ಸೋಮವಾರ, ಆಗಸ್ಟ್ 10, 2020
26 °C

ಇಂದಿನಿಂದ ತ್ಯಾಗರಾಜ ಸಂಗೀತೋತ್ಸವ

ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಇಂದಿನಿಂದ ತ್ಯಾಗರಾಜ ಸಂಗೀತೋತ್ಸವ

ಶ್ರೀತ್ಯಾಗರಾಜ ಗಾನಸಭೆಯು ಇಂದಿನಿಂದ ಐದು ದಿನಗಳ ಕಾಲ (ಏ.18ರಿಂದ 22ರ ತನಕ) ಸಂಗೀತೋತ್ಸವವನ್ನು ಹಮ್ಮಿಕೊಂಡಿದೆ. ಸ್ಥಾಪನೆಯಾದಾಗಿನಿಂದಲೂ ಸತತವಾಗಿ ರಾಜ್ಯದ ಕಲಾವಿದರಿಂದಲೇ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಅಪರೂಪದ ಸಂಗೀತ ಸಂಸ್ಥೆ.

1971ರಿಂದಲೂ ನಿಯಮಿತವಾಗಿ ತಿಂಗಳ ಕಾರ್ಯಕ್ರಮ, ಏಕರಾಗ ಸಭಾ, ಏಕ ವಾಗ್ಗೇಯಕಾರ ಸಭಾಗಳಲ್ಲದೆ ಪುರಂದರದಾಸ–ತ್ಯಾಗರಾಜರ ಆರಾಧನೆ ಮೊದಲಾದವುಗಳನ್ನೂ ಆಚರಿಸಿಕೊಂಡು ಬರುತ್ತಿದೆ. ಶಂಕರ ಜಯಂತಿಯನ್ನು ತ್ಯಾಗರಾಜ ಗಾನಸಭೆಯು ಸಂಗೀತ-ನಾದೋಪಾಸನೆಯ ಮೂಲಕ ನಡೆಸುತ್ತಿರುವುದು ಅಭಿನಂದನೀಯ. ಅಲ್ಲದೆ ಸಂಗೀತ ಉತ್ಸವದಲ್ಲಿ ಹಿರಿಯ ಕಲಾವಿದರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿ, ‘ಕಲಾಭೂಷಣ’ ಎಂಬ ಬಿರುದನ್ನು ಸಹ ನೀಡುತ್ತಿದ್ದಾರೆ. ಜೊತೆಗೆ ಲಲಿತ ಕಲೆಗಳಲ್ಲಿ ದೀರ್ಘಸೇವೆ ಸಲ್ಲಿಸಿರುವ ಕಲಾವಿದರನ್ನು ಸನ್ಮಾನಿಸುವ ಪರಿಪಾಠವನ್ನೂ ಹೊಂದಿದೆ.

ಈ ಬಾರಿ ನಡೆಯಲಿರುವ 38ನೇ ಸಂಗೀತೋತ್ಸವದಲ್ಲಿ ‘ಕಲಾಭೂಷಣ’ ಬಿರುದು ಸ್ವೀಕರಿಸಲಿರುವವರು ಎಂ.ವಾಸುದೇವ ರಾವ್. ಅವರು ರಾಜ್ಯದ ಹಿರಿಯ ಲಯವಾದ್ಯಗಾರರು. ಆದರೆ ಸಂಗೀತ ಅವರಿಗೆ ಹೊಸದೂ ಅಲ್ಲ, ಹೊರಗಿನಿಂದ ಬಂದುದೂ ಅಲ್ಲ. ಅವರ ತಂದೆ ಮನ್ನಾಜಿ ರಾವ್ ಹಾಗೂ ಅಣ್ಣ ಜೈಮುನಿ ರಾವ್ ಅವರೂ ಸಂಗೀತ ವಿದ್ವಾಂಸರೇ. ಮನೆಯಲ್ಲಿ ಹಿಂದೂಸ್ತಾನಿ ವಾತಾವರಣವಿದ್ದರೂ ಇದ್ದರೂ ವಾಸುದೇವರಾವ್ ಅಭ್ಯಾಸ ಮಾಡಿದ್ದು ಕರ್ನಾಟಕ ಸಂಗೀತವನ್ನು!

ಅಂದಿನ ಹಿರಿಯ ಲಯವಾದ್ಯಗಾರರೂ, ಜನಪ್ರಿಯ ಗುರುಗಳೂ ಆಗಿದ್ದ ಎಚ್. ಪುಟ್ಟಾಚಾರ್ ಅವರಲ್ಲಿ ದಶಕಕ್ಕೂ ಹೆಚ್ಚು ಕಾಲ ಶ್ರದ್ಧೆಯಿಂದ ಮೃದಂಗ ಕಲಿತು, ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ, ಅವರು ಸಂಗೀತ ಲೋಕದ ಗಮನ ಸೆಳೆದರು. ಜೊತೆಗೆ ಡೋಲಕ್ ವಾದನದಲ್ಲೂ ಪರಿಣತಿ ಪಡೆದುಕೊಂಡರು.

ರಾಜ್ಯದ ಬಹುತೇಕ ಸಭೆ-ಸಮ್ಮೇಳನಗಳಲ್ಲಿ ಕಛೇರಿ ಮಾಡಿರುವ ವಾಸುದೇವರಾವ್ ಮೂರು ತಲೆಮಾರಿನ ಕಲಾವಿದರಿಗೆ ಪಕ್ಕವಾದ್ಯ ನುಡಿಸಿ ದಾಖಲೆ ಸ್ಥಾಪಿಸಿದ್ದಾರೆ. ಜರ್ಮನಿ, ನೆದರ್ಲೆಂಡ್ ಮುಂತಾದ ದೇಶಗಳಲ್ಲೂ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನೀಡಿ ಬಂದಿದ್ದಾರೆ. ಪ್ರಧಾನ ಕಲಾವಿದರು ಗಾಯಕರಿರಲಿ, ವಾದ್ಯಗಾರರಾಗಿರಲಿ, ವಾಸುದೇವರಾವ್ ಅವರನ್ನು ನೆರಳಿನಂತೆ ಅನುಸರಿಸುತ್ತಾ, ಇಂಬು ತುಂಬುತ್ತಾರೆ. ಅವರ ವಾದನ ಎಂದೂ 'ಶಕ್ತಿ' ಪ್ರದರ್ಶನವಲ್ಲ. ಸೌಖ್ಯವೇ ಮುಂದಾಗಿರುವುದು ಅವರ ವಿನಯವಂತಿಕೆಯ ವೈಶಿಷ್ಟ್ಯ. ಲೆಕ್ಕಾಚಾರ ಎಂದೂ ತಪ್ಪದಿದ್ದರೂ, ಬುದ್ಧಿವಂತಿಕೆಗಿಂತ ನಾದ ಸೌಖ್ಯಕ್ಕೇ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ವಾಸುದೇವರಾವ್ ಅವರು ತಮ್ಮ ಅನುಭವಪೂರಿತ ಕೈಚಳಕದಿಂದ ಕಲಾವಿದರ ಮೆಚ್ಚುಗೆಗೆ, ಶ್ರೋತೃಗಳ ಅಭಿನಂದನೆಗೆ ಪಾತ್ರರಾಗಿದ್ದಾರೆ. ತಮ್ಮ ಸ್ವಭಾವದಲ್ಲೂ ಮೃದು-ಮಧುರ ಮಾತಿಗೂ, ಸೌಮ್ಯ-ಸೌಜನ್ಯ ನಡವಳಿಕೆಗೂ ವಾಸುದೇವರಾವ್ ಅವರು ಪ್ರಸಿದ್ಧರು. ಹೀಗಾಗಿ ಅವರ ಸ್ವಭಾವಕ್ಕೂ-ಸಂಗೀತಕ್ಕೂ ಅಂಥ ವ್ಯತ್ಯಾಸ ಇಲ್ಲ ಎನ್ನಬಹುದು.

ಬೋಧನೆಯು ವಾಸುದೇವರಾವ್ ಅವರ ಇನ್ನೊಂದು ಮುಖ. ವ್ಯಾಲಿ ಸ್ಕೂಲ್, ಜ್ಞಾನೋದಯ ಶಾಲೆ, ಗಾನಮಂದಿರ, ವಾಣಿ ಸಂಗೀತ ವಿದ್ಯಾಲಯ ಹಾಗೂ ಲಯ–ಸುರಭಿಗಳ ಮೂಲಕ ನೂರಾರು ಜನ ಆಸಕ್ತರಿಗೆ ಲಯವಾದ್ಯಗಳಲ್ಲಿ ಶಿಕ್ಷಣ ನೀಡಿದ್ದಾರೆ. ಇಂದು ರಾಜ್ಯದ ಸಂಗೀತ ವೇದಿಕೆಯಲ್ಲಿ ಬೆಳಗುತ್ತಿರುವ  ಎಚ್.ಎಸ್. ಸುಧೀಂದ್ರ, ದಯಾನಂದ ಮೋಹಿತೆ, ಎಸ್.ವಿ. ಗಇರಿಧರ್, ಕೆ.ಎಸ್. ಭವಾನಿ ಶಂಕರ್  ಮುಂತಾದವರು ವಾಸುದೇವರಾವ್ ಅವರ ದಕ್ಷ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಅನೇಕ ಲಯವಾದ್ಯ ಗೋಷ್ಠಿ ಕಾರ್ಯಕ್ರಮಗಳನ್ನು ನಿರ್ದೇಶಿಸಿ, ಕಿರಿಯ ಕಲಾವಿದರಿಗೆ ವೇದಿಕೆಯ ಅನುಭವ ದೊರಕಿಸಿಕೊಡುತ್ತಿದ್ದಾರೆ. ರಾವ್ ಅವರು ಮೃದಂಗ ಶಿಕ್ಷಣ ಕ್ರಮದ ಪಠ್ಯಕ್ರಮ ಕುರಿತು ಲೇಖನ, ಪುಸ್ತಕಗಳನ್ನೂ ಬರೆದು ಉಪಕರಿಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಗಳ ಪರೀಕ್ಷಕರಾಗೂ ಸೇವೆ ಸಲ್ಲಿಸಿದ್ದಾರೆ.

ಎಂ. ವಾಸುದೇವರಾವ್ ಅವರ ವಾದನ, ಶಿಕ್ಷಣ, ಬರಹಗಳನ್ನು ಗೌರವಿಸಿ, ಅನೇಕ ಪ್ರಶಸ್ತಿ-ಗೌರವಗಳು ಅವರನ್ನು ಅರಸಿ ಬಂದಿವೆ. ಬೆಂಗಳೂರು ಗಾಯನ ಸಮಾಜದಿಂದ ‘ವರ್ಷದ ಕಲಾವಿದ’, ಕರ್ನಾಟಕ ಗಾನಕಲಾ ಪರಿಷತ್ತಿನಿಂದ ‘ಸದಸ್ ಸನ್ಮಾನ’, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಹಾಗೂ ‘ಕರ್ನಾಟಕ ಕಲಾಶ್ರೀ’ ಬಿರುದುಗಳಲ್ಲದೆ ಮೃದಂಗ ವಾದನ ರತ್ನ, ಲಯವಾದನ ಚತುರ, ನಾದಚಿಂತಾಮಣಿ - ಮುಂತಾದ 15 ಬಿರುದುಗಳಿಗೆ ಅವರು ಭಾಜನರಾಗಿದ್ದಾರೆ. ಇವೆಲ್ಲಕ್ಕೂ ಮುಕುಟಪ್ರಾಯವಾಗಿ ಇದೀಗ (ಏ. 22) ತ್ಯಾಗರಾಜ ಗಾನಸಭೆಯ ಸಂಗೀತೋತ್ಸವದ ಅಧ್ಯಕ್ಷತೆ ವಹಿಸಿ ‘ಕಲಾಭೂಷಣ’ ಬಿರುದು ಸ್ವೀಕರಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.