ಮಂಗಳವಾರ, ಆಗಸ್ಟ್ 11, 2020
27 °C
ಜಲವಿದ್ಯುತ್‌ ಘಟಕಗಳ ವಿನ್ಯಾಸದ ಕುರಿತು ವಿಶ್ವಬ್ಯಾಂಕ್‌ಗೆ ಮಾಹಿತಿ

‘ಕಿಶನ್‌ಗಂಗಾ’ಗೆ ಪಾಕ್ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

‘ಕಿಶನ್‌ಗಂಗಾ’ಗೆ ಪಾಕ್ ಆಕ್ಷೇಪ

ಇಸ್ಲಾಮಾಬಾದ್ : ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ (ಸಿಒಎ) ರಚನೆಗೆ ನಿರಾಕರಿಸಿದ ನಂತರದ ಅವಧಿಯಲ್ಲೇ ಭಾರತವು ಕಿಶನ್‌ಗಂಗಾ ಜಲವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ವಿಶ್ವಬ್ಯಾಂಕ್‌ಗೆ ಪಾಕಿಸ್ತಾನ ಮಾಹಿತಿ ನೀಡಿದೆ.

ಕಿಶನ್‌ಗಂಗಾ, ರಾಟ್ಲೆ, ಪಕಲ್ ದುಲ್, ಮಿಯಾರ್ ಹಾಗೂ ಕಲ್ನೈ ಜಲವಿದ್ಯುತ್ ಘಟಕಗಳ ವಿನ್ಯಾಸದ ಕುರಿತು ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಸಿಒಎ ರಚನೆ ಮಾಡಬೇಕು ಎಂದು 2016ರಲ್ಲಿ ವಿಶ್ವಬ್ಯಾಂಕ್‌ಗೆ ಮನವಿ ಮಾಡಿತ್ತು. ವಿಶ್ವಬ್ಯಾಂಕ್ ಈ ಮನವಿಯನ್ನು ಪುರಸ್ಕರಿಸಿರಲಿಲ್ಲ. ಪಾಕಿಸ್ತಾನದ ಬೇಡಿಕೆಗೆ ಪ್ರತಿಯಾಗಿ, ಈ ವಿಚಾರದಲ್ಲಿ ಪರಿಶೀಲಿಸಲು ತಟಸ್ಥ ರಾಷ್ಟ್ರಗಳ ತಜ್ಞರನ್ನು ನೇಮಿಸಬೇಕು ಎಂದು ಭಾರತ ಆಗ್ರಹಿಸಿತ್ತು.

‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಉಲ್ಲಂಘಿಸಿದೆ. ಒಪ್ಪಂದದ ಮಧ್ಯವರ್ತಿಯಾದ ವಿಶ್ವಬ್ಯಾಂಕ್, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ’ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ ಇಂಧನ ಸಚಿವಾಲಯದ ವಿದ್ಯುತ್ ವಿಭಾಗವು ವಿಶ್ವಬ್ಯಾಂಕ್‌ನ ಉಪಾಧ್ಯಕ್ಷರಿಗೆ ಇದೇ ವಾರದಲ್ಲಿ ವರದಿ ರವಾನಿಸಿದೆ. ‘ಭಾರತವು ಯೋಜನೆ ಪೂರ್ಣಗೊಳಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಭಾರತದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅವಕಾಶ ಸಿಗದ ಕಾರಣ ವಿಶ್ವಬ್ಯಾಂಕ್‌ಗೆ ಮಾಹಿತಿ ರವಾನಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಸುಮ್ಮನೆ ಕೂರುವುದಿಲ್ಲ: ಪಾಕಿಸ್ತಾನದ ಮುಂದಿನ ನಡೆಯ ಕುರಿತು ಸ್ಪಷ್ಟಪಡಿಸಿರುವ ಪಾಕ್‌ ಅಧಿಕಾರಿಗಳು, ‘ನಾವು ಸುಮ್ಮನೆ ಕೂರುವುದಿಲ್ಲ. ಈ ವಿಚಾರವಾಗಿ ತಾರ್ಕಿಕ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದಿದ್ದಾರೆ.

‘ಪಾಕಿಸ್ತಾನ ಯಾವ ವಿನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಿತ್ತೋ, ಅದೇ ವಿನ್ಯಾಸದ ಪ್ರಕಾರ ಭಾರತವು ಘಟಕಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂಬ ವರದಿ ಕಳೆದ ಆಗಸ್ಟ್‌ನಲ್ಲೇ ನಮಗೆ ಸಿಕ್ಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಒಪ್ಪಂದದ ಯಾವುದೇ ಅಂಶವನ್ನು ಉಲ್ಲಂಘಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.