ರಫೇಲ್‌ ಮೂಲ ಬೆಲೆ ₹670 ಕೋಟಿ!

ಮಂಗಳವಾರ, ಮಾರ್ಚ್ 26, 2019
31 °C

ರಫೇಲ್‌ ಮೂಲ ಬೆಲೆ ₹670 ಕೋಟಿ!

Published:
Updated:
ರಫೇಲ್‌ ಮೂಲ ಬೆಲೆ ₹670 ಕೋಟಿ!

ನವದೆಹಲಿ: ಸಾಕಷ್ಟು ಸಂದೇಹ ಹುಟ್ಟು ಹಾಕಿದ ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೊನೆಗೂ ಬಾಯ್ಬಿಟ್ಟಿದೆ.

ಫ್ರಾನ್ಸ್‌ ಕಂಪನಿಯಿಂದ ಖರೀದಿಸಿದ ರಫೇಲ್‌ ಯುದ್ಧ ವಿಮಾನದ ಮೂಲ ಬೆಲೆ ₹670 ಕೋಟಿ ಎಂದು ರಕ್ಷಣಾ ಸಚಿವಾಲಯ ಸೋಮವಾರ ಸ್ಪಷ್ಟನೆ ನೀಡಿದೆ. ಇದರಲ್ಲಿ ನಿರ್ವಹಣಾ ಮತ್ತು ಸೇವಾ ವೆಚ್ಚ, ತರಬೇತಿ, ಬಿಡಿಭಾಗ ಮತ್ತು ಶಸ್ತ್ರಾಸ್ತ್ರ ವೆಚ್ಚ ಸೇರಿಲ್ಲ ಎಂದು ಸಚಿವಾಲಯ ತಿಳಿಸಿದೆ.

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಆರೋಪ ಮಾಡುತ್ತಿರುವ ಬೆನ್ನಲ್ಲೇ ರಕ್ಷಣಾ ಸಚಿವಾಲಯದ ಈ ಸ್ಪಷ್ಟನೆ ಹೊರಬಿದ್ದಿದೆ.

ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ 2015ರ ಏಪ್ರಿಲ್‌ನಲ್ಲಿ ಘೋಷಿಸಿದ್ದರು. ‘ಘೋಷಣೆಗೂ ಮುನ್ನ ಈ ವಹಿವಾಟಿಗೆ ಸಂಬಂಧಿಸಿ ರಕ್ಷಣಾ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯ ಒಪ್ಪಿಗೆ ಪಡೆಯಲಾಗಿತ್ತೆ’ ಎಂದು ಸಂಸತ್‌ನಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಸರ್ಕಾರ ಇದುವರೆಗೂ ಉತ್ತರಿಸಿರಲಿಲ್ಲ.

ರಫೇಲ್‌ ಖರೀದಿ ಬಗ್ಗೆ ಪ್ರಧಾನಿ ಘೋಷಣೆ ಮಾಡಿದ 16 ತಿಂಗಳ ನಂತರ ಅಂದರೆ, 2016 ಆಗಸ್ಟ್‌ನಲ್ಲಿ ರಕ್ಷಣಾ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯ ಒಪ್ಪಿಗೆ ಪಡೆಯಲಾಗಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್‌ ಭಾಮ್ರೆ ತಿಳಿಸಿದ್ದಾರೆ.

ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ವಿವೇಕ್‌ ಟಂಕಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾಮ್ರೆ, ಎರಡೂ ಸರ್ಕಾರಗಳು ರಫೇಲ್‌ ಒಪ್ಪಂದಕ್ಕೆ ಸಹಿ ಹಾಕುವ ಒಂದು ತಿಂಗಳ ಮುನ್ನ ಪ್ರಧಾನಿ ಈ ಬಗ್ಗೆ ಘೋಷಣೆ ಮಾಡಿದ್ದರು ಎಂದು ತಿಳಿಸಿದ್ದಾರೆ. ಆದರೆ, ಪ್ರಧಾನಿ ಘೋಷಣೆಗೂ ಮುನ್ನ ಒಪ್ಪಿಗೆ ಪಡೆಯಲಾಗಿತ್ತೇ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರಿಸಿಲ್ಲ.

ರಫೇಲ್‌ ಯುದ್ಧ ವಿಮಾನ ಪೂರೈಸುವ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ನ 2016ರ ವಾರ್ಷಿಕ ವರದಿ ಉಲ್ಲೇಖಿಸಿರುವ ಕಾಂಗ್ರೆಸ್‌, ಕೇಂದ್ರ ಸರ್ಕಾರ ಒಂದು ವಿಮಾನಕ್ಕೆ ₹1,670.7 ಕೋಟಿ ನೀಡಿದೆ. ಈಜಿಪ್ಟ್‌ ಮತ್ತು ಕತಾರ್‌ ಇದೇ ವಿಮಾನವನ್ನು ಕಡಿಮೆ ಬೆಲೆಗೆ ಖರೀದಿಸಿವೆ. ಆ ಎರಡು ದೇಶಗಳಿಗಿಂತ ಕೇಂದ್ರ ಸರ್ಕಾರ ₹351 ಕೋಟಿ ಹೆಚ್ಚು ಬೆಲೆ ತೆತ್ತಿರುವ ಬಗ್ಗೆ ಕಾಂಗ್ರೆಸ್‌ ಶಂಕೆ ವ್ಯಕ್ತಪಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry