ಸೋಮವಾರ, ಮೇ 25, 2020
27 °C

ಕಷ್ಟವೆಂಬ ತ್ಯಾಜ್ಯ ನಿವಾರಿಸಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಷ್ಟವೆಂಬ ತ್ಯಾಜ್ಯ ನಿವಾರಿಸಬೇಕು

ಒಂದು ದಿನ ಬೆಂಗಳೂರಿಗೆ ಹೋಗಲು ತುಮಕೂರಿನ ರೈಲು ನಿಲ್ದಾಣದಲ್ಲಿ ಕುಳಿತಿದ್ದೆ. ಅಲ್ಲಿ  ತುಂಬಾ ಜನ ಓಡಾಡುತ್ತಿದ್ದರು. ಮೇಲ್ನೋಟಕ್ಕೆ ಎಲ್ಲರೂ ವಿದ್ಯಾವಂತರಂತೆಯೇ ಇದ್ದರು. ಬೆನ್ನಿಗೆ ಬ್ಯಾಗು, ಕಿವಿಗೆ ಇಯರ್ ಫೋನ್‌, ಒಳ್ಳೆಯ ಉಡುಪು, ಕಾಲಲ್ಲಿ ಶೂ... ನಾನು ಎಲ್ಲರನ್ನೂ ಗಮನಿಸುತ್ತಿದ್ದೆ.

ವಿದ್ಯಾವಂತರಂತೆ ಕಾಣುತ್ತಿದ್ದ ಆ ಜನ ತಾವು ಬಳಸಿದ ನೀರಿನ ಬಾಟಲಿ, ಬೇಕರಿ ತಿನಿಸುಗಳ ಪೊಟ್ಟಣಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ಎಲ್ಲೆಂದರಲ್ಲಿ ಎಸೆಯುತ್ತಿದ್ದರು. ಅವರು ಕಸ ಎಸೆದ ಕೆಲವೇ ಕ್ಷಣದಲ್ಲಿ ನಿಲ್ದಾಣದ ಸ್ವಚ್ಛತಾ ಕಾರ್ಮಿಕರು ಬಂದು ಕಸ ಎತ್ತಿ ಬುಟ್ಟಿಗೆ ಹಾಕಿ ಹೋಗುತ್ತಿದ್ದರು. ಎಸೆಯುವ ಮತ್ತು ಎತ್ತಿ ಬುಟ್ಟಿಗೆ ಹಾಕುವ ಆಟ ಹೀಗೇ ಸಾಗಿತ್ತು.

ತಮ್ಮ ಉಡುಗೆ ತೊಡುಗೆಗಳಿಂದ ವಿದ್ಯಾವಂತರಂತೆ ಕಾಣುತ್ತಿದ್ದ ಜನರು ಕಸವನ್ನು ಕಂಡಕಂಡಲ್ಲಿ ಎಸೆಯುತ್ತಿದ್ದುದಕ್ಕೆ ಅವರ ಅವಿವೇಕ, ಅಹಂಭಾವ ಹಾಗೂ ಸಾರ್ವಜನಿಕ ಸ್ಥಳಗಳ ಬಗ್ಗೆ ಅವರಿಗಿದ್ದ ಉದಾಸೀನ ಮನೋಭಾವ ಕಾರಣ. ಆದರೆ ಸಣ್ಣ ಸಣ್ಣ ವಸ್ತುಗಳನ್ನೂ ಬಿಡದೆ ಸ್ವಚ್ಛ ಮಾಡುವುದನ್ನು ನೋಡಿದಾಗ ನನಗೆ ‘ವಿದ್ಯಾವಂತ’ರ ಬಗ್ಗೆ ಕನಿಕರ ಮೂಡಿತು.

ಈ ಸನ್ನಿವೇಶದಲ್ಲಿ ನಾನು ಜೀವನದ ಪಾಠವೊಂದನ್ನು ಕಲಿತೆ. ಕಸ ಎಸೆಯುವವರು ಸ್ವಚ್ಛತೆಯನ್ನು ಅಲಕ್ಷಿಸಿರುತ್ತಾರೆ, ಅದನ್ನೆತ್ತಿ ಕಸದ ಬುಟ್ಟಿಗೆ ಹಾಕುವವರು ನಿಯತ್ತಿನಿಂದ ತಮ್ಮ ಕರ್ತವ್ಯವನ್ನು ಪಾಲಿಸದೇ ಇದ್ದರೆ ರೈಲು ನಿಲ್ದಾಣ ಕಸದಿಂದ ತುಂಬಿಹೋಗುತ್ತದೆ. ನಮ್ಮ ಜೀವನದಲ್ಲಿಯೂ ಸಣ್ಣ ಸಣ್ಣ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಆದರೆ ನಾವು ಅದು ಸಣ್ಣದೆಂದು ಕಡೆಗಣನೆ ಮಾಡುತ್ತೇವೆ. ಹಾಗೆ ಕಡೆಗಣನೆ ಮಾಡುವುದರಿಂದ ಅವುಗಳೇ ಬೆಳೆದುಕೊಂಡು ಬಂದು ದೊಡ್ಡದಾದ ಸಮಸ್ಯೆಗಳಾಗಿ ನಮ್ಮನ್ನು ಕಾಡತೊಡಗುತ್ತವೆ. ಆಗ ನಾವು ನಮಗೇ ಎಲ್ಲಾ ಕಷ್ಟಗಳೆಂದು ಕೊರಗುತ್ತೇವೆ. ಹಾಗಾಗಿ ಸಣ್ಣ ಸಮಸ್ಯೆಗಳನ್ನು ಆರಂಭದಲ್ಲೇ ಪರಿಹರಿಸಿಕೊಂಡು ಮುಂದೆ ಸಾಗುತ್ತಿದ್ದರೆ ಜೀವನದಲ್ಲಿ ನಮಗೆ ದೊಡ್ಡದಾದ ಸಮಸ್ಯೆಗಳು ಬರುವುದೇ ಇಲ್ಲ.

–ಗಿರೀಶ್ ಚಂದ್ರ ವೈ.ಆರ್.

ಸ್ನಾತಕೋತ್ತರ ವಿದ್ಯಾರ್ಥಿ (ಪತ್ರಿಕೋದ್ಯಮ ವಿಭಾಗ)

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.