ಗುರುವಾರ , ಜೂನ್ 24, 2021
22 °C

ಮೋಸದಾಟದ ಮತ್ತೊಂದು ರೂಪ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಮೋಸದಾಟದ ಮತ್ತೊಂದು ರೂಪ

ಇವತ್ತಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗುತ್ತಿದೆ. ಎಲ್ಲ ಕ್ರಿಕೆಟ್‌ ಪ್ರೇಮಿಗಳ ಕಣ್ಣು ಈಗ ತಮ್ಮ ನೆಚ್ಚಿನ ಆಟಗಾರರ ಮೇಲಿದೆ. ಅದೇ ರೆಫರಿಗಳು, ಅಂಪೈರ್‌ಗಳು ಮತ್ತು ಕ್ಯಾಮೆರಾ ಕಣ್ಣುಗಳು ಮಾತ್ರ ಚೆಂಡಿನ ಮೇಲೆ ಇವೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ತಂಡದ ಎದುರಿನ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್‌ ಚೆಂಡು ವಿರೂಪಗೊಳಿಸಿದ ಪ್ರಕರಣ ಇನ್ನೂ ತಾಜಾ ಇರುವುದೇ ಅದಕ್ಕೆ ಕಾರಣ. ಅದಕ್ಕಾಗಿ ತಂಡದ ನಾಯಕ ಸ್ಟೀವನ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಅವರ ತಲೆದಂಡವಾಗಿದೆ. ಇವರು ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ರಾಫ್ಟ್‌ ಅವರಿಗೂ ಒಂಬತ್ತು ತಿಂಗಳ ನಿಷೇಧ ವಿಧಿಸಲಾಗಿದೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಐದು ಸಲ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಈ ಪ್ರಕರಣದಿಂದ

ಕ್ರೀಡಾಪ್ರೇಮಿಗಳ ಮುಂದೆ ತಲೆ ತಗ್ಗಿಸಿತು.

ಸ್ಪಾಟ್ ಫಿಕ್ಸಿಂಗ್, ಮ್ಯಾಚ್‌ ಫಿಕ್ಸಿಂಗ್, ಸ್ಲೆಡ್ಜಿಂಗ್ (ಹೀಯಾಳಿಕೆ) ರೀತಿಯಲ್ಲಿಯೇ ಚೆಂಡು ವಿರೂಪಗೊಳಿಸುವುದೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾದದ್ದು ಮತ್ತು ನಿಯಮಬಾಹಿರವಾದದ್ದು. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಚೆಂಡು ವಿರೂಪಗೊಳಿಸುವುದೆಂದರೆ ಏನು?

ಕ್ರಿಕೆಟ್‌ನಲ್ಲಿ ಬಳಸುವ ಚೆಂಡನ್ನು ಕಾರ್ಕ್‌ನಿಂದ ತಯಾರಿಸಲಾಗಿರುತ್ತದೆ. ಗಟ್ಟಿಯಾದ ಚೆಂಡಿನ ಮೇಲೆ ಚರ್ಮದ ಹೊದಿಕೆ ಹಾಕಲಾಗಿರುತ್ತದೆ. ಚೆಂಡಿನ ಎರಡೂ ಬದಿಯ ಪ್ರತ್ಯೇಕ ಹೊದಿಕೆಗಳನ್ನು ಮಧ್ಯದಲ್ಲಿ ಸೇರಿಸಿ ದಪ್ಪ ದಾರದಿಂದ ಹೊಲಿಯಲಾಗಿರುತ್ತದೆ. ಟೆಸ್ಟ್‌ ಪಂದ್ಯದಲ್ಲಿ ಬಳಸಲಾಗುವ ಚೆಂಡನ್ನು 80 ಓವರ್‌ಗಳವರೆಗೆ ಬಳಸಲಾಗುತ್ತದೆ. ನೆಲದ ಮೇಲೆ ಪುಟಿಸುವುದರಿಂದ, ಉರುಳುವುದರಿಂದ, ಬ್ಯಾಟ್‌ನಿಂದ ಹೊಡೆಯುವುದರಿಂದ ಚರ್ಮದ ನುಣುಪಾದ ಹೊದಿಕೆಯು ಒರಟಾಗುತ್ತದೆ. ಹೊಳಪು ಕಡಿಮೆಯಾಗುತ್ತದೆ. ಒಂದು ಬದಿಯಲ್ಲಿ ಹೊಳಪು ಉಳಿಸಿಕೊಳ್ಳಲು ಬೌಲಿಂಗ್ ಮಾಡುವ ತಂಡಕ್ಕೆ ಅವಕಾಶ ಇದೆ. ಅದಕ್ಕಾಗಿ ಆ ಭಾಗವನ್ನು ಆಗಾಗ ಅವರು ತಮ್ಮ ಪ್ಯಾಂಟ್ ಅಥವಾ ಕರವಸ್ತ್ರಕ್ಕೆ ಬೆವರು ಅಥವಾ ಎಂಜಲು ಹಚ್ಚಿ ಉಜ್ಜುವುದನ್ನು ನೋಡುತ್ತೇವೆ. ಈ ರೀತಿ ಹೊಳಪು ಉಳಿಸಿಕೊಳ್ಳುವುದರಿಂದ ರಿವರ್ಸ್ ಸ್ವಿಂಗ್ ಮಾಡಿ ಬ್ಯಾಟ್ಸ್‌ಮನ್‌ ರನ್‌ ಗಳಿಸದಂತೆ ಮತ್ತು ಔಟ್‌ ಆಗುವಂತೆ ಮಾಡಬಹುದು. ಮಂಕಾದ ಚೆಂಡಿನಲ್ಲಿ ಸ್ವಿಂಗ್ ಮಾಡುವುದು ಕಷ್ಟವಾಗುತ್ತದೆ. ಅದರಲ್ಲೂ ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ರಿವರ್ಸ್‌ ಸ್ವಿಂಗ್ ಸಹಕಾರಿ.

ಚೆಂಡು ವಿರೂಪಗೊಳಿಸುವಿಕೆ ತಡೆಯಲು ಏನು ನಿಯಮಗಳಿವೆ?

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಕ್ರಿಕೆಟ್‌ನಲ್ಲಿ ಮೋಸದಾಟಗಳನ್ನು ತಡೆಯಲು ಮತ್ತು ಆಟವು ಶಿಸ್ತುಬದ್ಧವಾಗಿ ನಡೆಯಲು ಹಲವು ನಿಯಮಗಳನ್ನು ರೂಪಿಸಿದೆ. ಬ್ಯಾಟ್‌ ಅಳತೆ, ಚೆಂಡಿನ ಅಳತೆ– ವಿನ್ಯಾಸ, ಬಳಸುವಿಕೆಯ ಅವಧಿ ಇತ್ಯಾದಿಗಳನ್ನು ಪಟ್ಟಿ ಮಾಡಿದೆ. ಐಸಿಸಿಯ 41ನೇ ನಿಯಮದನ್ವಯ ಚೆಂಡು ವಿರೂಪಗೊಳಿಸುವುದು ನಿಯಮದ ಉಲ್ಲಂಘನೆಯಾಗಿದೆ.

ಚೆಂಡು ವಿರೂಪಗೊಳಿಸಿದ ಪ್ರಕರಣಗಳು ಈ ಮೊದಲೂ ಇದ್ದವೇ? ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆಯೇ?

1994ರಲ್ಲಿ ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಮೈಕ್ ಅಥರ್ಟನ್‌ ಜೇಬಿನಲ್ಲಿ ಇರಿಸಿದ್ದ ಯಾವುದೋ ವಸ್ತುವನ್ನು ತೆಗೆದು ಚೆಂಡಿಗೆ ಲೇಪಿಸಿ ವಿರೂಪಗೊಳಿಸಲು ಪ್ರಯತ್ನಿಸಿದ್ದರು. ಅವರಿಗೆ ₹ 2.4 ಲಕ್ಷ ಮೊತ್ತದ ದಂಡ ವಿಧಿಸಲಾಗಿತ್ತು. 2001ರಲ್ಲಿ ಭಾರತದ ಸಚಿನ್ ತೆಂಡೂಲ್ಕರ್, ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಚೆಂಡಿನ ದಾರ ಎಳೆಯುವ ದೃಶ್ಯ ಟಿ.ವಿ.ಯಲ್ಲಿ ಪ್ರಸಾರಗೊಂಡಿತ್ತು. ಅದನ್ನು ಚೆಂಡು ವಿರೂಪ ಪ್ರಕರಣ ಎಂದು ಪರಿಗಣಿಸಿ ಅವರಿಗೆ ಒಂದು ಪಂದ್ಯದಲ್ಲಿ ಆಡದಂತೆ ನಿಷೇಧ ಹಾಕಲಾಗಿತ್ತು. ‘ಸೀಮ್ ಮಧ್ಯ ಸಿಕ್ಕಿಕೊಂಡಿರುವ ಹುಲ್ಲಿನ ಎಸಳನ್ನು ತೆಗೆಯುತ್ತಿದ್ದೆ’ ಎಂದು ಸಚಿನ್‌ ಹೇಳಿದ್ದರು. 2004ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಅಂಟಿನ ಪದಾರ್ಥವಿದ್ದ ತಮ್ಮ ಎಂಜಲನ್ನು ಹಚ್ಚಿದ ಪ್ರಕರಣದಲ್ಲಿ ಭಾರತದ ರಾಹುಲ್ ದ್ರಾವಿಡ್ ದಂಡ ತೆತ್ತಿದ್ದರು. 2006ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಚೆಂಡು ವಿರೂಪಗೊಳಿಸಿದ್ದ ಪಾಕಿಸ್ತಾನವು ನಾಲ್ಕನೇ ದಿನ ಚಹಾ ವಿರಾಮದ ನಂತರ ಅಂಗಣಕ್ಕೆ ಇಳಿಯಲಿಲ್ಲ. ಹೀಗಾಗಿ ಅಂಪೈರ್‌ಗಳಾಗಿದ್ದ  ಡರೆಲ್‌ ಹೇರ್‌ ಮತ್ತು ಬಿಲ್ಲಿ ಡಾಕ್ಟ್ರೋವ್‌ ಅವರು ಇಂಗ್ಲೆಂಡ್ ತಂಡ ವಿಜಯಿ ಎಂದು ಘೋಷಿಸಿದ್ದರು. ಮೂರು ವರ್ಷಗಳ ನಂತರ ಐಸಿಸಿ ಈ ಪಂದ್ಯದ ಫಲಿತಾಂಶವನ್ನು ಪರಿಷ್ಕರಿಸಿ ಡ್ರಾ ಎಂದು ಘೋಷಿಸಿತು. 2010ರಲ್ಲಿ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಚೆಂಡಿನ ಸೀಮ್‌ (ದಾರದ ಹೊಲಿಗೆ) ಅನ್ನು ಕಚ್ಚಿದ್ದರು. ಹೀಗಾಗಿ ಅವರಿಗೆ ನಂತರದ ಟ್ವೆಂಟಿ–20 ಸರಣಿಯ ಎರಡು ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು. 2013ರಲ್ಲಿ ದುಬೈನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಫಾಫ್‌ ಡು ಪ್ಲೆಸಿ ಚೆಂಡನ್ನು ತಮ್ಮ ಪ್ಯಾಂಟ್ ಜೇಬಿನ ಜಿಪ್‌ಗೆ ಉಜ್ಜಿ ವಿರೂಪಗೊಳಿಸಿದ್ದರು. ಇದರಿಂದ ಅವರು ಪಂದ್ಯ ಶುಲ್ಕದ ಶೇ 50ರಷ್ಟು ದಂಡ ತೆತ್ತಿದ್ದರು. 2014ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ವೆರ್ನಾನ್ ಫಿಲಾಂಡರ್‌ ಉಗುರಿನಿಂದ ಗೀರಿ ಚೆಂಡು ವಿರೂಪಗೊಳಿಸಿದ್ದರು. ತಪ್ಪೊಪ್ಪಿಕೊಂಡ ಅವರು ಪಂದ್ಯ ಶುಲ್ಕದ ಶೇ 75ರಷ್ಟು ದಂಡ ತುಂಬಿದ್ದರು. 2016ರಲ್ಲಿ ಹೋಬರ್ಟ್‌ನಲ್ಲಿ ಆಸ್ಟ್ರೇಲಿಯಾ ಎದುರು ನಡೆದಿದ್ದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿ, ಬಾಯಲ್ಲಿದ್ದ ಮಿಂಟ್‌ (ಚುಯಿಂಗ್ ಗಮ್) ರಸವನ್ನು ತೆಗೆದು ಚೆಂಡಿಗೆ ಅಂಟಿಸಿದ್ದರು. ತನಿಖೆ ನಡೆಸಿದ ಐಸಿಸಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು.

ಇದರಿಂದ ಬೌಲರ್‌ಗಳಿಗೆ ಏನು ಲಾಭ?

ನೈಜ ರೂಪದ ಚೆಂಡಿನ ಚಲನೆಯನ್ನು ಬ್ಯಾಟ್ಸ್‌ಮನ್‌ಗಳು ಅಭ್ಯಾಸ ಮಾಡಿರುತ್ತಾರೆ. ನಿರ್ದಿಷ್ಟ ಪ್ರಕಾರದ ಸ್ವಿಂಗ್, ಸ್ಪಿನ್‌ಗಳಿಗೆ ತಕ್ಕ ಹೊಡೆತಗಳನ್ನು (ಡ್ರೈವ್, ಕಟ್, ಪುಲ್, ಹುಕ್) ಪ್ರಯೋಗಿಸುತ್ತಾರೆ. ಆದರೆ ವಿರೂಪಗೊಂಡ ಚೆಂಡು ಅಗತ್ಯಕ್ಕಿಂತ ಹೆಚ್ಚು ಸ್ವಿಂಗ್ ಆಗಬಹುದು.

ಒಂದೊಮ್ಮೆ ಆಕಾರ ಮತ್ತು ಹೊಳಪು ಬದಲಾದರೆ ಅನಿರೀಕ್ಷಿತ ಸ್ವಿಂಗ್, ಬೌನ್ಸ್‌ ಆಗಿ ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೆ ಕೆಡುವುತ್ತವೆ. ಇದರಿಂದ ಬ್ಯಾಟ್ಸ್‌ಮನ್‌ ಗಾಯಗೊಳ್ಳುವ ಅಪಾಯವೂ ಇರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.