ಗುರುವಾರ , ಜುಲೈ 16, 2020
22 °C
ಹೊರಗಿನವರಿಗೆ ಟಿಕೆಟ್‌: ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ

ಅಭ್ಯರ್ಥಿ ಸಿದ್ದಯ್ಯ ಕಾರು ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭ್ಯರ್ಥಿ ಸಿದ್ದಯ್ಯ ಕಾರು ತಡೆದು ಪ್ರತಿಭಟನೆ

ಹಾಸನ: ಸಕಲೇಶಪುರ– ಆಲೂರು ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಸಿದ್ದಯ್ಯ ಸ್ಪರ್ಧೆ ಮಾಡುತ್ತಿರುವುದನ್ನು  ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಹೊರಗಿನವರು ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವವೇ ಇಲ್ಲದವರನ್ನು ಅಭ್ಯರ್ಥಿಯಾಗಿ ಮಾಡಲಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಆಗಮಿಸಿದ ಸಿದ್ದಯ್ಯ ಅವರ ಕಾರು ತಡೆದ ಕಾರ್ಯಕರ್ತರು, ಅವರ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆಯ ಸ್ವಾಗತ ನೀಡಿದರು.

‘ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಹಲವು ದಿನಗಳಿಂದ ಕಾರ್ಯಕರ್ತರು ಹಾಗೂ ಮುಖಂಡರು ಹೈಕಮಾಂಡ್‌ಗೆ ಮನವಿ ಮಾಡಿದ್ದರು. ಸ್ಥಳೀಯರು ಹಾಗೂ ಹೊರಗಿನವರು ಸೇರಿದಂತೆ 17 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಹೊರಗಿನವರಾದ ಸಿದ್ದಯ್ಯ ಅವರನ್ನೇ ಕೊನೆಗೂ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ’ ಎಂದು ಮುಖಂಡ ಗಂಗಾಧರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಅನೇಕ ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಹೊರ ಜಿಲ್ಲೆಯಿಂದ ಬಂದವರಿಗೆ ಮಣೆ ಹಾಕಲಾಗಿದೆ’  ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಈ ವೇಳೆ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹರಸಾಹಸಪಟ್ಟರು. ಮುಖಂಡರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ. ಸುಮಾರು 15 ನಿಮಿಷ ಕಾರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ನಂತರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ವಿಶ್ವನಾಥ್‌ ಹಾಗೂ ಇತರೆ ನಾಯಕರು ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿ ಸಿದ್ದಯ್ಯ ಅವರ ಕಾರು ಹೊರಡಲು ದಾರಿ ಮಾಡಿಕೊಟ್ಟರು. ಪ್ರತಿಭಟನೆಯಲ್ಲಿ ಚನ್ನಮಲ್ಲಯ್ಯ, ಗಂಗಾಧರ್‌, ಶಿವಣ್ಣ, ಕೃಷ್ಣಯ್ಯ ಪಾಲ್ಗೊಂಡಿದ್ದರು.

ಅಸಮಾಧಾನ ಶಮನ ಮಾಡಿ ಗೆದ್ದು ತೋರಿಸುವೆ

‘ಪಕ್ಷದ ವರಿಷ್ಠರ ಅಣತಿಯಂತೆ ಸಕಲೇಶಪುರ ದಿಂದ ಸ್ಪರ್ಧಿಸುತ್ತಿದ್ದೇನೆ. ಸರ್ಕಾರಿ ನೌಕರಿಯಿಂದ ನಿವೃತ್ತಿ ಆಗಿದ್ದೇನೆ ಹೊರತು ಸೇವೆಯಿಂದಲ್ಲ. ರಾಜಕೀಯಕ್ಕೆ ಬರಬೇಕೆಂಬ ಆಸೆ ಇರಲಿಲ್ಲ. ನಿವೃತ್ತಿ ಬಳಿಕವೂ ಸರ್ಕಾರ ವಿವಿಧ ಹುದ್ದೆ ನೀಡಿತ್ತು. ರಾಜಕೀಯಕ್ಕೆ ಬರುತ್ತಿರುವ ನಿವೃತ್ತರಲ್ಲಿ ನಾನೇನು ಮೊದಲಿಗನಲ್ಲ. ಎಲ್ಲ ಅಸಮಾಧಾನ ಶಮನ ಮಾಡಿ ಗೆದ್ದು ತೋರಿಸುತ್ತೇನೆ.’ ಎಂದು ಆಲೂರು, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿದ್ದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಅಸಮಾಧಾನ ಇಲ್ಲ

ಕಾಂಗ್ರೆಸ್ ಟಿಕೆಟ್‌ ಹಂಚಿಕೆಯಿಂದ ಜಿಲ್ಲೆಯಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್‌ ಹೇಳಿದರು. ‘ಹೊಳೆನರಸೀಪುರ ಕ್ಷೇತ್ರದಲ್ಲಿ ಟಿಕೆಟ್‌ ವಂಚಿತೆ ಅನುಪಮಾ ಅವರು ಪಕ್ಷ ತೊರೆಯುವುದಿಲ್ಲ ಮತ್ತು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಶೀಘ್ರ ಕೆಪಿಸಿಸಿ ಅಧ್ಯಕ್ಷ, ಮುಖ್ಯಮಂತ್ರಿ ಸಮ್ಮುಖದಲ್ಲಿ ಅನುಪಮಾ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಹಾಗೆಯೇ ಟಿಕೆಟ್‌ ವಂಚಿತರಾದ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಪಕ್ಷ ಅವರಿಗೆ ಸಾಕಷ್ಟು ಅವಕಾಶ ನೀಡಿದೆ. ಕಾಂಗ್ರೆಸ್‌ ತೊರೆಯುವುದಿಲ್ಲ’ ಎಂದು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.