ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡಿ

ಹೊರಗಿನವರಿಗೆ ಟಿಕೆಟ್‌ ಕೊಟ್ಟರೆ ಬೆಂಬಲ ನೀಡುವುದಿಲ್ಲ; ಮೀಸಲು ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಗಳ ಸಭೆಯಲ್ಲಿ ಎಚ್ಚರಿಕೆ
Last Updated 3 ಏಪ್ರಿಲ್ 2018, 11:37 IST
ಅಕ್ಷರ ಗಾತ್ರ

ಹಾಸನ: ‘ಆಲೂರು– ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಸ್ಥಳೀಯ ಕಾರ್ಯಕರ್ತರಿಗೇ ಟಿಕೆಟ್ ನೀಡಬೇಕು’ ಎಂದು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಒತ್ತಾಯಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಟಿಕೆಟ್ ಆಕಾಂಕ್ಷಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು.‘ಕ್ಷೇತ್ರದಲ್ಲಿ 70 ಸಾವಿರಕ್ಕೂ ಹೆಚ್ಚು ದಲಿತ ಮತದಾರರಿದ್ದಾರೆ. ಹೊರಗಿನ ಅಭ್ಯರ್ಥಿ ಬದಲು ಕ್ಷೇತ್ರದ ಸಮಸ್ಯೆ ಬಗ್ಗೆ ತಿಳಿದಿರುವವರಿಗೆ ಟಿಕೆಟ್ ನೀಡಬೇಕು. ಈಗ ಅರ್ಜಿ ಸಲ್ಲಿಸಿರುವ 17 ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಬೆಂಬಲಿಸಲಾಗುವುದು. ಒಂದು ವೇಳೆ ಹೊರಗಿನವರಿಗೆ ನೀಡಿದರೆ ಬೆಂಬಲ ನೀಡುವುದಿಲ್ಲ’ ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಉಪಾಧ್ಯಕ್ಷ ಕೆಲವತ್ತಿ ಸೋಮಶೇಖರ್ ಮಾತನಾಡಿ, ‘ಜಿಲ್ಲೆಯಲ್ಲಿ ಕೆಲ ನಾಯಕರು ದಲಿತರನ್ನು ತುಳಿಯಲು ಪಿತೂರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.‘ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯದವರಿಗೆ ಟಿಕೆಟ್ ನೀಡುವ ಹುನ್ನಾರ ನಡೆಯುತ್ತಿದ್ದು, ಇದು ಸ್ವಾಭಿಮಾನಕ್ಕೆ ಧಕ್ಕೆ ತರುವಂತದ್ದಾಗಿದೆ. ಕೂಡಲೇ ಬಲಗೈ ಸಮುದಾಯದವರು ಸಂಘಟಿತರಾಗಿ ಸ್ಥಳೀಯರಿಗೆ ಟಿಕೆಟ್ ನೀಡಲು ಹೈ ಕಮಾಂಡ್ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.‘ಈಗಾಗಲೇ ಜಿಗಣಿ ಕೃಷ್ಣಪ್ಪ ಎಂಬುವವರು ವರ್ಷದಿಂದ ಕ್ಷೇತ್ರದಲ್ಲಿ ಸಂಚರಿಸಿ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಏನು ಎಂಬುದನ್ನು ತಿಳಿಸಲಿ’ ಎಂದು ಸವಾಲು ಹಾಕಿದರು.

ಹಿರಿಯ ಮುಖಂಡ ಪರ್ವತಯ್ಯ ಮಾತನಾಡಿ, ‘ಆಕಾಂಕ್ಷಿಗಳು ಬೆಂಗಳೂರಿನಲ್ಲಿ ನಾಯಕರನ್ನು ಭೇಟಿ ಮಾಡಿ ಮನವರಿಕೆ ಮಾಡಬೇಕಾಗಿದೆ. ಸಮಯ ಹೆಚ್ಚು ಇಲ್ಲದಿರುವ ಕಾರಣ ಹಾಗೂ ಸದ್ಯದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದರಿಂದ ನಿಯೋಗ ತೆರಳಬೇಕು’ಎಂದು ಸಲಹೆ ನೀಡಿದರು.

ದಲಿತ ಮುಖಂಡ ಎಚ್.ಕೆ. ಸಂದೇಶ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಪುಟ್ಟರಾಜು, ಮುಖಂಡರಾದ ರವಿ, ರಂಗಣ್ಣ, ಕೃಷ್ಣಯ್ಯ, ಚನ್ನಮಲ್ಲಯ್ಯ, ಉಪಾಧ್ಯಕ್ಷ ಅಶೋಕ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT