ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ, ವಿವಿ ಪ್ಯಾಟ್‌ ಬಳಕೆ ಪ್ರಾತ್ಯಕ್ಷಿಕೆ

ಚುನಾವಣೆ ದಿನ ಬೆಳಿಗ್ಗೆ 6 ಗಂಟೆಗೆ ಅಣಕು ಮತದಾನ, ವೀಕ್ಷಕರ ಸಮ್ಮುಖದಲ್ಲಿ ಪರಿಶೀಲನೆ, ದೃಢೀಕರಣ
Last Updated 3 ಏಪ್ರಿಲ್ 2018, 12:57 IST
ಅಕ್ಷರ ಗಾತ್ರ

ಮಂಡ್ಯ: ‘ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ಮತ ಖಾತರಿ ಯಂತ್ರದ (ವಿವಿ ಪ್ಯಾಟ್‌) ಮೂಲಕ ಮತ ಚಲಾವಣೆ ಮಾಡುವ ಕುರಿತು ಜಿಲ್ಲೆಯಾದ್ಯಂತ ಪ್ರತಿ ಮತಗಟ್ಟೆ ಮಟ್ಟದಲ್ಲಿ ಜನರಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮತಯಂತ್ರ ಹಾಗೂ ಮತ ಖಾತರಿ ಯಂತ್ರ ಬಳಕೆಯ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮೇ 12ಕ್ಕೂ 15 ದಿನ ಮುಂಚಿತವಾಗಿ ಪ್ರತಿ ಮತಗಟ್ಟೆಯಲ್ಲಿ ಸೆಕ್ಟರ್‌ ಅಧಿಕಾರಿಗಳು ಅಣಕು ಮತದಾನದ ಮೂಲಕ ಜಾಗೃತಿ ಮೂಡಿಸುತ್ತಾರೆ. ಇದೇ ಮೊದಲ ಬಾರಿಗೆ ಮತ ಖಾತ್ರಿ ಯಂತ್ರ ಬಳಸಲಾಗುತ್ತಿದೆ. ಪ್ರತಿ ಮತದಾರ ಮತ ಚಲಾವಣೆ ಮಾಡಿದ ನಂತರ ವಿವಿ ಪ್ಯಾಟ್‌ ಯಂತ್ರದಲ್ಲಿ ತಾನು ಮತ ಚಲಾವಣೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬಹುದು. ಮತ ಯಂತ್ರದಲ್ಲಿ ಅಭ್ಯರ್ಥಿಯ ಮುಂದೆ ಗುಂಡಿ ಒತ್ತಿದ ನಂತರ ಪಕ್ಕದಲ್ಲೇ ಇರುವ ವಿವಿ ಪ್ಯಾಟ್‌ನಲ್ಲಿ ಅಭ್ಯರ್ಥಿ ಸಂಖ್ಯೆ ಹಾಗೂ ಚಿನ್ಹೆ ಏಳು ಸೆಕೆಂಡ್‌ ಕಾಲ ಪ್ರದರ್ಶನಗೊಳ್ಳುತ್ತವೆ’ ಎಂದು ಹೇಳಿದರು.

‘ವಿವಿ ಪ್ಯಾಟ್‌ ರಸೀದಿ ಯಂತ್ರದಲ್ಲಿಯೇ ಸಂಗ್ರಹವಾಗಲಿವೆ. ಅಗತ್ಯ ಬಿದ್ದಾಗ ಚುನಾವಣಾಧಿಕಾರಿಗಳು ರಶೀದಿಯನ್ನು ಎಣಿಕೆ ಮಾಡಬಹುದು. ಮತದಾನ ಮಾಡಿದ ಬಗ್ಗೆ ಗೊಂದಲ ನಿವಾರಣೆಗೆ ವಿವಿ ಪ್ಯಾಟ್‌ ಸಹಾಯಕವಾಗಲಿದೆ. ಚುನಾವಣಾಧಿಕಾರಿ ನಿಯಂತ್ರಣ ಘಟಕದಲ್ಲಿ ಬ್ಯಾಲೆಟ್‌ ತೆರೆದು ಪ್ರತಿ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಾರೆ. ಮತದಾರ ಮತದಾನ ಸ್ಥಳಕ್ಕೆ ತೆರಳಿ ಅಭ್ಯರ್ಥಿಯ ಮುಂದಿನ ನೀಲಿ ಗುಂಡಿ ಒತ್ತಬೇಕು. ತಕ್ಷಣ ಕೆಂಪು ಬಣ್ಣದ ದೀಪ ಪ್ರಜ್ಞಲಿಸಿ, ಶಬ್ದ ಹೊಮ್ಮುತ್ತದೆ. ನಂತರ ವಿವಿ ಪ್ಯಾಟ್‌ ಇದನ್ನು ಮತದಾನವನ್ನು ಮತ್ತೊಮ್ಮೆ ದೃಡೀಕರಿಸುತ್ತದೆ’ ಎಂದು ಹೇಳಿದರು.

ಮತಯಂತ್ರದಲ್ಲಿ ಭಾವಚಿತ್ರ: ‘ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರದ ಮೇಲೆ ಅಭ್ಯರ್ಥಿಗಳ ಭಾವಚಿತ್ರ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಯ ಚಿನ್ಹೆ, ಸಂಖ್ಯೆಯ ಜೊತೆಯಲ್ಲಿ ಭಾವಚಿತ್ರ ಇರುವ ಕಾರಣ ಯಾವುದೇ ಗೊಂದಲ ಉಂಟಾಗುವುದಿಲ್ಲ. ಮತಯಂತ್ರವನ್ನು ಈಗಾಗಲೇ ಹಲವು ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ. ಮೊದಲ ಬಾರಿ ವಿವಿ ಪ್ಯಾಟ್‌ ಬಳಕೆ ಮಾಡಲಾಗುತ್ತಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗಿದೆ’ ಎಂದರು.

‘ವಿವಿ ಪ್ಯಾಟ್‌ ಯಂತ್ರಗಳಲ್ಲಿ ಎರಡು ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಲಾಗಿದೆ. ಯಂತ್ರದಲ್ಲಿ ಬ್ಯಾಟರಿ ಕಡಿಮೆಯಾಗಿದ್ದರೆ ಬ್ಯಾಟರಿ ಬದಲಾವಣೆಗೆ ಅವಕಾಶವಿದೆ. ಆದರೆ ಪ್ರಿಂಟರ್‌ ಸಮಸ್ಯೆಯಾದರೆ ಹೊಸ ಯಂತ್ರ ಬಳಸಲಾಗುವುದು. ಯಂತ್ರವನ್ನು ಸಂಪೂರ್ಣವಾಗಿ ಮುದ್ರೆ ಮಾಡಲಾಗಿರುತ್ತದೆ. ತಾಂತ್ರಿಕ ಸಮಸ್ಯೆಗಳಿದ್ದರೆ ಯಂತ್ರವೇ ಪ್ರದರ್ಶಿಸುತ್ತದೆ. ಈ ಕುರಿತು ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿ ನಿಗಾ ವಹಿಸುತ್ತಾರೆ’ ಎಂದು ಹೇಳಿದರು.

ಬೆಳಿಗ್ಗೆ ಅಣಕು ಮತದಾನ: ‘ಮೇ 12ರಂದು ಮತಗಟ್ಟೆ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ತೆರೆದು ಅಣಕು ಮತದಾನ ಆರಂಭಿಸಿ ಪರೀಕ್ಷೆ ನಡೆಸುತ್ತಾರೆ. ವೀಕ್ಷಕರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ನಂತರ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ ಎಂಬುದು ಖಾತ್ರಿಯಾದ ನಂತರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತದೆ. ಒಟ್ಟು ನಾಲ್ಕು ಯಂತ್ರಗಳು ಇರುತ್ತವೆ. ಮತದಾನ ನಿಯಂತ್ರ ಘಟಕವನ್ನು ಮತಗಟ್ಟೆ ಅಧಿಕಾರಿ ನಿರ್ವಹಣೆ ಮಾಡುತ್ತಾರೆ. ವಿವಿ ಪ್ಯಾಟ್‌ ಬಗ್ಗೆ ಮಾಹಿತಿ ನೀಡುವ ಇನ್ನೊಂದು ಯಂತ್ರವನ್ನೂ ಮತಗಟ್ಟೆ ಅಧಿಕಾರಿ ಬಳಸುತ್ತಾರೆ. ಮತದಾನ ಸ್ಥಳದಲ್ಲಿ ವಿವಿ ಪ್ಯಾಟ್‌ ಮತ್ತು ಮತ ಯಂತ್ರ ಒಂದೇ ಸ್ಥಳದಲ್ಲಿ ಇಡಲಾಗಿರುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಹಾಜರಿದ್ದರು.

ಮತಗಟ್ಟೆಗೊಂದು ವ್ಹೀಲ್‌ಚೇರ್‌

‘ಅಂಗವಿಕಲರು ಮತದಾನ ಮಾಡಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಗೆ ಒಂದು ವ್ಹೀಲ್‌ಚೇರ್‌ ಸೌಲಭ್ಯ ನೀಡಲಾಗುವುದು. ವಯೋವೃದ್ಧರು ಮತ ಚಲಾವಣೆ ಮಾಡಲು ಬೇರೆ ವ್ಯಕ್ತಿಗಳು ಸಹಾಯ ಮಾಡುವಂತಿಲ್ಲ. ಮತಗಟ್ಟೆಯಲ್ಲಿ ಇರುವ ಸ್ವಯಂಸೇವಕರು ಅವರಿಗೆ ಸಹಾಯ ಮಾಡುತ್ತಾರೆ. ಮತದಾನ ಸ್ಥಳಕ್ಕೆ ಅವರನ್ನು ಕರೆದೊಯ್ಯುವ ಅವಕಾಶವಿದೆ. ಆದರೆ ಮತ ಚಲಾವಣೆಯನ್ನು ವೃದ್ಧರೇ ಮಾಡುತ್ತಾರೆ. ಅಂಧರು ಮತದಾನ ಮಾಡುವಾಗಲೂ ಸ್ವಯಂ ಸೇವಕರು ಸಹಾಯ ಮಾಡುತ್ತಾರೆ’ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

₹ 2.5 ಲಕ್ಷ ಹಣ ವಶ

‘ಶ್ರೀರಂಗಪಟ್ಟಣ ತಾಲ್ಲೂಕಿನ ಕಳಸ್ತವಾಡಿ ಚೆಕ್‌ಪೋಸ್ಟ್‌ ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹ 2.5 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ಹಣದ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದ್ದು ವಿಚಾರಣೆ ನಡೆಯುತ್ತಿದೆ. ಪ್ರತಿ ವ್ಯಕ್ತಿ ₹ 50 ಸಾವಿರ ಹಣ ಸಾಗಿಸಲು ಅವಕಾಶವದೆ. ಅದಕ್ಕಿಂತ ಹೆಚ್ಚಿಗೆ ಸಾಗಿಸಲು ಅಗತ್ಯ ದಾಖಲಾತಿ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಹೇಳಿದರು.

ಮದ್ಯ ಸಾಗಣೆ ಮೇಲೆ ನಿರ್ಬಂಧ

‘ಮದ್ಯ ಸಾಗಣೆ ಮೇಲೆ ಕಟ್ಟನಿಟ್ಟಿನ ನಿರ್ಬಂಧ ವಿಧಿಸಲಾಗಿದ್ದು ದೇಶದಲ್ಲಿ ಉತ್ಪಾದನೆಯಾಗುವ ಮದ್ಯವನ್ನು ಒಬ್ಬ ವ್ಯಕ್ತಿ 2,3 ಲೀಟರ್‌ ಮಾತ್ರ ಸಾಗಿಸಬಹುದು. 9.1 ಲೀಟರ್‌ ವಿದೇಶಿ ಮದ್ಯ ಸಾಗಿಸಲು ಅವಕಾಶ ನೀಡಲಾಗಿದೆ. 18 ಲೀಟರ್‌ ಬಿಯರ್‌ ಸಾಗಿಸಲು ಅವಕಾಶವಿದೆ’ ಎಂದು ಮಂಜುಶ್ರೀ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT