ಮಂಗಳವಾರ, ಆಗಸ್ಟ್ 4, 2020
26 °C

ರಾಜ್ಯದಲ್ಲಿ 10ರವರೆಗೂ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ 10ರವರೆಗೂ ಮಳೆ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಇದೇ 10ರವರೆಗೂ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾದಾಗ ಮೋಡಗಳ ರಚನೆ ಉಂಟಾಗುತ್ತದೆ. ಮುಂಗಾರು ಪೂರ್ವದಲ್ಲಿ ಈ ರೀತಿಯ ವಿದ್ಯಮಾನ ಸಾಮಾನ್ಯವಾಗಿರುತ್ತದೆ. ಇದರ ಜೊತೆಗೆ ವಾಯುಭಾರ ಕುಸಿತ ಉಂಟಾಗಿರುವುದರಿಂದ ಉತ್ತಮ ಮಳೆಯಾಗುತ್ತಿದೆ ಎಂದು ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದ ಎಲ್ಲಾ ಭಾಗಗಳಲ್ಲಿ ಮಳೆಯಾಗುತ್ತಿಲ್ಲ. ವಾಯುಭಾರ ಕುಸಿತದ ಪರಿಣಾಮವು ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳವರೆಗೆ ಮಾತ್ರ ವಿಸ್ತರಿಸಿರುವುದರಿಂದ ಈ ಭಾಗಗಳಲ್ಲಿ ಮಳೆಯಾಗುತ್ತಿದೆ. ಇದೇ 7ರ ನಂತರ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದರು.

ಮುಂಗಾರು ಮಳೆಗೆ ತೊಂದರೆ ಇಲ್ಲ: ಮಾರ್ಚ್‌, ಏಪ್ರಿಲ್‌ ತಿಂಗಳಿನಲ್ಲಿ ಮಳೆಯಾಗುವುದರಿಂದ ಮುಂಗಾರು ಮಳೆಗೆ ತೊಂದರೆ ಆಗುತ್ತದೆಯೇ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಮೇ ತಿಂಗಳಿನಲ್ಲಿ ಹೆಚ್ಚು ಮಳೆಯಾದರೆ, ಮುಂಗಾರು ತಡವಾಗುತ್ತದೆ ಎನ್ನಲಾಗುತ್ತದೆ. ಕೆಲವೊಮ್ಮೆ ಇದು ನಿಜವಾಗಿದೆ. ಆದರೆ, ಯಾವಗಲೂ ಇದು ಹೀಗೆ ಆಗುತ್ತದೆ ಎನ್ನುವುದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದರು.

ಸಮುದ್ರದ ಮೇಲಿನ ತಾಪಾನದಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾದರೂ (ಎಲ್‌–ನೀನೊ ಪರಿಣಾಮ) ಮುಂಗಾರಿಗೆ ತೊಂದರೆಯಾಗುತ್ತದೆ. ಸದ್ಯ ಆ ಸಮಸ್ಯೆ ಇಲ್ಲ. ಹಾಗಾಗಿ ಮುಂಗಾರು ವ್ಯತ್ಯಯವಾಗುವುದಿಲ್ಲ ಎಂದು ವಿವರಿಸಿದರು.

ಚಿಕ್ಕಬಳ್ಳಾಪುರದಲ್ಲಿ 7.5 ಸೆಂ.ಮೀ ಮಳೆ

ಮುಂದಿನ 24 ತಾಸಿನಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನದಲ್ಲಿ ಒಳಹವೆ ಮುಂದುವರಿಯಲಿದೆ. ಸೋಮವಾರ ಚಿಕ್ಕಬಳ್ಳಾಪುರದಲ್ಲಿ 7.5 ಸೆಂ.ಮೀ ಮಳೆ ದಾಖಲಾಗಿದೆ. ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲೂ ಮಳೆಯಾಗಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆ ಸುರಿದಿದೆ. ಕಲಬುರ್ಗಿಯಲ್ಲಿ ಗರಿಷ್ಠ ಉಷ್ಣಾಂಶ 40.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಚಿಕ್ಕನಾಯಕನಹಳ್ಳಿ 4 ಸೆಂ.ಮೀ, ಸುಬ್ರಹ್ಮಣ್ಯ 3 ಸೆಂ.ಮೀ, ಸುಳ್ಯ, ಮಾದಾಪುರ, ಶ್ರೀರಂಗಪಟ್ಟಣದಲ್ಲಿ ತಲಾ 2 ಸೆಂ.ಮೀ, ಸೋಮವಾರಪೇಟೆ, ಬೇಲೂರು, ಮುಳಬಾಗಿಲು, ಗೌರಿಬಿದನೂರು, ತಿಪಟೂರು ಹಾಗೂ ಶಿರಾದಲ್ಲಿ ತಲಾ 1 ಸೆಂ.ಮೀ ವರ್ಷಧಾರೆಯಾಗಿದೆ.

ಸಿಡಿಲಿಗೆ ಇಬ್ಬರು ರೈತರು ಬಲಿ

ಚಿಕ್ಕಬಳ್ಳಾಪುರ: ಸೋಮವಾರ ಮಧ್ಯಾಹ್ನ ಇಲ್ಲಿ ಆಲಿಕಲ್ಲು ಸಹಿತ ‌ಭಾರಿ ಮಳೆ ಸುರಿಯಿತು. ಸಿಡಿಲಿಗೆ ಇಬ್ಬರು ರೈತರು ಬಲಿಯಾಗಿದ್ದಾರೆ. 50 ದ್ರಾಕ್ಷಿ ತೋಟಗಳಿಗೆ ಹಾನಿಯಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನೊಡ್ಡಂಪಲ್ಲಿ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ನರಸಿಂಹಪ್ಪ (60), ಸದಾಶಿವ (48) ಸಿಡಿಲಿಗೆ ಬಲಿಯಾದವರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲಮಂಡಿಕಲ್, ಪೇರೇಸಂದ್ರ, ಶೆಟ್ಟಿಗೆರೆ, ಗೊಲ್ಲವಾರಹಳ್ಳಿ, ಅಡಿಗಲ್, ಪಾತೂರು, ನಲ್ಲಪ್ಪನಹಳ್ಳಿ, ಮಂಡಿಕಲ್, ಕಮ್ಮಗುಟ್ಟಹಳ್ಳಿ ಸುತ್ತಲಿನ ದ್ರಾಕ್ಷಿ ತೋಟಗಳು ಭಾರಿ ಗಾತ್ರದ ಆಲಿಕಲ್ಲಿನ ರಭಸಕ್ಕೆ ಹಾನಿಗೊಂಡಿವೆ.

ತರಕಾರಿ, ಹೂವು, ಹಿಪ್ಪು ನೇರಳೆ ಸೊಪ್ಪಿನ ತೋಟಗಳಿಗೂ ಹಾನಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.