ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡುವ ನೆಗೆಟಿವ್‌ ಯೋಚನೆ’

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

1. ನನಗೆ 27ವರ್ಷ, ಉದ್ಯೋಗದಲ್ಲಿದ್ದೇನೆ. ನನಗೆ ಯಾವುದಾದರೂ ವಿಷಯದ ಮೇಲೆ ಸ್ವಲ್ಪ ದೀರ್ಘವಾಗಿ ಯೋಚಿಸಿದರೆ ಇದ್ದಕ್ಕಿದ್ದಂತೆ ತಲೆ ನೋವು ಬರುತ್ತದೆ. ಆ ಸಮಯದಲ್ಲಿ ಏನೇ ಯೋಚನೆ ಮಾಡಿದರು ನನಗೆ ತಲೆಯೇ ಓಡುವುದಿಲ್ಲ. ನಾನು ಇಲ್ಲದ ವಿಷಯವನೆಲ್ಲಾ ಯೋಚಿಸುತ್ತೇನೆ, ಜೊತೆಗೆ ಮುಂದೆ ಆಗುವುದನೆಲ್ಲವನ್ನು ನೆಗಟಿವ್ ಆಗಿ ಯೋಚಿಸುತ್ತೇನೆ. ಪಾಸಿಟಿವ್ ಆಗಿ ಯೋಚಿಸಲು ಸಾಧ್ಯವೇ ಇಲ್ಲ. ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

-ರಮ್ಯಾ, ಮೈಸೂರು

ಅತಿಯಾದ ಯೋಚನೆ ಆತಂಕಕ್ಕೆ ಎಡೆ ಮಾಡಿಕೊಡುತ್ತದೆ. ಈ ಆತಂಕವೇ ಅಸಮಾಧಾನಕ್ಕೂ ಕಾರಣವಾಗಬಹುದು. ಇದರೊಂದಿಗೆ ಯಾವಾಗಲೂ ಮನಸ್ಸಿನಲ್ಲಿ ಋಣಾತ್ಮಕ ಯೋಚನೆಗಳೇ ಬಂದರೆ ನಿಮ್ಮ ಆತ್ಮವಿಶ್ವಾಸವೂ ನಿಧಾನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ಜೊತೆಗೆ ಜೀವನದ ಬಗ್ಗೆ ಸ್ಪಷ್ಟತೆಯೇ ಇಲ್ಲದಂತಾಗುತ್ತದೆ.

ಅತಿಯಾದ ಯೋಚನೆಯ ವಿಧಾನವು ನಿಮ್ಮ ನಿಯಂತ್ರಣವನ್ನು ಕಳೆದುಕೊಂಡಿರುತ್ತದೆ. ನಿಮಗೆ ನೀವು ಯೋಚಿಸುವ ರೀತಿಯಿಂದ ಹೊರ ಬರಲು ಕಷ್ಟ ಎನ್ನಿಸಬಹುದು. ಆದ್ದರಿಂದ ನಿಮ್ಮ ಯೋಚನೆಗಳನ್ನು ಗುರುತಿಸಲು ಪ್ರಯ್ನತಿಸಿ, ಯಾವಾಗ ನಿಮ್ಮ ಯೋಚನೆಗಳು ಋಣಾತ್ಮಕ ಹಾಗೂ ಸತ್ಯಕ್ಕೆ ದೂರವಾಗಿದೆ ಎಂದು ಅನ್ನಿಸುತ್ತದೋ ಆಗ ನೀವು ನಿಮ್ಮ ಯೋಚನಾ ವಿಧಾನವನ್ನು ಬದಲಾಯಿಸುತ್ತೀರಿ. ಆಗ ಹೆಚ್ಚು ಹೆಚ್ಚು ಋಣಾತ್ಮಕವಾಗಿ ಹಾಗೂ ಸತ್ಯಕ್ಕೆ ಹತ್ತಿರವಾಗುವಂತೆ ಯೋಚಿಸುತ್ತೀರಿ.

ಮನಸ್ಸಿನಲ್ಲೇ ಅನುಮಾನ ಪಡುವುದು ಹಾಗೂ ಅತಿಯಾಗಿ ಯೋಚಿಸುವುದು ಮಾಡುವುದಕ್ಕಿಂತ ಧನಾತ್ಮಕವಾಗಿ ಮಾತನಾಡಿಕೊಳ್ಳಿ. ನಿಮ್ಮೊಳಗೆ ನೀವು ಮಾತನಾಡಿಕೊಳ್ಳುವುದು, ನಿಮ್ಮ ವರ್ತನೆಯ ಮೇಲೂ ಪರಿಣಾಮ ಬೀರಬಹುದು. ನಿಮ್ಮನ್ನು ನೀವು ಟೀಕೆ ಮಾಡಿಕೊಳ್ಳುವುದು, ಕೆಟ್ಟ ಯೋಚನೆಗಳ ಬಗ್ಗೆ ಚಿಂತಿಸುವುದು ಮಾಡುವುದಕ್ಕಿಂತ ನೀವು ಮಾಡಿರುವ ಹಾಗೂ ಮಾಡುತ್ತಿರುವ ಒಳ್ಳೆಯ ಕೆಲಸಗಳ ಮೇಲೆ ಗಮನ ಹರಿಸಿ ಮತ್ತು ಸ್ನೇಹಿತರಿಂದ ಆಗಾಗ ನಿಮ್ಮ ವರ್ತನೆಯ ಬಗ್ಗೆ ಕೇಳುತ್ತಿರಿ. ಕೆಲವೊಮ್ಮೆ ನಂಬಿಕಸ್ತ ಸ್ನೇಹಿತ, ಬಂಧು ಹಾಗೂ ಸಹೋದ್ಯೋಗಿಗಳ ಬಳಿ ನೀವು ಅತಿಯಾಗಿ ವರ್ತಿಸುತ್ತೀರಾ ಹಾಗೂ ಯೋಚನೆ ಮಾಡುತ್ತೀರಾ ಎಂದು ಕೇಳಿ ತಿಳಿದುಕೊಳ್ಳುವುದರಿಂದ ನೈಜತೆಯ ಅರಿವಾಗುತ್ತದೆ. ಆಗ ನಿಮಲ್ಲಿ ಆ ವರ್ತನೆ ಮುಂದುವರಿಯುವುದು ನಿಲ್ಲಬಹುದು.

ಯೋಚನೆಗಳು ಸದಾಕಾಲ ನೈಜತೆಯನ್ನೇ ಪ್ರತಿಪಾದಿಸುವುದಿಲ್ಲ. ಅವುಗಳು ಅಶಿಸ್ತಿನಿಂದ ಅಥವಾ ತಪ್ಪಿನಿಂದ ಕೂಡಿರುತ್ತವೆ. ದೋಷಪೂರಿತ ಗ್ರಹಿಕೆಗಳನ್ನೇ ನಿಮ್ಮ ಯೋಚನೆಯಲ್ಲಿ ತುಂಬಿಕೊಳ್ಳುವುದಕ್ಕಿಂತ ನಿಮ್ಮಿಂದ ಸಾಧ್ಯವಾಗುವ ಅನೇಕ ವಿಷಯಗಳಿವೆ; ಅವುಗಳ ಮೇಲೆ ಗಮನ ಹರಿಸಿ ಅಥವಾ ನಿಮ್ಮ ಅತಿಯಾದ ಆಲೋಚನೆಗಳು ಸರಿಯಿಲ್ಲ ಎಂಬುದನ್ನು ಒಪ್ಪಿಕೊಳ್ಳಿ.

ನಿಮ್ಮೊಳಗೆ ನಿಧಾನಕ್ಕೆ ‘ಇವೆಲ್ಲಾ ಸುಮ್ಮನೆ ಯೋಚನೆಗಳಷ್ಟೆ ಮತ್ತು ಇದು ಯಾವುದು ಸತ್ಯವಲ್ಲ’ ಎಂದು ಹೇಳಿಕೊಳ್ಳಿ. ಈ ಮಂತ್ರವನ್ನು ನೀವು ಹೇಳಿಕೊಳ್ಳುವುದರಿಂದ ನಿಮ್ಮ ಮನಸ್ಸಿನಲ್ಲಿ ನೆಲೆಯೂರಿರುವ ಆಲೋಚನಾಕ್ರಮವನ್ನು ಬದಲಾಯಿಸಿಕೊಳ್ಳಬಹುದು. ಅದರೊಂದಿಗೆ ನಿಮ್ಮ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು.

**

2. ನನ್ನ ಗಂಡ ತುಂಬಾ ಕುಡಿಯುತ್ತಾರೆ. ಯಾವಾಗಲೂ ನನ್ನೊಂದಿಗೆ ಜಗಳ ಮಾಡುತ್ತಿದ್ದರು. ಕೆಲಸ ಮಾಡುವ ಜಾಗಕ್ಕೂ ಬಂದು ತೊಂದರೆ ಮಾಡುತ್ತಿದ್ದರು. ಜೀವನದಲ್ಲಿ ನೆಮ್ಮದಿಯೇ ಕಳೆದು ಹೋಯ್ತು. ಎಷ್ಟೇ ಪ್ರಯತ್ನ ಮಾಡಿದರು ಅವರು ಬದಲಾಗಲಿಲ್ಲ. ಸಾಯಬೇಕು ಅಂದುಕೊಂಡೆ. ಆದರೆ ನನ್ನ ಮಗುವಿನ ಮುಖ ನೋಡಿ ನಿರ್ಧಾರ ಬದಲಾಯಿಸಿದೆ. ಆಮೇಲೆ ತಾಯಿ ಮನೆಯಲ್ಲಿ ಬಂದು ನೆಲೆಸಿದೆ. ಮನೆಬಿಟ್ಟು ಬಂದು 8 ತಿಂಗಳಾದರೂ ಗಂಡ ಒಮ್ಮೆಯೂ ಬಂದು ಹೇಗಿದಿಯಾ – ಎಂದು ವಿಚಾರಿಸಿರಲಿಲ್ಲ. ಈಗ ಮನೆಯವರೆಲ್ಲಾ ನ್ಯಾಯ ಮಾಡಿಸುತ್ತೇವೆ, ಅವರ ಜೊತೆ ಹೋಗು ಎನ್ನುತ್ತಿದ್ದಾರೆ. ನಾನು ಏನು ಮಾಡುವುದು?

-ಹೆಸರು ಬೇಡ, ಊರು ಬೇಡ

ನಿಮ್ಮ ಪೋಷಕರು ಅಥವಾ ಮನೆಯ ಹಿರಿಯರ ಜೊತೆಗೆ ಮಾತನಾಡಿ. ನೀವು ಯಾಕೆ ತವರು ಮನೆಯಲ್ಲಿ ಉಳಿದುಕೊಂಡಿದ್ದೀರಿ ಮತ್ತು ಅದಕ್ಕೆ ಕಾರಣ ಏನು ಎಂಬುದು ನಿಮ್ಮ ಪೋಷಕರಿಗೆ ತಿಳಿದಿದೆ ಎಂದು ಅಂದುಕೊಳ್ಳುತ್ತೇನೆ. ನಿಮ್ಮ ಮನೆಯವರ ಬಳಿ ಗಂಡನ ಜೊತೆ ಮಾತನಾಡಲು ತಿಳಿಸಿ ಮತ್ತು ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಯುವಂತೆ ಮಾಡಿ. ಕುಡಿತವನ್ನು ಬಿಡಲು ಸಾವಿರಾರು ದಾರಿಗಳಿವೆ. ಅದನ್ನು ನಿಮ್ಮ ಗಂಡನಿಗೆ ಮನವರಿಕೆ ಮಾಡಿ ಮನವೊಲಿಸಲು ಪ್ರಯತ್ನಿಸಿ.

ನಿಮ್ಮ ತವರುಮನೆ ಹಾಗೂ ಗಂಡನ ಮನೆಯವರು ಸೇರಿ ಅವರಿಗೆ ಅರ್ಥವಾಗುವಂತೆ ಮಾಡಬಹುದು. ಆಗ ಅವರು ನಿಧಾನಕ್ಕೆ ಕುಡಿತವನ್ನು ನಿಲ್ಲಿಸಬಹುದು. ನೀವು ಮೊದಲಿನ ಸ್ಥಿತಿಗೆ ಹಿಂದಿರುಗಿ, ಗಂಡನೊಂದಿಗೆ ಖುಷಿಯಿಂದ ಇರುವಂತೆ ಮಾಡುವುದು ನಿಮ್ಮ ಹಾಗೂ ಗಂಡನ ಕುಟುಂಬದವರ ಜವಾಬ್ದಾರಿ. ಮೊದಲು ನೀವು ಏನನ್ನು ಎದುರು ನೋಡುತ್ತಿದ್ದೀರಿ ಮತ್ತು ಜೀವನದಲ್ಲಿ ಏನನ್ನು ಬಯಸುತ್ತಿದ್ದೀರಿ ಎಂಬುದರ ಸ್ಪಷ್ಟ ಅರಿವು ನಿಮಗಿರಲಿ. ಅದನ್ನೇ ನಿಮ್ಮ ಮನೆಯವರಿಗೂ ತಿಳಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT