ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಹಾಕಿ ಖಾತ್ರಿ ಪಡಿಸಿಕೊಳ್ಳಿ

ಜಿಲ್ಲೆಯಲ್ಲಿ ಮೊದಲ ಬಾರಿ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ; ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದ ವಾಯುವಿಹಾರಿಗಳು
Last Updated 4 ಏಪ್ರಿಲ್ 2018, 14:12 IST
ಅಕ್ಷರ ಗಾತ್ರ

ತುಮಕೂರು: ‘ರಂಗಪ್ಪ ಅವರು ‘ಕೆ’ ಗುರುತಿಗೆ ಮತ ಚಲಾಯಿಸಿದ್ದಾರೆ. ಇಲ್ಲಿ ನೋಡಿ ರಂಗಪ್ಪ ಅವರೇ ನೀವು ಇದೇ ಗುರುತಿಗೆ ಮತ ಹಾಕಿದ್ದು ಅಲ್ಲವಾ. ಗಂಗಾಧರಪ್ಪ ‘ಬಿ’ ಗುರುತಿಗೆ ಮತಹಾಕಿದ್ದಾರೆ. ಇಲ್ಲಿ ನೋಡಿ’ ಹೀಗೆ ಮುಖ್ಯ ತರಬೇತುದಾರ ರಿಜ್ವಾನ್ ಬಾಷಾ ಅವರು ಜನರನ್ನು ಕರೆದು ಕರೆದು ಮತ ಹಾಕಿಸಿ, ಅವರು ಯಾವ ಗುರುತಿಗೆ ಮತಹಾಕಿದ್ದಾರೆ ಎನ್ನುವುದನ್ನು ಖಾತ್ರಿ ಪಡಿಸುತ್ತಿದ್ದರು. ಮತ ಹಾಕಿದವರು ಮತದಾನ ಖಾತ್ರಿ ಪಡಿಸಿಕೊಂಡು ತಲೆ ಅಲ್ಲಾಡಿಸುತ್ತಿದ್ದರು. ವಾಯುವಿಹಾರಿಗಳು ತದೇಕ ಚಿತ್ತದಿಂದ ತರಬೇತುದಾರರ ಮಾತು ಆಲಿಸುತ್ತಿದ್ದರು.ನಗರದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದ ಜನರಿಗೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ಸಮಿತಿಯು (ಸ್ವೀಪ್‌) ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ವಿ.ವಿ‌ ಪ್ಯಾಟ್ (ಮತದಾನ ಖಾತ್ರಿ ಯಂತ್ರ) ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿತು.

ಚುನಾವಣೆ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸುವುದು, ನಾವು ಯಾರಿಗೆ ಮತ ಹಾಕಿದೆವು ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಪ್ರಾತ್ಯಕ್ಷಿ
ಕೆಯ ಪ್ರಮುಖ ಉದ್ದೇಶ. ಬಹುತೇಕ ವಾಯುವಿಹಾರಿಗಳು ಮತ ಹಾಕಿದರು. ಯಾರಿಗೆ ಮತ ಚಲಾಯಿಸಿದೆವು ಎನ್ನುವುದನ್ನು ಖಾತ್ರಿ ಪಡಿಸಿಕೊಂಡರು. ಅಲ್ಲದೆ ಹಲವು ಪ್ರಶ್ನೆಗಳನ್ನು ಕೇಳಿ ಅನುಮಾನಗಳಿಗೆ ಪರಿಹಾರ ಕಂಡುಕೊಂಡರು.

‘ಮತ ಖಾತ್ರಿಗೆ ಮೂರನೇ ಚುನಾವಣಾ ಅಧಿಕಾರಿಯನ್ನು ನೇಮಿಸಲಾಗಿರುತ್ತದೆ. ಇವಿಎಂ ಬದಿಯಲ್ಲಿ ವಿ.ವಿ ಪ್ಯಾಟ್ ಯಂತ್ರ ಇಡಲಾಗುತ್ತದೆ. ಮತಚಲಾಯಿಸಿದ 7 ಸೆಕೆಂಡ್‌ಗಳಲ್ಲಿ ನಾವು ಯಾರಿಗೆ ಮತಹಾಕಿದೆವು ಎನ್ನುವುದನ್ನು ಅಲ್ಲಿ ನೋಡಬಹುದು. ವಿ.ವಿ.ಪ್ಯಾಟ್‌ನಲ್ಲಿ ಈ ಬಗ್ಗೆ ಒಂದು ಸ್ಲಿಪ್ ಬರುತ್ತದೆ. ಆದರೆ ಮತದಾರರು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ’ ಎಂದು ತರಬೇತುದಾರರು ವಿವರಿಸಿದರು.ಆಗ ಜನರು, ಪ್ಯಾಟ್‌ನಲ್ಲಿ ಎಷ್ಟು ಸ್ಲಿಪ್‌ ಬರುತ್ತವೆ. ಸ್ಲಿಪ್‌ಗಳನ್ನು ಎಣಿಕೆ ಮಾಡುವಿರಾ ಎಂದು ಪ್ರಶ್ನೆಗಳನ್ನು ಎತ್ತಿದರು.

‘ಯಂತ್ರಕ್ಕೆ ಒಮ್ಮೆ ಪೇಪರ್ ಹಾಕಿದರೆ 1,500 ಮಂದಿ ಮತಖಾತ್ರಿ ಪಡೆಯಬಹುದು. ಮತ್ತೆ ಪೇಪರ್ ಹಾಕಲಾಗುತ್ತದೆ. ಈ ಸ್ಲಿಪ್‌ಗಳು ಸಂಗ್ರಹವಾಗುವ ಬಾಕ್ಸ್‌ಅನ್ನು ಸ್ಟ್ರಾಂಗ್ ರೂಂನಲ್ಲಿ ಇಡಲಾಗುತ್ತದೆ. ಇವುಗಳ ಎಣಿಕೆ ಮಾಡುವುದಿಲ್ಲ’ ಎಂದರು.ಮತದಾನ ಖಾತ್ರಿಯಿಂದ ಚುನಾವಣಾ ಆಯೋಗದ ಮೇಲೆ ವಿಶ್ವಾಸ ಮೂಡುತ್ತದೆ. ಆಯೋಗ ನ್ಯಾಯ ಸಮ್ಮತವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಬರುತ್ತದೆ. ಇದು ಒಬ್ಬರ ಬಾಯಿಂದ ಮತ್ತೊಬ್ಬರಿಗೆ ಹರಡುತ್ತದೆ. ಆ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿವಳಿಕೆ ಮೂಡಿಸಿದರು.ಹನುಮಂತಪ್ಪ, ಮೋಹನ್ ಕುಮಾರ್, ಸ್ವಾಮಿ, ಕಂಚಿರಾಯಪ್ಪ ಇತರರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು.‘ಇಂತಹ ಕಾರ್ಯಕ್ರಮದಿಂದ ಜನರಲ್ಲಿ ಅರಿವು ಮೂಡುತ್ತದೆ. ನಗರದ ಎಲ್ಲ ಕಡೆಗಳಲ್ಲಿಯೂ ಆಯೋಜಿಸಿಬೇಕು. ನನಗೆ ಮತದಾನದ ಬಗ್ಗೆ ವಿಶ್ವಾಸ ಮೂಡಿಸಿತು’ ಎಂದು ಅಶೋಕನಗರದ ವಂದನಾ ಹೇಳಿದರು.

‘ಚುನಾವಣಾ ಆಯೋಗ ಇಂತಹ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮತದಾನದ ಹಕ್ಕು ಎಲ್ಲರಿಗೂ ಇದೆ. ಆದರೆ ಅನೇಕ ಜನರು ಮತವನ್ನೇ ಹಾಕುವುದಿಲ್ಲ. ಮತದಾನ ಮಾಡದವರಿಗೆ ಸರ್ಕಾರ ಸೌಲಭ್ಯಗಳನ್ನು ನಿಲ್ಲಿಸಬೇಕು’ ಎಂದು ಅನಂತರಾಜಪ್ಪ ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಮತಯಂತ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೂಬೆ ಕೂರಿಸಿದರು. ಈ ಪ್ರಾತ್ಯಕ್ಷಿಕೆ ಅದು ಸುಳ್ಳು ಎನ್ನುವುದನ್ನು ಸಾಬೀತು ಮಾಡುತ್ತದೆ’ ಎಂದು ಉದಯ್ ಕುಮಾರ್ ತಿಳಿಸಿದರು.

ವಿ.ವಿ ಪ್ಯಾಟ್ ಸಮನ್ವಯ ಅಧಿಕಾರಿ ಗಾಯತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗಣ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಾಗೇಶ್, ರಾಜಶೇಖರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಜಿಲ್ಲೆಯಾದ್ಯಂತ ಅರಿವು

‘ಮೊದಲ ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ವಿ.ವಿ ಪ್ಯಾಟ್ ಜಾಗೃತಿ ಹಮ್ಮಿಕೊಳ್ಳಲಾಗಿದೆ. ಎಸ್‌ಐಟಿ, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ, ಜಾತ್ರೆ, ಸಂತೆಗಳು ಸೇರಿದಂತೆ ಜನಸಂದಣಿಯ ಪ್ರದೇಶಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗುವುದು’ ಎಂದು ಸ್ವೀಪ್ ಸಮಿತಿ ಅಧ್ಯಕ್ಷೆಯೂ ಆದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಸಮಿತಿಗೆ ದೊಡ್ಡ ಜವಾಬ್ದಾರಿ ಇದೆ. ಗ್ರಾಮ ಮಟ್ಟದವರೆಗೂ ಜಾಗೃತಿ ಮೂಡಿಸಲಾಗುವುದು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮ ಹಂತಗಳ ನೇತೃತ್ವ ವಹಿಸುವರು. ಮತದಾನದ ಕೊನೆಯವರೆಗೂ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಅರಿವು ಮೂಡಿಸುತ್ತೇವೆ’ ಎಂದು ವಿವರಿಸಿದರು.

ಸುಳ್ಳು ಹೇಳಿದರೆ ಜೈಲು ಪಾಲು

ಮತದಾನ ಖಾತ್ರಿ ವೇಳೆ ಮತದಾರ ಸುಳ್ಳು ಹೇಳಿದರೆ 6ರಿಂದ 1 ವರ್ಷ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಲು ಅವಕಾಶ ಇದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.ಮತದಾರ ಮೊದಲ ಅಭ್ಯರ್ಥಿಗೆ ಮತ ಹಾಕಿರುತ್ತಾನೆ. ಖಾತ್ರಿ ವೇಳೆ ಅದು ಎರಡನೇ ಅಭ್ಯರ್ಥಿಗೆ ಹೋಯಿತು ಎಂದು ವಾದಿಸುತ್ತಾನೆ. ಈ ಬಗ್ಗೆ ಆತ ‘49 ಎಂಎ’ ಘೋಷಣಾ ಪತ್ರದಡಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಮತ್ತು ಬೂತ್ ಏಜೆಂಟರ ಸಮ್ಮುಖದಲ್ಲಿ ಮತ್ತೆ ಆತನಿಂದ ಮತ ಹಾಕಿಸುತ್ತೇವೆ. ಅದನ್ನು ವಿಡಿಯೊ ಮಾಡುತ್ತೇವೆ. ಒಂದು ವೇಳೆ ಮತದಾರ ಹೇಳಿದ್ದು ಸುಳ್ಳು ಎಂದು ಸಾಬೀತಾದರೆ ಪೊಲೀಸರ ವಶಕ್ಕೆ ಒಪ್ಪಿಸುತ್ತೇವೆ. ಆತ ಈ ಹಿಂದೆ ಚಲಾಯಿಸಿದ ಮತವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದರು.ಒಂದು ವೇಳೆ ಮತಯಂತ್ರದಲ್ಲಿ ದೋಷ ಇದ್ದರೆ ಚುನಾವಣೆ ಸ್ಥಗಿತಗೊಳಿಸುತ್ತೇವೆ. ಈಗಾಗಲೇ ಎಲ್ಲ ರಾಜ್ಯಗಳಲ್ಲಿಯೂ ವಿ.ವಿ ಪ್ಯಾಟ್ ಬಳಸಲಾಗಿದೆ. ಎಲ್ಲಿಯೂ ಯಂತ್ರದ ಬಗ್ಗೆ ದೂರುಗಳು ಬಂದಿಲ್ಲ ಎಂದು ತಿಳಿಸಿದರು.

ಮತದಾನ ಪ್ರಮಾಣ ಹೆಚ್ಚಳ ಮಾಡಬೇಕಾದ ಮಹತ್ವದ ಜವಾಬ್ದಾರಿ ಕ್ಯಾಂಪಸ್ ರಾಯಭಾರಿಗಳ ಮೇಲಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದ ನಡೆದ ‌ಮತದಾರರ ಜಾಗೃತಿ ಅಭಿಯಾನ ಹಾಗೂ ಕ್ಯಾಂಪಸ್ ರಾಯಭಾರಿಗಳ ಸಭೆಯಲ್ಲಿ ಮಾತನಾಡಿದರು. ಚುನಾವಣಾ ಆಯೋಗದ ಸೂಚನೆಯಂತೆ ಕಾಲೇಜು ವಿದ್ಯಾರ್ಥಿಗಳನ್ನು ಕ್ಯಾಂಪಸ್ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ. 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದರು.ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವೀಲ್‌ಚೇರ್, ರ‍್ಯಾಂಪ್‌ಗಳ ವ್ಯವಸ್ಥೆ ಮಾಡಲಾಗಿದೆ. ಗರ್ಭಿಣಿಯರಿಗೆ ಹಾಗೂ ಅಶಕ್ತರಿಗೆ ಆದ್ಯತೆ ಮೇರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಚುನಾವಣೆ ದಿನ ಮತದಾರರು ಪ್ರವಾಸ ಹೋಗದಂತೆ ನೋಡಿಕೊಳ್ಳಬೇಕು. ಉತ್ತಮವಾಗಿ ಕಾರ್ಯನಿರ್ವಹಿಸುವ ರಾಯಭಾರಿಗಳಿಗೆ ಆಯೋಗದಿಂದ ಪುರಸ್ಕಾರ ದೊರಯಲಿದೆ ಎಂದು ತಿಳಿಸಿದರು.ರಿಜ್ವಾನ್ ಬಾಷಾ, ಸ್ವೀಪ್ ಸಮಿತಿಯ ಧ್ಯೇಯ, ಚುನಾವಣಾ ಪಾರದರ್ಶಕತೆ, ಕ್ಯಾಂಪಸ್ ರಾಯಭಾರಿಗಳ ಕೆಲಸಗಳ ಬಗ್ಗೆ ವಿವರಿಸಿದರು. ಸ್ವೀಪ್ ಸಮಿತಿ ಸದಸ್ಯರಾದ ವಾಸಂತಿ ಉಪ್ಪಾರ್ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT