ಗುರುವಾರ , ಜೂನ್ 4, 2020
27 °C

ಸಿನಿಮಾ ಋತು ನೂರೆಂಟು ನೆನಪು...

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಸಿನಿಮಾ ಋತು ನೂರೆಂಟು ನೆನಪು...

ಹನ್ನೆರಡು ವರ್ಷಗಳ ಹಿಂದೆ (2006ರಲ್ಲಿ) ಬೆಂಗಳೂರಿನಲ್ಲಿ ಮೊದಲ ಅಂತರರಾಷ್ಟ್ರೀಯ ಚಿತ್ರೋತ್ಸವ ಜರುಗಿದಾಗ ಅದರ ಆತಿಥ್ಯ ವಹಿಸಿದ್ದುದು ‘ಸುಚಿತ್ರ ಫಿಲ್ಮ್ ಸೊಸೈಟಿ'. ಸರ್ಕಾರದ ನೆರವಿನೊಂದಿಗೆ ನಡೆದ ಆ ಚಿತ್ರೋತ್ಸವವನ್ನು ‘ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ ಎಂದು ಕರೆಯಲಾಗಿತ್ತು. 2008ರಲ್ಲಿ ನಡೆದ ಎರಡನೇ ಚಿತ್ರೋತ್ಸವ ಕೂಡ ‘ಸುಚಿತ್ರ’ ಆಶ್ರಯದಲ್ಲೇ ನಡೆಯಿತು. ನಂತರ ಎರಡು ವರ್ಷಗಳ ಕಾಲ ಚಿತ್ರೋತ್ಸವ ಸ್ಥಗಿತಗೊಂಡಿತ್ತು. 2011ರಲ್ಲಿ ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ಪ್ರಾರಂಭಗೊಂಡಾಗ, ಚಿತ್ರೋತ್ಸವದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿತು. 2011ರಿಂದ ಇಲ್ಲಿಯವರೆಗೆ ಸತತವಾಗಿ ಅಕಾಡೆಮಿ ನೇತೃತ್ವದಲ್ಲೇ ಸಿನಿಮೋತ್ಸವ ನಡೆಯುತ್ತಿದೆ. ಈ ಮೂಲಕ ಉತ್ಸವದ ಪೂರ್ಣ ಹೊಣೆಗಾರಿಕೆ ಸರ್ಕಾರದ ಕೈಗೆ ಬಂದಂತಾಯಿತು.

2006ರಲ್ಲಿ ನಡೆದ ಸಿನಿಮಾಹಬ್ಬವನ್ನು ಮೊದಲನೇ ಚಿತ್ರೋತ್ಸವ ಎನ್ನುವುದಾದರೆ, ಅದಕ್ಕೂ ಮುನ್ನ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ಬೆಂಗಳೂರಿನಲ್ಲಿ ನಡೆದಿರಲಿಲ್ಲವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಮುನ್ನ ಕೂಡ ಜಾಗತಿಕ ಸಿನಿಮಾ ಹಬ್ಬಗಳು ಬೆಂಗಳೂರಿನಲ್ಲಿ ನಡೆದಿದ್ದವು. ಆದರೆ, ಅವೆಲ್ಲವೂ ಕೇಂದ್ರ ಸರ್ಕಾರ ಆಯೋಜಿಸುತ್ತಿದ್ದ ಉತ್ಸವಗಳು.

ಜಾಗತಿಕ ಚಿತ್ರೋತ್ಸವದ ಪರಿಕಲ್ಪನೆ ಭಾರತದಲ್ಲಿ ಶುರುವಾದುದು 1952ರಲ್ಲಿ. ಮೊದಲ ಚಿತ್ರೋತ್ಸವ ನಡೆದುದು ಬಾಂಬೆಯಲ್ಲಿ. ನಂತರದ ಆತಿಥ್ಯದ ಪಾಳಿ ದೆಹಲಿಯದು. ದೇಶದ ಎಲ್ಲ ಮೆಟ್ರೊ ನಗರಗಳಲ್ಲೂ ಚಿತ್ರೋತ್ಸವ ನಡೆಯಬೇಕು ಎನ್ನುವ ಚಿಂತನೆ ಶುರುವಾದ ನಂತರ, 1980ರಲ್ಲಿ ಮೊದಲ ಬಾರಿಗೆ ಚಿತ್ರೋತ್ಸವದ ಆತಿಥ್ಯ ವಹಿಸುವ ಅವಕಾಶ ಬೆಂಗಳೂರಿಗೆ ದೊರೆಯಿತು. ಈಗ ಇತಿಹಾಸದ ಪುಟ ಸೇರಿರುವ ಕಪಾಲಿ ಚಿತ್ರಮಂದಿರದಲ್ಲಿ ನಡೆದ ಚಿತ್ರೋತ್ಸವವನ್ನು ಪ್ರಸಿದ್ಧ ಅಭಿನೇತ್ರಿ ದೇವಿಕಾರಾಣಿ ಉದ್ಘಾಟಿಸಿದ್ದರು. ದೇವಿಕಾರಾಣಿ ಅವರ ಎಸ್ಟೇಟ್‍ನಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ ಎನ್ನುವ ಕಾರಣ ನೀಡಿ, ಅವರು ಚಿತ್ರೋತ್ಸವ ಉದ್ಘಾಟಿಸಬಾರದೆಂದು ಕಲಾವಿದರು ಹಾಗೂ ಸಾಹಿತಿಗಳು ಪ್ರತಿಭಟನೆ ನಡೆಸಿದ್ದರು. ಈ ಚಿತ್ರೋತ್ಸವ ಕರ್ನಾಟಕ ರಾಜಕಾರಣದಲ್ಲಿನ ಕ್ಷಿಪ್ರ ಬದಲಾವಣೆಗೂ ಸಾಕ್ಷಿಯಾಯಿತು. ಉದ್ಘಾಟನೆಯ ಸಮಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರೆ, ಸಮಾರೋಪದ ವೇಳೆಗೆ ಗುಂಡೂರಾವ್‍ ಮುಖ್ಯಮಂತ್ರಿಯಾಗಿದ್ದರು.

1992ರಲ್ಲಿ ಎಸ್‍. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಮತ್ತೊಮ್ಮೆ ಚಿತ್ರೋತ್ಸವ ನಡೆಸುವ ಗೌರವ ದೊರೆಯಿತು. 1996ರಲ್ಲಿ ಮತ್ತೊಮ್ಮೆ ಉತ್ಸವದ ಅವಕಾಶ ದೊರೆತರೂ, ಬರದ ಕಾರಣದಿಂದಾಗಿ ರದ್ದಾಯಿತು. ಅದಾದ ನಂತರ, ಚಿತ್ರೋತ್ಸವಕ್ಕೆ ಒಂದು ಶಾಶ್ವತ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಗೋವಾದಲ್ಲಿ ಪ್ರತಿವರ್ಷ ಸಿನಿಮಾಹಬ್ಬ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿತು.

ಕೇಂದ್ರ ಸರ್ಕಾರದ ಚಿತ್ರೋತ್ಸವ ಗೋವಾದಲ್ಲಿ ಸ್ಥಿರವಾದ ನಂತರ, ಕೆಲವು ರಾಜ್ಯಗಳು ತಾವೇ ಚಿತ್ರೋತ್ಸವಗಳನ್ನು ನಡೆಸಲು ಮುಂದಾದವು. ಪಶ್ಚಿಮಬಂಗಾಳ, ಕೇರಳ, ಮಹಾರಾಷ್ಟ್ರಗಳಲ್ಲಿ ಚಿತ್ರೋತ್ಸವಗಳು ಪ್ರಾರಂಭವಾದವು. ಈ ಪರಂಪರೆಯ ಕೊಂಡಿಯಾಗಿ 2006ರಲ್ಲಿ ‘ಸುಚಿತ್ರ’ ಮೂಲಕ ಬೆಂಗಳೂರಿನಲ್ಲಿ ಸಿನಿಮಾಹಬ್ಬ ಶುರುವಾಯಿತು.

ಸುಮಾರು 600 ಪ್ರತಿನಿಧಿಗಳು ಭಾಗವಹಿಸಿದ್ದ ಮೊದಲ ಚಿತ್ರೋತ್ಸವದಲ್ಲಿ, ನೂರಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಂಡಿದ್ದವು. 2006 ರಾಜಕುಮಾರ್‍ ನಿಧನರಾದ ವರ್ಷವೂ ಹೌದು. ಆ ಕಾರಣದಿಂದಾಗಿ ಚಿತ್ರೋತ್ಸವವನ್ನು ರಾಜ್‍ ಸ್ಮರಣೆಗೆ ಅರ್ಪಿಸಲಾಯಿತು. ಎರಡನೇ ಚಿತ್ರಋತುವಿನ ವೇಳೆಗೆ ಸಿನಿಮಾಗಳ ಸಂಖ್ಯೆ 140ಕ್ಕೂ ಹೆಚ್ಚಾಯಿತು.

2011ರಲ್ಲಿ ಚಿತ್ರೋತ್ಸವದ ಜವಾಬ್ದಾರಿಯನ್ನು ಚಲನಚಿತ್ರ ಅಕಾಡೆಮಿ ವಹಿಸಿಕೊಂಡಾಗ, ಸ್ವರೂಪವೂ ದೊಡ್ಡದಾಯಿತು. ‘ಪ್ರದರ್ಶನಕ್ಕೆಂದು ಬಂದಿದ್ದ ಚಿತ್ರಗಳ ರೀಲ್‍ಗಳನ್ನು ಎರಡು ಕೊಠಡಿಗಳಲ್ಲಿ ತುಂಬಲಾಗಿತ್ತು. 1.25 ಕೋಟಿ ರೂಪಾಯಿ ಬಜೆಟ್‍ನಲ್ಲಿ, 23 ಲಕ್ಷ ರೂಪಾಯಿ ಉಳಿಸಲಾಗಿತ್ತು’ ಎಂದು ಆಗ ಅಕಾಡೆಮಿ ರಿಜಿಸ್ಟ್ರಾರ್‍ ಆಗಿದ್ದ ಎನ್‍. ಜಗನ್ನಾಥ ಪ್ರಕಾಶ್‍ ನೆನಪಿಸಿಕೊಳ್ಳುತ್ತಾರೆ.

2011ರ ನಂತರ ಪ್ರತಿ ವರ್ಷವೂ ಚಿತ್ರೋತ್ಸವ ನಿಯಮಿತವಾಗಿ ನಡೆಯುತ್ತಿದೆ. ಆದರೆ, ನಿರ್ದಿಷ್ಟವಾದ ಕ್ಯಾಲೆಂಡರ್‍ ರೂಪಿಸಿಕೊಳ್ಳುವುದು ಅಕಾಡೆಮಿಗೆ ಇನ್ನೂ ಸಾಧ್ಯವಾಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನ ಜೊತೆಗೆ ಮೈಸೂರಿನಲ್ಲಿಯೂ ಸಿನಿಮಾಗಳ ಪ್ರದರ್ಶನ ನಡೆದಿತ್ತು. ಈ ವರ್ಷ ಬೆಂಗಳೂರಿಗಷ್ಟೇ ಪ್ರದರ್ಶನ ಸೀಮಿತವಾಗಿದೆ. ಹೀಗೆ ಸ್ಥಿತ್ಯಂತರಗಳಿದ್ದರೂ ಚಿತ್ರೋತ್ಸವದ ವರ್ಚಸ್ಸು ಕಡಿಮೆಯೇನಾಗಿಲ್ಲ.

ಆರಂಭದಲ್ಲಿ ಸಿನಿಮಾಗಳ ಸಂಖ್ಯೆ ಕಡಿಮೆಯಿದ್ದರೂ, ನಗರದ ವಿವಿಧ ಭಾಗಗಳಲ್ಲಿನ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ನಡೆಯುತ್ತಿದ್ದವು. ಈಗ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದ್ದು, ಒಂದೇ ಸ್ಥಳದಲ್ಲಿ (ಒರಾಯನ್‍ ಮಾಲ್‍) ಪ್ರದರ್ಶನಗಳು ನಡೆಯಲಿವೆ. ಈ ಬಾರಿ 12 ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳ ಸುಮಾರು 400 ಶೋಗಳು, 11 ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿವೆ ಎನ್ನುವುದು ಚಿತ್ರೋತ್ಸವದ ಬೆಳವಣಿಗೆಯನ್ನು ಸೂಚಿಸುವಂತಿದೆ.

**

ಶಿಕ್ಷಣದಲ್ಲಿ ಸಿನಿಮಾ, ಸಿನಿಮಾದಲ್ಲಿ ಶಿಕ್ಷಣ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೊದಲ ಅಧ್ಯಕ್ಷನಾಗಿ ಚಿತ್ರೋತ್ಸವವನ್ನು ಆರಂಭಿಸುವುದು ಬಹುದೊಡ್ಡ ಸವಾಲಾಗಿತ್ತು. ‘ಶಿಕ್ಷಣದಲ್ಲಿ ಸಿನಿಮಾ, ಸಿನಿಮಾದಲ್ಲಿ ಶಿಕ್ಷಣ’ ಎನ್ನುವ ಅಕಾಡೆಮಿಯ ಮೂಲ ಆಶಯವನ್ನು ಚಿತ್ರೋತ್ಸವದ ಮೂಲಕ ಸಾಕಾರಗೊಳಿಸುವುದು ಇನ್ನೊಂದು ಸವಾಲಾಗಿತ್ತು.

ಧಾರವಾಡ, ಶಿವಮೊಗ್ಗ, ಮಂಗಳೂರು, ಬೆಂಗಳೂರು ಮುಖ್ಯ ಕೇಂದ್ರಗಳನ್ನಾಗಿಸಿಕೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ‘ಡಿವಿಡಿ ಉತ್ಸವ’ ಚಿತ್ರೋತ್ಸವ ಮಾಡಿದೆವು. ಇದರ ಯಶಸ್ಸನ್ನು ಮುಂದಿಟ್ಟುಕೊಂಡು ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಸಲು ಸರ್ಕಾರವನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆವು. ಮೊದಲ ಎರಡು ವರ್ಷಗಳಲ್ಲೇ ಉತ್ಸವವನ್ನು ಸ್ಪರ್ಧಾತ್ಮಕ ಚಿತ್ರೋತ್ಸವವನ್ನಾಗಿ ರೂಪಿಸುವಲ್ಲಿ ಯಶಸ್ಸು ಪಡೆದವು. ಈ ಮೂಲಕ ಬೆಂಗಳೂರು ಸಿನಿಮೋತ್ಸವ ದೇಶದ ಪ್ರಮುಖ ಉತ್ಸವಗಳಲ್ಲಿ ಒಂದಾಗಿ ಗುರ್ತಿಸಿಕೊಳ್ಳಲು ಸಾಧ್ಯವಾಯಿತು.

-ಟಿ.ಎಸ್‍. ನಾಗಾಭರಣ, ಹಿರಿಯ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.