ಗುರುವಾರ , ಅಕ್ಟೋಬರ್ 1, 2020
20 °C

‘ಸುಪ್ರೀಂ’ ನೂತನ ನ್ಯಾಯಮೂರ್ತಿಯಾಗಿ ಮಲ್ಹೋತ್ರಾ ಪ್ರಮಾಣ ವಚನ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

‘ಸುಪ್ರೀಂ’ ನೂತನ ನ್ಯಾಯಮೂರ್ತಿಯಾಗಿ ಮಲ್ಹೋತ್ರಾ ಪ್ರಮಾಣ ವಚನ ಸ್ವೀಕಾರ

ನವದೆಹಲಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಅವರಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಶುಕ್ರವಾರ ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ವಕೀಲ ಸಮುದಾಯದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದೂ ಪಾತ್ರರಾದರು.

ಇಂದೂ ಅವರು ಸುಪ್ರೀಂ ಕೋರ್ಟ್‌ನ ಏಳನೇ ಮಹಿಳಾ ನ್ಯಾಯಮೂರ್ತಿ ಎನಿಸಿದ್ದಾರೆ. ಆದರೆ, ಇತರ ಆರು ನ್ಯಾಯಮೂರ್ತಿಗಳು ಹೈಕೋರ್ಟ್‌ಗಳಿಂದ ಬಡ್ತಿ ಪಡೆದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಏರಿದ್ದರು.

ಇಂದೂ ಅವರ ಜತೆಗೆ, ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರ ಹೆಸರನ್ನೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಆದರೆ ಜೋಸೆಫ್‌ ಅವರ ನೇಮಕ ಶಿಫಾರಸನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರದ ಈ ಕ್ರಮಕ್ಕೆ ವಕೀಲ ಸಮುದಾಯ ಮತ್ತು ವಿರೋಧ ಪಕ್ಷಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ.

ಇಂದೂ ಅವರು ಜನಿಸಿದ್ದು ಬೆಂಗಳೂರಿನಲ್ಲಿ.  ಅವರು 1983ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 1988ರಲ್ಲಿ ಸುಪ್ರೀಂ ಕೋರ್ಟ್‌ ವಕೀಲರಾಗಿ ಮಾನ್ಯತೆ ದೊರೆಯಿತು. 2007ರಲ್ಲಿ ಹಿರಿಯ ವಕೀಲೆ ಎಂಬ ಮನ್ನಣೆ ದೊರೆಯಿತು. ಈ ಗೌರವಕ್ಕೆ ಪಾತ್ರರಾದ ಎರಡನೇ ಮಹಿಳೆ ಅವರು.

ಸಾಂವಿಧಾನಿಕ ಮಹತ್ವದ ಹಲವು ಪ್ರಕರಣಗಳಲ್ಲಿ ಅವರು ವಾದಿಸಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ನಿಭಾಯಿಸಿರುವ ಅವರು ಸುಪ್ರೀಂ ಕೋರ್ಟ್‌ನ ಪ್ರಮುಖ ಹಿರಿಯ ವಕೀಲರಲ್ಲಿ ಒಬ್ಬರು ಎಂಬ ಹೆಸರು ಪಡೆದುಕೊಂಡಿದ್ದರು.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳನ್ನು ನಿರ್ವಹಿಸುವುದಕ್ಕೆ ಮಾರ್ಗಸೂಚಿ ರಚಿಸಲು ರೂಪಿಸಲಾದ ವಿಶಾಖಾ ಸಮಿತಿಯಲ್ಲಿ ಇಂದೂ ಅವರು ಸದಸ್ಯೆಯಾಗಿದ್ದರು.

**

2ನೇ ಸಂದರ್ಭ

ಎರಡು ಸಂದರ್ಭಗಳಲ್ಲಿ ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ಇಬ್ಬರು ಮಹಿಳಾ ನ್ಯಾಯಮೂರ್ತಿಗಳಿದ್ದರು. ಜ್ಞಾನ ಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ್‌ ದೇಸಾಯಿ ಅವರು ಏಕಕಾಲದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ಮೊದಲ ಜೋಡಿ.

ಇಂದೂ ಅವರ ನೇಮಕದೊಂದಿಗೆ ಈಗ ಸುಪ್ರೀಂ ಕೋರ್ಟ್‌ನಲ್ಲಿ ಇಬ್ಬರು ಮಹಿಳಾ ನ್ಯಾಯಮೂರ್ತಿಗಳಾಗಿದ್ದಾರೆ. ಇದು ಇಬ್ಬರು ನ್ಯಾಯಮೂರ್ತಿಗಳು ಏಕಕಾಲದಲ್ಲಿ ಕರ್ತವ್ಯದಲ್ಲಿರುವ ಎರಡನೇ ಸಂದರ್ಭವಾಗಿದೆ.

**

ಉನ್ನತ ಸ್ಥಾನಕ್ಕೆ ಏರಿದ ಏಳು ಮಹಿಳೆಯರು 

ಫಾತಿಮಾ ಬೀವಿ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ. 1950ರಲ್ಲಿ ಸ್ಥಾಪನೆಯಾದ ಸುಪ್ರೀಂ ಕೋರ್ಟ್‌ಗೆ 39 ವರ್ಷಗಳ ಬಳಿಕ ಅಂದರೆ 1989ರಲ್ಲಿ ನ್ಯಾಯಮೂರ್ತಿಯಾಗಿ ಬೀವಿ ನೇಮಕವಾದರು. ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಅವರಿಗೆ ಈ ಗೌರವ ದೊರೆತಿತ್ತು.

ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಸುಜಾತಾ ವಿ. ಮನೋಹರ್‌ ಅವರು 1994ರ ನವೆಂಬರ್‌ 8ರಂದು ಸುಪ‍್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 1999ರ ಆಗಸ್ಟ್‌ವರೆಗೆ ಅವರು ಈ ಹುದ್ದೆಯಲ್ಲಿದ್ದರು. ಸುಪ್ರೀಂ ಕೋರ್ಟ್‌ಗೆ ನೇಮಕವಾಗುವ ಮೊದಲು ಅವರು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು

ರುಮಾ ಪಾಲ್‌ ಅವರು 2000ನೇ ಇಸವಿಯ ಜನವರಿ 28ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೇರಿದರು. 2006ರ ಜೂನ್‌ 2ರವರೆಗೆ ಅವರು ಈ ಹುದ್ದೆಯಲ್ಲಿದ್ದರು. ಅತಿ ದೀರ್ಘ ಕಾಲ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಹೆಗ್ಗಳಿಕೆ ಇವರದ್ದಾಗಿದೆ.

ರಮಾ ಪಾಲ್‌ ಅವರ ನಿವೃತ್ತಿಯ ನಾಲ್ಕು ವರ್ಷ ಬಳಿಕ ಮತ್ತೊಬ್ಬ ಮಹಿಳಾ ನ್ಯಾಯಮೂರ್ತಿಯ ನೇಮಕವಾಯಿತು. ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜ್ಞಾನ ಸುಧಾ ಮಿಶ್ರಾ ಅವರು 2010ರ ಏಪ್ರಿಲ್‌ 10ರಂದು ಸುಪ್ರೀಂ ಕೋರ್ಟ್‌ಗೆ ನೇಮಕವಾದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೇರಿದವರು ರಂಜನಾ ಪ್ರಕಾಶ್‌ ದೇಸಾಯಿ. 2011ರ ಸೆಪ್ಟೆಂಬರ್‌ 13ರಿಂದ 2014ರ ಅಕ್ಟೋಬರ್‌ 29ರವರೆಗೆ ಅವರು ಕರ್ತವ್ಯದಲ್ಲಿದ್ದರು. 2014ರ ಆಗಸ್ಟ್‌ 13ರಂದು ನ್ಯಾಯಮೂರ್ತಿ ಆರ್‌. ಭಾನುಮತಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ದೊರೆಯಿತು. 2020ರ ಜುಲೈ 19ರವರೆಗೆ ಅವರ ಸೇವಾವಧಿ ಇದೆ.

ಇನ್ನಷ್ಟು...

‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ: ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

‘ಸುಪ್ರೀಂ’ಗೆ ಮತ್ತೊಬ್ಬರು ಮಹಿಳಾ ನ್ಯಾಯಮೂರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.