ಶನಿವಾರ, ಜೂನ್ 6, 2020
27 °C

‘ಬಿಗ್‌ಬಾಸ್‌’ ಅಷ್ಟೇ ನಾನಲ್ಲ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

‘ಬಿಗ್‌ಬಾಸ್‌’ ಅಷ್ಟೇ ನಾನಲ್ಲ

ಪ್ರೀತಿ ಅಂದ್ರೆ ಏನು?

ಯಾವುದಕ್ಕೆ ಮಿತಿ ಇಲ್ಲವೋ, ಯಾವುದನ್ನು ಅಕ್ಷರ, ಶಬ್ದಗಳ ಮೂಲಕ ವ್ಯಾಖ್ಯಾನಿಸಲು ಆಗುವುದಿಲ್ಲವೂ ಅಂತಹ ಸುಂದರ ಅನುಭವವೇ ಪ್ರೀತಿ. ದೇಶ, ಭಾಷೆ, ಜಾತಿ, ಅಂತಸ್ತು, ಪ್ರಾದೇಶಿಕತೆಯ ಹಂಗಿಲ್ಲದೆ ಕೇವಲ ಮನಸನ್ನು, ಮಾನವೀಯತೆಯನ್ನು ಪ್ರೀತಿಸುವ ಎಲ್ಲರಿಗೂ ನಾನು ಸದಾ ಶುಭ ಕೋರುತ್ತೇನೆ.

ಬೆಂಗಳೂರಲ್ಲಿ ನಿಮಗೇನಿಷ್ಟ?

ಮೈಸೂರುಪಾಕ್, ಇಲ್ಲಿನ ಹೋಟೆಲ್‌ಗಳಲ್ಲಿ ಸಿಗುವ ಕರಾವಳಿ ರುಚಿಯ ಮೀನಿನ ಫ್ರೈ ನನಗಿಷ್ಟ. ಇಲ್ಲಿರುವ ಹಿತಕರ ವಾತಾವರಣದ ದೇಶದ ಬೇರಾವ ನಗರಗಳಲ್ಲೂ ಇಲ್ಲ. ಪ್ರೀತಿಗೆ ಪ್ರಶಸ್ತ ತಾಣ ಬೆಂಗಳೂರು.

ಇತ್ತೀಚೆಗೆ ಬೆಳ್ಳಿತೆರೆಗಿಂತ ಕಿರುತೆರೆಯಲ್ಲಿಯೇ ಹೆಚ್ಚು ಸಕ್ರಿಯರಾಗಿರುತ್ತೀರಿ...

ರಿಯಾಲಿಟಿ ಶೋಗಳ ಅನುಭವ ಅನನ್ಯ. ಅದರಲ್ಲೂ  ಬಿಗ್‌ಬಸ್‌ ನನ್ನನ್ನು ನಾನು ಹೆಚ್ಚು ಅರಿತುಕೊಳ್ಳಲು ಸಹಕಾರಿಯಾಯಿತು. ಹೊರ ಜಗತ್ತಿನಲ್ಲಿರುವಾಗ ನಮಗಾಗಿ ಅಷ್ಟೊಂದು ದೀರ್ಘ ಸಮಯ ನೀಡಲು ಆಗುವುದಿಲ್ಲ. ಆದರೆ ಬಿಗ್‌ಬಾಸ್‌ ಮನೆಯಿಂದ ಹೊರಬರುವಾಗ ನಾನೊಬ್ಬ ಉತ್ತಮ ಪರಿಪೂರ್ಣ ವ್ಯಕ್ತಿಯಾಗಿ ಹೊರಬಂದೆ. ಇನ್ನೂ ‘ಜಲತಿಕಲಾಜ’ ನನ್ನ ಆಸಕ್ತಿಯ ಕ್ಷೇತ್ರಕ್ಕೆ ಹೆಚ್ಚು ಹತ್ತಿರವಾದ್ದರಿಂದ ಉತ್ಸಾಹದಿಂದ ಭಾಗಿಯಾಗಿದ್ದೆ. ನನ್ನ ನಿಜವಾದ ಸಾಮರ್ಥ್ಯ ಹಾಗೂ ಮಿತಿಗಳನ್ನು ಕಂಡುಕೊಳ್ಳಲು ಈ ರಿಯಾಲಿಟಿ ಶೋ ಸಹಕಾರಿಯಾಯಿತು.

ಬಿಗ್‌ಬಸ್‌ ಮನೆಯಿಂದ ಮತ್ತೊಮ್ಮೆ ಆಹ್ವಾನ ಬಂದರೆ ಹೋಗ್ತೀರಾ?

ಇಲ್ಲಮ್ಮಾ, ಹೋಗಲ್ಲ. ಅದೊಂದು ಜೀವನನುಭವ. ಒಂದು ಬಾರಿಯ ಭೇಟಿಯೇ ಪೂರ್ತಿ ಜೀವನಕ್ಕಾಗುವಷ್ಟು ಅನುಭವದ ಬುತ್ತಿ ನೀಡಿದೆ. ಅದೊಂದು ಅಯಸ್ಕಾಂತ

ಇದ್ದಂತೆ ಆ ಶೋ ಹೊರತಾಗಿ ನನ್ನ ಭಿನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಇಂದಿಗೂ ಹೆಣಗುತ್ತಿದ್ದೇನೆ. ಬಿಗ್‌ಬಾಸ್ ಶಮಿತಾ ಶೆಟ್ಟಿ ಎಂದೇ ಹೆಚ್ಚು ಜನರು ಗುರುತಿಸುತ್ತಾರೆ. ಬಿಗ್‌ಬಾಸ್‌ ಪೂರ್ವದ

ನನ್ನ ಸಾಧನೆಗಳು ಗೌಣವಾಗಿವೆ.

ಕಿರುತೆರೆ– ಬೆಳ್ಳಿತೆರೆಯ ನಡುವಿನ ವ್ಯತ್ಯಾಸಗಳೇನು?

ಕಿರುತೆರೆಯ ವ್ಯಾಪ್ತಿ ದೊಡ್ಡದಾಗಿದೆ. ನಿಜ ಹೇಳಬೇಕು ಅಂದ್ರೆ ಅದೇ ಹಿರಿತೆರೆ, ಅದನ್ನು ಕಿರುತೆರೆ ಎಂದು ಕರೆಯುವುದೇ ತಪ್ಪು. ಬೆಳ್ಳಿತೆರೆಯಷ್ಟೇ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಜನಪ್ರಿಯ ಮಾಧ್ಯಮ ಇದು. ವೆಬ್‌ ಸೀರಿಸ್‌, ರಿಯಾಲಿಟಿ ಶೋಗಳು ಸದ್ಯ ಜನಪ್ರಿಯತೆಯ ಉತ್ತುಂಗದಲ್ಲಿವೆ. ಸಾಕಷ್ಟು ಜನರನ್ನು ಸಮರ್ಥವಾಗಿ ತಲುಪುತ್ತಿವೆ. ಹಾಗಾಗಿ ಅವೆರಡರ ನಡುವೆ ವ್ಯತ್ಯಾಸವಿದೆ ಎಂದು ನನಗೆ ಅನಿಸುತ್ತಿಲ್ಲ.

ನಟನೆಯ ಹೊರತಾದ ನಿಮ್ಮ ಆಸಕ್ತಿ...

ಡಾನ್ಸ್ ಮತ್ತು ಮ್ಯೂಸಿಕ್ ನನ್ನ ನೆಚ್ಚಿನ ಕ್ಷೇತ್ರಗಳು. ಬೇರೆಯವರಿಗೆ ಕಲಿಸುವುದರಲ್ಲಿಯೂ ಸಂತೋಷವಿದೆ. ಚಲನಚಿತ್ರಗಳನ್ನು ವೀಕ್ಷಿಸುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು ನನಗಿಷ್ಟ.

ಚಿತ್ರದಿಂದ ಚಿತ್ರಕ್ಕೆ ನಿಮ್ಮ ಜನಪ್ರಿಯತೆ ಕಡಿಮೆಯಾಯಿತು ಅನಿಸುತ್ತಾ?

ಸದ್ಯ ನಾನು ಏನಾಗಿದ್ದೇನೊ ಅದರಲ್ಲಿ ನನಗೆ ಹೆಮ್ಮೆ ಇದೆ. ಸೆಲೆಬ್ರಿಟಿ ಆಗಬೇಕೆಂದರೆ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಬೇಕಿಲ್ಲ. ಅಥವಾ ನಟಿಸಿದ ಚಿತ್ರಗಳೆಲ್ಲವೂ ಯಶಸ್ವಿಯಾಗಬೇಕಿಲ್ಲ. ರೂಪದರ್ಶಿಯಾಗಿ, ಒಳಾಂಗಣ ವಿನ್ಯಾಸಕಿಯಾಗಿ ನನ್ನ ಸಾಧನೆ ಅಪೂರ್ವವಾದುದು. ಅದರಲ್ಲಿಯೇ ನನಗೆ ತೃಪ್ತಿ ಇದೆ.

ಕನ್ನಡ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಇದೆಯೇ?

ಇದುವರೆಗೂ ಯಾವುದೇ ಉತ್ತಮ ಆಫರ್‌ಗಳು ಬಂದಿಲ್ಲ. ಚಿತ್ರಕಥೆ ಹಾಗೂ ನಿರೂಪಣಾ ಶೈಲಿ ಇಷ್ಟವಾದರೆ, ಭಾಷೆಯ ಹಂಗಿಲ್ಲದೆ ಯಾವುದೇ ಚಿತ್ರಗಳಲ್ಲಾದರೂ ನಟಿಸುತ್ತೇನೆ. ಕನ್ನಡದಿಂದಲೂ ಉತ್ತಮ ಚಿತ್ರಕಥೆ ದೊರೆತರೆ ಖಂಡಿತಾ ನಟಿಸುತ್ತೇನೆ.

ನಿಮ್ಮ ದೊಡ್ಡ ಕನಸೇನು

ಯಾರಿಗೂ ನೋವಿಸದಂತೆ, ಸಂತೋಷವಾಗಿ ಬದುಕುವುದೇ ನನ್ನ ಜೀವನದ ಅತಿದೊಡ್ಡ ಕನಸು.

ನಿಮ್ಮ ನೆಚ್ಚಿನ ನಟ, ನಟಿ?

ಅಮಿತಾಭ್ ಬಚ್ಚನ್‌ ನನ್ನ ನೆಚ್ಚಿನ ನಟ. ಏಕೆ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಆಲಿಯಾ ಭಟ್‌ ಅವರ ನಟನೆ ಸಹ ಇಷ್ಟವಾಗುತ್ತದೆ.

ಕನಸಿನ ಪಾತ್ರ...

ನಿಜ ಜೀವನದಲ್ಲಿ ನಾನು ಏನು ಆಗಿಲ್ಲವೋ ಅಂಥ ಪಾತ್ರಕ್ಕೆ ಜೀವತುಂಬಿ ಪರಕಾಯ ಪ್ರವೇಶ ಮಾಡಿ ನಟಿಸುವ ಪಾತ್ರ ನನಗಿಷ್ಟ. ಕ್ಲಿಯೊಪಾತ್ರ ಪಾತ್ರದಲ್ಲಿ ನಟಿಸುವ ಆಸೆ ಇದೆ.

ಪ್ರಸ್ತುತ ಫ್ಯಾಷನ್‌ ಟ್ರೆಂಡ್‌ ಹೇಗಿದೆ?

ಫ್ಯಾಷನ್‌ ಲೋಕದ ಯಾವುದೇ ಟ್ರೆಂಡ್‌ಗಳನ್ನು ನಾನು ಪಾಲಿಸುವುದಿಲ್ಲ. ನಾವು ಟ್ರೆಂಡ್ ಹಿಂಬಾಲಿಸುವವರಾಗಬಾರದು. ಸ್ವತಃ ನಾವೇ ಟ್ರೆಂಡ್‌ಗಳ ಪ್ರವರ್ತಕರಾಗಬೇಕು. ಆಂತರಿಕ ಸೌಂದರ್ಯವೇ ನಿಜವಾದ ಫ್ಯಾಷನ್. ನಿಮ್ಮ ಆಂತರಿಕ ಸೌಂದರ್ಯವನ್ನು ಬಾಹ್ಯದಲ್ಲಿಯೂ ಪ್ರತಿಬಿಂಬಿಸುವ ಫ್ಯಾಷನ್‌ ಅನುಸರಿಸುವುದು ಸೂಕ್ತ. ತೊಡುವ ಉಡುಗೆ ನಮ್ಮ

ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿರಬೇಕು.

**

ನಿಮ್ಮ ಫಿಟ್‌ನೆಸ್ ಸಿಕ್ರೇಟ್‌?

ಡಯೆಟ್‌ನಿಂದ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು ಎಂಬ ನಂಬಿಕೆ ನನಗಿಲ್ಲ. ನನಗೇನು ಇಷ್ಟವೋ ಅದನ್ನೆಲ್ಲಾ ತಿನ್ನುತ್ತೇನೆ. ಅದಕ್ಕೆ ಅನುಗುಣವಾಗಿ ನಿತ್ಯ ಎರಡರಿಂದ ಮೂರು ಗಂಟೆ ವ್ಯಾಯಾಮ ಮಾಡುತ್ತೇನೆ. ಪ್ರತಿ ಮುಂಜಾನೆಯನ್ನು ನೀರು ಕುಡಿಯುವುದರೊಂದಿಗೆ ಆರಂಭಿಸುತ್ತೇನೆ. ಎದ್ದ ತಕ್ಷಣ ಕನಿಷ್ಠ ಅರ್ಧ ಲೀಟರ್ ಬಿಸಿನೀರು ಕುಡಿಯುತ್ತೇನೆ. ಸಕ್ಕರೆ ಪದಾರ್ಥ ಹಾಗೂ ಜಂಕ್‌ಫುಡ್‌ಗಳಿಂದ ಸದಾ ದೂರ. ಕೋಳಿಮಾಂಸ, ಮೀನು ಹಾಗೂ ತರಕಾರಿಗಳನ್ನು ನಿಯಮಿತವಾಗಿ ಸೇವಿಸುತ್ತೇನೆ. ಮಾನಸಿಕ ಆರೋಗ್ಯಕ್ಕಾಗಿ ಯೋಗ, ಧ್ಯಾನದ ಮೊರೆಹೋಗುತ್ತೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.