ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಮತ ನೀಡುವ ಮುನ್ನ ಖಾತ್ರಿ ಪಡಿಸಿಕೊಳ್ಳಿ

ಸಂಕಲ್ಪ ಸಮಾವೇಶದಲ್ಲಿ ಶಾಸಕ ಜಿಗ್ನೇಶ್ ಮೇವಾನಿ ಕರೆ
Last Updated 5 ಮೇ 2018, 12:02 IST
ಅಕ್ಷರ ಗಾತ್ರ

ಹಾಸನ : ‘ಜಾತ್ಯತೀತ ತತ್ವದ ಮೇಲೆ ಸ್ಥಾಪಿತವಾಗಿರುವ ಜೆಡಿಎಸ್‌ ಪಕ್ಷಕ್ಕೆ ರಾಜ್ಯದ ಮತದಾರರು ಮತ ನೀಡುವ ಮೊದಲು, ಆ ಪಕ್ಷದ ವರಿಷ್ಠರು ಫ್ಯಾಸಿಸ್ಟ್ ಶಕ್ತಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಗುಜರಾತ್‌ನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಕರೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಜೆಡಿಎಸ್ ಯಾವ ಕಾರಣಕ್ಕೂ ಫ್ಯಾಸಿಸ್ಟ್ ಶಕ್ತಿಯೊಂದಿಗೆ ಜತೆಗೂಡುವುದಿಲ್ಲ ಎಂಬ ಭರವಸೆ ನೀಡಿದರಷ್ಟೇ ಅವರಿಗೆ ಮತ ಹಾಕಬೇಕು. ಕರ್ನಾಟಕದಲ್ಲಿ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. 2019ರಲ್ಲಿ ಫೈನಲ್ ಪಂದ್ಯ ಇದ್ದು, ಅದನ್ನು ಗೆಲ್ಲಬೇಕೆಂದರೆ ಸೆಮಿಫೈನಲ್‌ನಲ್ಲಿ ಎದುರಾಳಿಯನ್ನು ಹೊರಗಟ್ಟಬೇಕು. ಇಲ್ಲವಾದರೆ ಭಾರಿ ಕಷ್ಟವಾಗುತ್ತದೆ ಎಂದರು.

‘ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಅರ್ಹರಲ್ಲ, ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಮೋದಿ ತಾವು ಮಾಡಿರುವ ಸಾಧನೆಯನ್ನು ನಾಲ್ಕು ನಿಮಿಷದಲ್ಲಿ ಹೇಳಿದರೆ ಸಾಕು. ಆದರೆ, ಅವರು ಹೇಳುವುದಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಚುನಾವಣೆಗೆ ಕಾಲಾವಕಾಶ ಕಡಿಮೆಯಿದ್ದು, ಮತದಾರರು ಆಲೋಚಿಸಬೇಕು. ಬಿಜೆಪಿ ಪರ ಪ್ರಚಾರ ಮಾಡುತ್ತಿರುವವರ ಮುಂದೆ ನಿಂತು ಅವರಿಗೆ ಸಂವಿಧಾನದ ಪಾಠ ಹೇಳಿಕೊಡಬೇಕು ಎಂದು ಸಲಹೆ ನೀಡಿದರು.

ನಟ ಪ್ರಕಾಶ್ ರೈ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರನ್ನು ಹಾಲಿ ಪಿಎಂ ನರೇಂದ್ರ ಮೋದಿ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣಾ ಮೈತ್ರಿ ಸಂಬಂಧ ಜೆಡಿಎಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ದೊಡ್ಡಮಟ್ಟದ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಪ್ರಪಂಚದ ಇತಿಹಾಸದಲ್ಲಿ ದೊಡ್ಡ ಜಾತೀವಾದಿ ಶಕ್ತಿಗಳು, ಸರ್ವಾಧಿಕಾರಿಗಳು ಮಣ್ಣು ಮುಕ್ಕಿರುವುದನ್ನು ನೋಡಬಹುದು. ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಏನಾದರೂ ಒಂದು ಸಿದ್ಧಾಂತ ಇದೆ. ಆದರೆ, ಬಿಜೆಪಿಗೆ ಯಾವುದೇ ಸಿದ್ಧಾಂತ ಇಲ್ಲ’ ಎಂದು ಟೀಕಿಸಿದರು.

‘ಗ್ರಾಮೀಣ ಜನರ ಮೇಲೂ ತೆರಿಗೆ ಹಾಕಿ ಅವರ ಬದುಕು ದುಸ್ತರ ಮಾಡಲಾಯಿತು. ನೋಟು ಅಮಾನ್ಯೀಕರಣದಿಂದ ಏನೂ ಪರಿಣಾಮ ಆಗಲಿಲ್ಲ. ಇದೇನಾ ಮೇಕ್‌ ಇನ್‌ ಇಂಡಿಯಾ ಎಂದರೆ?’ ಎಂದು ಪ್ರಶ್ನಿಸಿದರು.

ಎ.ಕೆ.ಸುಬ್ಬಯ್ಯ ಅವರ ‘ರೆಡ್‌ ಅಲರ್ಟ್‌: ದೇಶ ಆಪತ್ತಿನಲ್ಲಿದೆ’ ಪುಸ್ತಕ ಬಿಡುಗಡೆ ಮಾಡಲಾಯಿತು. ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಸಮನ್ವಯಕಾರ ಕೆ.ಎಲ್.ಅಶೋಕ್, ಸಿರಿಮನೆ ನಾಗರಾಜ್, ಇರ್ಷಾದ್ ದೇಸಾಯಿ. ಸಾಹಿತಿ ರೂಪ ಹಾಸನ, ಆರ್.ಪಿ.ವೆಂಕಟೇಶಮೂರ್ತಿ, ಫಾರುಕ್ ಪಾಷ, ನಾರಾಯಣದಾಸ್, ಹೆತ್ತೂರು ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT