ಮಂಗಳವಾರ, ಜುಲೈ 14, 2020
24 °C

‘ಪರ್ಸಂಟೇಜ್‌ ಸರ್ಕಾರ ಕಿತ್ತೊಗೆಯಲು ಕೈ ಜೋಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪರ್ಸಂಟೇಜ್‌ ಸರ್ಕಾರ ಕಿತ್ತೊಗೆಯಲು ಕೈ ಜೋಡಿಸಿ’

ಬೆಂಗಳೂರು: ‘ಪರ್ಸಂಟೇಜ್‌ ಸರ್ಕಾರವನ್ನು ಕಿತ್ತೊಗೆಯಲು ಜನತೆ ನಮ್ಮ ಜತೆ ಕೈ ಜೋಡಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಗ್ಗಲಿಪುರದ ವಿಕಾಸಪರ್ವ ಸಮಾವೇಶದಲ್ಲಿ ಅವರು ಮಾತನಾಡಿ, ‘ನಿಮ್ಮ ಆಶೀರ್ವಾದದಿಂದ ಭ್ರಷ್ಟ ವ್ಯವಸ್ಥೆ ಕಿತ್ತೊಗೆದು ಪಾರದರ್ಶಕ ಸರ್ಕಾರ ನೀಡುತ್ತೇನೆ’ ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದಾರೆ. ಆದರೆ, ರಾಜ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ನೀಲಿ ನಕಾಶೆ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಟೀಕಿಸಿದರು.

‘ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್‌ಗೆ ರಾಜ್ಯದಿಂದ ಕೋಟ್ಯಂತರ ರುಪಾಯಿ ಕಳಿಸುತ್ತಿವೆ. ಅದು ಜನರ ತೆರಿಗೆ ಹಣ’ ಎಂದು ಆರೋ‍ಪಿಸಿದರು.

‘ಯಡಿಯೂರಪ್ಪ ಅವರಿಗೆ ಈಗ ಆಟೋ ಚಾಲಕರು ನೆನಪಾಗಿದ್ದಾರೆ. ನಾನು ಸಂವಾದ ಮಾಡಿದ ನಂತರ ಎಚ್ಚೆತ್ತುಕೊಂಡು  ಸಂವಾದ ನಡೆಸಿ

ದ್ದಾರೆ. ಅಧಿಕಾರಕ್ಕೆ ಬಂದರೆ ಮನೆಗಳನ್ನು ಕಟ್ಟಿಸಿ ಕೊಡುವುದಾಗಿ  ಭರವಸೆ ಕೊಟ್ಟಿದ್ದಾರೆ. ಆದರೆ, ನಾನು ಮುಖ್ಯಮಂತ್ರಿ ಆಗಿದ್ದಾಗ ಆ ಉದ್ದೇಶಕ್ಕಾಗಿಯೇ  ಭೂಮಿ ಮತ್ತು ಹಣವನ್ನು ತೆಗೆದಿರಿಸಿದ್ದೆ. ನೀವು ಅಧಿಕಾರಕ್ಕೆ ಬಂದ ಮೇಲೆ ಭೂಮಿ ಮತ್ತು ಹಣವನ್ನು ಏನು ಮಾಡಿದಿರಿ’ ಎಂದು ಕುಮಾರಸ್ವಾಮಿ ಬಿಜೆಪಿಯನ್ನು ಪ್ರಶ್ನಿಸಿದರು.

‘ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ದಕ್ಷಿಣಕನ್ನಡದ ಜನ ಮರಳಿ ರಾಜ್ಯಕ್ಕೆ ಬರಬೇಕು. ನಾನು ಮುಖ್ಯಮಂತ್ರಿಯಾದರೆ 50 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇನೆ. ಇಲ್ಲವಾದಲ್ಲಿ ಒಂದು ಕ್ಷಣ ವಿಧಾನಸೌಧದಲ್ಲಿ ಕೂರುವುದಿಲ್ಲ’ ಎಂದು ಅವರು ಹೇಳಿದರು.

ನಮ್ಮದೇ ಸರ್ಕಾರ: ‘ನನ್ನ ಜೀವನದ ಕೊನೆ ಕಾಲದಲ್ಲಿ ನಮ್ಮದೇ (ಜೆಡಿಎಸ್‌) ಸರ್ಕಾರ ಬರಬೇಕೆಂಬ ಹುಚ್ಚಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಭಾವುಕರಾಗಿ ನುಡಿದರು.

‘ಈ ಚುನಾವಣೆಯಲ್ಲಿ 115 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸುತ್ತೇವೆ. ಈ ಬಾರಿ ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಅವರಿಗೆ 20 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದೇವೆ.  ಕಾಂಗ್ರೆಸ್ ಮತ್ತು ಬಿಜೆಪಿ ಹೊರಗಿಟ್ಟು ಸರ್ಕಾರ ರಚಿಸಬೇಕು ಎಂಬ ಕಾರಣಕ್ಕೆ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಇದರಿಂದ ನಮಗೆ ಸರಳ ಬಹುಮತ ಲಭಿಸುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಜೆಡಿಎಸ್‌ ಮುಗಿಸಬೇಕು ಎಂದು ರಾಹುಲ್‌ ಗಾಂಧಿಯವರನ್ನು ಕರೆದುಕೊಂಡು ರಾಜ್ಯವೆಲ್ಲ ಸುತ್ತಾಡುತ್ತಿದ್ದಾರೆ’ ಎಂದು ದೇವೇಗೌಡ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.