ಸೋಮವಾರ, ಮಾರ್ಚ್ 27, 2023
24 °C

ತಂದೆ ಹತ್ಯೆ ಮಾಡಿದವರನ್ನು ನಾನು, ಪ್ರಿಯಾಂಕ ಕ್ಷಮಿಸಿದ್ದೇವೆ: ರಾಹುಲ್‌ ಗಾಂಧಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ತಂದೆ ಹತ್ಯೆ ಮಾಡಿದವರನ್ನು ನಾನು, ಪ್ರಿಯಾಂಕ ಕ್ಷಮಿಸಿದ್ದೇವೆ: ರಾಹುಲ್‌ ಗಾಂಧಿ

ಸಿಂಗಾಪುರ: ತಂದೆ ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಿದ ಹಂತಕರನ್ನು ನಾನು ಮತ್ತು ನನ್ನ ಸಹೋದರಿ ಪ್ರಿಯಾಂಕ ಗಾಂಧಿ ಕ್ಷಮಿಸಿರುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಹೇಳಿದ್ದಾರೆ.

ಸಿಂಗಾಪುರದಲ್ಲಿನ ಐಐಎಂನ ಹಳೆಯ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರಿಸಿದರು.

ರಾಜೀವ್‌ ಗಾಂಧಿ ಅವರ ಸಾವಿಗೆ ಕಾರಣರಾದವರನ್ನು ಕ್ಷಮಿಸಿದ್ದೀರಾ ಎಂಬ ಪ್ರಶ್ನೆಗೆ, ‘ತಂದೆಯ ಹತ್ಯೆ ಬಹಳಷ್ಟು ವರ್ಷಗಳು ನಮ್ಮನ್ನು ಕಾಡಿದೆ. ತುಂಬ ಅಸಮಾಧಾನ ಹಾಗೂ ಕೋಪದಲ್ಲಿದ್ದೆವು. ಆದರೆ, ಅದು ಹೇಗೋ ಪೂರ್ಣವಾಗಿ...ಸಂಪೂರ್ಣವಾಗಿ ನಾನು ಮತ್ತು ಪ್ರಿಯಾಂಕ ಅವರನ್ನು ಕ್ಷಮಿಸಿದ್ದೇವೆ’ ಎಂದಿದ್ದಾರೆ.

‘ಪ್ರಭಾಕರನ್‌ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದಾಗ ಎರಡು ಭಾವನೆಗಳು ಮನಸ್ಸಿನಲ್ಲಿ ಹಾದು ಹೋದವು. ಒಂದು, ಈ ವ್ಯಕ್ತಿಯನ್ನು ಏಕೆ ಹೀಗೆ ಅವಮಾನಿಸುತ್ತಿದ್ದಾರೆ. ಮತ್ತೊಂದು, ಜನರನ್ನು ದ್ವೇಷಿಸುವುದು, ಹಿಂಸೆಯನ್ನು ಸಹಿಸುವುದು ಸಾಧ್ಯವಾಗದು ಎಂಬುದು. ಅದು ಯಾರೇ ಆದರೂ ಆತನೂ ಮನುಷ್ಯ. ಆತನ ಹಿಂದೆ ಕುಟುಂಬವಿದೆ, ಆತನಿಗಾಗಿ ಮಗುವೊಂದು ಅಳುತ್ತಿರುತ್ತದೆ...ಈ ಎಲ್ಲವೂ ಮನಸ್ಸನ್ನು ಘಾಸಿಗೊಳಿಸಿತು’ ಎಂದು ಹೇಳಿಕೊಂಡಿದ್ದಾರೆ.

ಶ್ರೀಲಂಕಾದ ಪ್ರಭಾಕರನ್‌ ನೇತೃತ್ವದ ಎಲ್‌ಟಿಟಿಇ ಉಗ್ರ ಸಂಘಟನೆಯ ಆತ್ಮಹತ್ಯಾ ಮಹಿಳಾ ಬಾಂಬರ್‌ ತಮಿಳುನಾಡಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಾಂಬ್‌ ಸ್ಫೋಟಿಸಿಕೊಂಡಳು. 1991ರ ಮೇ 21ರ ಆ ಬಾಂಬ್‌ ಸ್ಫೋಟದಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮೃತಪಟ್ಟರು.

* ನನ್ನ ತಂದೆ ಸಾವಿಗೀಡಾಗುವುದು ನಮಗೆ ತಿಳಿದಿತ್ತು. ನನ್ನ ಅಜ್ಜಿಯೂ ಸಾಯುತ್ತಾರೆಂದು ನಮಗೆ ತಿಳಿದಿತ್ತು. ರಾಜಕೀಯದಲ್ಲಿ ಕೆಲವು ಶಕ್ತಿಗಳೊಂದಿಗೆ ಹೋರಾಡುವಾಗ, ಕೆಲವು ವಿಷಯಗಳ ಪರವಾಗಿ ನಿಂತಾಗ ನೀವು ಸಾಯಬೇಕಾಗುತ್ತದೆ. ಇದು ಸ್ಪಷ್ಟಗೊಂಡಿರುವುದೇ..

– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.