ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕುವೆಂಪುನಗರದಲ್ಲಿ ತಾಯಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವ್ಯಕ್ತಿಗೆ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಿದೆ.

ಪ್ರವೀಣ ಭಟ್‍ ಶಿಕ್ಷೆಗೆ ಗುರಿಯಾದವ. ರೀನಾ ರಾಕೇಶ ಮಾಲಗತ್ತಿ (37), ಆದಿತ್ಯ ಮಾಲಗತ್ತಿ (11) ಹಾಗೂ ಸಾಹಿತ್ಯಾ ಮಾಲಗತ್ತಿ (3) ಕೊಲೆಯಾದವರು.

ಅನೈತಿಕ ಸಂಬಂಧದ ಗುಟ್ಟು ರಟ್ಟಾಗಬಾರದೆಂದು ಮಕ್ಕಳ ಎದುರೇ ಆಕೆಯನ್ನು ಕೊಲೆ ಮಾಡಿದ್ದ. 2015ರ ಆ.16ರಂದು ಮುಂಜಾನೆ ಘಟನೆ ನಡೆದಿತ್ತು. ಇದರಿಂದ ಇಡೀ ನಗರವೇ ಬೆಚ್ಚಿ ಬಿದ್ದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದರು.

ರಾಕೇಶ ಮಾಲಗತ್ತಿ ಜೊತೆ ಮದುವೆಯಾಗಿದ್ದ ರೀನಾ, ಕುಟುಂಬದೊಂದಿಗೆ ಕುವೆಂಪುನಗರದಲ್ಲಿ ವಾಸವಿದ್ದರು. ರಾಕೇಶ ಟಿಳಕವಾಡಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು. ಪತ್ನಿ, ಇಬ್ಬರು ಮಕ್ಕಳು ಹಾಗೂ ಅಕ್ಕನ ಮಗ ಹರ್ಷ ಈ ಮನೆಯಲ್ಲಿ ಇರುತ್ತಿದ್ದರು.

ಶುಭಾಶಯದೊಂದಿಗೆ ಸ್ನೇಹ:
ರೀನಾ ಮಾಲಗತ್ತಿ ಮನೆಯ ಪಕ್ಕದ ಮನೆಯಲ್ಲಿಯೇ ಪ್ರವೀಣ ಭಟ್ ಇದ್ದ. ಇಲ್ಲಿನ ಗೋಗಟೆ ಕಾಲೇಜಿನಲ್ಲಿ ಸಿ.ಎ ವ್ಯಾಸಂಗ ಮಾಡುತ್ತಿದ್ದ. 2014ರಲ್ಲಿ ಮನೆಯ ಟೆರೇಸ್‌ನಲ್ಲಿ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಗ, ರೀನಾ ಕೂಡ ಶುಭಾಶಯ ಕೋರಿದ್ದರು. ಅಲ್ಲಿಂದ ಪರಿಚಯ ಬೆಳೆದಿತ್ತು. ಇಬ್ಬರೂ ಮೊಬೈಲ್‌ನಲ್ಲಿ ಸಂವಹನ ನಡೆಸುತ್ತಿದ್ದರು. ಇದು ಅನೈತಿಕ ಸಂಬಂಧವಾಗಿ ಪರಿವರ್ತನೆಯಾಗಿತ್ತು ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

‘ಆಕೆಯ ಜತೆಗಿನ ಒಂದು ವರ್ಷದ ಸಂಬಂಧ ಪ್ರವೀಣಗೆ ಸಾಕು ಎನಿಸಿತ್ತು. ಆ.15ರ ರಾತ್ರಿ 11ಕ್ಕೆ ಆತನನ್ನು ರೀನಾ ಮನೆಗೆ ಆಹ್ವಾನಿಸಿದ್ದರು. ಇಬ್ಬರೂ ಟೆರೇಸ್‌ನಲ್ಲಿ ತಂಪುಪಾನೀಯ ಸೇವಿಸಿದ್ದರು. ನಾನು ಕರೆದಾಗ ಬರದಿದ್ದರೆ, ನಮ್ಮಿಬ್ಬರ ನಡುವಿನ ಅನೈತಿಕ ಸಂಬಂಧದ ವಿಷಯ ಬಹಿರಂಗಪಡಿಸುತ್ತೇನೆ ಎಂದು ಆಕೆ ಬೆದರಿಕೆ ಒಡ್ಡಿದ್ದಳು. ಆಗ ಇಬ್ಬರ ನಡುವೆ ವಾಗ್ವಾದವೂ ನಡೆದಿತ್ತು. ನಂತರ ತನ್ನ ಮನೆಗೆ ಹೋಗಿದ್ದ ಪ್ರವೀಣ, ಅನೈತಿಕ ಸಂಬಂಧ ಬಹಿರಂಗವಾದರೆ ವಿವಾಹಕ್ಕೆ ತೊಂದರೆ ಆಗುತ್ತದೆ ಎಂದು ಆತಂಕಗೊಂಡು ಕೊಲೆಗೆ ಸಂಚು ರೂಪಿಸಿದ್ದ. ಮರುದಿನ (16ರಂದು) ಮುಂಜಾನೆ 3ರ ವೇಳೆಗೆ ಹ್ಯಾಂಡ್‌ಗ್ಲೌಸ್‌ ಹಾಕಿಕೊಂಡು ಟೆರೇಸ್‌ ಮೂಲಕ ರೀನಾ ಮಲಗಿದ್ದ ಕೊಠಡಿಗೆ ಹೋಗಿದ್ದ. ಆಗಲೂ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಸಂಬಂಧ ಕಡಿದುಕೊಳ್ಳಲು ಆಕೆ ಒಪ್ಪದಿದ್ದಾಗ, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದ. ಆಕೆಯ ಚೀರಾಟ ಕೇಳಿ ಎಚ್ಚರಗೊಂಡಿದ್ದ ಮಕ್ಕಳನ್ನೂ ಆತ್ಮಹತ್ಯೆ ಮಾಡಿದ್ದ’ ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ.

ಎಪಿಎಂಸಿ ಠಾಣೆಯ ಅಂದಿನ ಇನ್‌ಸ್ಪೆಕ್ಟರ್‌ ಎಸ್.ಎ. ಪಾಟೀಲ, 514 ಪುಟಗಳ ದೋಷಾರೋಪ‍ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಎಂ.ಎಚ್‌. ಅಣ್ಣಯ್ಯನವರ ಶಿಕ್ಷೆ ವಿಧಿಸಿದರು. ಸರ್ಕಾರಿ ವಕೀಲ ವಿದ್ಯಾಸಾಗರ ದಶರಥ ದರಬಾರೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT