ಕೋಳಿಗಳಿಗೆ ಆ್ಯಂಟಿಬಯೊಟಿಕ್‌ ಬಳಕೆ

7

ಕೋಳಿಗಳಿಗೆ ಆ್ಯಂಟಿಬಯೊಟಿಕ್‌ ಬಳಕೆ

Published:
Updated:
ಕೋಳಿಗಳಿಗೆ ಆ್ಯಂಟಿಬಯೊಟಿಕ್‌ ಬಳಕೆ

ಆ್ಯಂಟಿಬಯೊಟಿಕ್‍ಗಳು ಕೆಲಸ ಮಾಡದೇ ಇದ್ದುದರಿಂದ ಭಾರತದಲ್ಲಿ ಪ್ರತಿ ವರ್ಷ 58 ಸಾವಿರ ನವಜಾತ ಶಿಶುಗಳು ಸಾಯುತ್ತಿವೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿಗೆ ಚಾಚಿಕೊಂಡಂತಿರುವ ದೇವನಹಳ್ಳಿಯ ಸಮೀಪದ ಹಚ್ಚಹಸಿರಿನ ಆ ತೋಟದೊಳಗೆ ಕಾಲಿಟ್ಟಾಗ ಸಂಜೆ ಕೆಂಪಾಗಿತ್ತು. ಕಂಗೊಳಿಸುವ ತೋಟದ ಮಧ್ಯದಲ್ಲಿ ಸಾಕಷ್ಟು ದೊಡ್ಡದು ಎಂದು ಹೇಳಬಹುದಾದ ಕೋಳಿ ಫಾರಂ ಇದೆ. ಅದರ ಮಾಲೀಕ ನಗುನಗುತ್ತಲೇ ನಮ್ಮನ್ನು ಬರಮಾಡಿಕೊಂಡರು. ನಲವತ್ತರೊಳಗಿನ ಈ ವ್ಯಕ್ತಿ ಸುಮಾರು 15 ವರ್ಷಗಳಿಂದ ಕೋಳಿ ಫಾರಂ ನಡೆಸುತ್ತಿದ್ದಾರೆ.

ವಾರದ ಹಿಂದಷ್ಟೇ ಒಂದು ತಂಡವನ್ನು ಮಾಂಸಕ್ಕೆ ಕಳುಹಿಸಲಾಗಿತ್ತು. ಹಾಗಾಗಿ ಕೋಳಿಗಳು ಇರಲಿಲ್ಲ. ‘ಇನ್ನೊಂದು ವಾರ ಬಿಟ್ಟು ಮತ್ತೆ ಮರಿಗಳನ್ನು ಹಾಕಿಸಿಕೊಳ್ಳುತ್ತೇನೆ’ ಎಂದು ಅವರು ಬಹಳ ಸಂಭ್ರಮದಿಂದಲೇ ಹೇಳಿದರು. ಕಳೆದ ತಂಡ ಚೆನ್ನಾಗಿತ್ತು ಎಂಬುದು ಅವರ ಖುಷಿಗೆ ಕಾರಣ.

ಸುಮಾರು 40 ದಿನ ಸಾಕಿದ ಬಳಿಕ ಸಾಮಾನ್ಯವಾಗಿ ಒಂದು ಕೋಳಿ 1.8 ಕೆ.ಜಿ. ತೂಕ ಬರುತ್ತದೆ. ಆದರೆ ಅವರ ಕೋಳಿಗಳು ಈ ಬಾರಿ 2.3 ಕೆ.ಜಿ. ತೂಗುತ್ತಿದ್ದವು. ಹಾಗಾಗಿ ಈ ಸಲ ಅವರಿಗೆ ಎಂದಿಗಿಂತ ಸ್ವಲ್ಪ ಹೆಚ್ಚು ದುಡ್ಡು ಬಂದಿದೆ. ಇಂಟೆಗ್ರೇಷನ್‍ ಅಥವಾ ಗುತ್ತಿಗೆ ಪದ್ಧತಿಯಲ್ಲಿ ಅವರು ಕೋಳಿ ಸಾಕುತ್ತಾರೆ. ತೋಟದ ನಡುವಲ್ಲಿಯೇ ಕುಳಿತು ಕೋಳಿ ಸಾಕಾಣಿಕೆ ಮತ್ತು ಬೇಸಾಯದ ಕಷ್ಟ–ಸುಖಗಳ ಬಗ್ಗೆ ಅವರು ಮಾತನಾಡಿದರು.

ಕೋಳಿ ಮಾಂಸಕ್ಕೆ ಈಗ ಅಪಾರ ಬೇಡಿಕೆ ಇದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಸಾಕುವ ನಾಟಿ ಕೋಳಿಗಳನ್ನು ಇಟ್ಟುಕೊಂಡು ಈ ಬೇಡಿಕೆ ಪೂರೈಸುವುದು ಸಾಧ್ಯವೇ ಇಲ್ಲ. ಹಾಗಾಗಿಯೇ ಬೇಗ ಬೆಳೆಯುವ ಮತ್ತು ಹೆಚ್ಚು ಮಾಂಸ ಕೊಡುವ ‘ಕಮರ್ಷಿಯಲ್‍ ಬ್ರಾಯ್ಲರ್‍’ ಎಂಬ ಕೋಳಿ ತಳಿಯನ್ನು ಸೃಷ್ಟಿಸಲಾಗಿದೆ. ವಿಪರೀತ ಬೇಡಿಕೆಯಿಂದಾಗಿ ಬಹಳಷ್ಟು ರೈತರು ಬೇಸಾಯದ ಜತೆಗೆ ಕೋಳಿ ಫಾರಂ ಕೂಡ ನಡೆಸುತ್ತಿದ್ದಾರೆ. ಕೋಳಿ ಸಾಕಣೆ ಮತ್ತು ಮಾಂಸ ಮಾರಾಟ ದೊಡ್ಡ ಉದ್ಯಮವಾಗಿ ಬೆಳೆದಿರುವುದರಿಂದ ದೊಡ್ಡ ಸಂಖ್ಯೆಯ ಜನರಿಗೆ ಉದ್ಯೋಗ ದೊರೆತಿದೆ. ಬಹಳಷ್ಟು ಯುವ ಜನರಿಗೆ ಸ್ವ ಉದ್ಯೋಗ ಕಲ್ಪಿಸಿದೆ ಎಂಬ ವಿಚಾರಗಳು ಅವರ ಮಾತಿನ ಮಧ್ಯೆ ಹಾದು ಹೋದವು.

ಬಳಸಿದ ವಿವಿಧ ಔಷಧಗಳು ಮತ್ತು ಆ್ಯಂಟಿಬಯೊಟಿಕ್‍ಗಳ ಖಾಲಿ ಪ್ಯಾಕೆಟ್‍ಗಳು ಪಕ್ಕದಲ್ಲೇ ಇದ್ದ ಮಾವಿನ ಮರದ ಅಡಿಯಲ್ಲಿ ಬಿದ್ದಿದ್ದವು.

‘ಕೋಳಿ ಫಾರಂನಲ್ಲಿ ಯಾವ ಯಾವ ಔಷಧ ಬಳಸುತ್ತೀರಿ’ ಎಂಬ ಪ್ರಶ್ನೆಗೆ ಆ ಖಾಲಿ ಲಕೋಟೆಗಳು ಮತ್ತು ಬಾಟಲಿಗಳನ್ನು ಅವರು ಎತ್ತಿಕೊಟ್ಟರು. ‘ಹದಿಮೂರು ವರ್ಷಗಳಿಂದ ಫಾರಂ ನಡೆಸ್ತಾ ಇದ್ದೇನೆ, ಕಂಪನಿಯವರು ಕೊಟ್ಟ ಔಷಧ ಬಿಟ್ಟು ಬೇರೇನನ್ನೂ ಬಳಸಿಲ್ಲ. ಕಂಪನಿಯವರು ಹೇಳಿದಷ್ಟೇ ನಾವು ಮಾಡುತ್ತೇವೆ. ಇಲ್ಲಿಗೆ ಬರುವ ಕಂಪನಿಯ ಸೂಪರ್‌ವೈಸರ್‌ಗೂ ಇದು ಯಾವ ಔಷಧ ಎಂಬುದು ಗೊತ್ತಿರುವುದಿಲ್ಲ’ ಎಂದರು.

ಕೊಲೆಸ್ಟಿನ್‍ ಸಲ್ಫೇಟ್‍ ಎಂಬ ಆ್ಯಂಟಿಬಯೊಟಿಕ್‍ ಅನ್ನು ಕೋಳಿಗಳಿಗೆ ಯಾವುದೇ ವಿವೇಚನೆ ಇಲ್ಲದೆ ನೀಡಲಾಗುತ್ತದೆ ಎಂಬ ಬಗ್ಗೆ ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಘಟಕ (ದಿ ಬ್ಯೂರೊ ಆಫ್‍ ಇನ್‍ವೆಸ್ಟಿಗೇಟಿವ್‍ ಜರ್ನಲಿಸಂ- ಬಿಐಜೆ) ಇತ್ತೀಚೆಗೆ ಪ್ರಕಟಿಸಿದ ವರದಿಯ ಬಗ್ಗೆ ಅವರ ಗಮನ ಸೆಳೆದಾಗ, ಅಂತಹ ಆ್ಯಂಟಿಬಯೊಟಿಕ್‍ ಹೆಸರೇ ಕೇಳಿಲ್ಲ ಎಂದರು.

ಕೊಲೆಸ್ಟಿನ್‍ ಸಲ್ಫೇಟ್‍ ಅನ್ನು ಮನುಷ್ಯರಿಗೂ ಸೋಂಕು ನಿವಾರಣೆಗಾಗಿ ನೀಡಲಾಗುತ್ತದೆ. ಆದರೆ ಇದು ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೊಟಿಕ್‍ ಅಲ್ಲ. ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೊಟಿಕ್‍ಗಳಿಗೆ ಮನುಷ್ಯರಲ್ಲಿ ಪ್ರತಿರೋಧ ಬೆಳೆದು ಅವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದಾದಾಗ ಕೊಲೆಸ್ಟಿನ್‍ ಸಲ್ಫೇಟ್‍ ನೀಡುತ್ತಾರೆ.

ಆಸ್ಪತ್ರೆಗಳಿಂದ ಜನರಿಗೆ ತಗಲುವ ಸೋಂಕುಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳಿಗೆ ವಿಶೇಷವಾದ ಆ್ಯಂಟಿ ಬಯೊಟಿಕ್‍ಗಳೇ ಬೇಕು. ಆಸ್ಪತ್ರೆಗಳಲ್ಲಿ ವಿವಿಧ ಆ್ಯಂಟಿಬಯೊಟಿಕ್‍ಗಳನ್ನು ಬಳಸುವುದರಿಂದ ಈ ಬ್ಯಾಕ್ಟೀರಿಯಾಗಳು ಬಹಳಷ್ಟು ಆ್ಯಂಟಿಬಯೊಟಿಕ್‍ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುತ್ತವೆ. ಇಂತಹ ಸೋಂಕುಗಳಿಗೆ ಕೊಲೆಸ್ಟಿನ್‍ ಸಲ್ಫೇಟ್‍ನಂತಹ ಆ್ಯಂಟಿಬಯೊಟಿಕ್‍ಗಳನ್ನು ನೀಡಬೇಕಾಗುತ್ತದೆ ಎಂದು ಪ್ರಸಿದ್ಧ ಫಿಸಿಷಿಯನ್‍ ಡಾ. ಶ್ರೀನಿವಾಸ ಕಕ್ಕಿಲ್ಲಾಯ ವಿವರಿಸುತ್ತಾರೆ. ಆ್ಯಂಟಿಬಯೊಟಿಕ್‍ ಬಳಕೆಯ ಬಗ್ಗೆ ಕೋಳಿ ಸಾಕಣೆ ಉದ್ಯಮದಲ್ಲಿ ಗೊಂದಲ ಇದ್ದಂತೆ ಕಾಣಿಸುತ್ತದೆ.

‘ಜನರಿಗೆ ಒಳ್ಳೆಯ ಕೋಳಿ ಕೊಡಬೇಕು ಎಂಬುದೇ ನಮ್ಮ ಉದ್ದೇಶ. ಆ್ಯಂಟಿಬಯೊಟಿಕ್‍, ತೂಕ ಹೆಚ್ಚಿಸುವ ಔಷಧಗಳನ್ನು ಹಾಕಿ ಕೋಳಿ ಕೊಟ್ಟರೆ ಯಾರು ತೆಗೆದುಕೊಳ್ಳುತ್ತಾರೆ’ ಎಂದು ಡಾ. ನಲ್ಲಪ್ಪ ಪ್ರಶ್ನಿಸುತ್ತಾರೆ. ಅವರು ಜಗದೀಶ್‍ ಪೌಲ್ಟ್ರಿ ಫಾರಂ ಮಾಲೀಕ (ಇದು ಮರಿ ಮಾಡುವ ಮೊಟ್ಟೆ ಉತ್ಪಾದಿಸುವ ಕೇಂದ್ರ). ಜತೆಗೆ ಅವರು ಕರ್ನಾಟಕ ಪೌಲ್ಟ್ರಿ‌ ಫಾರ್ಮರ್ಸ್‍ ಎಂಡ್‍ ಬ್ರೀಡರ್ಸ್‍ ಅಸೋಸಿಯೇಷನ್‍ (ಕೆಪಿಎಫ್‍ಬಿಎ) ಕಾರ್ಯಕಾರಿ ಮಂಡಳಿ ಸದಸ್ಯ.

ಆ್ಯಂಟಿಬಯೊಟಿಕ್‍ ಬದಲಿಗೆ ಈಗ ಪ್ರೊಬಯೊಟಿಕ್‍ಗಳ ಬಳಕೆ ಹೆಚ್ಚಾಗಿದೆ. ಜೈವಿಕವಾಗಿಯೇ ತಯಾರಿಸಿದ ಆ್ಯಸಿಡಿಫೈರ್‌ಗಳನ್ನು ಬಳಸಲಾಗುತ್ತಿದೆ. ಈಗ ಕಂಪನಿಗಳು ಕೋಳಿ ಮಾಂಸವನ್ನು ಶೀಥಲೀಕರಿಸಿ (6 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ತಂಪಾಗಿರಿಸುವುದು) ಮಾರಾಟ ಮಾಡುತ್ತಿವೆ. ಈ ಕೋಳಿ ಮಾಂಸವನ್ನು ಪರೀಕ್ಷೆ ಮಾಡಿಯೇ ಮಾರುಕಟ್ಟೆಗೆ ಬಿಡಲಾಗುತ್ತದೆ. ಪ್ರತಿ ಕಂಪನಿಯೂ ತನ್ನ ಬ್ರ್ಯಾಂಡ್‍ ಮೌಲ್ಯದ ಬಗ್ಗೆ ಬಹಳ ಎಚ್ಚರಿಕೆ ಹೊಂದಿದೆ. ಅದಲ್ಲದೆ, ಆ್ಯಂಟಿಬಯೊಟಿಕ್‍ ಮತ್ತು ತೂಕ ಹೆಚ್ಚಿಸುವ ಔಷಧ ಬಳಸಿದ ಕೋಳಿ ಮಾಂಸವನ್ನು ಹೆಚ್ಚು ದಿನ ಇಡುವುದಕ್ಕೇ ಆಗುವುದಿಲ್ಲ, ಅದು ಕೆಟ್ಟು ಹೋಗುತ್ತದೆ ಎಂದು ನಲ್ಲಪ್ಪ ಹೇಳುತ್ತಾರೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ಕೇಂದ್ರೀಯ ಕೋಳಿ ತಳಿ ಅಭಿವೃದ್ಧಿ ಸಂಸ್ಥೆಯಲ್ಲಿ ಹಲವು ವರ್ಷ ಅವರು ವಿಜ್ಞಾನಿಯಾಗಿದ್ದವರು.

ಆ್ಯಂಟಿ ಬಯೊಟಿಕ್‍ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂಬುದನ್ನು ವೆಂಕಟೇಶ್ವರ ಹ್ಯಾಚರೀಸ್‍ ಪ್ರೈವೇಟ್‌ ಲಿಮಿಟೆಡ್‌ನ ಪ್ರಧಾನ ವ್ಯವಸ‍್ಥಾಪಕ ಮಂಜೇಶ್‍ ಕುಮಾರ್ ಜಾಧವ್ ‍ಒಪ್ಪುವುದಿಲ್ಲ. ಕೊಲೆಸ್ಟಿನ್ ಸೇರಿ ಇತರ ಆ್ಯಂಟಿಬಯೊಟಿಕ್‍ಗಳ ಬಳಕೆ ಇದೆ. ಆದರೆ ಅದು ರೋಗ ಬಂದ ಕೋಳಿಗಳ ಚಿಕಿತ್ಸೆಗೆ ಮಾತ್ರ. ಪಶು ವೈದ್ಯರ ಶಿಫಾರಸಿನ ಅನುಸಾರ ಮಾತ್ರ ಇವುಗಳನ್ನು ನೀಡಲಾಗುತ್ತದೆ. ಅಮೆರಿಕ, ಇಂಗ್ಲೆಂಡ್‍ಗಳಿಗೆ ಹೋಲಿಸಿದರೆ ನಮ್ಮಲ್ಲಿ ಇದರ ಬಳಕೆ ಕಮ್ಮಿ ಇದೆ. ಕೋಳಿಯನ್ನು ಮಾಂಸಕ್ಕಾಗಿ ಒಯ್ಯುವುದಕ್ಕೆ ಐದು ದಿನಗಳ ಮೊದಲೇ ಆ್ಯಂಟಿಬಯೊಟಿಕ್‍ ಬಳಕೆಯನ್ನು ನಿಲ್ಲಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ. ವೆಂಕೋಬ್‍ ಹೆಸರಿನಲ್ಲಿ ಕೋಳಿ ಮಾರಾಟ ಮಾಡುತ್ತಿರುವ ವೆಂಕಟೇಶ್ವರ ಹ್ಯಾಚರೀಸ್‍ ಈ ಉದ್ಯಮದ ಪ್ರಮುಖ ಕಂಪನಿಗಳಲ್ಲಿ ಒಂದು.

ಸರ್ಕಾರವು ಅನುಮತಿ ಕೊಟ್ಟಿರುವ ಆ್ಯಂಟಿಬಯೊಟಿಕ್‍ಗಳು ಮಾತ್ರ ಕೋಳಿ ಸಾಕಾಣಿಕೆಯಲ್ಲಿ ಬಳಕೆ ಆಗುತ್ತಿವೆ. ಇಲ್ಲಿ ಕಾನೂನು ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಎಂದು ಜಾಧವ್‍ ಖಡಾಖಂಡಿತವಾಗಿ ಹೇಳಿದರು.

ಆದರೆ, ಪಶು ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಡಾ. ವೆಂಕಟರೆಡ್ಡಿ ಅವರು ಭಿನ್ನವಾದ ಅಭಿಪ್ರಾಯ ಹೊಂದಿದ್ದಾರೆ. ಔಷಧಗಳು ಮತ್ತು ಆ್ಯಂಟಿಬಯೊಟಿಕ್‍ಗಳ ವ್ಯಾಪಕ ಬಳಕೆ ಇದೆ; ಪ್ರತಿ ಔಷಧ ನೀಡಿಕೆಯನ್ನು ಯಾವಾಗ ನಿಲ್ಲಿಸಬೇಕು ಎಂಬುದಕ್ಕೆ ನಿಯಮಗಳಿವೆ. ಆದರೆ ಆ ನಿಯಮಗಳ ಪ್ರಕಾರ ಯಾರೂ ನಡೆದುಕೊಳ್ಳುತ್ತಿಲ್ಲ. ಬೆಳೆದ ಕೋಳಿಗಳನ್ನು ರಾತ್ರಿ ಹೊತ್ತು ಲಾರಿಗೆ ಹೇರಿ ಒಯ್ಯುತ್ತಾರೆ. ಕೊನೆಯ ಕ್ಷಣದವರೆಗೆ ಔಷಧ ನೀಡಲಾಗುತ್ತದೆ. ಹಾಗಾಗಿ ಕೋಳಿ ಮಾಂಸದಲ್ಲಿ ಆ್ಯಂಟಿಬಯೊಟಿಕ್‍ಗಳ ಅಂಶ ಇದ್ದೇ ಇರುತ್ತದೆ. ಅದು ತಿನ್ನುವವರ ದೇಹಕ್ಕೆ ನೇರವಾಗಿ ಸೇರುತ್ತದೆ. ಕೋಳಿ ಮಾಂಸದಲ್ಲಿ ಆ್ಯಂಟಿಬಯೊಟಿಕ್‍ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ಈವರೆಗೆ ಸರಿಯಾದ ಅಧ್ಯಯನವೇ ನಡೆದಿಲ್ಲ ಎಂದು ವೆಂಕಟರೆಡ್ಡಿ ಹೇಳುತ್ತಾರೆ.

ಪಶು ಔಷಧ ಅಂಗಡಿಗಳಲ್ಲಿ ಕೊಲೆಸ್ಟಿನ್‍ ಸಲ್ಫೇಟ್‍ ಯಾರಿಗೆ ಬೇಕಿದ್ದರೂ ದೊರೆಯುತ್ತದೆ ಎಂಬುದು ಬಿಐಜೆ ವರದಿಯಲ್ಲಿತ್ತು. ಅದನ್ನು ದೃಢಪಡಿಸುವುದಕ್ಕಾಗಿಯೇ ನಾವು ಪಶು ಔಷಧ ಅಂಗಡಿಯಿಂದ ಕೊಲೆಸ್ಟಿನ್‍ ಸಲ್ಫೇಟ್‍ ಖರೀದಿಸಲು ನಡೆಸಿದ ಪ್ರಯತ್ನ ಯಶಸ್ವಿಯಾಯಿತು. ನಮ್ಮಲ್ಲಿ ಪಶು ವೈದ್ಯರು ಅಥವಾ ಇತರ ಯಾವುದೇ ವೈದ್ಯರು ಕೊಟ್ಟ  ಪ್ರಿಸ್ಕ್ರಿಪ್ಶನ್‌ ಇರಲಿಲ್ಲ.

ಕೋಳಿ ಸಾಕಣೆಯಲ್ಲಿ ಕೊಲೆಸ್ಟಿನ್‍ ಸಲ್ಫೇಟ್‍ ಬಳಕೆ ಆಗುತ್ತಿದೆ ಎಂಬುದನ್ನು ಸರ್ಕಾರಿ ಪಶು ವೈದ್ಯ ಶಾಲೆಯ ವೈದ್ಯರೊಬ್ಬರು ಕೂಡ ತಿಳಿಸಿದರು. ಕಾಕ್ಸಿಡಿಯೋಸಿಸ್‍ ಮತ್ತು ಶ್ವಾಸಕೋಶದ ತೊಂದರೆಗಳಿಗೆ (ಸಿಆರ್‌ಡಿ ಎಂದು ಕರೆಯುತ್ತಾರೆ) ಕೊಲೆಸ್ಟಿನ್‍ ಸಲ್ಫೇಟ್‍ ಅನ್ನು ನೀಡುವುದು ಸಾಮಾನ್ಯ ಪದ್ಧತಿ ಎಂದು ಅವರು ಮಾಹಿತಿ ಕೊಟ್ಟರು. ಆದರೆ ಮನುಷ್ಯರಿಗೆ ಕೊಲೆಸ್ಟಿನ್‍ ಸಲ್ಫೇಟ್‍ ಕೊಡಲಾಗುತ್ತದೆ ಎಂಬ ಬಗ್ಗೆ ಅವರಿಗೆ ಮಾಹಿತಿಯೇ ಇಲ್ಲ. ಅಷ್ಟೇ ಅಲ್ಲ, ಇದೊಂದು ‘ಮೀಸಲು ಆ್ಯಂಟಿಬಯೊಟಿಕ್‍’ ಎಂಬುದು ತಪ್ಪು ಎಂದು ಅವರು ಹೇಳುತ್ತಾರೆ.

ಆ್ಯಂಟಿಬಯೊಟಿಕ್‍ಗಳ ವಿವೇಚನಾರಹಿತ ಬಳಕೆಯ ಬಗ್ಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಆಕ್ರೋಶವನ್ನೇ ವ್ಯಕ್ತಪಡಿಸುತ್ತಾರೆ.

‘ಚೆನ್ನೈಯಲ್ಲಿ 2013ರಲ್ಲಿ ನಡೆದ ವೈದ್ಯರ ಸಮಾವೇಶದಲ್ಲಿ ಆ್ಯಂಟಿಬಯೊಟಿಕ್‍ಗಳ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಚರ್ಚೆ ನಡೆದು ‘ಚೆನ್ನೈ ಘೋಷಣೆ’ ಹೊರಡಿಸಲಾಗಿತ್ತು. ಈ ಶಿಫಾರಸುಗಳ ಆಧಾರದಲ್ಲಿ ಆ್ಯಂಟಿಬಯೊಟಿಕ್‍ಗಳನ್ನು ಷೆಡ್ಯೂಲ್‍ ಎಚ್‍-1 ಔಷಧ ಎಂದು ಪರಿಗಣಿಸಲು ಸರ್ಕಾರ ನಿರ್ಧರಿಸಿತ್ತು. ಷೆಡ್ಯೂಲ್‍ ಎಚ್‍-1 ಪಟ್ಟಿಯಲ್ಲಿ ಇರುವ ಯಾವುದೇ ಔಷಧ ಕೊಡುವಾಗ ಔಷಧ ಅಂಗಡಿಯವರು ಆ ಔಷಧ ಶಿಫಾರಸು ಮಾಡಿದ ವೈದ್ಯರ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬೇಕು. ಎಷ್ಟು ಔಷಧ ಅಂಗಡಿಗೆ ಬಂದಿದೆ ಮತ್ತು ಯಾರ ಶಿಫಾರಸಿನ ಮೇರೆಗೆ ಅದನ್ನು ಯಾರಿಗೆ ಕೊಡಲಾಗಿದೆ ಎಂಬ ದಾಖಲೆ ನಿರ್ವಹಿಸಬೇಕು. ಆದರೆ ಈವರೆಗೆ ಯಾವೊಬ್ಬ ರೋಗಿಯೂ ನನ್ನ ನೋಂದಣಿ ಸಂಖ್ಯೆಯನ್ನು ಬರೆಸಿಕೊಂಡು ಹೋಗಿಲ್ಲ’ ಎಂದು ಔಷಧ ನಿಯಂತ್ರಣದಲ್ಲಿನ ಲೋಪಗಳತ್ತ ಕಕ್ಕಿಲ್ಲಾಯ ಬೆಳಕು ಚೆಲ್ಲುತ್ತಾರೆ.

ಕರ್ನಾಟಕ ವೈದ್ಯಕೀಯ ಕೇಂದ್ರಗಳ ಕಾಯ್ದೆ (ಕೆಪಿಎಂಎ) ಬಗ್ಗೆ ನಡೆದ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದ ಔಷಧ ನಿಯಂತ್ರಣ ಇಲಾಖೆಯ ಮಾಜಿ ಮುಖ್ಯಸ್ಥರೊಬ್ಬರು ‘ಷೆಡ್ಯೂಲ್‍ ಎಚ್‍’ ಎಂದರೆ ಏನೆಂದು ತಮ್ಮಲ್ಲಿ ಕೇಳಿದ್ದರು ಎಂಬುದನ್ನು ಅವರು ನೆನಪಿಸಿಕೊಳ್ಳುವ ಮೂಲಕ ಔಷಧ ನಿಯಂತ್ರಣದ ಬಗ್ಗೆ ಇರುವ ಅಸಡ್ಡೆಯನ್ನು ಬಿಡಿಸಿಡುತ್ತಾರೆ.

ಮನುಷ್ಯರಿಗೆ ಕೊಡುವ ಯಾವುದೇ ಆ್ಯಂಟಿಬಯೊಟಿಕ್‍ಗಳನ್ನು ಪ್ರಾಣಿ-ಪಕ್ಷಿಗಳಿಗೆ ನೀಡಬಾರದು ಎಂದು ಅಂತರರಾಷ್ಟ್ರೀಯ ಮಟ್ಟದ ಹಲವು ಆರೋಗ್ಯ ಸಂಘಟನೆಗಳು ಶಿಫಾರಸು ಮಾಡಿವೆ. ಈ ಶಿಫಾರಸುಗಳ ಬಗ್ಗೆಯೂ ದೊಡ್ಡ ನಿರ್ಲಕ್ಷ್ಯವಷ್ಟೇ ನಮ್ಮಲ್ಲಿ ಇದೆ ಎಂದು ಅವರು ಹೇಳುತ್ತಾರೆ.

ಕೋಳಿ ಫಾರಂಗಳಲ್ಲಿ ಕೋಳಿಗಳಿಗೆ ಸಾಮಾನ್ಯವಾಗಿ ನೀಡುವ ಆ್ಯಂಟಿಬಯೊಟಿಕ್‍ಗಳಲ್ಲಿ ಲಿವೊಫ್ಲೊಕ್ಸಸಿನ್‍, ಜೆಂಟಾಮೈಸಿನ್‍ ಸಲ್ಫೇಟ್‍, ಸಲ್ಫಾಕ್ವಿನಾಕ್ಸಲಿನ್‍ ಮತ್ತು ಟೈಲೊಸಿನ್‍ ಟಾರ್ಟ್ರೇಟ್‍ ಸೇರಿವೆ. ಇವುಗಳ ಪೈಕಿ ಲಿವೊಫ್ಲೊಕ್ಸಸಿನ್‍ ಮತ್ತು ಜೆಂಟಾಮೈಸಿನ್‍ಗಳನ್ನು ಮನುಷ್ಯರಿಗೂ ನೀಡಲಾಗುತ್ತದೆ.

ಕೋಳಿ ಅಥವಾ ಇತರ ಸಾಕು ಪ್ರಾಣಿಗಳಿಗೆ ಆ್ಯಂಟಿಬಯೊಟಿಕ್‍ ನೀಡುವುದರ ಬಗ್ಗೆ ಕೋಳಿ ಸಾಕುವವರಲ್ಲಿ ಸರಿಯಾದ ತಿಳಿವಳಿಕೆ ಇಲ್ಲ. ಪಶು ವೈದ್ಯರಲ್ಲಿ ಬಹಳಷ್ಟು ಮಂದಿಗೆ ನಿಖರ ಮಾಹಿತಿ ಇಲ್ಲ. ಕೋಳಿ ಮಾಂಸ ತಿನ್ನುವ ಜನರಲ್ಲಿ ಹಲವು ಅನುಮಾನಗಳಿವೆ. ಕೋಳಿ ಸಾಕಣೆಯಲ್ಲಿ ಆ್ಯಂಟಿಬಯೊಟಿಕ್‍ ಬಳಕೆಯೇ ಇಲ್ಲ ಎಂದು ಆಲ್‍ ಇಂಡಿಯಾ ಪೌಲ್ಟ್ರಿ ಡೆವಲಪ್‍ಮೆಂಟ್‍ ಎಂಡ್‍ ಸರ್ವಿಸಸ್‍ ಪ್ರೈ. ಲಿ. ಇತ್ತೀಚೆಗೆ ಜಾಹೀರಾತು ನೀಡಿತ್ತು. ಸೆಂಟರ್ ಫಾರ್ ಸೈನ್ಸ್‌ ಎಂಡ್‍ ಎನ್‍ವಿರಾನ್‍ಮೆಂಟ್‍ (ಸಿಎಸ್‍ಇ) 2014ರಲ್ಲಿ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ ಈ ಜಾಹೀರಾತು ನೀಡಲಾಗಿದೆ. ಆದರೆ ಈ ಜಾಹೀರಾತಿಗೆ ಸಿಎಸ್‍ಇ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೋಳಿ ಸಾಕಣೆಯಲ್ಲಿ ಆ್ಯಂಟಿಬಯೊಟಿಕ್‍ ಬಳಕೆ ವ್ಯಾಪಕವಾಗಿದೆ ಎಂದು ಆರೋಪಿಸಿದೆ.

ಮನುಷ್ಯರಲ್ಲಿ ಆ್ಯಂಟಿಯಬಯೊಟಿಕ್‍ಗಳಿಗೆ ಪ್ರತಿರೋಧ ಬೆಳೆಯುತ್ತಿರುವುದು ಜಾಗತಿಕವಾದ ಸಮಸ್ಯೆ ಎಂದು ವರದಿಗಳು ಹೇಳುತ್ತಿವೆ. ಈ ರೀತಿಯ ಪ್ರತಿರೋಧ ಬೆಳೆದಿದ್ದರಿಂದಾಗಿ ಪ್ರತಿ ವರ್ಷ ಜಗತ್ತಿನಲ್ಲಿ ಏಳು ಲಕ್ಷ ಜನ ಸಾಯುತ್ತಿದ್ದಾರೆ. 2050ರ ಹೊತ್ತಿಗೆ ಈ ಸಂಖ್ಯೆ ಒಂದು ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಆ್ಯಂಟಿಬಯೊಟಿಕ್‍ಗಳು ಕೆಲಸ ಮಾಡದೇ ಇದ್ದುದರಿಂದ ಭಾರತದಲ್ಲಿ ಪ್ರತಿವರ್ಷ 58 ಸಾವಿರ ನವಜಾತ ಶಿಶುಗಳು ಸಾಯುತ್ತಿವೆ ಎಂದು ಅಂದಾಜಿಸಲಾಗಿದೆ.

ಕೋಳಿ ಸಾಕಣೆ ಉದ್ಯಮವು ಇಂತಹ ಔಷಧಗಳ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದೆ. ಆದರೆ, ಆ್ಯಂಟಿಬಯೊಟಿಕ್‍ ಬಳಕೆಯ ಬಗ್ಗೆ ಭಾರತದಲ್ಲಿ ಸ್ಪಷ್ಟವಾದ ಕಾನೂನು ಅಥವಾ ನಿರ್ಬಂಧಗಳು ಇಲ್ಲ. ಹಾಗಾಗಿ ಕೋಳಿ ಸಾಕಣೆ ಅಥವಾ ಪ್ರಾಣಿಗಳಿಗೆ ಆ್ಯಂಟಿಬಯೊಟಿಕ್‍ ನೀಡುವುದು ಅಪರಾಧ ಅಲ್ಲ. ಆ್ಯಂಟಿಬಯೊಟಿಕ್‍ ಬಳಕೆಯ ಬಗ್ಗೆ ಸರ್ಕಾರ ಕಾನೂನು ರೂಪಿಸಬೇಕು ಎಂದು ತಜ್ಞರು ಆಗ್ರಹಿಸುತ್ತಿದ್ದಾರೆ.

ಪ್ರತಿರೋಧ ಹರಡುವಿಕೆ ಹೇಗೆ?

ಆ್ಯಂಟಿಬಯೊಟಿಕ್‍ಗಳ ಬಳಕೆ ಹೆಚ್ಚಾದಂತೆ ಬ್ಯಾಕ್ಟೀರಿಯಾಗಳಲ್ಲಿ ಅದಕ್ಕೆ ಪ್ರತಿರೋಧ ಶಕ್ತಿಯೂ ಹೆಚ್ಚುತ್ತಾ ಹೋಗುತ್ತದೆ. ಇಂತಹ ಸೋಂಕುಗಳನ್ನು ನಿರ್ವಹಿಸುವುದಕ್ಕಾಗಿಯೇ ಕೆಲವು ಆ್ಯಂಟಿಬಯೊಟಿಕ್‍ಗಳನ್ನು ‘ಮೀಸಲು ಆ್ಯಂಟಿಬಯೊಟಿಕ್‍’ ಎಂದು ಇರಿಸಲಾಗಿರುತ್ತದೆ.

ಕೋಳಿ ಫಾರಂಗಳಲ್ಲಿ ಕೊಲೆಸ್ಟಿನ್‍ ಸಲ್ಫೇಟ್‍ ಬಳಸುತ್ತಾರೆ ಎಂದಾದರೆ ಸುತ್ತಲಿನ ಪರಿಸರದಲ್ಲಿನ ಬ್ಯಾಕ್ಟೀರಿಯಾಗಳು ಇದಕ್ಕೆ ಪ್ರತಿರೋಧ ಬೆಳೆಸಿಕೊಳ್ಳುತ್ತವೆ. ಕೋಳಿ ಮಾಂಸದ ಮೂಲಕ ಮಾತ್ರವಲ್ಲ, ಗಾಳಿ ಮತ್ತು ಕೋಳಿ ಗೊಬ್ಬರದ ಮೂಲಕವೂ ಇದು ಪರಿಸರವನ್ನು ಸೇರುವ ಸಾಧ್ಯತೆ ಇದೆ.

ನಾಟಿ ಕೋಳಿ ಫಾರಂ

ನಾಟಿ ಕೋಳಿ ಮಾಂಸಕ್ಕೆ ಇತ್ತೀಚೆಗೆ ಹೆಚ್ಚು ಬೇಡಿಕೆ ಬಂದಿದೆ. ಬ್ರಾಯ್ಲರ್ ಕೋಳಿಗಳಿಗೆ ವಿವಿಧ ಔಷಧಗಳನ್ನು ಬಳಸುತ್ತಾರೆ ಎಂಬ ಅನುಮಾನ ಜನರಲ್ಲಿ ಇರುವುದು ಇದಕ್ಕೆ ಒಂದು ಕಾರಣ.

ಬ್ರಾಯ್ಲರ್ ಕೋಳಿ ಕೆ.ಜಿ.ಗೆ ₹70ರಿಂದ ₹80 ಇದ್ದರೆ ನಾಟಿಕೋಳಿಗೆ ₹330ರಿಂದ ₹350 ದರ ಇದೆ. ಹಾಗಾಗಿ ನಾಟಿ ಕೋಳಿ ಬೆಳೆಸುವ ಪದ್ಧತಿ ಈಗ ಆರಂಭ ಆಗಿದೆ. ಬ್ರಾಯ್ಲರ್ ಫಾರಂಗಳ ರೀತಿಯಲ್ಲಿಯೇ 500-1000 ಕೋಳಿಗಳನ್ನು ಒಟ್ಟಾಗಿ ಬೆಳೆಸುವ ಪರಿಪಾಟ ಇದೆ. ಒಂದೇ ಕಡೆ ದೊಡ್ಡ ಸಂಖ್ಯೆಯಲ್ಲಿ ಕೋಳಿಗಳು ಇರುವುದರಿಂದ ಇವುಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚು. ಅದನ್ನು ನಿಯಂತ್ರಿಸುವುದಕ್ಕಾಗಿ ಬ್ರಾಯ್ಲರ್ ಕೋಳಿಗಳಿಗೆ ನೀಡುವ ಆ್ಯಂಟಿಬಯೊಟಿಕ್‍ಗಳನ್ನು ನಾಟಿ ಕೋಳಿಗಳಿಗೂ ಅಲ್ಲಲ್ಲಿ ನೀಡಲಾಗುತ್ತಿದೆ.

ಇಂಟೆಗ್ರೇಷನ್‍ ಪದ್ಧತಿ

ಈ ಪದ್ಧತಿಯಲ್ಲಿ ಕೋಳಿ ಶೆಡ್‍ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಫಾರಂ ಮಾಲೀಕರು ನೋಡಿಕೊಳ್ಳಬೇಕು. ಅವರಿಗೆ ಕೋಳಿ ಮರಿ, ಅದರ ಆಹಾರ, ಔಷಧ ಎಲ್ಲವನ್ನೂ ಕೋಳಿ ಮಾರಾಟ ಕಂಪನಿಗಳೇ ಒದಗಿಸುತ್ತವೆ. ಬೆಳೆದ ಕೋಳಿಯನ್ನು ಕಂಪನಿಗಳೇ ಖರೀದಿ ಮಾಡಿ ಹಣ ನೀಡುತ್ತವೆ. ಶೇಕಡ 90ಕ್ಕಿಂತ ಹೆಚ್ಚಿನ ಕೋಳಿ ಸಾಕಾಣಿಕೆ ಈಗ ಗುತ್ತಿಗೆ ಪದ್ಧತಿ ಮೂಲಕವೇ ನಡೆಯುತ್ತವೆ.

ವೆಂಕಟೇಶ್ವರ ಹ್ಯಾಚರೀಸ್‍ ಪ್ರೈ.ಲಿ., ಸುಗುಣ ಚಿಕನ್‍, ಸಿಪಿ ಫೀಡ್ಸ್, ಶ್ರೇಯಾ ಮುಂತಾದವುಗಳು ಗುತ್ತಿಗೆ ಪದ್ಧತಿಯಲ್ಲಿ ಕೋಳಿ ಸಾಕಾಣಿಕೆ ಮಾಡಿಸುವ ಪ್ರಮುಖ ಕಂಪನಿಗಳು.

ಜಾಗತಿಕ ವಿಪತ್ತು

ಬ್ಯಾಕ್ಟೀರಿಯಾಗಳಲ್ಲಿ ಪ್ರತಿರೋಧ ಶಕ್ತಿ ಏರಿಕೆಯಾಗುತ್ತಿರುವುದನ್ನು ಜಾಗತಿಕ ವಿಪತ್ತು ಎಂದೇ ಪರಿಗಣಿಸಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಾಗತಿಕ ಕ್ರಿಯಾ ಯೋಜನೆಯೊಂದನ್ನು 2015ರಲ್ಲಿ ಸಿದ್ಧಪಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ, ಆಹಾರ ಮತ್ತು ಕೃಷಿ ಸಂಘಟನೆ ಹಾಗೂ ವಿಶ್ವ ಪ್ರಾಣಿ ಆರೋಗ್ಯ ಸಂಘಟನೆಗಳು ಜತೆಯಾಗಿ ಇದನ್ನು ಸಿದ್ಧಪಡಿಸಿವೆ.

ಇದೇ ರೀತಿಯ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಭಾರತ ಸರ್ಕಾರದ 13 ಸಚಿವಾಲಯಗಳು ಜತೆಯಾಗಿ 2017ರಲ್ಲಿ ರೂಪಿಸಿವೆ. ಮಾನವ ಆರೋಗ್ಯ, ಪಶು ಸಂಗೋಪನೆ, ಕೃಷಿ ಮತ್ತು ಪರಿಸರವನ್ನು ಕೇಂದ್ರೀಕರಿಸಿ ಈ ಯೋಜನೆ ರೂಪಿಸಲಾಗಿದೆ.

ಆಹಾರಕ್ಕಾಗಿ ಬೆಳೆಸುವ ಪ್ರಾಣಿಗಳು, ಕೃಷಿ ಮತ್ತ ಪರಿಸರ ಕ್ಷೇತ್ರದ ವೃತ್ತಿಪರ ಕೋರ್ಸ್‍ಗಳ ಪಠ್ಯಕ್ರಮವನ್ನು ಪರಿಷ್ಕರಿಸಿ ಅದರಲ್ಲಿ ಬ್ಯಾಕ್ಟೀರಿಯಾಗಳ ಪ್ರತಿರೋಧ ಶಕ್ತಿ ಏರಿಕೆ ವಿಷಯವನ್ನು ಸೇರ್ಪಡೆ ಮಾಡುವುದು ಭಾರತದ ಕ್ರಿಯಾ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದು.

ಪಶು ಮತ್ತು ಕೋಳಿ ಆಹಾರದಲ್ಲಿ ಆ್ಯಂಟಿಬಯೊಟಿಕ್ ಬಳಕೆಯನ್ನು ನಿಯಂತ್ರಿಸುವುದು, ಆಮದು, ನೇರ ವಿತರಣೆ ಮತ್ತು ಆನ್‍ಲೈನ್‍ ಮಾರಾಟಕ್ಕೆ ಕಡಿವಾಣ ಹಾಕುವುದು ಕ್ರಿಯಾ ಯೋಜನೆ ಇನ್ನೊಂದು ಅಂಶ. ಮನುಷ್ಯರಿಗೆ ಬಹಳ ಮುಖ್ಯವಾದ ಆ್ಯಂಟಿಬಯೊಟಿಕ್‍ಗಳನ್ನು ಪ್ರಾಣಿ-ಪಕ್ಷಿಗಳಿಗೆ ನೀಡುವುದನ್ನು ಸಂಪೂರ್ಣ ನಿಲ್ಲಿಸುವುದೂ ಇದರಲ್ಲಿ ಸೇರಿದೆ.

ಮಾಂಸಕ್ಕೆ ಕೋಳಿ ಬಳಕೆ(ತೂಕ ಕೆ.ಜಿಗಳಲ್ಲಿ)

32 ಕೋಟಿ – ಭಾರತದಲ್ಲಿ ತಿಂಗಳಲ್ಲಿ ಬಳಕೆ

5.33 ಕೋಟಿ –ಕರ್ನಾಟಕದಲ್ಲಿ ತಿಂಗಳಲ್ಲಿ ಬಳಕೆ

1.20 ಕೋಟಿ– ತಿಂಗಳಲ್ಲಿ ಬೆಂಗಳೂರಲ್ಲಿ ಬಳಕೆಯಾಗುವ ಮಾಂಸ

*

ಹಿಂದೆಲ್ಲ ಆ್ಯಂಟಿಬಯೊಟಿಕ್‍ ಬಳಸುತ್ತಿದ್ದೆವು. ಆದರೆ ಈಗ ಜಾಗೃತಿ ಮೂಡಿದೆ. ಹಾಗಾಗಿ ಆ್ಯಂಟಿಬಯೊಟಿಕ್‍ ಮತ್ತು ತೂಕ ಹೆಚ್ಚಿಸುವ ಔಷಧಗಳ ತಯಾರಿಕೆಯನ್ನೇ ನಿಲ್ಲಿಸಿ ಬಿಡಿ ಎಂದು ಸರ್ಕಾರಕ್ಕೆ ನಾವು ಮನವಿ ಕೊಡಲು ನಿರ್ಧರಿಸಿದ್ದೇವೆ.

–ಡಾ. ನಲ್ಲಪ್ಪ, ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್‍ ಎಂಡ್‍ ಬ್ರೀಡರ್ಸ್‍ ಅಸೋಸಿಯೇಷನ್‍ ಕಾರ್ಯಕಾರಿ ಮಂಡಳಿ ಸದಸ್ಯ

*

ಕೋಳಿ ಮಾಂಸದಲ್ಲಿ ಆ್ಯಂಟಿಬಯೊಟಿಕ್‍ ಉಳಿಕೆ ಅಂಶ (ರೆಸಿಡ್ಯು) ಇದೆ ಎಂಬ ಚಿಂತೆ ತಿನ್ನುವವರಿಗೆ ಇದ್ದರೆ, ಅದನ್ನು ಕಂಪನಿಗಳು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಅವರು ನಿಯಂತ್ರಿಸಬೇಕು.

–ಡಾ. ವೆಂಕಟರೆಡ್ಡಿ, ಪಶು ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಸದಸ್ಯ

*

ಯಾರಿಗೂ ಜವಾಬ್ದಾರಿ ಇಲ್ಲ. ಆ್ಯಂಟಿಬಯೊಟಿಕ್‍ಗಳ ವಿವೇಚನಾರಹಿತ ಬಳಕೆಯ ಸಂಪೂರ್ಣ ಹೊಣೆಯನ್ನು ಔಷಧ ನಿಯಂತ್ರಣ ಇಲಾಖೆಯೇ ವಹಿಸಿಕೊಳ್ಳಬೇಕು.

ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಹಿರಿಯ ಫಿಜಿಷಿಯನ್‍

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry