ಶುಕ್ರವಾರ, ಜೂನ್ 25, 2021
21 °C

ಬೀದಿ ಕಾಳಗದ ಸ್ಫೂರ್ತಿಯ ಪುಟಿನ್‍

ಹಮೀದ್ ಕೆ. Updated:

ಅಕ್ಷರ ಗಾತ್ರ : | |

ಬೀದಿ ಕಾಳಗದ ಸ್ಫೂರ್ತಿಯ ಪುಟಿನ್‍

ಶೀತಲ ಯುದ್ಧ ಕಾಲದಲ್ಲಿ ಅಮೆರಿಕಕ್ಕೆ ಸಮಬಲದ ಪ್ರತಿಸ್ಪರ್ಧಿಯಾಗಿದ್ದ, ಕೆಲವು ಕ್ಷೇತ್ರಗಳಲ್ಲಿ ಅಮೆರಿಕವನ್ನು ಮೀರಿಸುವಂತಿದ್ದ ಆಗಿನ ಸೋವಿಯತ್‍ ಒಕ್ಕೂಟದ ತಾಕತ್ತು ಈಗಿನ ರಷ್ಯಾಕ್ಕೆ ಇಲ್ಲ. ಆದರೆ ತಮ್ಮ ದೇಶ ಈಗಲೂ ಜಗತ್ತಿನ ದೊಡ್ಡ ಶಕ್ತಿಯೇ ಎಂದು ರಷ್ಯಾದ ಒಳಗಿನ ಮತ್ತು ಹೊರಗಿನ ಜನರನ್ನು ನಂಬಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ ಪ್ರಯತ್ನಿಸುತ್ತಲೇ ಇದ್ದಾರೆ. ತಾವು ಹಾಗೆಯೇ ನಂಬಿದ್ದಾರೆ.

1952ರಲ್ಲಿ ಲೆನಿನ್‍ಗ್ರಾಡ್‍ನ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಪುಟಿನ್‍, ಕಮ್ಯುನಿಸಂ ಉಚ್ಛ್ರಾಯದಲ್ಲಿದ್ದ ಕಾಲದಲ್ಲಿ ಬೆಳೆದವರು. ತಮ್ಮ ದೇಶದ ಸಾಮರ್ಥ್ಯದ ಬಗ್ಗೆ ಹೆಮ್ಮೆ ಬೆಳೆಸಿಕೊಂಡವರು. ರಷ್ಯಾದ ಗುಪ್ತಚರ ಸಂಸ್ಥೆ ಕೆಜಿಬಿ ಸೇರಬೇಕು ಎಂದು ಶಿಕ್ಷಣ ಪೂರ್ಣಗೊಳ್ಳುವ ಮೊದಲೇ ನಿರ್ಧರಿಸಿದವರು. 1975ರಲ್ಲಿ ಕೆಜಿಬಿ ಸೇರಿದ ಪುಟಿನ್‍ 1985ರಲ್ಲಿ ಜರ್ಮನಿಯ ಡ್ರೆಸ್ಡನ್‍ಗೆ ನಿಯೋಜಿತರಾದರು. ಕಮ್ಯುನಿಸಂ ಕುಸಿಯುತ್ತಿದೆ ಮತ್ತು ತಮ್ಮ ದೇಶ ದುರ್ಬಲವಾಗುತ್ತಿದೆ ಎಂಬುದು ಮೊದಲ ಬಾರಿಗೆ ಅಲ್ಲಿ ಪುಟಿನ್‍ಗೆ ಮನವರಿಕೆಯಾಗಿತ್ತು.

‘ದೇಶದ ವೈಭವವನ್ನು ಮರಳಿ ತರಬೇಕು ಎಂಬ ತುಡಿತ ಸದಾ ಅವರಲ್ಲಿ ಇದೆ’ ಎಂದು ರಷ್ಯಾ ಅಧ್ಯಕ್ಷರ ನಿವಾಸ ಕ್ರೆಮ್ಲಿನ್‍ನ ವೆಬ್‍ಸೈಟ್‍ನಲ್ಲಿರುವ ಪುಟಿನ್‍ ಅವರ ವ್ಯಕ್ತಿಚಿತ್ರದಲ್ಲಿ ಹೇಳಲಾಗಿದೆ.

ಚಿಕ್ಕವನಾಗಿದ್ದಾಗಿನಿಂದಲೂ ಪುಟಿನ್‍ ಆಕ್ರಮಣಕಾರಿಯಾಗಿಯೇ ಇದ್ದರು ಅನಿಸುತ್ತದೆ. ತಮಗಿಂತ ದೊಡ್ಡ ಹುಡುಗರ ಜತೆ ಬೀದಿಯಲ್ಲಿ ಕಾದಾಡುತ್ತಿದ್ದರಂತೆ. ಈ ಕಾದಾಟದಲ್ಲಿ ಗೆಲ್ಲುವುದಕ್ಕಾಗಿಯೇ ಅವರು ಜೂಡೊ ಕಲಿತರಂತೆ. ಸಮರ ಕಲೆ ಜೂಡೊದಲ್ಲಿ ಪುಟಿನ್‍ ಬ್ಲ್ಯಾಕ್‍ ಬೆಲ್ಟ್‌ ಪಡೆದುಕೊಂಡಿದ್ದಾರೆ. ಪ್ರಭಾವಿ ದೇಶವೊಂದರ ಅಧ್ಯಕ್ಷರಾದ ಬಳಿಕವೂ ಪುಟಿನ್‍ಗೆ ಕಾದಾಟದಲ್ಲಿ ಆಸಕ್ತಿ ಕುಂದಿಲ್ಲ. ಈಗಲೂ, ಆಗೊಮ್ಮೆ ಈಗೊಮ್ಮೆ ಜೂಡೊ ದಿರಿಸು ಹಾಕಿ ಅವರು ಅಖಾಡಕ್ಕೆ ಇಳಿಯುವುದುಂಟು.

ತಾವೊಬ್ಬ ದಿಟ್ಟ, ಶಕ್ತಿಶಾಲಿ ಎಂದು ಇತರರು ಭಾವಿಸಬೇಕು ಎಂದು ಅವರು ಬಯಸುತ್ತಾರೆ. 2000ನೇ ಇಸವಿಯಲ್ಲಿ ಚೆಚೆನ್ಯಾಕ್ಕೆ ಯುದ್ಧವಿಮಾನ ಹಾರಿಸಿಕೊಂಡು ಪುಟಿನ್‍ ಹೋಗಿದ್ದರು. ಬರಿಮೈಯಲ್ಲಿ ಪುಟಿನ್ ಕುದುರೆ ಸವಾರಿ ಮಾಡುವ ಚಿತ್ರಗಳು ರಷ್ಯಾದ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಬೈಕ್‍ ಸವಾರಿ, ಐಸ್‍ ಹಾಕಿ ಅವರ ನೆಚ್ಚಿನ ಹವ್ಯಾಸಗಳು. ಇಂತಹ ಹವ್ಯಾಸಗಳು, ಸಾಹಸಗಳು ಅವರಿಗೆ ಚುನಾವಣೆ ಗೆಲ್ಲುವುದಕ್ಕೂ ನೆರವಾಗಿವೆ.

2000ದಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್‍, 2004ರಲ್ಲಿಯೂ ನಿರಾಯಾಸ ಗೆಲುವು ಸಾಧಿಸಿದ್ದರು. ರಷ್ಯಾ ಸಂವಿಧಾನ ಪ್ರಕಾರ ಸತತ ಮೂರು ಅವಧಿಗೆ ಅಧ್ಯಕ್ಷರಾಗಲು ಅವಕಾಶ ಇಲ್ಲ. ಹಾಗಾಗಿ 2008ರಲ್ಲಿ ಪುಟಿನ್‍ ಸಹಾಯಕ ಡಿಮಿಟ್ರಿ ಮೆಡ್ವಡೆವ್‍ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾದ ಬಳಿಕ ಮೆಡ್ವಡೆವ್‍ ಅವರು, ಪುಟಿನ್‍ ಅವರನ್ನು ಪ್ರಧಾನಿಯಾಗಿ ನೇಮಿಸಿದರು. ಮೆಡ್ವಡೆವ್‍ ಅಧ್ಯಕ್ಷರಾಗಿದ್ದಾಗಲೂ ಪುಟಿನ್‍ ಅವರೇ ಅಧಿಕಾರದ ಕೇಂದ್ರವಾಗಿದ್ದರು. 2012ರ ಚುನಾವಣೆಯಲ್ಲಿ ಪುಟಿನ್‍ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.

ರಷ್ಯಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಕಳೆದ ವಾರ ಪ್ರಕಟವಾಗಿದೆ. ಶೇ 76ಕ್ಕೂ ಹೆಚ್ಚು ಮತಗಳನ್ನು ಪಡೆದು ಪುಟಿನ್ ಗೆದ್ದಿದ್ದಾರೆ. ‘ಪುಟಿನ್‍ ಗೆದ್ದಿದ್ದಾರೆ, ಆದರೆ ರಷ್ಯಾ ಸೋತಿದೆ’ ಎಂಬ ಶೀರ್ಷಿಕೆಯ ಲೇಖನವನ್ನು ಪುಟಿನ್‍ ಗೆಲುವಿಗೆ ಸಂಬಂಧಿಸಿ ‘ಟೈಮ್‍’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಲೆಕ್ಕವಿಲ್ಲದಷ್ಟು ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. ‘ರಷ್ಯಾದಲ್ಲಿ ಪ್ರಜಾಪ್ರಭುತ್ವವೇ ಇಲ್ಲ, ಜನರನ್ನು ಬಲವಂತದಿಂದ ಮತಗಟ್ಟೆಗೆ ಎಳೆದು ತರಲಾಗಿದೆ’ ಎಂಬ ಆರೋಪಗಳು ಕೇಳಿ ಬಂದಿವೆ.

ಚುನಾವಣೆಗೆ ಮೊದಲು ರಷ್ಯಾದಲ್ಲಿ ಪುಟಿನ್‍ ವಿರುದ್ಧ ಭಾರಿ ಪ್ರದರ್ಶನಗಳು ನಡೆದಿದ್ದವು. ಸೋವಿಯತ್‍ ಒಕ್ಕೂಟ ಪತನದ ಬಳಿಕ ಸರ್ಕಾರದ ವಿರುದ್ಧ ಇಷ್ಟು ದೊಟ್ಟ ಮಟ್ಟದ ಪ್ರತಿಭಟನೆ ಎಂದೂ ನಡೆದಿರಲಿಲ್ಲ. ಹೋರಾಟಗಾರ ಅಲೆಕ್ಸಿ ನವಾಲ್ನಿ ಅವರು ಪುಟಿನ್‍ ವಿರುದ್ಧ ಸೆಟೆದು ನಿಂತಿದ್ದರು. ಪುಟಿನ್‍ ಮತ್ತು ಅವರ ಸುತ್ತಲಿನ ಜನರ ವಿರುದ್ಧದ ಭ್ರಷ್ಟಾಚಾರ ಮತ್ತು ಅವ್ಯವಹಾರ ಆರೋಪಗಳನ್ನು ಅಲೆಕ್ಸಿ ಅವರು ಜನರ ಮುಂದೆ ಎಳೆ ಎಳೆಯಾಗಿ ತೆರೆದಿಟ್ಟಿದ್ದರು. ಆದರೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಅಲೆಕ್ಸಿಗೆ ಅಲ್ಲಿನ ಚುನಾವಣಾ ಆಯೋಗವು ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣ ರಾಜಕೀಯ ಪ್ರೇರಿತ ಎಂದು ಅಲೆಕ್ಸಿ ಹೇಳುತ್ತಲೇ ಬಂದಿದ್ದಾರೆ.

‘ರಷ್ಯಾದ ಬಹಳಷ್ಟು ಜನರು ಪುಟಿನ್‍ರನ್ನು ಇಷ್ಟಪಡುತ್ತಿದ್ದಾರೆ ಎಂಬುದು ಸತ್ಯ. ಆದರೆ, ಇದಕ್ಕೆ ಕಾರಣ ಅಲ್ಲಿನ ಏಕಪಕ್ಷೀಯ ಮಾಧ್ಯಮ’ ಎಂದು ಪಶ್ಚಿಮದ ಮಾಧ್ಯಮಗಳು ಹೇಳುತ್ತಿವೆ. ಪುಟಿನ್‍ ವಿರೋಧಿಗಳು ಮಾಧ್ಯಮದ ಗಮನ ಸೆಳೆಯುವುದು ಕಷ್ಟ ಎಂಬುದು ನಿಜ. ಆದರೆ ರಷ್ಯಾದಲ್ಲಿ ಪುಟಿನ್‍ ಇತ್ತೀಚೆಗೆ ಬೆಳೆಸಿಕೊಂಡು ಬರುತ್ತಿರುವ ಉಗ್ರ ದೇಶಭಕ್ತಿ ಅವರ ಜನಪ್ರಿಯತೆಗೆ ಕಾರಣ. ರಷ್ಯಾವನ್ನು ಮತ್ತೆ ಸೂಪರ್ ಪವರ್ ಆಗಿಸಬೇಕು ಎಂಬುದು ಅವರ ಸಿದ್ಧಾಂತದ ತಿರುಳು. ಉದಾರವಾದಿ ಚಿಂತಕರಿಗೆ ರಷ್ಯಾದಲ್ಲಿ ಈಗ ಸ್ಥಳವೇ ಇಲ್ಲವಾಗಿದೆ. ಪುಟಿನ್‍ ಚಿಂತನೆಯ ರಾಷ್ಟ್ರೀಯವಾದವು ಹಿಂದಿನ ತ್ಸಾರ್ ದೊರೆಗಳ ಕಾಲದ ನಿರಂಕುಶಾಧಿಪತ್ಯಕ್ಕೆ ಸಮಾನವಾದುದು. ರಷ್ಯಾದ ಸಂಪ್ರದಾಯವಾದಿ ಕ್ರೈಸ್ತ ಸಂಸ್ಥೆಗಳೂ ಇಂತಹ ರಾಷ್ಟ್ರೀಯವಾದವನ್ನು ಬೆಂಬಲಿಸುತ್ತಿವೆ.

ಅಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಉದಾರವಾದಿಗಳನ್ನು ಆಯಕಟ್ಟಿನ ಸ್ಥಾನಗಳಿಂದ ಪುಟಿನ್‍ ಹೊರಗೋಡಿಸಿದ್ದಾರೆ. ತಮ್ಮ ಸಿದ್ಧಾಂತವನ್ನು ಒಪ್ಪುವ ಜನರನ್ನಷ್ಟೇ ಅವರು ಸರ್ಕಾರದ ಹುದ್ದೆಗಳಿಗೆ ನೇಮಿಸಿಕೊಂಡಿದ್ದಾರೆ. ಖಾಸಗೀಕರಣದ ಮೊದಲ ದಿನಗಳ ಗೊಂದಲದಲ್ಲಿ ಭಾರಿ ದುಡ್ಡು ಮಾಡಿಕೊಂಡ ಹಲವು ಉದ್ಯಮಿಗಳು ಈಗ ಯುರೋಪ್‍ನ ಬೇರೆ ಬೇರೆ ದೇಶಗಳಲ್ಲಿ ದೇಶಭ್ರಷ್ಟರಾಗಿ ಜೀವಿಸುತ್ತಿದ್ದಾರೆ. ಒಂದು ಕಾಲದಲ್ಲಿ ಜಗತ್ತಿನ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿದ್ದ ಮಿಖಾಯಿಲ್‍ ಕೊಡರ್‍ಕೊವ್‍ಸ್ಕಿ ಅವರನ್ನು ಪುಟಿನ್‍ ಈಗ ಜೈಲಿಗೆ ತಳ್ಳಿದ್ದಾರೆ. ಪುಟಿನ್‍ ವಿರೋಧಿ ಆಂದೋಲನಕ್ಕೆ ಮಿಖಾಯಿಲ್‍ ಬೆನ್ನೆಲುಬಾಗಿದ್ದರು.

ತಮ್ಮ ಗುರಿ ಸಾಧನೆಗಾಗಿ ಏನು ಮಾಡುವುದಕ್ಕೂ ಪುಟಿನ್‍ ಹೇಸುವುದಿಲ್ಲ ಎಂಬುದು ಅವರ ಬಗ್ಗೆ ವ್ಯಾಪಕವಾಗಿ ಕೇಳಿಬರುತ್ತಿರುವ ಮಾತು. ಪುಟಿನ್‍ ಬದ್ಧ ವಿರೋಧಿಯಾಗಿದ್ದ ಅಲೆಕ್ಸಾಂಡರ್‍ ಲಿಟ್ವಿನೆನ್‍ಕೊ ಅವರನ್ನು 2006ರಲ್ಲಿ ಲಂಡನ್‍ನಲ್ಲಿ ವಿಕಿರಣಶೀಲ ವಿಷವುಣಿಸಿ ಹತ್ಯೆ ಮಾಡಲಾಗಿತ್ತು. ಇದು ರಷ್ಯಾದ ಏಜೆಂಟರ ಕೆಲಸ ಎಂಬ ಆರೋಪ ಕೇಳಿಬಂದಿತ್ತು.

‘ಅಮೆರಿಕದ ಅತ್ಯಂತ ದೊಡ್ಡ ಶತ್ರು ರಷ್ಯಾ’ ಎಂದು 2012ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‍ ಅಭ್ಯರ್ಥಿಯಾಗಿದ್ದ ಮಿಟ್ ರೋಮ್ನಿ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಧ್ಯಕ್ಷ ಬರಾಕ್‍ ಒಬಾಮ, ‘ತಮ್ಮ ಪ್ರತಿಸ್ಪರ್ಧಿಗೆ ವಿದೇಶಾಂಗ ನೀತಿಯೇ ಹೊಸದು. ಅವರಿನ್ನೂ ಶೀತಲ ಸಮರದ ಗುಂಗಿನಲ್ಲಿದ್ದಾರೆ’ ಎಂದು ಹಂಗಿಸಿದ್ದರು.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹೊತ್ತಿಗೆ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ರಿಪಬ್ಲಿಕನ್‍ ಅಭ್ಯರ್ಥಿಯಾಗಿದ್ದ ಡೊನಾಲ್ಡ್‌ ಟ್ರಂಪ್‍ ಗೆಲ್ಲುವುದಕ್ಕೆ ರಷ್ಯಾ ಕೆಲಸ ಮಾಡಿದೆ ಎಂಬ ವರದಿಗಳು ಪ್ರಕಟವಾದವು. ಈ ಬಗ್ಗೆ ತನಿಖೆಯೂ ನಡೆಯಿತು. ಕೇಂಬ್ರಿಜ್‍ ಅನಲಿಟಿಕಾ ಎಂಬ ಕಂಪನಿ ಫೇಸ್‍ಬುಕ್‍ ಮೂಲಕ ಖಾತೆದಾರರ ಮಾಹಿತಿ ಕಳ್ಳತನ ಮಾಡಿ ಟ್ರಂಪ್‍ಗೆ ನೆರವಾದ ಆರೋಪ ಹೊತ್ತು ನಿಂತಿದೆ. ಶೀತಲ ಸಮರ ಕಾಲದಿಂದ ಬದ್ಧ ವೈರಿಯಾಗಿರುವ ರಷ್ಯಾದ ಅಧ್ಯಕ್ಷ ಪುಟಿನ್‍ ಅವರನ್ನು ‘ಅತ್ಯುತ್ತಮ ಆಡಳಿತಗಾರ’ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್‍ ತಾರೀಫು ಮಾಡುತ್ತಿದ್ದಾರೆ.

2014ರ ಮಾರ್ಚ್‌ನಲ್ಲಿ ಉಕ್ರೇನ್‍ ಮೇಲೆ ದಂಡೆತ್ತಿ ಹೋದ ಪುಟಿನ್‍, ಕ್ರಿಮಿಯಾವನ್ನು ವಶಪಡಿಸಿಕೊಂಡಿದ್ದಾರೆ. ಸಿರಿಯಾದಲ್ಲಿ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಬಂಡುಕೋರರ ಮೇಲೆ ವಾಯುದಾಳಿ ನಡೆಸಿದ್ದಾರೆ. ಉಕ್ರೇನ್‍ ಮೇಲೆ ನಡೆಸಿದ ದಾಳಿಯ ನಂತರ ಅಮೆರಿಕ ಹಲವು ನಿರ್ಬಂಧಗಳನ್ನು ಹೇರಿತ್ತು. ಸಿರಿಯಾದಲ್ಲಿ ರಷ್ಯಾದ ಹಸ್ತಕ್ಷೇಪ ಕೂಡ ಅಮೆರಿಕ ಮತ್ತು ಪಶ್ಚಿಮದ ದೇಶಗಳಿಗೆ ಇಷ್ಟವಾಗಿಲ್ಲ. ಆದರೆ ಇವು ಯಾವುವೂ ಲೆಕ್ಕಕ್ಕಿಲ್ಲ ಎಂಬಂತೆ ಪುಟಿನ್‍ ವರ್ತಿಸುತ್ತಾರೆ.

‘ಗುದ್ದಾಟ ಅನಿವಾರ್ಯ ಎಂದಾದರೆ ಮೊದಲ ಗುದ್ದು ನಿನ್ನದೇ ಆಗಿರಲಿ ಎಂಬ ಪಾಠವನ್ನು 50 ವರ್ಷಗಳ ಹಿಂದೆ ಲೆನಿನ್‍ಗ್ರಾಡ್‍ನ ಬೀದಿ ನನಗೆ ಕಲಿಸಿದೆ’ ಎಂದು 2015ರಲ್ಲಿ ಪುಟಿನ್‍ ಹೇಳಿದ್ದರು. ‘ಸಿರಿಯಾದಲ್ಲಿರುವ ಉಗ್ರರು ರಷ್ಯಾ ಮೇಲೆ ದಾಳಿ ಮಾಡುವವರೆಗೆ ಕಾಯುವುದಕ್ಕಿಂತ, ಉಗ್ರರು ಇದ್ದಲ್ಲಿಗೇ ಹೋಗಿ ಅವರನ್ನು ನಿರ್ನಾಮ ಮಾಡಬೇಕು’ ಎಂದೂ ಅವರು ಹೇಳಿದ್ದರು.

ಲೆನಿನ್‍ಗ್ರಾಡ್‍ನ ಬೀದಿ ಕಾಳಗ ಕಲಿಸಿಕೊಟ್ಟ ಪಾಠದ ಬೆಳಕಿನಲ್ಲಿ ರಷ್ಯಾವನ್ನು ಮತ್ತೊಮ್ಮೆ ಸೂಪರ್ ಪವರ್ ಸ್ಥಾನಕ್ಕೆ ಏರಿಸಲು ವಯಸ್ಸು 65 ಆಗಿದ್ದರೂ ಪೈಲ್ವಾನನಂತೆ ಗಟ್ಟಿಮುಟ್ಟಾಗಿರುವ ಪುಟಿನ್‍ಗೆ ಆರು ವರ್ಷದ ಕಾಲಾವಧಿ ಇದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.