ಶುಕ್ರವಾರ, ಡಿಸೆಂಬರ್ 13, 2019
19 °C
ಪೊನ್ನಂಪೇಟೆ ಹೃದಯ ಭಾಗದಲ್ಲಿ ಕೊಳೆಯುತ್ತಿರುವ ತ್ಯಾಜ್ಯ ರಾಶಿ

‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರವಾದ ಪೊನ್ನಂಪೇಟೆ ಸ್ವಚ್ಛ ಪಟ್ಟಣ ಎಂಬ ಖ್ಯಾತಿಗೆ ಗಳಿಸಿದೆ. ಆದರೆ, ಇದಕ್ಕೆ ಕಳಂಕ ಉಂಟು ಮಾಡುತ್ತಿದೆ ಪಟ್ಟಣದ ಹೃದಯ ಭಾಗದಲ್ಲಿಯೇ ಬೆಟ್ಟದಂತೆ ಬಿದ್ದಿರುವ ಕಸದ ರಾಶಿ.

ಹೌದು. ನಿರ್ಮಿತಿ ಕೇಂದ್ರ ಪಕ್ಕದ ಖಾಲಿ ಜಾಗದಲ್ಲಿ 15 ವರ್ಷದಿಂದ ಕಸ ಸುರಿಯಲಾಗುತ್ತಿತ್ತು. ಕ್ರಮೇಣ ಪಟ್ಟಣ ಬೆಳೆದಂತೆ ಈ ಜಾಗ ಮಧ್ಯಭಾಗಕ್ಕೆ ಸೇರಿತು. ಈಗ ಕಸದ ರಾಶಿ ಕೊಳೆತು ದುರ್ವಾಸನೆ ಬೀರುತ್ತಾ ಅಕ್ಕಪ್ಕದ ಜನರಿಗೆ ನರಕಯಾತನೆ ಉಂಟು ಮಾಡುತ್ತಿದೆ.

ಇದರ ಪಕ್ಕದಲ್ಲಿಯೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಸಮಾಜ ಕಲ್ಯಾಣ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯ ಇದೆ. ಮತ್ತೊಂದು ಬದಿಯಲ್ಲಿ ಸೆಸ್ಕ್ ಇಲಾಖೆ ನೌಕರರ ವಸತಿ ಗೃಹಗಳಿವೆ. ಇವುಗಳ ಮಧ್ಯದಲ್ಲಿ ಕಸ ತುಂಬಿದೆ. ಇದರಿಂದ ನೊಣ, ಸೊಳ್ಳೆ, ಕ್ರಿಮಿಕೀಟಗಳು ಹೆಚ್ಚಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಪೊನ್ನಂಪೇಟೆ, ಗೋಣಿಕೊಪ್ಪಲು, ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ಹಳ್ಳಿಗಟ್ಟು ಸೀತಾ ಕಾಲೋನಿಯಲ್ಲಿ 2.5 ಎಕರೆ ಜಾಗ ಗುರುತಿಸಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಸ ಕರಗಿಸುವ ಯಂತ್ರ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, 5 ವರ್ಷ ಕಳೆದರೂ ಈ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಸಮಸ್ಯೆ ಮುಗಿಯದಂತಾಗಿದೆ.

ಗೋಣಿಕೊಪ್ಪಲಿನಲ್ಲಿ ಕೀರೆ ಹೊಳೆ ದಡ, ಸಣ್ಣಪುಟ್ಟ ತೊರೆ- ತೋಡುಗಳ ದಡಕ್ಕೆ ಕಸ ಹಾಕುಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಗಲಾಟೆ ಮಾಡಿದ್ದರಿಂದ ಬೈಪಾಸ್ ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಇದರಿಂದ ಗೋಣಿಕೊಪ್ಪಲು ಬೈಪಾಸ್ ರಸ್ತೆ ಕಸದ ತಾಣವಾಗಿದೆ.

ಗ್ರಾಮ ಪಂಚಾಯಿತಿಗೆ ದೂರದೃಷ್ಟಿ ಚಂತನೆ ಕೊರತೆಯೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ. ಖಾಸಗಿಯವರಿಗೆ ಪೈಸಾರಿ ಜಾಗ ನೀಡಿದ್ದರಿಂದ ಈಗ ಸರ್ಕಾರಕ್ಕೆ ಜಾಗವೇ ಇಲ್ಲದಂತಾಗಿದೆ ಎಂದು ನಿವಾಸಿ ಎಂ.ಜೆ.ಮೈಕಲ್ ಆರೋಪಿಸಿದರು.

ಖಾಸಗಿಯವರ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದಕ್ಕೆ ಆ ಜಾಗದ ಅಕ್ಕಪಕ್ಕದವರು ಅಡ್ಡಿಪಡಿಸಿ ದರು.  ಕೆರೆ ಮುಚ್ಚಿ ಅಂತರ್ಜಲ ಸಮಸ್ಯೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ ತಡೆವೊಡ್ಡಿದರು. ಹೀಗಾಗಿ, ಬೇರೆ ಜಾಗದ ಅಭಾವದಿಂದಾಗಿ ಕಸ ಬಿದ್ದಲ್ಲಿಯೇ ಕೊಳೆಯುತ್ತಿದೆ. ಹಳ್ಳಿಗಟ್ಟು ಸೀತಾ ಕಾಲೊನಿಯ ನಿಗದಿತ ಸ್ಥಳಕ್ಕೆ ಸಾಗಿಸುವುದೊಂದೇ ಇದಕ್ಕೆ ಪರಿಹಾರ ಎಂದು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತಾ ಗಣೇಶ್ ಪ್ರಜಾವಾಣಿಗೆ ತಿಳಿಸಿದರು.

 

ಪ್ರತಿಕ್ರಿಯಿಸಿ (+)