ಬುಧವಾರ, ಏಪ್ರಿಲ್ 8, 2020
19 °C

ತೋಚಿದಂತೆ ಇತಿಹಾಸ ಬರೆದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸಕಾರರೆಂದು ಹೆಸರು ಮಾಡಿರುವ ರಾಮಚಂದ್ರ ಗುಹಾ ಅವರು ಚರಿತ್ರೆಯನ್ನು ತಮ್ಮ ಮನಸ್ಸಿಗೆ ಬಂದಹಾಗೆ ಅರ್ಥೈಸುತ್ತಾರೆ ಎಂದು ತಿಳಿದಿರಲಿಲ್ಲ.

ಮಾನವನ ಬೆಳವಣಿಗೆಯ ಹಾದಿಯಲ್ಲಿ ಬಹುಪಾಲು ಜನರು ಬೆವರು ಸುರಿಸಿ ಸೃಷ್ಟಿ ಮಾಡಿದ ಸಂಪತ್ತನ್ನು ಕೆಲವೇ ಮಂದಿ ಅನುಭೋಗಿಸುತ್ತಿದ್ದ ಶೋಷಣೆಯ ಸಮಾಜದ ಬದಲಾವಣೆಗೆ ಕಾರಣರಾಗಿ ಇತಿಹಾಸ ಸೃಷ್ಟಿಸಿದ ಲೆನಿನ್‌ರಂಥ ಮಾನವತಾವಾದಿಗಳನ್ನು ‘ಕ್ರೂರಿ, ನಿರಂಕುಶಾಧಿಕಾರಿ, ಕೊಲೆಗಾರ’ ಎಂದು ಬಿಂಬಿಸಿರುವುದು ತುಳಿತಕ್ಕೊಳಗಾದವರ ಬಗ್ಗೆ ಗುಹಾ ಅವರಿಗಿರುವ ಮನೋಭಾವವನ್ನು ತೋರಿಸುತ್ತದೆ. ಸಮಾಜದ ಕೆಳಸ್ತರದ ಜನರ ದಯನೀಯ ಬದುಕಿನ ಬಗ್ಗೆ ಅವರ ತಾತ್ಸಾರ ಧೋರಣೆಯು ಲೇಖನದಲ್ಲಿ (ಪ್ರ.ವಾ., ಮಾ.16) ಪ್ರತಿಫಲಿಸಿದೆ. ಸಮಾಜದ ಮೇಲುಸ್ತರದ ಜನರ ಮೇಲಿನ ಅವರ ಪ್ರೀತಿಯನ್ನು ಹೊರಗೆಡಹುತ್ತದೆ.

‘ಮನುವಾದದ ಪ್ರತಿಪಾದಕ’ ಎಂದು ಅವರನ್ನು ಕರೆಯುವುದು ಕಠೋರ ಎನಿಸಬಹುದಾದರೂ ಅವರ ಲೇಖನವು ಆಳದಲ್ಲಿ ಅದನ್ನೇ ಪ್ರತಿಪಾದಿಸುತ್ತದೆ. ತ್ರಿಪುರಾದಲ್ಲಿ ಆದಿವಾಸಿ ಜನಾಂಗದ ದಶರಥ್ ದೇಬ್ (ಎಡರಂಗದ ಮುಖ್ಯಮಂತ್ರಿಯಾಗಿದ್ದವರು) ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕದ ಮೇಲೂ ಬಿಜೆಪಿಯ ಕಿಡಿಗೇಡಿಗಳು ದಾಳಿ ಮಾಡಿರುವ ಸಂಗತಿ ಅವರ ಲೇಖನದಲ್ಲಿ ಉಲ್ಲೇಖವಾಗುವುದಿಲ್ಲ. ಆದರೆ ‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಪ್ರಕಟವಾಗಿದ್ದೆಂದು ಹೇಳಲಾಗುವ ‘ಲೆನಿನ್ ಪ್ರತಿಮೆಯ ಜಾಗದಲ್ಲಿ ತ್ರಿಪುರಾದ ಕಮ್ಯುನಿಸ್ಟ್ ನಾಯಕ ನೃಪೇನ್ ಚಕ್ರವರ್ತಿ ಪ್ರತಿಮೆ ಇದ್ದಿದ್ದರೆ ಅದನ್ನು ಒಡೆದು ಹಾಕುತ್ತಿರಲಿಲ್ಲವೇನೋ ಎಂದು ಬಿಜೆಪಿ ಕಾರ್ಯಕರ್ತನೊಬ್ಬ ಹೇಳಿದ್ದ’ ಎಂಬ ಗುಹಾ ಅವರ ಹೇಳಿಕೆಯು ಅವರ ‘ಚಿಕಿತ್ಸಕ’(?) ಮನಸ್ಥಿತಿಯನ್ನು ಹೊರಹಾಕುತ್ತದೆ.

ಇತಿಹಾಸಕಾರ ಇತಿಹಾಸಕ್ಕೆ ನಿಷ್ಠೆ ಹೊಂದಿರಬೇಕು ಮತ್ತು ಪ್ರಾಮಾಣಿಕನಾಗಿರಬೇಕು. ವೈಯಕ್ತಿಕ ಅಭಿಪ್ರಾಯ ಮತ್ತು ಮನೋಧರ್ಮವನ್ನು ಇತಿಹಾಸದ ಮೇಲೆ ಹೇರಲು ಪ್ರಯತ್ನಿಸಬಾರದು.

-ಟಿ. ಸುರೇಂದ್ರ ರಾವ್, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)