ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಚ್ಚನ ಮತ್ತೊಂದು ಅವತಾರ

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ತಮ್ಮ ಎಂದಿನ ಮಾತಿನ ಓಘದಲ್ಲಿದ್ದರು. ಗಂಭೀರವಾಗಿಯೇ ತಮಾಷೆ ಮಾಡುವ, ಜತೆಗಾರರ ಕಾಲೆಳೆಯುವ ಅವರ ಸ್ವಭಾವ ಇಲ್ಲಿಯೂ ಮುಂದುವರಿದಿತ್ತು.

‘ಹುಚ್ಚ 2’ ಸಿನಿಮಾ ಈ ವಾರ (ಏ.6) ಬಿಡುಗಡೆಯಾಗುತ್ತಿದೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲಿಕ್ಕಾಗಿ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ತಮಿಳಿನ ‘ರಾಮ್‌’ ಚಿತ್ರವನ್ನು ಅವರು ಕನ್ನಡದಲ್ಲಿ ‘ಹುಚ್ಚ 2’ ಆಗಿ ರೂಪಿಸಿದ್ದಾರೆ. ‘ಕನ್ನಡ ಭಾಷೆಗೆ ತಕ್ಕ ಹಾಗೆ ಸಾಕಷ್ಟು ಬದಲಾವಣೆ ಮಾಡಿಸಿಕೊಂಡಿದ್ದೇನೆ. ಶೇ 50ರಷ್ಟು ಮಾತ್ರ ಮೂಲ ಸಿನಿಮಾದ ಕಥೆ ಇದೆ. ಉಳಿದದ್ದನ್ನು ಬದಲಾಯಿಸಿಕೊಂಡಿದ್ದೇನೆ’ ಎಂದರು ಓಂ ಪ್ರಕಾಶ್‌.

(ಓಂ ಪ್ರಕಾಶ್‌ ರಾವ್‌)

ನಾಯಕನ ತಾಯಿ ಪಾತ್ರಕ್ಕೆ ಯಾರು ಸರಿಹೊಂದಬಹುದು ಎಂದು ತುಂಬ ಹುಡುಕಾಡಿದ ಮೇಲೆ ಮಾಳವಿಕಾ ಅವಿನಾಶ್‌ ಅವರನ್ನು ಆಯ್ದುಕೊಳ್ಳಲಾಗಿದೆ. ‘ಮೊದಲಿಗೆ ಆಯ್ಕೆ ಮಾಡಿಕೊಂಡಾಗ ಹೇಗೆ ನಟಿಸುತ್ತಾರೋ ಎಂಬ ಭಯ ಇತ್ತು. ಆದರೆ ಅವರು ಮೊದಲ ದಿನ ಸೆಟ್‌ಗೆ ಸಿದ್ಧವಾಗಿ ಬಂದಿದ್ದನ್ನು ನೋಡಿದ ಕೂಡಲೇ ನನ್ನ ಅನುಮಾನ ಎಲ್ಲ ಮಾಯವಾಯ್ತು. ನಾಯಕ ಕೃಷ್ಣ ಮತ್ತು ಮಾಳವಿಕಾ ಅವರ ಕಾಂಬಿನೇಷನ್‌ ಎಷ್ಟು ಅದ್ಭುತವಾಗಿ ಬಂದಿದೆ ಎಂದರೆ ಅದಕ್ಕಾಗಿಯೇ ನಾನು ಹಲವು ಕಡೆ ಸಿನಿಮಾ ಕಥೆಯನ್ನು ಬದಲಾವಣೆ ಮಾಡಿದ್ದೇನೆ’ ಎಂದು ಹೇಳಿಕೊಂಡರು. ಹದಿನೇಳು ವರ್ಷಗಳ ನಂತರ ಸಾಯಿಕುಮಾರ್‌ ಅವರ ಜತೆಗೆ ಕೆಲಸ ಮಾಡಿದ ಖುಷಿಯನ್ನೂ ಅವರು ಹಂಚಿಕೊಂಡರು.

ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ ತಾವೇ ಓಂ ಪ್ರಕಾಶ್‌ ಅವರಿಗೆ ಕರೆ ಮಾಡಿ ತಾವೊಂದು ಪಾತ್ರ ಮಾಡುವುದಾಗಿ ಹೇಳಿ ನಟಿಸಿದ್ದಾರೆ. ‘ಎಕೆ 47 ಸಿನಿಮಾ ಆದಮೇಲೆ ನನಗೆ ಹೆಚ್ಚು ಖುಷಿಕೊಟ್ಟ ಸಿನಿಮಾ ಇದು’ ಎಂದರು ಓಂ ಪ್ರಕಾಶ್‌.

(ಮಾಳವಿಕಾ ಅವಿನಾಶ್‌)

‘ಹುಚ್ಚ’ ಎಂಬುದು ಬರೀ ಸಿನಿಮಾ ಶೀರ್ಷಿಕೆ ಮಾತ್ರವಲ್ಲ, ಅದರಲ್ಲೊಂದು ಎಮೋಷನ್‌ ಇದೆ. ಆ ಹೆಸರು ಕೇಳಿದಾಕ್ಷಣ ಸುದೀಪ್‌ ನೆನಪಾಗುತ್ತಾರೆ. ಇಷ್ಟೆಲ್ಲ ಭಾರವನ್ನು ನಿಭಾಯಿಸುವುದು ನನ್ನಿಂದ ಸಾಧ್ಯವೆ ಎಂಬ ಅನುಮಾನ ನನಗಿತ್ತು. ಆದರೆ ಚಿತ್ರೀಕರಣ ಮಾಡುತ್ತ ಹೋದಾಗ ಅವೆಲ್ಲವೂ ಮರೆತುಹೋಗಿ ನಟನೆಯಷ್ಟೇ ಉಳಿಯಿತು. ಈ ಚಿತ್ರ ನನಗೆ ವೃತ್ತಿಜೀವನದಲ್ಲಿ ಮರುಹುಟ್ಟು ಕೊಡುತ್ತದೆ’ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು ನಾಯಕ ಮದರಂಗಿ ಕೃಷ್ಣ. ಓಂ ಪ್ರಕಾಶ್‌ ರಾವ್‌ ಪುತ್ರಿ ಶ್ರಾವ್ಯಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

‘ತನ್ನ ಕೌಶಲದ ಬಗ್ಗೆ ಬಹಳ ನಂಬಿಕೆ ಇರುವ ನಿರ್ದೇಶಕ ಓಂ ಪ್ರಕಾಶ್‌ ರಾವ್‌’ ಎಂದು ಹೊಗಳಿದರು ಮಾಳವಿಕಾ ಅವಿನಾಶ್‌. ತಮಿಳಿನ ‘ರಾಮ್‌’ ಸಿನಿಮಾದಲ್ಲಿಯೂ ತಾಯಿ ಪಾತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಬಂದಿತ್ತಂತೆ. ಆದರೆ ಆಗ ಅವರು ಆ ಪಾತ್ರಕ್ಕೆ ಒಪ್ಪಿಕೊಂಡಿರಲಿಲ್ಲ. ಈಗ ಕನ್ನಡದಲ್ಲಿ ಅದೇ ಪಾತ್ರದಲ್ಲಿ ನಟಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದೂ ಅವರು ಹೇಳಿಕೊಂಡರು.  ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ. ಎ.ಎಂ. ಉಮೇಶ್‌ ರೆಡ್ಡಿ ಚಿತ್ರಕ್ಕೆ ಹಣ ಹೂಡಿದ್ದಾರೆ.

(ಅನೂಪ್‌ ಸೀಳಿನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT