ಭಾನುವಾರ, ಜೂನ್ 7, 2020
30 °C
ಭಾರತ – ಕೆನಡಾ ಪ್ರಧಾನಿಗಳ ನಡುವೆ ದ್ವಿಪಕ್ಷೀಯ ಮಾತುಕತೆ l ಆರು ಒಪ್ಪಂದಗಳಿಗೆ ಸಹಿ

ಏಕತೆಗೆ ಧಕ್ಕೆ ತಂದರೆ ಸಹಿಸಲ್ಲ: ಮೋದಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕತೆಗೆ ಧಕ್ಕೆ ತಂದರೆ ಸಹಿಸಲ್ಲ: ಮೋದಿ ಎಚ್ಚರಿಕೆ

ನವದೆಹಲಿ: ಭಾರತದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಸವಾಲು ಒಡ್ಡುವ ಯಾವುದೇ ಶಕ್ತಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಜತೆ ಶುಕ್ರವಾರ ದ್ವಿಪಕ್ಷೀಯ ಮಾತುಕತೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜಕೀಯ ಉದ್ದೇಶ ಮತ್ತು ಪ್ರತ್ಯೇಕತೆಗಾಗಿ ಧರ್ಮದ ದುರ್ಬಳಕೆ ಮಾಡಿಕೊಳ್ಳುವ ಶಕ್ತಿಗಳಿಗೆ ಈ ದೇಶದಲ್ಲಿ ಸ್ಥಾನ ಇಲ್ಲ ಎಂದು ಖಂಡತುಂಡವಾಗಿ ಹೇಳಿದರು.

ಭಾರತ ಮತ್ತು ಕೆನಡಾದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಭಯೋತ್ಪಾದನೆ ಮತ್ತು ತೀವ್ರವಾದ ದೊಡ್ಡ ಸವಾಲಾಗಿವೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.

ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ಭಯೋತ್ಪಾದನೆಯ ವಿರುದ್ಧ ಎರಡೂ ರಾಷ್ಟ್ರಗಳು ಒಂದಾಗಿ ಹೋರಾಡುವ ಅಗತ್ಯವಿದೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಮತ್ತು ಟ್ರುಡೊ ಎರಡು ತಾಸು ಚರ್ಚೆ ನಡೆಸಿದರು. ಭಯೋತ್ಪಾದನೆ ನಿಗ್ರಹಕ್ಕಾಗಿ ಜಂಟಿ ಹೋರಾಟ ಈ ಮಾತುಕತೆಯ ಪ್ರಮುಖ ಭಾಗವಾಗಿತ್ತು.

ರಕ್ಷಣೆ, ಬಾಹ್ಯಾಕಾಶ, ಶಿಕ್ಷಣ, ಹವಾಮಾನ ವೈಪರೀತ್ಯ ತಡೆ, ವ್ಯಾಪಾರ, ಇಂಧನ ಮತ್ತು ನಾಗರಿಕ ಪರಮಾಣು ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ, ಮುಕ್ತ ವ್ಯಾಪಾರ ವಲಯ ಸೇರಿದಂತೆ ಒಟ್ಟು ಆರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಟ್ರುಡೊ ಭೇಟಿಯಾಗಿ ಮಾತುಕತೆ ನಡೆಸಿದರು.

***

ತಮ್ಮದೇ ಸಂಪ್ರದಾಯ ಮುರಿದ ಮೋದಿ!

ಭಾರತಕ್ಕೆ ಬಂದು ಐದು ದಿನಗಳ ಬಳಿಕ ಜಸ್ಟಿನ್‌ ಟ್ರುಡೊ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು.

ಟ್ರುಡೊ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಟ್ರುಡೊ ದಂಪತಿಯನ್ನು ಪ್ರಧಾನಿ ಮೋದಿ ಬರಮಾಡಿಕೊಂಡರು.

ಈ ಹಿಂದೆ ಭಾರತಕ್ಕೆ ಬಂದ ಅನೇಕ ನಾಯಕರನ್ನು ‌ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದ ಮೋದಿ, ಫೆ.17ರಂದು ಕುಟುಂಬದೊಂದಿಗೆ ಭಾರತಕ್ಕೆ ಬಂದಿಳಿದ ಟ್ರುಡೊ ವಿಷಯದಲ್ಲಿ ಆ ಸಂಪ್ರದಾಯ ಪಾಲಿಸಲಿಲ್ಲ.

ಈ ಮೊದಲು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು, ಜಪಾನ್ ಪ್ರಧಾನಿ ಶಿಂಜೊ ಅಬೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಖುದ್ದು ಪ್ರಧಾನಿಯೇ ಗುಜರಾತ್‌ಗೆ ಕರೆದೊಯ್ದಿದ್ದರು.

ಆದರೆ, ಟ್ರುಡೊ ತಮ್ಮ ಕುಟುಂಬದೊಂದಿಗೆ ಗುಜರಾತ್‌ ಭೇಟಿ ನೀಡಿದಾಗ ಮೋದಿ ಅವರ ಜತೆಗಿರಲಿಲ್ಲ.

ಟ್ರುಡೊ ತಮ್ಮ ಕುಟುಂಬದೊಂದಿಗೆ ತಾಜ್‌ಮಹಲ್‌, ಗುಜರಾತ್‌ ಸಾಬರಮತಿಯ ಗಾಂಧಿ ಆಶ್ರಮ, ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದರು. ಮುಂಬೈನಲ್ಲಿ ಬಾಲಿವುಡ್‌ ನಟರಾದ ಶಾರುಕ್‌ ಖಾನ್‌ ಮತ್ತು ಆಮೀರ್‌ ಖಾನ್‌ ಅವರನ್ನು ಭೇಟಿಯಾಗಿದ್ದಾರೆ.

***

ಖಲಿಸ್ತಾನದ ಕರಿ ನೆರಳು

ಕೆನಡಾ ಸರ್ಕಾರವು ಸಿಖ್ ಉಗ್ರವಾದಿ ಸಂಘಟನೆ ಖಲಿಸ್ತಾನದ ಪರ ಮೃದು ಧೋರಣೆ ಹೊಂದಿದ್ದಾರೆ ಎಂಬುದು ಅಲ್ಲಿನ ಪ್ರಧಾನಿ ಟ್ರುಡೊ ಭಾರತದ ಪ್ರವಾಸ ಸಂದರ್ಭದಲ್ಲಿ ಹಲವು ಬಾರಿ ಪ್ರಸ್ತಾಪ ಆಗಿದೆ. ಹಾಗಾಗಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.

ಮುಂಬೈ ಭೇಟಿಯ ವೇಳೆ ಟ್ರುಡೊ ಅವರ ಪತ್ನಿ ಸೋಫಿ ಟ್ರುಡೊ ಅವರು ಖಲಿಸ್ತಾನ ಉಗ್ರ ಜಸ್ಪಾಲ್‌ ಅತ್ವಾಲ್‌ ಅವರೊಂದಿಗೆ ಚಿತ್ರ ತೆಗೆಸಿಕೊಂಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

***

ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಬಹು ಸಂಸ್ಕೃತಿಯ ಸಿದ್ಧಾಂತ ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿಯುವ ಅಗತ್ಯವಿದೆ.

    –ಜಸ್ಟಿನ್ ಟ್ರುಡೊ, ಕೆನಡಾ ಪ್ರಧಾನಿ

***

ಭಾರತದಲ್ಲಿ ಸುತ್ತಾಡಿದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರಿಗೆ ಈ ದೇಶದ ವೈವಿಧ್ಯತೆ ಅನುಭವವಾಗಿರಬೇಕು.

 –ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.