ಇಂದು ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ

7
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಚಾಲನೆ, ಸುಮಾರು 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ

ಇಂದು ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ

Published:
Updated:

ಹೊಳಲ್ಕೆರೆ: ಪಟ್ಟಣದ ಕೊಟ್ರೆ ನಂಜಪ್ಪ ಪಿಯು ಕಾಲೇಜು ಮೈದಾನದಲ್ಲಿ ಏ. 4ರಂದು ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ನಡೆಯಲಿದೆ.ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆಗೆ ಚಾಲನೆ ನೀಡಲಿದ್ದು, ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಸಿದೆ. ರಾಹುಲ್ ಭೇಟಿ ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಸಂಚಲನ ಮೂಡಿಸಿದೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಯಾತ್ರೆಯಿಂದಲೇ ಚುನಾವಣಾ ರಣಕಹಳೆ ಊದುವ ಲಕ್ಷಣಗಳು ಗೋಚರಿಸುತ್ತಿವೆ.

ಅಮಿತ್ ಶಾ ವರ್ಸಸ್ ರಾಹುಲ್ ಗಾಂಧಿ? ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕಿಂತ ಮೊದಲು ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಬರುತ್ತಿರುವುದು ಈ ಕ್ಷೇತ್ರದ ಪ್ರತಿಷ್ಠೆಯನ್ನು ತೋರಿಸುತ್ತದೆ. ಬಿಜೆಪಿ ಅಧ್ಯಕ್ಷ ಶಾ ಕೂಡ ಜಿಲ್ಲಾ ಕೇಂದ್ರ ಬಿಟ್ಟು ಹೊಳಲ್ಕೆರೆಯಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದರು. ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಟ್ಟಣಕ್ಕೆ ಬರುತ್ತಿದ್ದು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬಿಜೆಪಿಗೆ ತಿರುಗೇಟು ನೀಡುವ ತವಕದಲ್ಲಿದ್ದಾರೆ.

ಫ್ಲೆಕ್ಸ್, ಬ್ಯಾನರ್ ಬಂಟಿಂಗ್ಸ್ ಇಲ್ಲ: ರಾಹುಲ್ ಗಾಂಧಿ ಭಾಗವಹಿಸುತ್ತಿರುವ ಜನಾಶೀರ್ವಾದ ಯಾತ್ರೆಗೆ ಪಟ್ಟಣದ ಕೊಟ್ರೆ ನಂಜಪ್ಪ ಪಿಯು ಕಾಲೇಜು ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಪೆಂಡಾಲ್ ತುಂಬ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿವೆ. ಆದರೆ, ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಕಟ್ಟಿಲ್ಲ. ಹಿಂದೆ ನಡೆಯುತ್ತಿದ್ದ ರಾಜಕೀಯ ಸಮಾವೇಶಗಳಲ್ಲಿ ಪಟ್ಟಣದ ತುಂಬ ಪಕ್ಷದ ನಾಯಕರ ಫ್ಲೆಕ್ಸ್‌ಗಳನ್ನು ನಿಲ್ಲಿಸಲಾಗುತ್ತಿತ್ತು. ಆದರೆ, ಈ ಬಾರಿ ಪಟ್ಟಣ ಫ್ಲೆಕ್ಸ್‌ ಮುಕ್ತವಾಗಿದೆ.

ಆಧುನಿಕ ತಂತ್ರಜ್ಞಾನದ ಪೆಂಡಾಲ್: ಸಾಮಾನ್ಯವಾಗಿ ರಾಜಕೀಯ ಸಮಾವೇಶಗಳಿಗೆ ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತದೆ. ಕಾರ್ಯಕ್ರಮ ನಡೆಯುವ ಒಂದು ವಾರ ಮುಂಚೆಯೇ ಪೆಂಡಾಲ್ ನಿರ್ಮಾಣ ಕಾರ್ಯ ಆರಂಭಿಸುತ್ತಾರೆ. ಆದರೆ, ಈ ಬಾರಿ ಕೇವಲ ಮೂರೇ ದಿನದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಆಧುನಿಕ ತಂತ್ರಜಾನದ ಪೆಂಡಾಲ್ ನಿರ್ಮಿಸಿದ್ದು, ಸುಮಾರು 30 ಸಾವಿರ ಜನ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಪೆಂಡಾಲ್ ಹೊರಗೂ ಜನರಿಗೆ ಅವಕಾಶ ಇದ್ದು ತಾಲ್ಲೂಕು ಸೇರಿದಂತೆ ಹೊಸದುರ್ಗ, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಿಂದ ಸುಮಾರು 1 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ.

ಪಟ್ಟಣಕ್ಕೆ ರಾಜ್ಯನಾಯಕರ ದಂಡು: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸುತ್ತಿರುವುದರಿಂದ ಆ ಪಕ್ಷದ ರಾಜ್ಯನಾಯಕರ ದಂಡೇ ಪಟ್ಟಣಕ್ಕೆ ಆಗಮಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಭಾಗವಹಿಸುವರು.

ಪೊಲೀಸ್ ಬಂದೋಬಸ್ತ್: ರಾಹುಲ್ ಗಾಂಧಿ ಸಮಾವೇಶಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಟ್ಟಣದ ಎಂಎಂ ಕಾಲೇಜು ಹಿಂಭಾಗದ ಕ್ರೀಡಾಂಗಣದಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಫ್ಟರ್‌ನಲ್ಲಿ ಬರಲಿದ್ದು, ಶಿವಮೊಗ್ಗ ರಸ್ತೆಯ ಕುಕ್ವಾಡೇಶ್ವರಿ ದೇವಾಲಯದ ಸಮೀಪ ಎರಡು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಎಸ್‌ಪಿ, ಎಎಸ್‌ಪಿ, ಐವರು ಡಿವೈಎಸ್ಪಿ, 10 ಸಿಪಿಐ, 25 ಪಿಎಸ್ಐ, 650 ಸಿಬ್ಬಂದಿ, 250 ಹೋಂಗಾರ್ಡ್ಸ್,ಕೇಂದ್ರ ಅರೆಸೇನಾಪಡೆ, ಮೀಸಲು ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎನ್ಎಸ್‌ಜಿ ಕಮಾಂಡೊಗಳು ರಾಹುಲ್ ಗಾಂಧಿಗೆ ಭದ್ರತೆ ಒದಗಿಸುವರು.

ಹೋಳಿಗೆ- ಮಾವಿನಹಣ್ಣಿನ ಸೀಕರಣೆ !

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಳಿಗ್ಗೆ 11ಕ್ಕೆ ಪಟ್ಟಣಕ್ಕೆ ಬರಲಿದ್ದು, ಸಮಾವೇಶದಲ್ಲಿ ಭಾಗವಹಿಸುವರು. ಕಾರ್ಯಕ್ರಮ ಮುಗಿದ ನಂತರ ಪಟ್ಟಣದ ಹೊರವಲಯದಲ್ಲಿರುವ ವಾಗ್ದೇವಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.ಹೋಳಿಗೆ-ಮಾವಿನಹಣ್ಣಿನ ಸೀಕರಣೆ, ಹೆಸರುಬೇಳೆ ಪಾಯಸ, ಜೋಳದ ರೊಟ್ಟಿ-ಎಣ್ಣೆಗಾಯಿ, ಚಪಾತಿ-ಪುಂಡಿ ಪಲ್ಯ, ಸೊಪ್ಪಿನ ಪಲ್ಯ, ಅನ್ನ-ಸಾಂಬಾರ್, ಶೇಂಗಾ, ಗುರೆಳ್ಳು, ಕಾಯಿಚಟ್ನಿ, ಮಾವಿನಕಾಯಿ ಚಿತ್ರಾನ್ನ, ಮೆಣಸಿನ ಕಾಯಿ ಬೋಂಡ, ಅಂಬೊಡೆಯನ್ನು ರಾಹುಲ್ ಗಾಂಧಿ ಸವಿಯಲಿದ್ದಾರೆ.ಊಟದ ನಂತರ ಕಲ್ಲಂಗಡಿ, ಪಪ್ಪಾಯ, ಬಾಳೆಹಣ್ಣು ಸೇವಿಸಲಿದ್ದು, ಎಲೆ-ಅಡಿಕೆ ಮೆಲ್ಲುವರು.‘ನನ್ನ ಪತ್ನಿ, ಇಬ್ಬರು ಮಕ್ಕಳು ಮತ್ತು ಅಳಿಯ ಅತಿಥಿಗಳನ್ನು ಸತ್ಕರಿಸುವರು’ ಎಂದು ಸಚಿವ ಎಚ್.ಆಂಜನೇಯ ತಿಳಿಸಿದರು.

**

ರಾಹುಲ್ ಗಾಂಧಿ ಮೊದಲ ಬಾರಿಗೆ ನಮ್ಮ ಕ್ಷೇತ್ರಕ್ಕೆ ಬರುತ್ತಿದ್ದು, ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ -ಎಚ್.ಆಂಜನೇಯ,ಸಚಿವ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry