ಶನಿವಾರ, ಆಗಸ್ಟ್ 8, 2020
22 °C

‘ಕ್ರೈಸ್‌’ ಟೆಂಡರ್‌: ₹2,553 ಕೋಟಿ ಅಕ್ರಮ?

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

‘ಕ್ರೈಸ್‌’ ಟೆಂಡರ್‌: ₹2,553 ಕೋಟಿ ಅಕ್ರಮ?

ಬೆಂಗಳೂರು : ವಿಧಾನಸಭಾ ಚುನಾವಣೆ ಸನಿಹದಲ್ಲಿರುವಾಗ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು (ಕ್ರೈಸ್‌) ₹ 2,553 ಕೋಟಿ ಮೊತ್ತದ 323 ಕಾಮಗಾರಿಗಳಿಗೆ ತರಾತುರಿಯಲ್ಲಿ ನಡೆಸಿರುವ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ‍ ಬಂದಿದೆ.

‘ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ‘ಕ್ರೈಸ್‌’, ವಸತಿ ಶಾಲೆಗಳು ಹಾಗೂ ಕಾಲೇಜು ಸಂಕೀರ್ಣಗಳ ಕಾಮಗಾರಿಗಳ ಗುತ್ತಿಗೆ ನೀಡುವಾಗ ಕರ್ನಾಟಕ ಸಾರ್ವಜನಿಕ ಖರೀದಿಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ )ಕಾಯ್ದೆ ಉಲ್ಲಂಘಿಸಿದೆ. ಈ ಎಲ್ಲ ಟೆಂಡರ್‌ಗಳನ್ನು ರದ್ದುಪಡಿಸಬೇಕು’ ಎಂದು ಕೆ.ಟಿ. ಚಂದ್ರಶೇಖರ್ ಎಂಬ ಗುತ್ತಿಗೆದಾರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ, ‘ದೂರನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶಿಸಿದ್ದಾರೆ.

ಈ ಹಿಂದೆ, ₹1,033 ಕೋಟಿ ಮೊತ್ತದ 92 ಕಾಮಗಾರಿಗಳ ಟೆಂಡರ್ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂಬ ಆರೋಪ ಬಂದಿತ್ತು. ಮುಖ್ಯಕಾರ್ಯದರ್ಶಿಗೆ ನೀಡಿರುವ ದೂರಿನಲ್ಲಿ ಒಟ್ಟು ₹2,553 ಕೋಟಿ ಮೊತ್ತದ ಟೆಂಡರ್‌ಗಳಲ್ಲಿ ಅಕ್ರಮ ನಡೆದಿದೆ ಎಂದು ಆಪಾದಿಸಲಾಗಿದೆ.

ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ‘ಕಾಯ್ದೆ ಅನ್ವಯ ಕಾಮಗಾರಿಗಳ ಮೊತ್ತಕ್ಕೆ ಅನುಗುಣವಾಗಿ ಟೆಂಡರ್‌ ಪ್ರಕ್ರಿಯೆಗೆ ಕನಿಷ್ಠ ಸಮಯವನ್ನು ಆರ್ಥಿಕ ಇಲಾಖೆ ನಿಗದಿಪಡಿಸಿದೆ. ₹ 2ಕೋಟಿ ವರೆಗಿನ ಮೊತ್ತದ ಟೆಂಡರ್‌ಗಳಿಗೆ 30 ದಿನ ಹಾಗೂ ಅದಕ್ಕೂ ಮೇಲಿನ ಮೊತ್ತದ ಟೆಂಡರ್‌ಗಳಿಗೆ ಕನಿಷ್ಠ 60 ದಿನ ಸಮಯ ನೀಡಬೇಕು. ಸಮಯವನ್ನು ಕಡಿತ ಮಾಡಬೇಕಾದರೆ ಸಂಬಂಧ ಪಟ್ಟ ಅಧಿಕಾರಿ ಲಿಖಿತ ಕಾರಣಗಳನ್ನು ದಾಖಲಿಸಬೇಕು ಎಂದು ಸೂಚಿಸಿದೆ. ಹೀಗಿದ್ದರೂ, 20–30 ದಿನಗಳೊಳಗೆ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಸರ್ಕಾರದ ಆದೇಶದ ಅನ್ವಯ ₹10 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡುವಾಗ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕು. ಅದನ್ನು ತಪ್ಪಿಸಲು ಕಾಮಗಾರಿ ಮೊತ್ತವನ್ನು ₹ 9.60 ಕೋಟಿಯಿಂದ ₹9.95 ಕೋಟಿವರೆಗೆ ಇಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭಿಸುವ ಹೊತ್ತಿಗೆ ಕಾಮಗಾರಿಗಳಿಗೆ ಜಾಗ ಗೊತ್ತು ಮಾಡಿ, ಕ್ರೈಸ್‌ಗೆ ಜಾಗ ಮಂಜೂರು ಮಾಡಿರಬೇಕು. ಜಾಗ ಗುರುತಿಸದೇ ಟೆಂಡರ್ ಪ್ರಕ್ರಿಯೆ ಮುಗಿಸಿರುವುದು ದೊಡ್ಡ ಪ್ರಮಾದ ಎಂದು ದೂರಲಾಗಿದೆ.

***

ಸಣ್ಣ ಚಿತ್ತಯ್ಯ ವಿರುದ್ಧ ಆರೋಪ‍

‘ಕ್ರೈಸ್ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಸಣ್ಣ ಚಿತ್ತಯ್ಯ ಇದೆಲ್ಲದರ ಹಿಂದಿನ ರೂವಾರಿ’ ಎಂದು ಗುತ್ತಿಗೆದಾರರು ಆಪಾದಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಸಣ್ಣ ಚಿತ್ತಯ್ಯ ಮೊಬೈಲ್‌ಗೆ ಅನೇಕ ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

‘ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರ್ದಿಷ್ಟ ಮೊತ್ತದ ಕಾಮಗಾರಿ ನಡೆಸಿದ ಕಾರ್ಯಾನುಭವ ಪ್ರಮಾಣ ಪತ್ರ ಗುತ್ತಿಗೆದಾರರಿಗೆ ಅಗತ್ಯ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಕಾಮಗಾರಿ ನಡೆಸಿರುವುದಾಗಿ ಮಧುವೀರ್ ಎಂಟರ್ ಪ್ರೈಸಸ್‌ ಪ್ರಮಾಣ ಪತ್ರ ಸಲ್ಲಿಸಿದೆ. ಕ್ರೈಸ್‌ಗೆ ಬರುವ ಮುನ್ನ ಕೊಳೆಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಆಗಿದ್ದ ಸಣ್ಣ ಚಿತ್ತಯ್ಯ ಈ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ, ಅಂತಹ ಯಾವುದೇ ಕಾಮಗಾರಿಯನ್ನೂ ಕೈಗೊಂಡಿಲ್ಲ ಎಂದು ಆರ್‌ಟಿಐ ಅಡಿ ಕೇಳಲಾದ ಮಾಹಿತಿಯಲ್ಲಿ ಮಂಡಳಿ ತಿಳಿಸಿದೆ. ನಕಲಿ ಪ್ರಮಾಣ ಪತ್ರ ಸಲ್ಲಿಸಿದವರಿಗೂ ಟೆಂಡರ್ ನೀಡಿದ್ದಕ್ಕೆ ಇದು ನಿದರ್ಶನ’ ಎಂದು ದೂರುದಾರ ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.