ ಬೆಂಬಲಿಗರು ಒಬ್ಬೊಬ್ಬರಾಗಿ ಮಾತನಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಶಾಸಕರ ಮನವೊಲಿಸಲು ಯತ್ನಿಸಿದರು. ನಿವೃತ್ತಿಯ ನಿಲುವು ಕೈಬಿಡುವಂತೆ ಮನವಿ ಮಾಡಿದರು. ಅರ್ಧ ತಾಸಿನವರೆಗೂ ಕಾರ್ಯಕರ್ತರ ಮಾತುಗಳನ್ನು ಆಲಿಸಿದ ಮಾಲಕರಡ್ಡಿ, ‘ಪಕ್ಷದಲ್ಲಿ ಈಗ ಬದ್ಧತೆ ಉಳಿದಿಲ್ಲ. ಸ್ವಾರ್ಥ ರಾಜಕಾರಣ ಹೆಚ್ಚಿದೆ. ಹಿರಿಯತನ, ಅನುಭವಕ್ಕೆ ಬೆಲೆ ಸಿಗುತ್ತಿಲ್ಲ. ರಾಜ್ಯ ರಾಜಕಾರಣ ದೆಹಲಿಗೆ ಸೀಮಿತವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ನಿವೃತ್ತಿ ಪಡೆಯಲು ಇಚ್ಛಿಸಿದ್ದೇನೆ. ಆದರೆ, ನಿಮ್ಮೆಲ್ಲರ ಪ್ರೀತಿಗಿಂತ ಯಾವುದೂ ದೊಡ್ಡದಿಲ್ಲ. ಪಕ್ಷದ ಹೈಕಮಾಂಡ್ ಮತ್ತು ವರಿಷ್ಠರ ಜತೆ ಚರ್ಚಿಸಿದ ನಂತರ ಚುನಾವಣಾ ನಿವೃತ್ತಿ ಕುರಿತು ಮರುಚಿಂತನೆ ನಡೆಸುತ್ತೇನೆ’ಎಂದು ಪುನರುಚ್ಚರಿಸಿದರು.

‘ನಮಗೆ ಭರವಸೆ ಬೇಡ. ನೀವು ಚುನಾವಣೆ ಎದುರಿಸಲೇಬೇಕು. ನಿಮ್ಮ ನಿಲುವು ಸ್ಪಷ್ಟಪಡಿಸಿ’ ಎಂದು ಬೆಂಬಲಿಗರು ಆಗ್ರಹಿಸಿದರು. ಬೆಂಬಲಿಗರ ಮಾತಿಗೆ ಮಣಿಯದ ಮಾಲಕರಡ್ಡಿ, ‘ನಿವೃತ್ತಿ ಹುಡುಗಾಟ ಅಲ್ಲ. ಈಗಾಗಲೇ ನಿವೃತ್ತಿ ಘೋಷಿಸಿಯಾಗಿದೆ. ಇನ್ನು ಮುಂದೆ ನಡೆಯಬೇಕಾದ ಬೆಳವಣಿಗೆ ಕುರಿತು ವರಿಷ್ಠರ ಜತೆಗೆ ಚರ್ಚಿಸಬೇಕಿದೆ. ಆ ನಂತರ ಅಂತಿಮ ನಿರ್ಧಾರ ತಿಳಿಸುತ್ತೇನೆ’ ಎಂದರು. ನಂತರ ಬೆಂಬಲಿಗರು ಶಾಸಕರಿಗೆ ನಿವೃತ್ತಿ ವಿಚಾರ ಕೈಬಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿ ಸತ್ಯಾಗ್ರಹ ಕೈಬಿಟ್ಟರು.

ಕಾಂಗ್ರೆಸ್‌ ಮುಖಂಡರಾದ ಶ್ರೀನಿವಾಸ ಕಂದಕೂರ, ಮಾಣಿಕರಡ್ಡಿ ಕುರಕುಂದಿ, ನೂರಾರು ಬೆಂಬಲಿಗರು ಇದ್ದರು.

**

‘ಸ್ವಾರ್ಥ ರಾಜಕಾರಣಕ್ಕೆ ಕಡಿವಾಣ ಬೀಳಲಿ’

‘ರಾಜ್ಯ ರಾಜಕಾರಣದ ನಿರ್ಧಾರಗಳು ದೆಹಲಿಯಲ್ಲಿ ನಡೆಯುತ್ತಿವೆ. ಇದು ಪಕ್ಷದ ಬೆಳವಣಿಗೆಯ ಹಿತದೃಷ್ಟಿಯಿಂದ ಸರಿಯಲ್ಲ. ಇದರಿಂದಲೇ ಇಂದು ಕಾಂಗ್ರೆಸ್ ಪಕ್ಷ ಸಂಘಟನೆ ಸಡಿಲಗೊಳ್ಳುತ್ತಿದೆ’ ಎಂದು ಶಾಸಕ ಮಾಲಕರಡ್ಡಿ ಬೇಸರ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಕ್ಷದಲ್ಲಿ ಅಸಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ದೇಶದ 544 ಸಂಸದೀಯ ಕ್ಷೇತ್ರಗಳಲ್ಲಿ 500 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಪಕ್ಷದಲ್ಲಿ ಹೆಚ್ಚುತ್ತಿರುವ ಏಕವ್ಯಕ್ತಿ ಸ್ವಾರ್ಥ ರಾಜಕಾರಣಕ್ಕೆ ಕಡಿವಾಣ ಬೀಳಬೇಕಿದೆ. ರಾಜ್ಯರಾಜಕಾರಣದಲ್ಲಿ ಮೂಗು ತೂರಿಸುವವರನ್ನು ಹೈಕಮಾಂಡ್‌ ದೂರ ಇಡಬೇಕು’ ಎಂದು ಪರೋಕ್ಷವಾಗಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.