ಗುರುವಾರ , ಫೆಬ್ರವರಿ 25, 2021
29 °C
ಪಕ್ಷದ ಆಕ್ಷೇಪದ ಹೊರತಾಗಿಯೂ ‘ಮಹಾನ್‌ ವ್ಯಕ್ತಿ’ ಎಂದು ಶ್ಲಾಘಿಸಿದ ಬಿಜೆಪಿ ಸಚಿವ ಮೌರ್ಯ

ಜಿನ್ನಾ: ಮರಣದ ದಶಕಗಳ ನಂತರವೂ ವಿವಾದ ಜೀವಂತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿನ್ನಾ: ಮರಣದ ದಶಕಗಳ ನಂತರವೂ ವಿವಾದ ಜೀವಂತ!

ನವದೆಹಲಿ: ಪಾಕಿಸ್ತಾನದ ಪಿತಾಮಹ ಮಹಮ್ಮದ್‌ ಅಲಿ ಜಿನ್ನಾ ಮೃತರಾಗಿ ಏಳು ದಶಕಗಳೇ ಕಳೆದಿವೆ. ಆದರೂ ಅವರನ್ನು ಕುರಿತ ವಿವಾದಗಳು ಮಾತ್ರ ಇನ್ನೂ ನಿಂತಿಲ್ಲ.

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಹಾಕಿರುವ ಜಿನ್ನಾ ಭಾವಚಿತ್ರ ಮತ್ತೆ ವಿವಾದದ ಕೇಂದ್ರವಾಗಿದೆ. ಅದರಲ್ಲಿಯೂ, ಈ ಭಾವಚಿತ್ರ ಹಾಕುವುದನ್ನು ಪಕ್ಷದ ನಾಯಕರು ವಿರೋಧಿಸಿದ ನಂತರವೂ, ಉತ್ತರ ಪ್ರದೇಶದ ಸಚಿವ ಬಿಜೆಪಿಯ ಸ್ವಾಮಿ ಪ್ರಸಾದ ಮೌರ್ಯ ಜಿನ್ನಾರನ್ನು ‘ಮಹಾನ್‌ ವ್ಯಕ್ತಿ’ ಎಂದು ಕರೆದಿರುವುದು ವಿವಾದದ ಕಿಡಿ ಹೊತ್ತಿಸಿದೆ.

ಜಿನ್ನಾ ಕುರಿತಂತೆ ಬಿಜೆಪಿಯಲ್ಲಿ ತಿಕ್ಕಾಟ ಶುರುವಾಗಿರುವುದು ಇದೇ ಮೊದಲೇನಲ್ಲ. ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿದ್ದ ಎಲ್.ಕೆ. ಅಡ್ವಾಣಿ 2005ರ ಜೂನ್‌ನಲ್ಲಿ ಜಿನ್ನಾರನ್ನು ಹೊಗಳಿ ತೊಂದರೆಗೆ ಸಿಲುಕಿದ್ದರು. ತಮ್ಮ ಹುಟ್ಟೂರು ಕರಾಚಿಗೆ ತೆರಳಿದ್ದ ಅಡ್ವಾಣಿ ಭಾವನಾತ್ಮಕವಾಗಿ ಮಾತನಾಡಿ, ‘ಜಿನ್ನಾ ಜಾತ್ಯತೀತ ನಾಯಕರಾಗಿದ್ದರಲ್ಲದೆ ಹಿಂದೂ–ಮುಸ್ಲಿಂ ಏಕತೆಯ ರಾಯಭಾರಿಯಾಗಿದ್ದರು’ ಎಂದು ಪ್ರಶಂಸಿಸಿದ್ದರು.

2004ರ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಆಘಾತದಿಂದ ಪಕ್ಷ ಹೊರಬರುವ ಮುನ್ನವೇ, ತನ್ನ ಅಧ್ಯಕ್ಷ ಹಿಂದೂಗಳ ವಿರೋಧಿಯಾಗಿದ್ದ ಜಿನ್ನಾರನ್ನು ಹೊಗಳಿದ್ದು ಬಿಜೆಪಿಗೆ ಕಸಿವಿಸಿ ಎನಿಸಿತು. ಪರಿಣಾಮ, ಅಡ್ವಾಣಿಯವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿತು. ಆರ್‌ಎಸ್‌ಎಸ್‌ ಕೂಡ ಅಡ್ವಾಣಿಯವರ ಹೇಳಿಕೆಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿತು.

ಒತ್ತಡ ಬಂದರೂ, ಅಡ್ವಾಣಿ ತಮ್ಮ ಹೇಳಿಕೆ ಹಿಂಪಡೆಯಲಿಲ್ಲ. ಕೆಲವು ತಿಂಗಳು ಹುದ್ದೆಯಲ್ಲಿ ಮುಂದುವರಿದ ಅವರು, 2005ರ ಡಿಸೆಂಬರ್‌ನಲ್ಲಿ ರಾಜನಾಥ ಸಿಂಗ್‌ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಯಿತು.

ಜಸ್ವಂತ್‌ಸಿಂಗ್‌ ತಲೆದಂಡ: ಬಿಜೆಪಿಯ ಮತ್ತೊಬ್ಬ ಮುಖಂಡ ಜಸ್ವಂತ್‌ಸಿಂಗ್‌ ಕೂಡ ಜಿನ್ನಾರನ್ನು ಹೊಗಳಿದ್ದಕ್ಕೆ ಪಕ್ಷದಿಂದಲೇ ಉಚ್ಚಾಟನೆಯಾಗಬೇಕಾಯಿತು. ‘ಜಿನ್ನಾ–ಇಂಡಿಯಾ, ಪಾರ್ಟಿಷನ್‌, ಇಂಡಿಪೆಂಡೆನ್ಸ್‌’ ಕೃತಿ ಬರೆದಿದ್ದ ಜಸ್ವಂತ್‌ ಸಿಂಗ್‌, ‘ಭಾರತ ವಿಭಜನೆಯಾಗಲು ಜಿನ್ನಾಗಿಂತ ಕಾಂಗ್ರೆಸ್‌ ಮತ್ತು ಜವಾಹರಲಾಲ್‌ ನೆಹರೂ ಅವರೇ ಕಾರಣ. ದೇಶ ವಿಭಜಿಸಲು ಜಿನ್ನಾ ಉತ್ಸುಕರಾಗಿರಲಿಲ್ಲ’ ಎಂದು ಹೇಳಿದ್ದರು.

ನರೇಂದ್ರಮೋದಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಗುಜರಾತ್‌ ಸರ್ಕಾರ ಕೂಡ ಈ ಪುಸ್ತಕವನ್ನು ನಿಷೇಧಿಸಿತ್ತು. ನಂತರ, ಜಸ್ವಂತ್‌ಸಿಂಗ್‌ರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಎಲ್.ಕೆ. ಅಡ್ವಾಣಿ ಮಹತ್ವದ ಪಾತ್ರ ವಹಿಸಿದರು. ಸದ್ಯ, ಜಿನ್ನಾ ಭಾವಚಿತ್ರ ಕುರಿತಂತೆ ಎದ್ದಿರುವ ವಿವಾದ ಕುರಿತು ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘ಈ ದೇಶವನ್ನು ವಿಭಜಿಸಿದ ಜಿನ್ನಾ ಸಾಧನೆಯನ್ನು ನಾವೇಕೆ ಸಂಭ್ರಮಿಸಬೇಕು’ ಎಂದು ಪ್ರಶ್ನಿಸಿದ್ದಾರೆ.

**

ಅಂತರ್ಜಾಲ ಸೇವೆ ಸ್ಥಗಿತ

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಮಹಮ್ಮದ್‌ ಅಲಿ ಜಿನ್ನಾ ಭಾವಚಿತ್ರ ಹಾಕಿದ್ದಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಇನ್ನೂ ತಣ್ಣಗಾಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಾತ್ಮಕ ಸಂದೇಶಗಳು ಹರಿದಾಡಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಭಾವಚಿತ್ರ ತೆರವುಗೊಳಿಸುವಂತೆ ಬಿಜೆಪಿ ಸಂಸದ ಸತೀಶ್‌ ಗೌತಮ್‌ ವಿಶ್ವವಿದ್ಯಾಲಯ ಕುಲಪತಿಗೆ ಪತ್ರ ಬರೆದಿದ್ದಾರೆ. ಆದರೆ, ‘ವಿದ್ಯಾರ್ಥಿ ಒಕ್ಕೂಟದ ವಿಷಯದಲ್ಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ’ ಎಂದು ವಿಶ್ವವಿದ್ಯಾಲಯ ಆಡಳಿತ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.