ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಕುಟುಂಬದ ಜವಾಬ್ದಾರಿ ನಮಗೆ ಬಿಡಿ: ಪೌರಕಾರ್ಮಿಕರಿಗೆ ರಾಹುಲ್ ಗಾಂಧಿ ಅಭಯ

Last Updated 8 ಏಪ್ರಿಲ್ 2018, 7:21 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ಕುಟುಂಬದ ಜವಾಬ್ದಾರಿಯನ್ನು ನಮಗೆ ಬಿಡಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪೌರಕಾರ್ಮಿಕರಿಗೆ ಅಭಯ ನೀಡಿದರು.

ನಗರದ ಜಕ್ಕರಾಯನಕೆರೆ ಮೈದಾನದಲ್ಲಿ ಪೌರಕಾರ್ಮಿಕರ ಜತೆ ಸಂವಾದ ನಡೆಸಿದ ಅವರು, ‘ಪೌರ ಕಾರ್ಮಿಕರ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ. ನೀವೆಲ್ಲ ಕಷ್ಟದ ಜೀವಿಗಳು. ನಿಮಗೆ ಎಂದೂ ಅನ್ಯಾಯ ಮಾಡುವುದಿಲ್ಲ. ಇಂದಿರಾ ಕ್ಯಾಂಟಿನ್ ಸೌಲಭ್ಯವನ್ನು ಬಳಸಿಕೊಳ್ಳಿ. ನಿಮ್ಮ ಕುಟುಂಬದ ಜವಾಬ್ದಾರಿಯನ್ನು ನಮಗೆ ಬಿಡಿ’ ಎಂದು ಹೇಳಿದರು.

ಬೆಳಿಗ್ಗೆ 9.30ಕ್ಕೆ ರಾಹುಲ್ ಗಾಂಧಿ ಅವರು ಮೈದಾನಕ್ಕೆ ಬರುವ ನಿರೀಕ್ಷೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ 7 ಗಂಟೆಗೇ ಜಮಾಯಿಸಿದ್ದರು. ಮಂತ್ರಿಮಾಲ್ ಸಮೀಪದ ರಾಜೀವ್‌ ಗಾಂಧಿ ವೃತ್ತದಿಂದ ಮೈದಾನದವರೆಗೂ ರಸ್ತೆಯ ಎರಡೂ ಬದಿ ನಿಂತು ಕಾಯುತ್ತಿದ್ದರು. ಆದರೆ, 11 ಗಂಟೆಯಾದರೂ ರಾಹುಲ್ ಬರಲೇ ಇಲ್ಲ. ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆಯೇ ಜನರ ಸಂಖ್ಯೆ ಕಡಿಮೆಯಾಗತೊಡಗಿತು. 11.15ರ ಸುಮಾರಿಗೆ ವೃತ್ತಕ್ಕೆ ಬಂದ ರಾಹುಲ್‌, ತಂದೆ ರಾಜೀವ್ ಗಾಂಧಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ಗುಂಡೂರಾವ್, ಸಚಿವ ಕೆ.ಜೆ.ಜಾರ್ಜ್‌, ಮೇಯರ್ ಸಂಪತ್‌ರಾಜ್ ಇದ್ದರು.

ವೇದಿಕೆ ಬೇಡ ಎಂದು ಬಿಸಿಲಲ್ಲೇ ಕುಳಿತರು: ಮೈದಾನಕ್ಕೆ ತೆರಳಿದ ರಾಹುಲ್, ‘ನನಗೆ ವೇದಿಕೆ ಬೇಡ. ಕಾರ್ಮಿಕರ ಜತೆ ಬಿಸಿಲಲ್ಲೇ ಕೂರುತ್ತೇನೆ’ ಎಂದು ತಾವೇ ಪ್ಲಾಸ್ಟಿಕ್ ಕುರ್ಚಿ ತೆಗೆದುಕೊಂಡು ಕಾರ್ಮಿಕರ ಪಕ್ಕ ಕುಳಿತರು.

(ಮೈದಾನದಲ್ಲೇ ಕುಳಿತು ಸಂವಾದ ನಡೆಸುತ್ತಿರುವ ರಾಹುಲ್ ಗಾಂಧಿ – ಪ್ರಜಾವಾಣಿ ಚಿತ್ರ)

‘ರಾಜ್ಯ ಸರ್ಕಾರ ನಮ್ಮ ಸಮಸ್ಯೆಗಳನ್ನು ಬಗೆಹರಿಸಿದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಪೌರ ಕಾರ್ಮಿಕರು ಇನ್ನೂ ಗುತ್ತಿಗೆ ಆಧಾರದಲ್ಲೇ ದುಡಿಯುತ್ತಿದ್ದಾರೆ. ಅವರ ಕೆಲಸವನ್ನು ಕಾಯಂಗೊಳಿಸಬೇಕು’ ಎಂದು ಕಾರ್ಮಿಕರು ಮನವಿ ಮಾಡಿದರು.

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ: ಮುಂದಿನ ಮುಖ್ಯಮಂತ್ರಿ ಯಾರು ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರತ್ತ ಬೆರಳು ಮಾಡಿದರು. ‘ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವಿಚಾರ ಮುಖ್ಯಮಂತ್ರಿ ಅವರಿಗೇ ಬಿಟ್ಟಿದ್ದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT