ಸೋಮವಾರ, ಜುಲೈ 13, 2020
25 °C

ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

ನೆಂಟರು–ಸ್ನೇಹಿತರು ನಮ್ಮ ಮನೆಗೆ ಬರುತ್ತಿರಬೇಕು; ನಾವು ಕೂಡ ಅವರ ಮನೆಗಳಿಗೆ ಹೋಗುತ್ತಿರಬೇಕು. ಆಗಲೇ ಮನುಷ್ಯ ಸಂಘಜೀವಿ ಎನ್ನುವುದು ಸಾರ್ಥಕವಾಗುತ್ತದೆ...

ಮಧ್ಯಾಹ್ನದ ನಂತರದ ಹಾಗೂ ಪೂರ್ತಿ ಸಾಯಂಕಾಲದ ನಡುವಿನ ಸುಂದರ ಹೊತ್ತು, ಅದು ನನ್ನ ಸಮಯ. ಕಾಂತನಿಲ್ಲದಿರುವ ಆ ಏಕಾಂತದ ಹೊತ್ತು ನಾನು ಓದಿಕೊಳ್ಳುವ, ಸಂಗೀತ ಕೇಳುವ, ಟಿ.ವಿ. ರಿಮೋಟ್ ನನ್ನದೇ ಕೈಯಲ್ಲಿರುವ, ನಾನೇ ಮಹಾರಾಣಿಯಾಗಿ ವಿರಾಜಿಸುವ ಹೊತ್ತು. ಆದರೆ ಈ ಏಪ್ರಿಲ್-ಮೇ ತಿಂಗಳಲ್ಲಿ ನನ್ನ ಆ ಹೊತ್ತಿಗೂ ಕಲ್ಲು ಹಾಕಲು ರಜೆ ಎಂಬ ಅಘೋಷಿತ ತುರ್ತು ಎಂದಾದರೆ ತುರ್ತು, ಅಥವಾ ಅಸಾಧ್ಯ ಪರಿಸ್ಥಿತಿ ಕಾಣಿಸಿಕೊಳ್ಳುತ್ತದೆ. ಹೌದು, ರಸ್ತೆಯ ಅಷ್ಟೂ ಮಕ್ಕಳ ಸೈನ್ಯ ನನ್ನ ಮನೆ ಮುಂದಿನ ತೊಳೆದಿಟ್ಟ ಕಲ್ಲುಚಪ್ಪಡಿ ಮೇಲೆ ಆಕ್ರಮಣ ಆರಂಭಿಸಿ ಗಲಾಟೆ ಶುರು ಮಾಡಿದರು ಎಂದರೆ ಈ ರಜೆಗಳು ಆರಂಭವಾಗಿ ಬಿಟ್ಟವು ಎಂದರ್ಥ. ನಿತ್ಯದ ಮೂರು ಪುಟಾಣಿಗಳ ಜೊತೆಯಲ್ಲಿ ಇನ್ನೂ ಅರ್ಧ ಡಜನ್ ಮಕ್ಕಳನ್ನು ನೋಡಿದಾಗ, ಯಾರದ್ದೊ ಮನೆಗೆ ನೆಂಟರ ಆಗಮನವಾಗಿದೆ ಎಂದು ತಿಳಿಯುತ್ತದೆ. ಎಷ್ಟೆಂದರೂ ರಜೆಗೂ ನೆಂಟರಿಗೂ ಇರುವ ಆಪ್ತ ಸಂಬಂಧ ಭಾರಿ ಹಳೆಯದೇ ನೋಡಿ.

ಸಂಘಜೀವನದ, ಸಹಯಾನದ ಮಹತ್ವ ಹಾಗೂ ಬಂಧು ಬಳಗದ ಪರಿಚಯ, ಜೊತೆಯಲ್ಲಿ ಉಣ್ಣುವ, ಓದುವ, ಆಡುವುದರ ಅಭ್ಯಾಸ ಈ ರಜೆಯಲ್ಲಿ ಬರುವ ಹೋಗುವ ನೆಂಟರಿಂದ ಆಗುತ್ತದೆ. ಈಗಿನ ಪುಟ್ಟಕುಟುಂಬಗಳ ಒಂದು ಅಥವಾ ಎರಡು ಮಕ್ಕಳಿರುವ ಸಂಸಾರದಲ್ಲಿ ಬಂಧುಗಳ ಮಕ್ಕಳೊಂದಿಗೆ ಕಳೆಯುವ ಸಮಯ ಮಕ್ಕಳ ಮನಸ್ಸಿಗೆ ಕೌಟುಂಬಿಕ ಭಾವವಿಸ್ತಾರವನ್ನು ನೀಡುತ್ತದೆ. ಮಕ್ಕಳು ಹಂಚಿಕೊಳ್ಳುವ, ಹೊಂದಾಣಿಕೆ ಮಾಡಿಕೊಳ್ಳುವ ಹತ್ತು ಹಲವು ವಿಚಾರಗಳನ್ನು ತಿಳಿದುಕೊಳ್ಳುವುದಂತು ಸತ್ಯ. ಮಗಳಂತೂ ಅವಳ ಬಾಲ್ಯವನ್ನು ಪೂರ್ತಿ ಅಜ್ಜಿಮನೆಯಲ್ಲಿ ಕಳೆದ ದಿನಗಳು ಮೊನ್ನೆ ಮೊನ್ನೆಯಂತಿವೆ.

ಮನೆಯಲ್ಲಿ ಉಪ್ಪಿಟ್ಟು ಮೂಸಿಯೂ ನೋಡದೇ ಮುಖ ತಿರುಗಿಸುತ್ತಿದ್ದ ಮಗಳು ಅಮ್ಮನ ಮನೆಯಲ್ಲಿ ಎರಡೆರಡು ಸರ್ತಿ ಉಪ್ಪಿಟ್ಟು ಕೇಳಿ ಹಾಕಿಸಿಕೊಂಡು ತಿಂದಳು ಎಂದು ಅಮ್ಮ ಅಂದಿದ್ದಾಗ ಮುಖಕ್ಕೆ ಹೊಡೆದಂತಾಗಿತ್ತು. ಕೇಳಿದ್ದಾಗ ‘ಓಹ್! ಅಮ್ಮಾ, ಉಪ್ಪಿಟ್ಟೋ ಏನೋ ಒಂದು, ನಾವೆಲ್ಲ ಆಡ್ತಾ ತಿಂತಾ ಇದ್ವಿ. ಎಲ್ರೂ ಸೇರಿ ತಿಂತಾ ಇದ್ದಾಗ ಅದೇನೋ ತಿಂಡಿ ಬಗ್ಗೆ ಯೋಚ್ನೆ ಬರುತ್ತಿರಲಿಲ್ಲ’ ಎಂದಾಗ ಕೂಡಿ ಆಡುವ, ಹೊತ್ತು ಕಳೆಯುವ ಸಂದರ್ಭದಲ್ಲಿ ಮನುಷ್ಯ, ಮಕ್ಕಳು ಅದೆಷ್ಟು ಸರಳವಾಗಿರುತ್ತಾನೆ ಅಥವಾ ಸುಲಭವಾಗಿರುತ್ತಾರೆ ಎನಿಸಿತ್ತು. ಹೀಗೆ ರಜೆ ಮತ್ತು ಬಂಧುಗಳ ಒಡನಾಟ ಮಕ್ಕಳ ಮನಸ್ಸಿಗೆ ಮುದ ನೀಡುವುದಂತೂ ಸತ್ಯ.

ಕೂಡು ಕುಟುಂಬಗಳಲ್ಲಿ ಒಂದೈದು ಜನ ನೆಂಟರು ಯಾವತ್ತೂ ಹೆಚ್ಚೆನಿಸುವುದಿಲ್ಲ. ಆಟದ ಗುಂಪುಗಳಿಗೆ ಇನ್ನೂ ಆನೆಬಲ ಬರುತ್ತಿದ್ದುದೇ ರಜೆಯಲ್ಲಿ. ಅಕ್ಕತಂಗಿಯರ, ಅಣ್ಣತಮ್ಮಂದಿರ ಮಕ್ಕಳೆಲ್ಲ ಒಂದೆಡೆ ಸೇರಿ ಆಡುವ ಸಮಯ ಮಕ್ಕಳ ಮನದಲ್ಲಿ ನೆನಪುಗಳಾಗಿ ಬಚ್ಚಿಟ್ಟುಕೊಳ್ಳುತ್ತವೆ. ವರ್ಷಗಳೇ ಉರುಳಿ ಹೋದ ಮೇಲೆ ಯಾವುದೋ ಹೊತ್ತಿನಲ್ಲಿ ಆ ನೆನಪುಗಳು ಕಾಡುವುದೂ ಇದೆ. ನಮ್ಮ ಭಾವಕೋಶವನ್ನು ಹಿಗ್ಗಿಸುವುದೇ ಇಂತಹ ನೆನಪುಗಳು. ರಜೆ ಹಿತವಾದಷ್ಟೇ ಅಹಿತವಾಗಿ ಮಾರ್ಪಾಡಾಗುವುದೂ ಇದೆ. ಮಕ್ಕಳ ನಡುವಿನ ಸಣ್ಣ ಮಾತುಗಳಿಗೆ ಕಿವಿಕೊಟ್ಟು ಮನಸ್ಸನ್ನು ಕಹಿಮಾಡಿಕೊಳ್ಳುವುದೂ ನಡೆಯುತ್ತದೆ.

ಅಣ್ಣ ಮತ್ತು ದೊಡ್ಡಪ್ಪನ ಮಗ ಇಂಥದ್ದೇ ಒಂದು ರಜೆಯ ಹೊತ್ತಿನಲ್ಲಿ ನೀರು ತುಂಬಿದ ತೋಡಿನಲ್ಲಿ ನಿಂತು ಆಟವಾಡುತ್ತಿದ್ದರು. ತೋಡಿನ ನಡುವೆ ನಡೆದಾಡಲು ಇರುವ ಪುಟ್ಟ ಸಂಕದ ಆ ಬದಿಯಲ್ಲಿ ಒಬ್ಬ, ಈ ಬದಿಯಲ್ಲಿ ಒಬ್ಬ ನಿಂತು ಕಿಟ್ಟು–ಪುಟ್ಟು ಫಿಲ್ಮಿನಲ್ಲಿ ಹೀಗೆ ಅಲ್ವಾ ಕಲ್ಲು ಬೀಸಿದ್ದು? ಎಂದು ದೊಡ್ಡಣ್ಣ ಕಲ್ಲಿಗೆ ಹಗ್ಗ ಕಟ್ಟಿ ಬೀಸಿ ಒಗೆದಿದ್ದ. ಹುಲ್ಲಿನ ಹಗ್ಗ ತುಂಡಾಗಿ ತೋಡಿನ ಬದಿಯಲ್ಲಿ ನಿಂತಿದ್ದ ಐದರ ಪುಟ್ಟ ತಂಗಿಯ ಮೂಗಿಗೆ ಕಲ್ಲು ಬಡಿದು ತಂಗಿ ಪ್ರಜ್ಞೆ ತಪ್ಪಿ ಬಿದ್ದಿಳು. ಎಲ್ಲವೂ ಸರಿ ಹೋಗಿ ವರ್ಷಗಳೇ ಕಳೆದರೂ ದೊಡ್ಡಣ್ಣ ಇವತ್ತಿಗೂ ತಂಗಿಯನ್ನು ನೋಡುವಾಗ ಅಪರಾಧಿ ಭಾವದಲ್ಲಿ ನಿಲ್ಲುತ್ತಾನೆ. ಮುಂದಿನ ರಜೆಗಳಲ್ಲಿ ಅಣ್ಣನ ಬರುವಿಕೆಯೂ ಕಡಿಮೆಯಾದಾಗ ನೋವಾಗುತ್ತಿತ್ತು.

ಸುಮಾರು ಮೂವತ್ತು ವರ್ಷ ಹಳೆಯ ಘಟನೆಯಿದು. ರಜೆಯಲ್ಲಿ ಅಮ್ಮನ ಸೋದರ ಸಂಬಂಧಿಯೊಬ್ಬರು ಹೆಂಡತಿ ಮಕ್ಕಳೊಂದಿಗೆ ಬಂದಿದ್ದ ಸಂದರ್ಭ. ಹಳ್ಳಿಮನೆ, ದೊಡ್ಡ ಅಂಗಳ, ತೋಟಕ್ಕೆ ಬೇಸಿಗೆಯಲ್ಲಿ ನೀರುಣಿಸಲು ಇರುವ ನೀರಿನ ತೋಡು ಎಲ್ಲವೂ ನಗರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಮಾವನ ಮಕ್ಕಳಿಗೆ ಒಂದು ರೀತಿಯ ಸ್ವರ್ಗವಾಗಿತ್ತು. ಭರ್ಜರಿಯಾಗಿ ಆಟವಾಡುತ್ತಿದ್ದ ಮಕ್ಕಳ ಪೈಕಿ ಚಿಕ್ಕವನ ಕಣ್ಣಿಗೆ ಅಪ್ಪನ ಬೀರುವಿಗೆ ಸದಾ ಸಿಕ್ಕಿಸಿಕೊಂಡಿರುತ್ತಿದ್ದ ಬೀಗದ ಕೈ ಬಿತ್ತು.

ದುಡ್ಡಿಡುತ್ತಿದ್ದ ಕಬ್ಬಿಣದ ಗೋದ್ರೆಜ್ ಕಪಾಟಿಗೆ ಬೀಗ ಹಾಕಿ ಬೀಗವನ್ನು ಹಾಗೇ ಅಲ್ಲೇ ಬಿಡುತ್ತಿದ್ದರು ಅಪ್ಪ! ಅದ್ಯಾವ ಹೊತ್ತಿನಲ್ಲಿ ಬೀಗದ ಕೈ ತೆಗೆದುಬಿಟ್ಟಿದ್ನೋ ಯಾರಿಗೂ ತಿಳಿಯಲೇ ಇಲ್ಲ. ಮರುದಿನ ಬೆಳ್ಳಂಬೆಳಿಗ್ಗೆ ತಮ್ಮ ಕೆಲಸಕ್ಕೆ ಹೋಗುವ ಆತುರದಲ್ಲಿ ಅಪ್ಪ ಬೀರು ತೆಗೆಯಬೇಕೆಂದಾಗ, ಬೀಗದ ಕೈ ಮಾಯವಾಗಿದ್ದಕ್ಕೆ ವಿಶ್ವಾಮಿತ್ರಗೋತ್ರದ ಅಪ್ಪ ಕೆಂಡಾಮಂಡಲ. ಅಮ್ಮನಿಗೆ ಇರಿಸುಮುರಿಸು. ಮಕ್ಕಳನ್ನು ಆಡುವಂತಿಲ್ಲ; ಅಪ್ಪನ ಕೋಪ ತಡೆಯಲಾಗುತ್ತಿಲ್ಲ. ದುಮುಗುಟ್ಟುತ್ತಲೇ ಅಪ್ಪ ಹೊರಟರು. ಸ್ವಲ್ಪ ಹೊತ್ತಿನ ಮೇಲೆ ಪಾತ್ರೆಗಳನ್ನು ಜೋಡಿಸಿಡುವ ಹೊತ್ತಿಗೆ ಏನೋ ಸದ್ದಾಗುತ್ತಿದೆ ಎಂದುಕೊಂಡರೆ ನೀರಿನ ತಂಬಿಗೆಯೊಳಗೆ ಬೀಗದ ಕೈ!

ಹೀಗೆ ನೆಂಟರೆಂದರೆ ಒಮ್ಮೊಮ್ಮೆ ಬಿಸಿತುಪ್ಪವೂ ಹೌದು. ರಜೆಯಲ್ಲಿ ಬರುತ್ತಿದ್ದ ಅತ್ತೆಯ ಮಗಳು ಕಲಿಸಿದ್ದ ರಂಗೋಲಿ, ಹೇಳಿಕೊಟ್ಟ ಹಾಡುಗಳು ಇಂದಿಗೂ ಗುನುಗುನಿಸುವಾಗ ಅವಳ ಮುಖ ಹಾದುಹೋಗುತ್ತದೆ. ನಮ್ಮ ಮನಸ್ಸಿಗೆ ಯಾವುದೇ ಗಂಭೀರವಾದ ಗಾಯ ಮಾಡದೇ ಹೋದರೆ, ಬಂದು ಹೋಗುವ ಎಲ್ಲ ಸಂದರ್ಭಗಳೂ ಕ್ಷಣದಲ್ಲಿ ಕಳೆಯುತ್ತವೆ. ಮತ್ತು ಒಳ್ಳೆಯ ನೆನಪಾಗಿ ಮನದಲ್ಲಿ ಗೂಡು ಕಟ್ಟುತ್ತವೆ. ನಮ್ಮ ಮುಖದಲ್ಲಿ ಒಂದು ಮಂದಹಾಸವೂ ಹಾದುಹೋಗುತ್ತದೆ. ಹಾಗಾಗಿ ಹಿರಿಯರ ಸುಪರ್ದಿಯಲ್ಲೇ ಮಕ್ಕಳ ಆಟನೋಟಗಳು ನಡೆಯುವುದು ಒಳಿತು. ಇಲ್ಲದೇ ಹೋದರೆ ಮಕ್ಕಳ ಮನದ ಗೂಡಿನ ತುಪ್ಪಳದಲ್ಲಿ ಮುಳ್ಳೊಂದು ಸೇರಿ ಉಳಿದೀತು.

ನೆಂಟರು, ಬಂಧುಗಳು ಎಲ್ಲವನ್ನೂ ಒಂದು ಮಿತಿಯಳತೆಯಲ್ಲೇ ನೋಡುವ ಈ ಹೊತ್ತಿನ ಮನಃಸ್ಥಿತಿಗೂ ಮನೆತುಂಬ ಮಕ್ಕಳಿದ್ದರೂ ನೆಂಟರ, ಬಂಧುಗಳ ಅಷ್ಟೂ ಮಕ್ಕಳನ್ನೂ ಸುಧಾರಿಸುತ್ತಿದ್ದ ಅಮ್ಮ–ಅತ್ತೆಯಂದಿರ ಕಾಲದ ಮನಃಸ್ಥಿತಿಗೂ ಅಜಗಜಾಂತರ.

ಪ್ರವಾಸಿತಾಣಗಳಿಗೆ ಭೇಟಿ ಕೊಡುವ ಜಾಯಮಾನವೇ ತೀರಾ ಕಡಿಮೆಯಿದ್ದ ದಿನಗಳಲ್ಲಿ ರಜೆಯೆಂದರೆ ಅಜ್ಜಿಮನೆಗೆ, ಚಿಕ್ಕಮ್ಮ, ದೊಡ್ಡಮ್ಮಂದಿರ ಮನೆಗಳಿಗೆ ಮಕ್ಕಳನ್ನು ಕಳಿಸುವುದಷ್ಟೇ ಗೊತ್ತಿದ್ದ ಸಮಯವದು. ಸೋದರ ಸಂಬಂಧಿಗಳ ಪರಿಚಯ, ಆಪ್ತ ಸ್ನೇಹ, ಒಮ್ಮೊಮ್ಮೆ ಕೋಪತಾಪ, ಮನಃಸ್ತಾಪ – ಹೀಗೆ ನವರಸಗಳ ಹೂರಣ ರಜೆಯಲ್ಲಿ ಬರುವ ನೆಂಟರ ಸಾಂಗತ್ಯ. ಅಷ್ಟಿದ್ದೂ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ, ಹಿರಿಯರ ಮಾತು ಮನುಷ್ಯನ ಡೋಲಾಯಮಾನ ಮನಃಸ್ಥಿತಿಯನ್ನು ಹೇಳುತ್ತದೆ.

ನಮ್ಮಲ್ಲಿ ಮಕ್ಕಳಿಗೆ, ನೆಂಟರಿಗೆ ಭಾರಿ ಔತಣ ನೀಡುವ, ಅಪರೂಪಕ್ಕೆ ಬರುವ ನೆಂಟರಿಗೆ ಉಡುಗೊರೆಗಳನ್ನೂ ನೀಡುವ ಪರಿಪಾಠವಿದೆ. ಪ್ರಾಯಶಃ ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ – ಈ ಮಾತು ಇದೇ ಕಾರಣಕ್ಕೆ ಬಂದಿರಬಹುದು. ನಮ್ಮ ಶಕ್ತಿಗೆ ಸರಿಯಾಗಿ ಔತಣಿಸಿದರೆ, ಉಡುಗೊರೆ ನೀಡಿದರೆ ಸಾಕು. ಕೊಡುವುದರ ಮೌಲ್ಯಕ್ಕಿಂತ ಕೊಡುವ ಹಿಂದಿರುವ ಭಾವ ಮುಖ್ಯ. ಎಲ್ಲದಕ್ಕಿಂತಲೂ ಗೌರವ ಪ್ರೀತಿಯಿಂದ ಅತಿಥಿಗಳನ್ನು ನಡೆಸಿಕೊಳ್ಳುವ ಗುಣ ಮನುಷ್ಯನ ಎಲ್ಲ ಉಡುಗೊರೆಗಿಂತಲೂ ದೊಡ್ಡದು.

ಇತ್ತೀಚೆಗಂತೂ ಬರುವ ಪ್ರತಿಯೊಬ್ಬರೂ ಮೊದಲೇ ಸೂಚನೆ ನೀಡಿ ಬರುವ ಕಾಲವಾದ್ದರಿಂದ ಒಂದಷ್ಟೂ ಊಟ ಉಪಚಾರದ ಅಗತ್ಯ ತಯಾರಿಗಳನ್ನು ಮೊದಲೇ ಮಾಡಿಕೊಳ್ಳಬಹುದು. ಆ ಮೂಲಕ ನೆಂಟರಿದ್ದ ಹೊತ್ತಲ್ಲಿ ಅವರೊಂದಿಗೆ ಪ್ರೀತಿ–ವಿಶ್ವಾಸದಿಂದ ಮಾತಾಡಿ ಅವರ ಬರುವಿಕೆಯನ್ನು ಸಂತೋಷದಿಂದ ಗೌರವಿಸಿದಂತೆಯೂ ನಡೆದುಕೊಳ್ಳಬಹುದು. ಮೊಬೈಲು ಬಂದ ಬಳಿಕ ನಮ್ಮ ಪ್ರಪಂಚವೇ ಬದಲಾದ ಹಿನ್ನೆಲೆಯಲ್ಲಿ ನೆಂಟರೊಂದಿಗೆ ಮಾತೂ ದೊಡ್ಡ ಉಡುಗೊರೆಯೇ. ಪಕ್ಕದಲ್ಲಿ ಬಂಧುಗಳು ಕೂತಿದ್ದರೂ ಅವರನ್ನು ಕಡೆಗಣಿಸಿ ಮೊಬೈಲಿನಲ್ಲಿ ತಲ್ಲೀನರಾಗಿ ಬಿಡುವ ಗುಣ ಸಭ್ಯತೆಯೆಂದು ಹೇಳಲಾಗದು.

ಬೇಸಿಗೆ ರಜೆಯೆಂದರೆ ಕಣ್ಣ ಮುಂದೇ ನಡೆಯುವ ಬದಲಾವಣೆಗೆ ಸಾಕ್ಷಿಯಾಗುವುದು. ಒಂದು ರಜೆ ಕಳೆದು ಇನ್ನೊಂದು ರಜೆ ಬಂತೆಂದರೆ, ಕಣ್ಣ ಮುಂದಿರುವ ಪ್ರಪಂಚ ಒಂದಾವರ್ತ ಮುಗಿಸಿ ನಿಲ್ಲುವ ಹೊತ್ತು ಎಂದರ್ಥ. ಕಳೆದ ರಜೆಯಲ್ಲಿ ಕಂಕುಳಲ್ಲಿದ್ದ ಮಕ್ಕಳು ಈ ರಜೆಯಲ್ಲಿ ನಡೆಯುತ್ತಾ ಬರುವ ಹೊತ್ತು, ಸ್ಕೂಲು ಬೇಡಾ ನಂಗೇ ನೀನು ಬೇಕೆಂದು ಅಳುತ್ತಿದ್ದ ಮಗಳು ಎದೆಯೆತ್ತರ ಬೆಳೆದು ಪಕ್ಕಕೇ ಬಂದು ನಿಲ್ಲುವ ಹೊತ್ತು, ಕೂದಲಿನ ಬಣ್ಣ ತಿಳಿಯಾಗುತ್ತಲೇ ಹೋಗುವುದನ್ನು ಕನ್ನಡಿ ತೋರಿಸುವ ಹೊತ್ತು, ವರ್ಷದಿಂದ ವರ್ಷಕ್ಕೆ ಬದಲಾಗುವ ಪ್ರಕೃತಿ, ಮನುಷ್ಯನ ಪ್ರಕೃತಿ ಎಲ್ಲವೂ ಹೊಸ ನೆಂಟರೇ ಎನ್ನುತ್ತದೆ ಕಾಲ. ನೆಂಟರು– ಬಂಧು–ಬಳಗ ನಮಗೆ ಅಗತ್ಯ ಮತ್ತು ಅನಿವಾರ್ಯ. ಒಮ್ಮೊಮ್ಮೆ ಅಮೃತದಂತೇ ಸವಿ ಎನಿಸುವ ಬಂಧುಗಳು ಒಮ್ಮೊಮ್ಮೆ ಕಹಿಯಾಗಿ ಕಾಡುವುದುಂಟು. ಒಂದಂತೂ ಸತ್ಯ ನೆಂಟನಿಲ್ಲದ ಮನುಷ್ಯನಿಲ್ಲ. ಹಾಗಾಗಿ ಆಸೆ ಪ್ರೀತಿಯ ಉಯ್ಯಾಲೆಯ ಜೀಕು ನಡೆಯುತ್ತಿರಲೇಬೇಕು. ಆಗಲೇ ಬದುಕು ವೈವಿಧ್ಯಪೂರ್ಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.