ಶೌಚಾಲಯ ನಿರ್ಮಾಣಕ್ಕೆ ವೀರೇಶ ನೆರವು

7
ಚೌಡಯ್ಯದಾನಪುರವನ್ನು ಬಯಲು ಶೌಚ ಮುಕ್ತ ಗ್ರಾಮ ಮಾಡಲು ಪಣ

ಶೌಚಾಲಯ ನಿರ್ಮಾಣಕ್ಕೆ ವೀರೇಶ ನೆರವು

Published:
Updated:
ಶೌಚಾಲಯ ನಿರ್ಮಾಣಕ್ಕೆ ವೀರೇಶ ನೆರವು

ರಾಣೆಬೆನ್ನೂರು: ಸ್ವಚ್ಛ ಭಾರತ– ಸ್ವಚ್ಛ ಕರ್ನಾಟಕಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಿವೆ. ಜಿಲ್ಲಾ, ತಾಲ್ಲೂಕು ಮತ್ತು ಸ್ಥಳೀಯಾಡಳಿತಗಳು ಬಯಲು ಬಹಿರ್ದೆಸೆ ಮುಕ್ತಕ್ಕಾಗಿ ಜಿಲ್ಲಾಧಿಕಾರಿ ನಿರ್ದೇಶನದಲ್ಲಿ ಕೆಲಸ ನಿರ್ವಹಿಸುತ್ತಿವೆ.

ಇದರಿಂದ ಪ್ರೇರಣೆಗೊಂಡ ಚೌಡಯ್ಯದಾನಪುರದ ವೀರೇಶ ಗುತ್ತಲ ‘ಬಯಲು ಶೌಚ ಮುಕ್ತ ಗ್ರಾಮ’ ಮಾಡಲು ಪಣ ತೊಟ್ಟಿದ್ದಾರೆ.

ತುಂಗಭದ್ರಾ ನದಿ ತೀರದಲ್ಲಿರುವ ಚೌಡಯ್ಯದಾನಪುರ ಪ್ರವಾಸಿ ತಾಣ, ಅಂಬಿಗರ ಚೌಡಯ್ಯನವರ ಐಕ್ಯಮಂಟಪ, ಮುಕ್ತೇಶ್ವರ ದೇವಸ್ಥಾನವು ಇಲ್ಲಿದೆ. ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಗ್ರಾಮ ಸ್ವಚ್ಛತೆಯಿಂದ ಗಮನ ಸೆಳೆಯಬೇಕು ಎಂಬುದು ವೀರೇಶ ಗುತ್ತಲ ಅವರ ಮಹದಾಸೆ.

ಸರ್ಕಾರವು ಪ್ರತಿ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣದ ಜಾಗೃತಿ ಮೂಡಿಸಿದರು. ಆಗ, ಹಣವಿದ್ದವರು ಮಾತ್ರ ಶೌಚಾಲಯ ನಿರ್ಮಿಸಿಕೊಂಡರು. ಆರಂಭಿಕ ಹಣಕ್ಕೂ ತೊಂದರೆ ಅನುಭವಿಸಿದವರು ದಿಕ್ಕು ತೋಚಲಾರದೇ ಸುಮ್ಮನೆ ಕುಳಿತ್ತಿದ್ದರು. ಸರ್ಕಾರವು ಶೌಚಾಲಯ ನಿರ್ಮಿಸಿದ ಬಳಿಕ ಹಂತ ಹಂತವಾಗಿ ಹಣ ನೀಡುವ ಕಾರಣ, ತೀರಾ ಬಡವರು ಇದರ ಗೋಜಿಗೆ ಹೋಗಲಿಲ್ಲ.

ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ₹15ಸಾವಿರ ಮತ್ತು ಸಾಮಾನ್ಯ ವರ್ಗದವರಿಗೆ ₹12 ಸಾವಿರ ನೀಡುತ್ತಿದ್ದರೂ, ಕೆಲಸ ಆರಂಭಿಸಲು ಹಣವಿಲ್ಲದೇ ಹಲವರು ಹಿಂದೆ ಸರಿದರು. ಆಗ ಈ ಹಣವನ್ನು ಸ್ವತಃ ಕೈಯಿಂದ ಮುಂಗಡವಾಗಿ ನೀಡಿದವರು ವಿರೇಶ ತಿರಕಪ್ಪ ಗುತ್ತಲ. ಹೀಗೆ ತಮ್ಮ ಗ್ರಾಮದಲ್ಲಿ 30ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಗತ್ಯಕ್ಕೆ ತಕ್ಕಂತೆ ಒಟ್ಟು ₹3.60 ಲಕ್ಷ ನೀಡಿದ್ದಾರೆ.

ಸರ್ಕಾರದ ಹಣ ಮಂಜೂರಾದ ಬಳಿಕ ನೀವು ಹೊಂದಾಣಿಕೆ ಮಾಡಿಕೊಡಿ. ಆದರೆ, ಬಡ್ಡಿ ರಹಿತವಾಗಿ ಹಣವನ್ನು ಸ್ವೀಕರಿಸಿ, ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಫಲಾನುಭವಿಗಳಿಗೆ ವೀರೇಶ ಗುತ್ತಲ ಹಣದ ನೆರವು ನೀಡುತ್ತಿದ್ದಾರೆ.

‘ನಮ್ಮ ಗ್ರಾಮದ ಅಜ್ಜಿಯಂದಿರ ಅಮ್ಮ, ಅಕ್ಕ–ತಂಗಿಯರು ಬಹಿರ್ದೆಸೆಗಾಗಿ ರಸ್ತೆ ಪಕ್ಕದಲ್ಲಿ ಹೋಗುವುದನ್ನು ಬಾಲ್ಯದಿಂದ ನೋಡಿದ್ದೇನೆ. ಇದು ಮನಸ್ಸಿನಲ್ಲಿ ಬಹಳ ನೋವು ಉಂಟು ಮಾಡಿದೆ. ಹೀಗಾಗಿ ನೆರವು ನೀಡಲು ಮುಂದಾಗಿದ್ದಾನೆ. ಅಲ್ಲದೇ, ಸ್ವಚ್ಛ ಭಾರತದ ಬಗ್ಗೆ ಪ್ರಧಾನಿ ಪ್ರಚಾರ ನೀಡಿರುವುದೂ ಖುಷಿ ಆಯಿತು’ ಎಂದರು.

ಈ ಪೈಕಿ ಹಲವು ಫಲಾನುಭವಿಗಳು, ಶೌಚಾಲಯದ ಹಣ ಜಮಾ ಆದ ಕೂಡಲೇ, ಸಹಕಾರ ನೀಡಿದ ವೀರೇಶ ಗುತ್ತಲ ಅವರಿಗೆ ವಾಪಸ್ಸು ನೀಡಿ ಅಭಿನಂದಿಸಿದ್ದಾರೆ. ವೀರೇಶ ಗುತ್ತಲ ಅವರ ಕಾಳಜಿಯನ್ನು ಶ್ಲಾಘಿಸಿದ್ದಾರೆ.

‘ಸರ್ಕಾರದವ್ರು ಶೌಚಾಲಯಗಳನ್ನ ಕಟ್ಟಿಸಿಕೊಳ್ರಿ, ಆಮೇಲೆ ನಿಮ್ಮ ಖಾತೆಗೆ ಹಣ ಹಾಕ್ತೀವಿ ಅಂತಾರ. ಆದ್ರ ಕಟ್ಟಿಸಾಕ ನಮ್ಮ ಹತ್ರ ರೊಕ್ಕ ಇಲ್ಲ. ಕೂಲಿ ಬಿಟ್ರೆ ಬೇರೇನೂ ಇಲ್ಲ. ನಮ್ಮ ಪರಿಸ್ಥಿತಿ ಬಗ್ಗೆ ಹೇಳಿದೆವು. ಈ ವಿರೇಶಣ್ಣ ಮೊದಲು ಪಾಯಿಖಾನೆ ಕಟ್ಟಿಸಿಕೊಳ್ರಿ ಅಂತಾ ತಿಳಿಸಿ, ಹೇಳಿ ಹಣ ನೀಡಿದ್ರು’ ಎಂದು ಜಮಾಲವ್ವ ಹೆಬ್ಬಾಳ ಮತ್ತಿತರರು ತಿಳಿಸಿದರು.

ಚೌಡಯ್ಯದಾನಪುರದ ತಿರುಕಪ್ಪ ಮತ್ತು ಗಂಗಮ್ಮ ದಂಪತಿಯ ಪುತ್ರ ವೀರೇಶ ಗುತ್ತಲ ಪಿಯುಸಿ ಓದಿದ್ದಾರೆ.

ಸದ್ಯ ಗುತ್ತಿಗೆ ಕಾಮಗಾರಿ ನಡೆಸುತ್ತಾರೆ. ಅವರ ಕುಟುಂಬಕ್ಕೆ ಸೇರಿದ ಸುಮಾರು 50 ಎಕರೆ ಜಮೀನು ಇದೆ. ಇದೇ ಆದಾಯ ಮೂಲವಾಗಿದೆ.

**

ಸ್ವಚ್ಛ ಭಾರತ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಪ್ರಚಾರ ಮಾಡುತ್ತಿವೆ. ಆದರೆ, ಬಹುತೇಕ ಗ್ರಾಮೀಣ ಜನತೆ ಬಂಡವಾಳ ಹಾಕಿ ಶೌಚಾಲಯ ಕಟ್ಟಿಸಿಕೊಳ್ಳಲಾಗದ ಬಡತನದಲ್ಲಿ ಇದ್ದಾರೆ. ಅಂತವರ ಮನವೊಲಿಸಿ, ಆರ್ಥಿಕ ಸಹಾಯ ಮಾಡುತ್ತಿದ್ದೇನೆ

– ವೀರೇಶ ತಿರಕಪ್ಪ ಗುತ್ತಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry