ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷನಿಗೆ ಮಹಿಳೆಯ ಹೃದಯ ಕಸಿ

Last Updated 3 ಮಾರ್ಚ್ 2018, 19:37 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನ ಮಗಳು ಸವಿತಾ ಶರೀರ ಪಂಚಭೂತಗಳಲ್ಲಿ ಲೀನವಾಗಿರಬಹುದು. ಆದರೆ, ಅವಳ ಹೃದಯ ಇನ್ನೂ ಜೀವಂತವಾಗಿದೆ. ಆ ಹೃದಯ ಎಲ್ಲಿಯೇ ಇರಲಿ, ಖುಷಿಯಾಗಿರಲಿ’ ಎಂದು ಹೇಳುವಾಗ ಪುಷ್ಪಾ ಪವಾರ ಗದ್ಗದಿತರಾದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಇತ್ತೀಚೆಗೆ ಸವಿತಾ ಪವಾರ ಅವರ ಹೃದಯವನ್ನು ವೀರಭದ್ರ ರಾಯಗೌಡ ಪಾಟೀಲ ಅವರಿಗೆ ಕಸಿ ಮಾಡಲಾಗಿತ್ತು. ಈ ವಿಷಯವನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪುಷ್ಪಾ ಅವರು ತಮ್ಮ ಮಗಳನ್ನು ನೆನೆದು ಕಣ್ಣೀರು ಹಾಕಿದರು.

‘ನನ್ನ ಮಗಳು ಚಿಕ್ಕಂದಿನಿಂದಲೂ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಕಾಯಿಲೆಯಿಂದ ಬಳಲುತ್ತಿದ್ದಳು. ಅವಳನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಆದರೆ, ಅವಳ ಹೃದಯವನ್ನು ದಾನ ಮಾಡುವ ಮೂಲಕ ಅವಳನ್ನು ಜೀವಂತವಾಗಿರಿಸಿದ್ದೇವೆ’ ಎಂದು ಭಾವುಕರಾದರು. ಸವಿತಾ ತಂದೆ ಬಾಲಚಂದ್ರ ಅವರೂ ಕಣ್ಣೀರಾದರು.

ಹಿನ್ನೆಲೆ: ಜಿಲ್ಲೆಯ ಅಥಣಿ ತಾಲ್ಲೂಕಿನ ಮಂಗಾವತಿ ಗ್ರಾಮದ 32 ವರ್ಷದ ಯುವಕ ವೀರಭದ್ರ ಪಾಟೀಲ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಖಾಸಗಿ ಸಂಸ್ಥೆ ಉದ್ಯೋಗಿ. ಉಸಿರಾಟದ ತೊಂದರೆಗೀಡಾದ ಅವರು, ಜನವರಿಯಲ್ಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾದರು.

ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದಾಗ ವೀರಭದ್ರ ಅವರ ಹೃದಯ ದೊಡ್ಡದಾಗಿರುವುದು ಹಾಗೂ ರಕ್ತವನ್ನು ಪಂಪ್‌ ಮಾಡಲು ಅಶಕ್ತವಾಗಿರುವುದು ಪತ್ತೆಯಾಯಿತು. ಹೃದಯ ಬದಲಾಯಿಸುವುದೊಂದೇ ಪರಿಹಾರವೆಂದು ವೈದ್ಯರು ತೀರ್ಮಾನಿಸಿದರು.

ಸಿಕ್ಕಿದ್ದು ಮಹಿಳೆಯ ಹೃದಯ: ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳಗಾವಿ ನಿವಾಸಿ ಸವಿತಾ ಪವಾರ (42) ಅವರ ಮೆದುಳು, ರಕ್ತಹೆಪ್ಪುಗಟ್ಟಿದ್ದರಿಂದ ನಿಷ್ಕ್ರಿಯವಾಗಿತ್ತು. ಆದರೆ, ಹೃದಯ ಜೀವಂತವಾಗಿತ್ತು. ಈ ಹೃದಯವನ್ನು ದಾನ ಮಾಡಿದರೆ ವೀರಭದ್ರ ಅವರ ಜೀವ ಉಳಿಸಲು ಸಾಧ್ಯವಿದೆ ಎಂದು ವೈದ್ಯರು ಸವಿತಾ ಅವರ ಕುಟುಂಬ ಸದಸ್ಯರ ಮನವೊಲಿಸಿದರು.

ಯಶಸ್ವೀ ಶಸ್ತ್ರಚಿಕಿತ್ಸೆ: ‘ರಾಜ್ಯ ಸರ್ಕಾರದ ಅಂಗಾಂಗಳ ಕಸಿ ಪ್ರಾಧಿಕಾರ ‘ಜೀವ ಸಾರ್ಥಕತೆ’ಯ ಅನುಮತಿಯನ್ನು ಪಡೆದ ವೈದ್ಯರು, ಫೆ. 20ರಂದು ಯಶಸ್ವಿಯಾಗಿ ಹೃದಯ ಕಸಿ ಮಾಡಿದರು. ವೀರಭದ್ರ ಅವರು ಈಗ ಆರೋಗ್ಯವಾಗಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಬೇರೆಡೆ ನಡೆದ ಮೊದಲ ಯಶಸ್ವೀ ಹೃದಯ ಕಸಿ ಇದಾಗಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

‘ಬೆಂಗಳೂರು, ಚೆನ್ನೈನಲ್ಲಿ ಹೃದಯ ಕಸಿ ಮಾಡಲು ಅಂದಾಜು ₹ 20 ಲಕ್ಷ ವೆಚ್ಚವಾಗುತ್ತದೆ. ಆದರೆ, ನಾವು ಕೇವಲ ₹ 5 ಲಕ್ಷ ವೆಚ್ಚದಲ್ಲಿ ಮಾಡಿಕೊಡಲು ಸಿದ್ಧ’ ಎಂದರು.

‘ಸವಿತಾ ಹಾಗೂ ವೀರಭದ್ರ ಅವರ ದೇಹ ತೂಕ ಸರಾಸರಿ ಕ್ರಮವಾಗಿ 42– 53 ಕೆ.ಜಿ ಇತ್ತು. ವಯಸ್ಸಿನಲ್ಲಿ 10 ವರ್ಷದ ವ್ಯತ್ಯಾಸ ಇದ್ದರೂ, ದೇಹ ತೂಕ ಬಹುತೇಕ ಸಮವಾಗಿದ್ದರಿಂದ ಪಂಪ್‌ ಮಾಡಬೇಕಾದ ರಕ್ತದ ಪ್ರಮಾಣದಲ್ಲಿ ವ್ಯತ್ಯಾಸ ಇರಲಿಲ್ಲ. ಅಲ್ಲದೇ, ಮಹಿಳೆಯರ ಹಾಗೂ ಪುರುಷರ ಹೃದಯದ ಕಾರ್ಯಚಟುವಟಿಕೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ’ ಎಂದು ಆಸ್ಪತ್ರೆಯ ಹೃದಯ ಚಿಕಿತ್ಸಾ ವಿಭಾಗದ ಡಾ.ರಿಚರ್ಡ್‌ ಸಾಲ್ಡಾನಾ ಅವರು ತಿಳಿಸಿದರು.

ಜೀವದಾತೆ: ‘ನಾಲ್ಕು ಜನ ಹೆಣ್ಣು ಮಕ್ಕಳ ನಂತರ ವೀರಭದ್ರ ಹುಟ್ಟಿದ್ದ. ಇವನಿಗೆ ಹೃದಯ ದಾನ ಮಾಡುವ ಮೂಲಕ ಸವಿತಾ ಪವಾರ ಜೀವದಾತೆಯಾದರು’ ಎಂದು ತಾಯಿ ಶಕುಂತಲಾ ರಾಯಗೌಡ ಪಾಟೀಲ ಸ್ಮರಿಸಿದರು.

ಚೆನ್ನಾಗಿದ್ದೇನೆ: ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವೀರಭದ್ರ ಅವರನ್ನು ವೈದ್ಯಕೀಯ ಪರಿವೀಕ್ಷಣೆಗಾಗಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಐಸಿಯುನಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಶಸ್ತ್ರಚಿಕಿತ್ಸೆ ನಂತರ ಚೆನ್ನಾಗಿದ್ದೇನೆ. ಆರೋಗ್ಯವಾಗಿದ್ದೇನೆ. ಉಸಿರಾಟಕ್ಕೆ ಯಾವುದೇ ತೊಂದರೆಯಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT