ಮಂಗಳವಾರ, ಆಗಸ್ಟ್ 4, 2020
25 °C
ಬೇಸಿಗೆಯಲ್ಲಿ ಮಕ್ಕಳ ಬಗೆಬಗೆಯ ಆಟ

ಚಕ್ಕೋತ ಸಿಪ್ಪೆಯಲ್ಲಿ ಚಿಣ್ಣರ ತಕ್ಕಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಕ್ಕೋತ ಸಿಪ್ಪೆಯಲ್ಲಿ ಚಿಣ್ಣರ ತಕ್ಕಡಿ

ಶಿಡ್ಲಘಟ್ಟ: ಚಕ್ಕೋತ ಹುಳಿ- ಸಿಹಿ ಮಿಶ್ರಿತ ರುಚಿಕರ ಹಣ್ಣು. ಉಪ್ಪು ಅಥವಾ ಸಕ್ಕರೆ ಬೆರೆಸಿ ಸೇವಿಸುವರು. ಇದರ ಹೊರಗಿನ ಸಿಪ್ಪೆ ಸ್ವಲ್ಪ ಹೆಚ್ಚು ಎಂಬಷ್ಟು ದಪ್ಪವಾಗಿದ್ದು, ಸುಲಭವಾಗಿ ಬಿಡಿಸಲು ಬರುತ್ತದೆ. ಬೇಸಿಗೆ ಈ ಹಣ್ಣಿಗೆ ಸುಗ್ಗಿ.

ಬೇಸಿಗೆಯಲ್ಲಿ ಮಕ್ಕಳ ರಜೆ ಇರುವುದರಿಂದ ಹಣ್ಣನ್ನು ತಿಂದ ಮಕ್ಕಳು ಸಿಪ್ಪೆಯಿಂದ ಆಟಿಕೆ ತಯಾರಿಸುತ್ತಿದ್ದಾರೆ. ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಹಣ್ಣಿನ ಸಿಪ್ಪೆಯಿಂದ ತಕ್ಕಡಿ ಮಾಡಿ ಮಕ್ಕಳು ಆಟ ಆಡುತ್ತಿದ್ದುದು ಸಾಮಾನ್ಯವಾಗಿತ್ತು. ತಕ್ಕಡಿಯ ಎರಡು ತಟ್ಟೆಗಳ ಬದಲಿಗೆ ಚಕ್ಕೋತ ಹಣ್ಣಿನ ಎರಡು ಭಾಗಗಳ ಸಿಪ್ಪೆಯನ್ನು ಬಳಸುವರು. ಕೋಲಿಗೆ ದಾರ ಕಟ್ಟಿ ಅಂಗಡಿಯಲ್ಲಿ ತೂಕ ಹಾಕುವ ಆಟ ಆಡುತ್ತಿದ್ದಾರೆ. ಶಾಲೆಗೆ ರಜೆ ಕಾರಣ ಮಕ್ಕಳಿಗೆ ಏನೇ ವಸ್ತುಗಳು ಸಿಕ್ಕರೂ ತಮ್ಮ ಕ್ರಿಯಾಶೀಲ ಪ್ರಯೋಗ ಮಾಡಿಕೊಂಡು ತಮ್ಮ ಆಟಿಕೆಗೆ ಸಾಮಗ್ರಿಯಾಗಿ ಉಪಯೋಗಿಸುವರು.

ಆಟಿಕೆಗೆ ಮಾಡಿಕೊಂಡ ಚಕ್ಕೋತ ಹಣ್ಣಿನ ಸಿಪ್ಪೆಯ ತಕ್ಕಡಿಯಲ್ಲಿ ಕಲ್ಲು, ಮಣ್ಣು, ಕಾಳುಗಳನ್ನು ತುಂಬಿ ಮಾರಾಟ ಮಾಡುವ ಮಕ್ಕಳ ಆಟ ನೋಡಲು ಬಲು ಚಂದ. ಇದು ಆಟ ಅಷ್ಟೇ ಅಲ್ಲ, ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಲು ಸಹಕಾರಿ ಆಗುವುದು. ಮಕ್ಕಳು ಸಹಜವಾಗಿ ಕೂಡುವುದು, ಕಳೆಯುವುದು, ಭಾಗಿಸುವುದು, ಗುಣಿಸುವುದನ್ನು ಕಲಿಯುವರು.

ಮೊದಲಿನಂತೆ ಈಗ ಚಕ್ಕೋತ ಮರಗಳು ಇಲ್ಲ. ಇಡೀ ಗ್ರಾಮದಲ್ಲಿ ಎರಡು ಮರಗಳಿವೆಯಷ್ಟೆ.ಇದ್ದ ಮರಗಳನ್ನೆಲ್ಲ ಕಡಿದು ಹಾಕಿದ್ದಾರೆ. ರಸ್ತೆ, ಚರಂಡಿ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ, ಮನೆ ನಿರ್ಮಾಣದ ನೆಪವೊಡ್ಡಿ ಮರಗಳನ್ನು ನೆಲಕ್ಕುರುಳಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಚಕ್ಕೋತ ಹಣ್ಣುಗಳನ್ನು ಸವಿಯುವ ಆಸಕ್ತಿಯೂ ಜನರಲ್ಲಿ ಇಲ್ಲ. ಹಳ್ಳಿಗಳಲ್ಲಿ ಮಾತ್ರ ಅಲ್ಲಲ್ಲಿ ಕಾಣಬಹುದು. ಆದರೆ ನಗರ ಪ್ರದೇಶದಲ್ಲಿ ಅವು ಹುಡುಕಿದರೂ ಸಿಗುವುದಿಲ್ಲ.

ಬೇಸಿಗೆಯಲ್ಲಿ ಬಿಸಲಿನ ತಾಪದಲ್ಲಿ ದಣಿದು ಬಂದವರಿಗೆ, ಅತಿಥಿಗಳಿಗೆ ಹಣ್ಣಿನ ಪಾನಕ ಕೊಡುವ ಸಂಪ್ರದಾಯ ಇತ್ತು. ಈಗ ಅದು ಮಾಯವಾಗಿದೆ. ನೈಸರ್ಗಿಕ ಹಣ್ಣುಗಳ ಬದಲಾಗಿ ಬಾಟಲಿಯಲ್ಲಿ ಸಿಗುವ ಪ್ಯಾಕ್, ಪೌಚ್‌ಗಳು ಪರ್ಯಾಯ ಎನಿಸಿವೆ. ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಜನರಿಗೆ ಕಷ್ಟ ಪಡುವುದು ಬೇಕಿಲ್ಲ. ಹೀಗಾಗಿ ಅನಿವಾರ್ಯ ಎನಿಸಿದೆ ಎಂಬುದು ವಿಶ್ವನಾಥ ಅವರ ಅನಿಸಿಕೆ.

ಔಷಧಿಯ ಭಂಡಾರ

ಚಕ್ಕೋತ ವಿಟಮಿನ್‌ ಸಿ ಭರಿತವಾಗಿದೆ. ವಿಟಮಿನ್‌ ಬಿ ಕೂಡ ಇದೆ. ಬೀಟಾ ಕೆರೋಟಿನ್‌ ಮತ್ತು ಫೋಲಿಕ್‌ ಆ್ಯಸಿಡ್‌ ಹೇರಳವಾಗಿದೆ. ಹೃದಯದ ಆರೋಗ್ಯಕ್ಕೆ ಅತ್ಯಗತ್ಯ ವಾದ ಪೊಟ್ಯಾಸಿಯಂ ಸಾಕಷ್ಟು ಪ್ರಮಾಣದಲ್ಲಿದೆ. ವಿಟಮಿನ್‌ ಎ, ವಿಟಮಿನ್‌ ಬಿ1, ವಿಟಮಿನ್‌ ಬಿ2, ಬಯೋಫ್ಲೇವಿನಾಯ್ಡಗಳು, ಆರೋಗ್ಯಕರ ಕೊಬ್ಬು, ಪ್ರೊಟೀನ್‌, ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಕಿಣ್ವಗಳಿಂದ ಕೂಡಿ ಆರೋಗ್ಯಪೂರ್ಣವಾಗಿದೆ. ಹಲವು ಆರೋಗ್ಯ ಲಾಭವನ್ನು ಚಕ್ಕೋತ ನೀಡುತ್ತದೆ. ಆಟದ ನೆಪದಲ್ಲಿ ಮಕ್ಕಳು ಹಣ್ಣು ಸೇವಿಸುವುದು ಒಳ್ಳೆಯದು’ ಎಂದು ನರಸಿಂಹಮೂರ್ತಿ ವಿವರಿಸುವರು.

ಡಿ.ಜಿ. ಮಲ್ಲಿಕಾರ್ಜುನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.