ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸಿಗೆ ಹಸಿರು ತುಂಬಿತು ಕೊಡಚಾದ್ರಿ...

Last Updated 19 ಜೂನ್ 2018, 9:13 IST
ಅಕ್ಷರ ಗಾತ್ರ

ಅಂತೂ ಕೊಡಚಾದ್ರಿ ಟ್ರೆಕ್ಕಿಂಗ್ ಹೋಗೋ ಪ್ಲಾನ್ ರೆಡಿ ಆಯ್ತು. ಪ್ಲಾನ್ ಮಾಡುವಾಗ ಬರ್ತೀನಿ ಅಂದಿದ್ದೋರೆಲ್ಲಾ ಹೋಗೋ ದಿನ ‘ಹ್ಯಾಪಿ ಜರ್ನಿ ಮಗಾ’ ಅಂತ ಕೈ ಎತ್ತಿ ಟಾಟಾ ಮಾಡಿಬಿಟ್ರು. ಉಳಿದವರು ನಾಲ್ಕು ಜನ ಜಾಲಹಳ್ಳಿ ಕ್ರಾಸ್‌ನಲ್ಲಿ ರಾಜಹಂಸ ಹತ್ತಿಕೊಂಡ್ವಿ.

ಹಾಳಾದ್ ನಿದ್ದೇನೇ ಬರ್ಲಿಲ್ಲ. ಒಬ್ರುಗೊಬ್ರು ಕ್ವಾಟ್ಲೇ ಕೊಟ್ಕೊಂಡು, ಮಾತಾಡ್ಕೊಂಡು ಕುಂತ್ವಿ. ಉಪ್ಪಿಗೂ, ಸೊಪ್ಪಿಗೂ ಬಾರದ ಮಾತುಗಳು ಬಸ್ಸಿನಲ್ಲಿರೋರಿಗೆಲ್ಲಾ ರೇಜಿಗೆ ಹುಟ್ಟಿಸಿ, ನಿದ್ದೆಗೆಡಿಸಿದ್ರೂ ನಮ್ ಪುಣ್ಯಕ್ಕೆ ಯಾರೂ ನಮ್ಮನ್ನು ಉಗ್ದು ಉಪ್ಪಾಕ್ಲಿಲ್ಲ. ನಿಟ್ಟೂರು ಸೇರೋ ಹೊತ್ತಿಗೆ ಬೆಳಿಗ್ಗೆ 6 ಗಂಟೆ ಆಗಿತ್ತು.

ನಿಟ್ಟೂರಿನಿಂದ ಟ್ರಕ್ಕಿಂಗ್ ಮಾಡೋ ದಾರಿಗೆ 1.5 ಕಿ.ಮೀ. ಆಗಬಹುದು. ಅಲ್ಲೇ ಇಳೀಬಹುದಿತ್ತು. ಆದ್ರೆ ‘ಅಲ್ಲೇನೂ ಸಿಗಲ್ಲ, ನಿಟ್ಟೂರಲ್ಲಿ ಇಳ್ದು ಫ್ರೆಶ್ ಆಗಿ, ಕಾಫೀ-ಗೀಫೀ ಕುಡ್ದು, ಜೀವಾನಾ ಬಿಸಿ ಮಾಡ್ಕೊಂಡು ಹೋಗಿ’ ಅನ್ನೋ ಕಂಡಕ್ಟರ್ ಉಪದೇಶ ನಮಗೆ ಚೂರ್ ಜಾಸ್ತಿನೇ ಹಿಡುಸ್ತು.

ಆದ್ರೆ...

ನಮ್ ಖರಾಬ್ ನಸೀಬ್‌ಗೆ ಅಲ್ಲೊಂದು ನೆರ್ಪಾಗಿರೋ ಶೌಚಾಲಯ ಸಿಗ್ಲಿಲ್ಲ. ಇದ್ದ ಶೌಚಾಲಯದ ಅಕ್ಕಪಕ್ಕ ನಿಲ್ಲೋಕೆ ಆಗ್ತಿರಲಿಲ್ಲ, ಇನ್ನು ಕುರೋದಂತು ಅಸಾಧ್ಯದ ಮಾತು.

ಸರಿ ಇನ್ನೇನ್ ಮಾಡೋದು? ಅಲ್ಲೇ ಎಲ್ಲಾದ್ರೂ ಬಯಲಿಗೆ ಹೋದ್ರಾಯ್ತು ಅನ್ಕೊಂಡ್ವಿ. ಅಷ್ಟೋತ್ತಿಗಾಗ್ಲೇ ತಿಂಡಿ ರೆಡಿ ಮಾಡ್ಕೊಂಡು ಕಾಯ್ಕೊಂಡಿದ್ದ ಹೋಟೇಲ್ಲಲ್ಲಿ ಪಾರ್ಸೆಲ್ ತಗೊಂಡು ಹೋಗೋಣ ಅಂತ ಅನ್ಕೊಂಡ್ವಿ. ಆದ್ರೆ ನಮ್ ಗುಂಪಿನೊಬ್ಬ ಪುಣ್ಯಾತ್ಮ, ಕವ್ಳ, ಕವ್ಳ ಅಂತ ಕಾಡ್ತಿದ್ದರಿಂದ ಅವನಿಗೆ ಎರಡು ಇಡ್ಲಿ, ವಡೆ, ಉಳಿದವರು ತಲಾ ಒಂದೊಂದು ಇಡ್ಲಿ ವಡೆ ತಿನ್ಕೊಂಡು ಪಲಾವ್ ಪಾರ್ಸೆಲ್ ಕಟ್ಟುಸ್ಕೊಂಡು ಚಾರಣಕ್ಕೆ ರೆಡಿ ಆದ್ವಿ.

ಸುಮಾರು 17 ಕಿ.ಮೀ. ಹಾದಿಯ ಪ್ರಯಾಣ ಅದು. ತುದಿಯವರೆಗೂ ಜೀಪಲ್ಲೇ ಹೋಗಬಹುದು. ಜೀಪಿನಲ್ಲಿ ಹೋದರೆ ಅದು ಟ್ರೆಕ್ಕಿಂಗ್ ಹೇಗಾಗುತ್ತೆ? ಅಂಥ ಮಜಾ ಕೊಡಲ್ಲ ಅಂದುಕೊಂಡು ಕುಂಬಳೆ ಅನ್ನೋ ಊರಲ್ಲಿ ಸಿಗೋ ಸರ್ಕಾರಿ ಶಾಲೆವರೆಗೂ ನಡೆದೇ ಹೋದೆವು.

ದಾರಿ ಮಧ್ಯದಲ್ಲೇ ಸಿಕ್ಕ ಸಣ್ಣ ಝರಿ ಹತ್ರ ನಮ್ ನಿತ್ಯಕರ್ಮನ್ನೆಲ್ಲ ಮುಗುಸ್ಕೊಂಡ್ವಿ. ಆ ಸರ್ಕಾರಿ ಶಾಲೆ ದಾಟಿ ಬಲಗಡೆ ತಿರುಗೋ ಮಣ್ಣು ದಾರೀಲೀ ನಮ್ ಪ್ರಯಾಣ ಶುರು ಆಯ್ತು. ಆದ್ರೆ ಆ ದಾರಿಯ ದೂರದ ಬಗ್ಗೆ ಅಷ್ಟು ನಿಖರತೆ ಇರಲಿಲ್ಲ. ಹಾಗಾಗಿ ಅಲ್ಲಲ್ಲಿ ಸಿಕ್ಕಿದೋರನ್ನು ಕೇಳ್ತಾ ಇದ್ವಿ. ಒಬ್ಬೊಬ್ಬರು ಒಂದೊಂದು ದೂರ ಹೇಳ್ತಾ ಇದ್ರು. ‘ಇವರ ಸಾವಾಸ, ಸಾವಾಸ ಅಲ್ಲ. ಹೋದ್ಹಂಗೋಗ್ಲಿ ಮಾದಪ್ಪನ್ ತೇರು’ ಅನ್ಕೊಂಡು ಹಿಡ್ಲುಮನೆ ಫಾಲ್ಸ್‌ವರೆಗೂ ಹೋದ್ವಿ. ನಮಗೆ ಅಷ್ಟೇನು ದಣಿವೂ ಬರಲಿಲ್ಲ.

ಭತ್ತ ಕುಯ್ದ ಗದ್ದೇಲಿ ಮೊದ್ಲೇ ಕಟ್ಟುಸ್ಕೊಂಡು ತಂದಿದ್ದ ನಾಷ್ಟ ತಿನ್ಕೊಂಡು ಫಾಲ್ಸ್ ಹತ್ರ ಹೋದ್ವಿ. ಮಳೆಗಾಲ ಅಲ್ಲ ನೋಡಿ, ಅಲ್ಲಿ ಅಂಥ ನೀರೇನೂ ಇರ್ಲಿಲ್ಲ. ಫಾಲ್ಸ್‌ಗೆ ತೀರಾ ಹತ್ರ ಹೋಗಿ ಫೋಟೋ ಗೀಟೋ ಅಂತ ನಮ್ ಚಟ ತೀರುಸ್ಕೊಂಡ್ವಿ. ಹತ್ರ ಹೋಗೋಕೆ ಮಾಡಿದ್ದ ನಿರ್ಧಾರ ಚೂರ್ ಜಾಸ್ತಿ ಅಪಾಯಕಾರಿ ಅನ್ನೋ ಅರಿವಾಗಿದ್ದು ಆ ಜಾರಿಸೋ ಬಂಡೆ ಮೇಲೆ ಕಾಲಿಟ್ಟಾಗ್ಲೇ.

ಇದೆಲ್ಲದಕ್ಕಿಂತ ನಮ್ ಗುಂಪಿನ ಮತ್ತೊಬ್ಬ ಪ್ರಜೆ ಮಾಡಿದ ಅವಾಂತರ ಮಾತ್ರ ಇವತ್ತಿಗೂ ನಗು ತರಿಸುತ್ತೆ. ಫಾಲ್ಸ್ ಹತ್ರ ಡ್ಯಾನ್ಸು-ಗೀನ್ಸು ಮಾಡೋ ಸಂದರ್ಭ ಆಯ ತಪ್ಪಿ ನೀರಿಗೆ ಕೈ ಊರಿಬಿಟ್ಟ. ಆಗ ಎಲ್ಲೋ ಒಂದೆರಡು ಸಣ್ಣ ಜಿಗಣೆ ಅವನ ಕೈಗೆ ಕಾಲ್ಗೆ ಹತ್ಕೊಬಿಟ್ಟೋ. ಇವನೂ ಸುಮ್ನಿರ್ದೇ ಚೀರ್ಕೋಂಡು ಬಟ್ಟೆ ಬರೆನ್ನೆಲ್ಲ ಬಿಚಾಕಿ ನಿಂತ್ಕೊಬುಟ್ಟ.

ಇವ್ನು ಹುಟ್ಟಿಸಿದ್ ಭಯದಿಂದ ಅಷ್ಟೋ ಇಷ್ಟೋ ಜಿಗಣೆ ಬಗ್ಗೆ ಜಾಗೃತಿ ಇದ್ದ ನಂಗೂ ದಿಗಿಲು ಶುರು ಆಯ್ತು. ಕ್ಷಣಕಾಲ ಜಿಗಣೆಯಿಂದ ಜಿಡ್ಡುಗಟ್ಟಿದ ವಾತಾವರಣ ನಿರ್ಮಾಣ ಆಯ್ತು. ಕಡೆಗೆ ಒಂದು ಜಿಗಣೇನೂ ನಮ್ ಮೈ ಹೊಕ್ಕಿಲ್ಲ ಅನ್ನೋದು ಖಾತ್ರಿ ಆದ್ಮೇಲೆ ಸುಧಾರಿಸಿಕೊಂಡು ಹೆಗಲಮೇಲೆ ಒದ್ದೆ ಬಟ್ಟೆ ಹಾಕ್ಕೊಂಡು ಪ್ರಯಾಣ ಮತ್ತೆ ಶುರು ಮಾಡುದ್ವಿ.

ಅಲ್ಲಿಂದ ಶುರುವಾಗುತ್ತೆ ನಮ್ಮ ನಿಜವಾದ ಟ್ರೆಕ್ಕಿಂಗ್‌ ಅನುಭವ. ಕಡಿದಾಗಿರೋ ಆ ಕಾಡಲ್ಲಿ ನಡೆಯೋದಂತು ಥ್ರಿಲ್ಲಿಂಗ್‌. ಕಾಲು ಚೂರ್ ಆಯ ತಪ್ಪುದ್ರೂ ಸರಿಯಾಗಿ ಹಾಯ್ಕೊತಿವಿ. ಹಸಿರು ವೈಭವ ಮಾತ್ರ ಕಣ್ಣಿಗೆ ಜಾತ್ರೆ. ಸುತ್ತಮುತ್ತಲೂ ಗುಟ್ಟು ಮಾತಾಡೋ ರೀತಿ ಮುತ್ಕೊಂಡಿರೋ ಹಸಿರ ಚಿತ್ತಾರಗಳಂತು ಸೂಪರ್ರೋ ಸೂಪರ್ರು.

ಅಂತೂ ಎರಡು ಬೆಟ್ಟನಾ ಹತ್ತಿ ಇಳಿದು ಅಲ್ಲೇ ಡ್ಯಾನ್ಸ್ ಮಾಡ್ಕೊಂಡು ಜೀಪ್ ಟ್ರ್ಯಾಕ್ ದಾರಿ ತಲುಪಿ ಎಲ್ರೂ ತಳವೂರಿದ್ವಿ. ಅಷ್ಟೊತ್ತಿಗಾಗ್ಲೇ ಮಧ್ಯಾಹ್ನ ಆಗಿತ್ತು.

ನಿಟ್ಟೂರಲ್ಲಿ ಇಳಿದಾಗ್ಲೇ ಓಪನ್ ಇದ್ದ ಅಂಗಡೀಲಿ ಬಿಸ್ಕೇಟ್ಸ್ ಮತ್ತು ಹಣ್ಣುಗಳನ್ನು ತೆಗೆದುಕೊಂಡಿದ್ವಿ.‌‌ ಅದೇ ಅಲ್ಲಿ ಊಟಕ್ಕೆ ಸಮ ಆಯ್ತು. ಆಗ್ಲೇ ಎರಡು ಗಂಟೆ ಆಗಿತ್ತು. ಅಲ್ಲಿ ಕ್ಯಾಂಪು ಹಾಕೋಕೆ ಅನುಮತಿ ಇಲ್ದೇ ಇರೋದ್ರಿಂದ ನಾವು ಕೂಡ ಟೆಂಟ್ ತಗೊಂಡು ಹೋಗಿರಲಿಲ್ಲ.

ನಾವು ಮತ್ತೆ ವಾಪಸ್ ಅವತ್ತೇ ಇಳಿಯೋದು ನಿರ್ಧಾರ ಆಯ್ತು. ರಾತ್ರಿ 9ಕ್ಕೆ ನಿಟ್ಟೂರಲ್ಲಿ ಐರಾವತ ಹತ್ತೋದು ನಿಗದಿ ಆಯ್ತು. ಕೊಡಚಾದ್ರಿ ತುದಿ ತಲುಪಿ ಅಲ್ಲೇ ಸಿಕ್ಕಿದ ಚುರುಮುರಿ, ಸೌತೆಕಾಯಿ ತಿನ್ಕೊಂಡು. ಜೀಪ್‌ಗಳು ಹೋಗೋ ದಾರೀಲಿ ಬೆಟ್ಟ ಇಳಿಯೋಣ ಅಂತ ನಿರ್ಧಾರ ಮಾಡ್ಕೊಂಡ್ವಿ.

ಆ ಮಣ್ಣ ದಾರೀಲೀ ದೋಳೇಬ್ಬಿಸಿಕೊಂಡು, ಒಬ್ರಿಗೊಬ್ರೂ ಕಾಲೆಳ್ಕೊಂಡು, 12 ಕಿ.ಮೀ. ದಾರಿಯ ಬೆಟ್ಟ ಇಳಿದ್ವಿ. ಕಟ್ಟಿನಹೊಳೆ ಅನ್ನೋ ಕಡೆ ಇಳಿಯುವಾಗ ಅನುಮತಿ ತಗೊಂಡ್ವಿ. ಕಟ್ಟಿನಹೊಳೇಲಿ ಭರ್ಜರಿ ಊಟ ಸಿಕ್ತು. ಇದು ಒಂಥರಾ ಪುಟ್ಗೋಸಿ ಬೇಡ್ತಿದ್ದೋನ್ಗೆ ಪ್ಯಾಂಟ್ ಸಿಕ್ಕಿದ್ದಾಂಗಾಯ್ತು.

ಅಲ್ಲಿ ಬೆಟ್ಟ ಹತ್ತುವಾಗ ಅಡ್ವಾನ್ಸ್ ಕೊಟ್ಟು ನಮಗೆ ಬೇಕಾದ ಊಟನಾ ಆರ್ಡರ್ ಮಾಡಿ ಹೋದ್ರೆ ಇಳಿಯೋಷ್ಟೊತ್ಗೆ ಊಟ ರೆಡಿಯಿರುತ್ತಂತೆ. ನಾವು ಬೇರೆ ಕಡೆ ಹತ್ತಿದ್ದರಿಂದ ಇವೆಲ್ಲ ಗೊತ್ತಿರಲಿಲ್ಲ. ಅಂತು ಊಟ ಮಾಡಿ 5.30ಗೆ ನಿಟ್ಟೂರಿನ ಕಡೆ ಬರೋ ಬಸ್ಸಿಗೆ ಕಾಯ್ಕೊಂಡು ನಿಂತ್ವಿ. ನಿಟ್ಟೂರಲ್ಲಿ ಇಳಿದಾಗ ಸುಮಾರು ಸಂಜೆ 6.00 ಆಗಿತ್ತು.

ರಾತ್ರಿ ನಾವು ಬುಕ್ ಮಾಡಿದ್ದ ಬಸ್ ಬರೋಕೆ ಇನ್ನೂ ಸಾಕಷ್ಟು ಟೈಮ್ ಇದ್ದುದ್ದರಿಂದ ಅಲ್ಲೇ ನಿಟ್ಟೂರಿಂದ ನಾಲ್ಕು ಕಿ.ಮೀ ದೂರದಲ್ಲಿರೋ ಶರಾವತಿ ಹಿನ್ನೀರು ತೂಗು ಸೇತುವೆ ನೋಡೋಕೆ ಹೋದ್ವಿ. ಕಾಲುಗಳು ಆಗ್ಲೇ ಉಗಿತಿದ್ದರಿಂದ ಆಟೊ ಮಾಡ್ಕೊಂಡು ಹೋದ್ವಿ.

ಅದೂ ಕೂಡ ಮಸ್ತಾಗಿತ್ತು. ನಮ್ ಪುಣ್ಯಕ್ಕೆ ಅಲ್ಲೇ ಒಬ್ಬ ಅಜ್ಜ ಬಂದು ಬೋಟಿಂಗ್ ಮಾಡ್ತೀರಾ ಅಂದ್ರು. ಹಾಲ್ಕೀರಲ್ಲಿ ಗೋಡಂಬಿ ಸಿಕ್ಕಿದಂಗೆ ಆಗಿತ್ತು.

ನಿಜಕ್ಕೂ ನಂಗೆ ಆ ಸುಖಸುಂದರ ವಾತಾವರಣನಾ ಪದಗಳಲ್ಲಿ ಹೇಳೋಕೆ ಬರ್ತಿಲ್ಲ. ಆಗ್ಲೇ ಸಂಜೆ ಏಳರ ಸಮಯ ಸ್ವಲ್ಪವೇ ಚೆಲ್ಲಿದ್ದ ಬೆಳಕು. ಎರಡು ದೋಣಿನಾ ಒಂದಾಗಿ ಕಟ್ಟಿ ನಾಲ್ಕು ಜನರಲ್ಲಿ ಮೂರು ಜನಕ್ಕೆ ಹುಟ್ಟು ಕೊಟ್ಟು ಇನ್ನೊಂದು ಕಡೆ ಅವರು ಹುಟ್ಟು ಹಾಕ್ತ ನಡೀರಿ ಅಂದ್ರು. ಅಷ್ಟು ನೀರಿಗೂ ನಾವೇ ವಾರಸ್ದಾರರು. ನಿಧಾನಕ್ಕೆ ಚಲಿಸ್ತ ಚಲಿಸ್ತ ಸಾಗ್ತಿದ್ರೆ, ‘ಯಾವೋನಿಗೆ ಬೇಕು ಸ್ವರ್ಗ, ಹಿಂಗೇ ಇದ್ಬುಡುವಾ’ ಅನ್ನಿಸ್ಬಿಡ್ತು.

ಅದುನೂ ಮುಗಿಸ್ಕೊಂಡು ವಾಪಸ್ ನಿಟ್ಟೂರಿಗೆ ನಡೆದುಕೊಂಡು ಹೋಗುವಾ ಅಂತ ಸೇತುವೆ ಬಿಡ್ತಿದಂಗೆ ಭಗವಂತಾನೇ ಜೀಪ್ ತಗೊಂಡು ಡ್ರೈವರ್ರಾಗಿ ಬಂದು ನಿಟ್ಟೂರುವರೆಗೂ ಪುಕ್ಸಟ್ಟೆಯಾಗಿ ಬಿಟ್ಟು ನಿಟ್ಟುಸುರು ಬಿಡೋ ಹಾಗೇ ಮಾಡಿ ಮರೆಯಾದ.

ಅಂತೂ ತುಂಬಾ ಕಾದ ನಂತರ ನಮ್ ಐರಾವತ ಬಂತು.

ಅನುಭವಿಸಿದ ನೋವೇ ಸೋಬಾನೆಯಾಗಿ, ಸೀಟುಗಳೇ ಸುಪತ್ತಿಗೆ ಆಗಿ, ಮಾಯದ ನಿದ್ರೆ ನಮ್ಮನ್ನು ತಬ್ಬಿಕೊಂಡು, ಸರಿಯಾಗಿ ಬೆಂಗಳೂರಲ್ಲಿ ಕಣ್ಣು ಬಿಟ್ಟಾಗ ಬೆಳಿಗ್ಗೆ ಆರು ಗಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT